ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡಲಿ ಕನ್ನಡ ಡಿಂಡಿಮ!

Last Updated 22 ಜೂನ್ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲ್ಲೂಕಿನ ಗಡಿಭಾಗದಲ್ಲಿ ಮರಾಠಿಗರದ್ದೇ ಪ್ರಾಬಲ್ಯ. ಕೆಲವೇ ವರ್ಷಗಳ ಹಿಂದೆ ಗಡಿಭಾಗದಲ್ಲಿ ಅಪ್ಪಟ ಕನ್ನಡಿಗರ ಮಕ್ಕಳು ಮರಾಠಿ ಶಾಲೆಯ ಮೆಟ್ಟಿಲು ತುಳಿಯುವ ಪರಿಸ್ಥಿತಿ ಇತ್ತು. ಇದಕ್ಕೆ ಕಾರಣ ಕನ್ನಡ ಶಾಲೆಗಳು ಇಲ್ಲದಿರುವುದು. ಇದ್ದ ಕನ್ನಡ ಶಾಲೆಗಳದ್ದು ದಯನೀಯ ಸ್ಥಿತಿ. ಅವುಗಳೆಲ್ಲ ಬಾಗಿಲು ಮುಚ್ಚಿ ವರ್ಷಗಳೇ ಉರುಳಿದ್ದವು.

ಆದರೆ, ಇದೀಗ ಚಿತ್ರಣ ಬದಲಾಗಿದೆ. ಈ ಕನ್ನಡ ಶಾಲೆಗಳೆಲ್ಲ ಜೀವಂತಿಕೆ ಪಡೆಯುತ್ತಿವೆ. ಮಕ್ಕಳು ಮತ್ತೆ ಈ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಗಡಿಗ್ರಾಮಗಳ ಕನ್ನಡಿಗರ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ. ಕನ್ನಡ ಕಲಿಕೆಗಾಗಿ ಬೇರೆ ಗ್ರಾಮಗಳಿಗೆ ತೆರಳುತ್ತಿದ್ದ ಗ್ರಾಮದ ಮಕ್ಕಳು, ತಮ್ಮ ಊರಲ್ಲೇ ಕನ್ನಡ ಅಕ್ಷರ ಕಲಿಯಲು ಉತ್ಸುಕರಾಗಿದ್ದಾರೆ.

ಗಡಿನಾಡಿನಲ್ಲಿ 18 ಹೊಸ ಕನ್ನಡ ಶಾಲೆಗಳು ಆರಂಭವಾಗಿದ್ದು, ಕಿರಿಯ ಪ್ರಾಥಮಿಕ ಶಾಲೆಗಳಿಂದ ಹಿರಿಯ ಪ್ರಾಥಮಿಕ ಶಾಲೆಗೆ 11 ಶಾಲೆಗಳು ಉನ್ನತೀಕರಣಗೊಂಡಿವೆ. 23 ಶಾಲೆಗಳನ್ನು ಪುನರಾರಂಭಿಸಲಾಗಿದೆ. ಹೌದು. ಇದು ಶಿಕ್ಷಣ ಇಲಾಖೆ ಇಟ್ಟ ದಿಟ್ಟ ಹೆಜ್ಜೆಯ ಫಲ. ಗಡಿ ಗ್ರಾಮಗಳಲ್ಲಿ ಹೊಸ ಕನ್ನಡ ಶಾಲೆಗಳನ್ನು ಪ್ರಾರಂಭಿಸುವ ಜೊತೆಗೆ ಇರುವ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತೀಕರಿಸುವ ಕಾರ್ಯ ನಡೆದಿದೆ. ಇದರಿಂದಾಗಿ ಕನ್ನಡಿಗರ ಮಕ್ಕಳು ಕನ್ನಡ ಶಾಲೆಯಲ್ಲೇ ಕಲಿಯುವ ಕಾಲ ಸನಿಹಕ್ಕೆ ಬಂದಿದೆ.

ಚಿಕ್ಕೋಡಿ ತಾಲ್ಲೂಕಿನ ಪೀರವಾಡಿ ಗ್ರಾಮದಲ್ಲಿ ಹೊಸದಾಗಿ ಪ್ರಾರಂಭಗೊಂಡ ಗಡಿ ಕನ್ನಡ ಶಾಲೆಗೆ ಈಗಾಗಲೇ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದೇ ತಾಲ್ಲೂಕಿನ ಇನ್ನೊಂದು ಕನ್ನಡ ಶಾಲೆಯಲ್ಲಿ 10 ವರ್ಷಗಳಿಂದ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಅದೇ ಗ್ರಾಮದ ಮರಾಠಿ ಶಾಲೆಯಲ್ಲಿ 70ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಆದರೆ, ಇಂದು ಮರಾಠಿ ಶಾಲೆಯಲ್ಲಿ 30 ಮಕ್ಕಳು ಓದುತ್ತಿದ್ದರೆ, ಕನ್ನಡ ಶಾಲೆಯಲ್ಲಿ ಅಕ್ಷರ ಕಲಿಯುತ್ತಿರುವ ಮಕ್ಕಳ ಸಂಖ್ಯೆ 90ಕ್ಕೂ ಅಧಿಕ!

ಗಡಿಯಲ್ಲಿ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಸಾಗಿದೆ. ಸರ್ಕಾರವು ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿದರೆ, ಇನ್ನೂ ಹೆಚ್ಚಿನ ಕನ್ನಡಿಗರಿಗೆ ಅನುಕೂಲ ಆಗಲಿದೆ. ‘ಇಲಾಖೆಯು ಆರಂಭದಲ್ಲಿ ಶೂರತನ ತೋರಿಸದೇ, ನಿರಂತರವಾಗಿ ಕನ್ನಡ ಶಾಲೆಗಳಿಗೆ ಉತ್ತೇಜನ ನೀಡಬೇಕು.

ಗಡಿನಾಡ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಗಡಿ ಮೀಸಲಾತಿ ನೀಡಬೇಕು. ಕನ್ನಡ ವಾತಾವರಣ ನಿರ್ಮಾಣ ಮಾಡುವಂಥ ಕನ್ನಡ ಮಾಧ್ಯಮ ವಸತಿ ಶಾಲೆ ಆರಂಭಿಸಿ, ಇನ್ನಷ್ಟು ಕನ್ನಡಪರ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಆಗ ಗಡಿಗ್ರಾಮಗಳಲ್ಲಿ ಕನ್ನಡದ ಕಂಪು ಹರಡುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT