ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿ ಗುಹೆ

ರೋಮಾಂಚನಕಾರಿ ತಾಣ
Last Updated 22 ಫೆಬ್ರುವರಿ 2016, 19:58 IST
ಅಕ್ಷರ ಗಾತ್ರ

­ಚಿತ್ರದುರ್ಗ ಜಿಲ್ಲೆಯ ಮೀಸಲು ಜೋಗಿಮಟ್ಟಿ ಅರಣ್ಯ ಪ್ರದೇಶದ ಅತ್ಯಾಕರ್ಷಕ ಗುಹಾಂತರ ಸ್ಥಳವಿದು. ಆಡುಮಲ್ಲೇಶ್ವರ ವ್ಯಾಪ್ತಿಯಿಂದ ಸವಿಸ್ತಾರವಾಗಿ ಹಬ್ಬಿಕೊಂಡಿರುವ ಕುರುಚಲು ಕಾಡಿನ ಕೇಂದ್ರ ಬಿಂದುವಿನಂತೆ. ಸುಮಾರು ಹತ್ತಾರು ಸಣ್ಣಪುಟ್ಟ ಗುಹೆಗಳು ಕಂಡುಬರುವಂತಹ ಈ ಪ್ರದೇಶದಲ್ಲಿ ಜೋಗಿ ಗುಹೆಯೇ ಅತ್ಯಂತ ರೋಮಾಂಚನಕಾರಿ ತಾಣ.

ಹಿಮವತ್ಕೇದಾರಕ್ಕೆ ತೆರಳುವ ಮಾರ್ಗದ ಮೊದಲ ಬಲತಿರುವಿನಲ್ಲಿ ಸಾಗಿದರೆ ದಟ್ಟ ಕುರುಚಲು ಮೆಳೆ ನಮ್ಮನ್ನು ಸ್ವಾಗತಿಸುತ್ತದೆ.  ಈ ವಿಸ್ತೀರ್ಣದ ಸುಮಾರು ಏಳೆಂಟು ಕಿಲೋ ಮೀಟರ್ ದಾರಿಯಲ್ಲಿ ಅಪಾರ ಪ್ರಮಾಣದ ಶ್ರೀಗಂಧದ ಮರಗಳು, ಬೀಟೆ, ತೇಗ, ಕಮರ, ಸೀತಾಫಲ, ಪರಗಿ, ಗೇರು, ಕಾರೆ ಮರಗಳು ಸೇರಿದಂತೆ ಇತರೆ ಕಾಡುಮರಗಳು ಬೆಳೆದು ನಿಂತಿವೆ. ಜೊತೆಯಲ್ಲಿ ಅರಣ್ಯ ಇಲಾಖೆಯ ನೀಲಗಿರಿ ನೆಡುತೋಪು ಮತ್ತು ಇತರೆ ಬೇಲಿ ಸಸ್ಯಗಳು ಗೋಚರಿಸುತ್ತವೆ.

ಗವಿಬಾಗಿಲು ಗುಡ್ಡದ ಬುಡದಲ್ಲಿರುವ ಜೋಗಿ ಗುಹೆಗೆ ತೆರಳಲು ನೆಲಮಟ್ಟದ ಜಾಡುಗಳ ಆಸರೆಯುಂಟು.  ಗುಹೆಯ ಹತ್ತಿರಕ್ಕೆ ತೆರಳಿದಾಗ ಅಲ್ಪಮಟ್ಟಿನ ದಿಬ್ಬವೇರಬೇಕಾಗುತ್ತದೆ.  ಜೋಗಿ ಗುಹೆಯು ಹೆಬ್ಬಂಡೆಗಳ ಆಶ್ರಯದಿಂದ ಸಹಜವಾಗಿಯೇ ನಿರ್ಮಾಣಗೊಂಡಿರುವಂತಹ ಬೃಹದಾಕಾರವಾದ ಗುಹಾಂತರ ಪ್ರದೇಶ. ಇಲ್ಲಿ ಆದಿಮಾನವರಾಗಲೀ ಶಿಲಾಯುಗದ ಜನರಾಗಲೀ ಅಥವಾ ಗತಕಾಲದ ಸಿದ್ಧರುಗಳಾಗಲಿ ವಾಸಿಸುತ್ತಿದ್ದರು ಎಂಬುದಕ್ಕೆ ಯಾವ ಕುರುಹುಗಳೂ ಲಭ್ಯವಿಲ್ಲ. ಇದೊಂದು ಪ್ರಕೃತಿ ನಿರ್ಮಿತ ಸಹಜ ಗುಹೆ. 

ಸುಮಾರು 50ಅಡಿ ಎತ್ತರ ಮತ್ತು 120 ಅಡಿಗಳಷ್ಟು ಉದ್ದಗಲದಲ್ಲಿರುವ, ಆಸು ಬಂಡೆಗಳ ತಂಪು ತಾಣವೇ ಜೋಗಿ ಗುಹೆ. ಈ ಗುಹೆಯನ್ನು ಅತ್ಯಂತ ಸರಳವಾಗಿ ಪ್ರವೇಶಿಸಬಹುದು. ಒಳಭಾಗದಲ್ಲಿ ಕತ್ತಲಿನ ಭಯವಿರುವುದಿಲ್ಲ. ಹೆಬ್ಬಂಡೆಗಳ ಸಂದುಗಳಿಂದ ಬೆಳಕು ಗುಹೆಯೊಳಗೆ ರಾಚುತ್ತದೆ. ಒಳಸಾಗಿದರೆ ಕಡಿದಾದ ಆಸುಬಂಡೆಗಳ ನಡುವಣ ಅಲ್ಪಮಟ್ಟಿನ ಕತ್ತಲು ನಮ್ಮನ್ನು ಆವರಿಸುತ್ತದೆ. ಅಲ್ಲಿಂದ ನಾವು ಕೊಂಚ ಎಡಕ್ಕೆ ತಿರುಗಿದರೆ ವಿಶಾಲ ಬಂಡೆಗಳಿಂದಾವೃತವಾದ ತೆರೆದ ಸ್ಥಳ ಗೋಚರಿಸುತ್ತದೆ.

ಈ ಸ್ಥಳದಲ್ಲಿ ಕೊಳಕು ಮಂಡಲದ ಹಾವುಗಳು ಮತ್ತು ಹೆಬ್ಬಾವುಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಏಕೆಂದರೆ 2008ರಲ್ಲಿ ನನ್ನ ಸ್ನೇಹಿತರೊಂದಿಗೆ ತೆರಳಿದಾಗ, ಇದೇ ಸ್ಥಳದಲ್ಲಿ ಕೊಳಕು ಮಂಡಲದ ಹಾವು ಬಂಡೆಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತ್ತು.  ಸ್ಥಳದಲ್ಲೇ ನನ್ನ ಸ್ನೇಹಿತರಿಗೆ ಈ ಹಾವಿನ ಕುರಿತು ವಿವರಣೆ ನೀಡಿದ್ದೆ.

ಗುಹೆಯ ಒಳಭಾಗದಿಂದ ಕುರುಚಲುಗಾಡಿನ ರಮ್ಯ ನೋಟವು ನಮ್ಮನ್ನು ಕೆಲನಿಮಿಷಗಳ ಕಾಲ ಮೌನಕ್ಕೆ ತಳ್ಳುತ್ತದೆ. ಇಲ್ಲಿನ ಸೊಗಸಾದ ದೃಶ್ಯಗಳು ಹೊಸತನವನ್ನು ತುಂಬುತ್ತವೆ. ಛಾಯಾಚಿತ್ರಗಳಂತೂ ಅದ್ಭುತ ಅನುಭವವನ್ನೇ ನೀಡಿ ನಮ್ಮನ್ನು ಪ್ರೇರೇಪಿಸುತ್ತವೆ. ರಾಕ್ ಕ್ಲೈಂಬಿಂಗ್‌ನಂತಹ ಸಾಹಸೀಯ ಚಟುವಟಿಕೆಗಳಿಗೆ ಪೂರಕ ತಾಣ ಜೋಗಿ ಗುಹೆ.

ಇಲ್ಲೇ ಸುತ್ತಮುತ್ತಲ ಬಂಡೆಗಳ ಸಮೀಪ ನಾವೆಂದೂ ಕಂಡಿರದ ಕೆಲವು ವಿಶಿಷ್ಟ ಸಸ್ಯಪ್ರಭೇದಗಳು ಗೋಚರಿಸಿ ಅಚ್ಚರಿ ಮೂಡಿಸುತ್ತವೆ. ಬಹುಶಃ ಇವುಗಳ ನಿರ್ದಿಷ್ಟ ಹೆಸರುಗಳನ್ನು ಪತ್ತೆಹಚ್ಚಲು ಸಸ್ಯಶಾಸ್ತ್ರಜ್ಞರಿಂದ ಸಾಧ್ಯವಾಗಬಹುದು.  ಇಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಿಲ್ಲವಾದರೂ ಸಮೀಪದ ಸಣ್ಣಪುಟ್ಟ ಗುಹೆಗಳಿಂದಿಡಿದು ಜೋಗಿ ಗುಹೆಯವರೆಗೂ ಹೆಜ್ಜೇನುಗಳ ಉಪಟಳವಂತೂ ಇದ್ದೇ ಇರುತ್ತದೆ.  ಪ್ರತೀ ಹಂತದಲ್ಲೂ ಎಚ್ಚರ ವಹಿಸುವುದು ಅಷ್ಟೇ ಅತ್ಯಗತ್ಯ.

ಚಿತ್ರದುರ್ಗದ ಕೋಟೆ ಪ್ರದೇಶದಿಂದ ಹಿಡಿದು, ಚಂದ್ರವಳ್ಳಿಯ ವ್ಯಾಪ್ತಿಯಲ್ಲಾಗಲೀ, ಜೋಗಿಮಟ್ಟಿ ವ್ಯಾಪ್ತಿಯಲ್ಲಾಗಲೀ ಅಥವಾ ಪಿರಮಿಡ್‌ನಂತೆ ಕಂಗೊಳಿಸುವ ಚೋಳಗುಡ್ಡದಂತಹ ಪ್ರದೇಶಗಳಲ್ಲಿ ಕಂಡುಬರುವ ಎಲ್ಲಾ ಗುಹಾಂತರ ಸ್ಥಳಗಳಿಗೂ ನಿರ್ದಿಷ್ಟ ಹೆಸರು ಇಲ್ಲ. ಇವಿಷ್ಟೇ ಅಲ್ಲದೇ ಚಿತ್ರದುರ್ಗ ನಗರದ ಹೊರವಲಯಗಳಲ್ಲಿನ ಕಲ್ಲುಬಂಡೆಗಳ ಮಿಶ್ರಿತ ಗುಡ್ಡಗಾಡುಗಳಲ್ಲೂ ಸಹಜವಾಗಿ ನಿರ್ಮಿತಗೊಂಡ ಗುಹೆಗಳಿವೆ. ಇಂತಹ ಗುಹೆ ಮತ್ತು ಹೊಸ ತಾಣಗಳಿಗೂ ನಿರ್ದಿಷ್ಟ ಹೆಸರುಗಳ ಕೊರತೆ ಎದ್ದುಕಾಣುತ್ತದೆ.

ನಾವೇನಿದ್ದರೂ ಸ್ಥಳೀಯರ ಅಲ್ಪ-ಸ್ವಲ್ಪ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡುವುದರ ಮುಖಾಂತರ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯ.  ಇದೇ ಕೊರತೆ ಮತ್ತು ಗೊಂದಲಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸ್ಥಳೀಯ ಜೋಗಿಮಟ್ಟಿ ಮತ್ತು ಚಂದ್ರವಳ್ಳಿಯಲ್ಲಿ ಕಂಡುಬರುವಂತಹ ಕೆಲವು ವಿಶಿಷ್ಟ ತಾಣಗಳನ್ನು ಗುರುತಿಸಿ, ಹಲವು ಕುತೂಹಲಕಾರಿ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾಗಿದೆ.

ಜೊತೆಯಲ್ಲಿ ಕೆಲ ತಾಣಗಳಿಗೆ ಹೊಸ ಹೆಸರುಗಳನ್ನು ನೀಡಿ, ಆಸಕ್ತ ಚಾರಣಿಗರಿಗೆ, ಪ್ರವಾಸಿಗರಿಗೆ ಮತ್ತು ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಸ್ಥಳಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡಲಾಗಿದೆ.  ಸ್ಥಳೀಯವಾಗಿ ನನ್ನ ಸ್ನೇಹಿತರೊಂದಿಗೆ ತಿರುಗಾಟ ನಡೆಸಿ ಇನ್ನು ಹೆಚ್ಚು ಹೊಸ ತಾಣಗಳ ಹುಡುಕಾಟ ನಡೆಸುವಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಇಂಥದ್ದೇ ಪ್ರಯತ್ನದ ಪ್ರತಿಫಲ ಈ ಜೋಗಿ ಗುಹೆ. 

2008ರಲ್ಲಿ ಪ್ರಥಮ ಬಾರಿಯಾಗಿ ನನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಗುಹೆಯಲ್ಲಿನ ಬಂಡೆಗಳ ಒಳರಚನೆ, ಆವಾಸಗಳ ಕುರುಹುಗಳು, ಅಪರೂಪದ ಸಸ್ಯಗಳು, ವನ್ಯಜೀವಿಗಳ ಹಿಕ್ಕೆ, ಉರಗ ಪ್ರಭೇದಗಳು ಹಾಗೂ ಇನ್ನಿತರೆ ನೈಸರ್ಗಿಕ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗಿತ್ತು. ಇಲ್ಲಿನ ಸಹಜ ಸಂಪನ್ಮೂಲಗಳನ್ನು ಮನಗಂಡ ನನಗೆ ಥಟ್ಟನೆ ಹೊಳೆದದ್ದು ಜೋಗಿ ಎಂಬ ಇತಿಹಾಸ ಪುರುಷನ ಹೆಸರು.

ಹೌದು ಸುಮಾರು 200 ವರ್ಷಗಳ ಹಿಂದೆ ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಯೋಗಿಯಾಗಿ ವಾಸಿಸುತ್ತಿದ್ದ ಪುರುಷನೇ ಈ ಜೋಗಿ. ಈತನು ಅಂದಿನ ದನಗಾಹಿಗಳು ತಮ್ಮ ಜಾನುವಾರುಗಳನ್ನು ಈ ಅರಣ್ಯದಲ್ಲಿ ಮೇಯಿಸಲು ಕರೆತಂದಾಗ, ಅವರ ಜಾನುವಾರುಗಳ ಹಿತವನ್ನು ಕಾಯ್ದು, ದನಗಾಹಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದನಂತೆ.

ಅದೇ ಪ್ರಕಾರ ಜಾನುವಾರುಗಳು ಯಾವುದೇ ಕಾಡುಪ್ರಾಣಿಗಳಿಗೆ ತುತ್ತಾಗದಂತೆ ರಕ್ಷಿಸುತ್ತ, ಜನ ಮತ್ತು ಜಾನುವಾರುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದನು ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಅಂದಿನ ಜನರಿಗೆಲ್ಲ ಉಪಕಾರಿಯಾಗಿದ್ದ ಜೋಗಿಯ ಹೆಸರನ್ನೇ ಈ ಅರಣ್ಯಕ್ಕೆ ನಾಮಕರಿಸಿದರು. ಅಂದಿನಿಂದ ಇಂದಿನವರೆಗೂ ಈ ಪ್ರದೇಶವನ್ನು ಜೋಗಿಮಟ್ಟಿ ಎಂಬ ಹೆಸರಿನಿಂದಲೇ ಗುರುತಿಸಲಾಗುತ್ತಿದೆ.

ಇದೇ ಸಣ್ಣ ಇತಿಹಾಸವೊಂದನ್ನು ಆಧಾರವಾಗಿಟ್ಟುಕೊಂಡು, ಯಾವುದೇ ಹೆಸರಿಲ್ಲದ ಈ ಅದ್ಭುತ ತಾಣಕ್ಕೆ ಜೋಗಿ ಗುಹೆ ಎಂದು 2008ರಲ್ಲಿ ಹೆಸರು ನೀಡಿದೆ.  ಆಸಕ್ತ ಚಾರಣಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ತಾಣ.

ಚಾರಣಕ್ಕೆ ದಾರಿ
ಚಿತ್ರದುರ್ಗದ ಆಡುಮಲ್ಲೇಶ್ವರ ಬಾಲಭವನದಿಂದ ಜೋಗಿ ಗುಹೆಗೆ ತೆರಳಬಹುದು. ಹೋಗಿ ಬರುವ ಎರಡೂ ಕಡೆಯ ಚಾರಣ ದಾರಿಯು ಸುಮಾರು ಐದು ಕಿ.ಮೀ. ಆಗಬಹುದು.  ಇನ್ನು ದೂರದ ಚಾರಣ ದಾರಿ ಬಯಸುವವರು, ಇತರೆ ಮೂರ್ನಾಲ್ಕು ಮಾರ್ಗಗಳನ್ನೂ ಅನುಸರಿಸಬಹುದು.  ಕಿ.ಮೀಟರ್‌ಗಳ ಆಯ್ಕೆ ನಿಮ್ಮದಾಗಿರುತ್ತದೆ. ಹೊರಡುವ ಮುನ್ನ ಮಾಲಿನ್ಯ ಮುಕ್ತ ವಸ್ತುಗಳೊಂದಿಗೆ ಸ್ಥಳ ಪರಿಚಿತರ ನೆರವಿನೊಂದಿಗೆ ಚಾರಣ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT