ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪ್ರತಿಬಂಧಕ ಸಂಸ್ಥೆ ಕಾಳಜಿ

ಬಡ ರೈತರ ಏಳಿಗೆ
Last Updated 16 ನವೆಂಬರ್ 2015, 19:30 IST
ಅಕ್ಷರ ಗಾತ್ರ

 ನಮ್ಮ ದೇಶವು ವೈವಿಧ್ಯಮಯ ಬರಗಾಲಗಳನ್ನು ಕಂಡಿದೆ. ಅದರಲ್ಲಿ ಕರ್ನಾಟಕವು ಡೋಗಿ ಬರ, ರಾಗಿ ಬರ, ಸಜ್ಜೆ ಬರ ಮತ್ತು ನೀರಿನ ಬರಗಳನ್ನು ಹೆಚ್ಚಾಗಿ ಅನುಭವಿಸಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಆಹಾರ ಅಭಾವ ಉಂಟಾಗಿ ಅಸಂಖ್ಯ ಜನ ಹಸಿವಿನಿಂದ ಅಸುನೀಗಿದರು. ಎಲ್ಲಿ ನೋಡಿದರಲ್ಲಿ ಅಸ್ಥಿಪಂಜರಗಳ ಭಯಾನಕ ದೃಶ್ಯ.

ಜಾನುವಾರುಗಳು ಮೇವುಗಳಿಲ್ಲದೇ ಒದ್ದಾಡಿ ಸತ್ತವಂತೆ. ಮನುಷ್ಯನಾದರೋ ಹಸಿವಿಗೆ ಪರ್ಯಾಯ ವ್ಯವಸ್ಥೆ ತಾತ್ಕಾಲಿಕವಾಗಿ ಮಾಡಿಕೊಳ್ಳಬಹುದಾದರೂ ಜಾನುವಾರುಗಳಿಗೆ ದಂಟು, ಮೇವು ಬಿಟ್ಟರೆ ಬೇರೆ ಆಹಾರ ತಿನ್ನಿಸಲೆಂತು ಸಾಧ್ಯ? ಇಥಿಯೋಪಿಯಾ ಮತ್ತು ಸೊಮಾಲಿಯಾಗಳ ಇಂದಿನ ಸ್ಥಿತಿಯನ್ನೇ ಅಂದಿನ ಬರಗಾಲಗಳು ಹೋಲುತ್ತವೆ.

1918ರಲ್ಲಿ ಬರ ಬಿದ್ದಾಗ ಕನ್ನಡ ನಾಡಿನಲ್ಲಿ ಕೆಲ ಸಂಘಗಳ ಮೂಲಕ ಬಡಜನರಿಗೆ ರಾಗಿ ಹಂಚಲಾಗುತ್ತಿತ್ತು.1942ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬರ ಬಿದ್ದಾಗ ರೂಪಾಯಿಗೆ ಮೂರು ಸೊಲಿಗೆ ಸಜ್ಜೆಯನ್ನು ರಿಯಾಯಿತಿ ಮೂಲಕ ಸರ್ಕಾರ ಹಂಚಿತು. ಆಗಿನ್ನೂ ಪಡಿತರ ವ್ಯವಸ್ಥೆ ಪ್ರಾರಂಭವಾಗಿರಲಿಲ್ಲ. 1971ರಲ್ಲಂತೂ ಇಲ್ಲಿ ಭಾರಿ ನೀರಿನ ಬರ. ಆದಿಲಶಾಹಿಗಳ ದೂರದೃಷ್ಟಿಗೆ, ಯೋಜನೆಗಳಿಗೆ ಸೈಡ್ ಹೊಡೆದ ಮಹಾ ಜಲಬರವಿದು.

ಈ ಮುಂಚೆ ಇಂಥ ಬರಗಾಲಗಳ ಕಹಿ ಅನುಭವವನ್ನುಂಡಿದ್ದ ವಚನಪಿತಾಮಹ ಫ.ಗು.ಹಳಕಟ್ಟಿಯವರ ಕನಸಿನ ಕೂಸೇ ‘ಬರಗಾಲ ಪ್ರತಿಬಂಧಕ ಸಂಸ್ಥೆ’ ಅರ್ಥಾತ್ ‘ದಿ.ವಿಲ್ಸನ್ ಆ್ಯಂಟಿ ಫೆಮೈನ್ ಇನ್‌ಸ್ಟಿಟ್ಯೂಟ್‌’. ಮುಂಬೈ ಇಲಾಖೆಯ ಆಗಿನ ಗವರ್ನರ್ ಲೆ.ಕ.ಲೆಸ್ಲಿಆರ್ಮ್ ವಿಲ್ಸನ್ನರ ಸ್ಫೂರ್ತಿ ಮತ್ತು ಔದಾರ್ಯದ ಸ್ಮರಣಾರ್ಥ ಈ ಬರಗಾಲ ಪ್ರತಿಬಂಧಕ ಭವನಕ್ಕೆ 1927ರ ಆಗಸ್ಟ್‌ 3ರಂದು ಶಂಕುಸ್ಥಾಪನೆ ನೆರವೇರಿತು. ಬೆಳಗಾವಿಯ ದಕ್ಷಿಣಭಾಗದ ಅಂದಿನ ಕಮಿಷನರ್ ಇ.ಜಿ.ಎಲ್.ಲೇರ್ಡ್ ಮ್ಯಾಕ್ ಗ್ರೆಗರ್ ಈ ಭವನವನ್ನು ಅನಾವರಣಗೊಳಿಸಿದರು.

ಈ ಸಂಘದ ಸ್ಥಾಪಕರು ಮತ್ತು ಪ್ರಪ್ರಥಮ ಅಧ್ಯಕ್ಷರಾಗಿದ್ದವರು ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ವಿ.ಎಚ್.ನಾಯಕರವರು. ಈ ಭವನದ ಕಾಮಗಾರಿ 1928ರ ಜನವರಿ 5ರಂದು ಜೂನ್‌ 5ರಲ್ಲಿ ಪೂರ್ಣಗೊಂಡಿತು. ಗುತ್ತಿಗೆದಾರ ಎಲ್ಲಪ್ಪ.ರೇವಪ್ಪ ಕೊಪ್ಪಳ ಎಂಬುವರು  ಒಟ್ಟು  ನಲವತ್ತು ಸಾವಿರ ರೂಪಾಯಿಗಳಲ್ಲಿ ಇದನ್ನು ನಿರ್ಮಿಸಿಕೊಟ್ಟರು.

ಬರಗಾಲ ಪ್ರತಿಬಂಧಕ ಸಂಸ್ಥೆ ಪ್ರಾರಂಭಗೊಂಡಾಗಿನಿಂದಲೂ ಬಡ ರೈತರಿಗೆ ಉಚಿತವಾಗಿ ಬೀಜ ಗೊಬ್ಬರಗಳನ್ನು ಹಂಚುವುದು, ಕೆರೆ ಬಾವಿ ಅಗೆತದ ಕಾಮಗಾರಿಗಳಲ್ಲಿ ಉದ್ಯೋಗ ನೀಡುವಿಕೆ, ರೈಲ್ವೆ ಹಳಿಗಳ ಬುಡಕ್ಕೆ ಹಾಕಲು ಜಲ್ಲಿ ಒಡೆಸುವಿಕೆ, ಹೊಲಕ್ಕೆ ಒಡ್ಡುಗಳನ್ನು ಹಾಕಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿಸಿ ತುತ್ತಿನ ಚೀಲ ತುಂಬಿಸುವ ದೂರದೃಷ್ಟಿ ಉಳ್ಳದ್ದಾಗಿತ್ತು.

ವಿ.ಎಚ್.ನಾಯಕರು ಮತ್ತು ಡಾ ಫ.ಗು.ಹಳಕಟ್ಟಿಯವರು ಈ ಸಂಘಕ್ಕೆ ಜೀವ ಜಲವನ್ನೆರೆದು ಪೋಷಿಸುತ್ತ ಬಂದರು. ಆ ಮಹಾನುಭಾವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಈ ಸಂಸ್ಥೆ ಇಂದಿಗೂ ಬಡರೈತರಿಗೆ ಸ್ಪಂದಿಸುತ್ತಿದೆ. ದಾನಿಗಳ ನೆರವನ್ನು ಬಳಸಿಕೊಂಡು ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT