ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ತಂದವರ ಕತ್ತಲ ಬದುಕು

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇವರು ನಾಡಿಗೆ ಬೆಳಕು ನೀಡಿದವರು.  ಇದಕ್ಕಾಗಿ ತಮ್ಮ ಆಸ್ತಿ, ಪಾಸ್ತಿ ಎಲ್ಲವನ್ನೂ ಕಳೆದುಕೊಂಡವರು. ಆದರೆ ಐದು ದಶಕಗಳಿಂದ ಇವರ ಬದುಕು ಮಾತ್ರ ಬರೀ ಕತ್ತಲು. ಇದೀಗ ನಿಂತ ನೆಲವೇ ಕುಸಿದು ಹೋಗುತ್ತಿರುವ ಅನುಭವ. ‘ದೋಣಿ ದಾಟಿದ ಮೇಲೆ ಪಯಣಿಗನಿಗೆ ಅಂಬಿಗನ ಹಂಗೇಕೆ’ ಎಂಬ ಸರ್ಕಾರದ ಮನೋಧೋರಣೆಯಿಂದ ತಲೆಯ ಮೇಲೊಂದು ಸೂರು ಇಲ್ಲದೆ ಇವರದ್ದೀಗ ಬರೀ ಒದ್ದಾಟ.

ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರೂರು ಬಾರಂಗಿ ಹೋಬಳಿ ಜನರ ಪರಿಸ್ಥಿತಿ. ಶರಾವತಿ ವಿದ್ಯುತ್ ಯೋಜನೆಗಾಗಿ ತಮ್ಮ ಆಸ್ತಿ, ಪಾಸ್ತಿ ಕಳೆದುಕೊಂಡು ಇವರೆಲ್ಲ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ವಿದ್ಯುತ್ ಯೋಜನೆಗಾಗಿ ಇವರ ಸಾವಿರಾರು ಕೃಷಿಭೂಮಿ ಹಾಗೂ ಅಡಿಕೆ ತೋಟಗಳು ಜಲಾವೃತಗೊಂಡಿವೆ. 

ಮೈಸೂರು ಒಡೆಯರ ಕಾಲದಲ್ಲಿ ವಿದ್ಯುತ್ ಯೋಜನೆಗಾಗಿ ಮಡೆನೂರು ಅಣೆಕಟ್ಟು ಕಟ್ಟಲಾಯಿತು. ಇದರಿಂದಲೂ ಈ ಭಾಗದ ಜನ ತೊಂದರೆ ಅನುಭವಿಸಿದರು. ನಂತರ 1964 ರಲ್ಲಿ ಶರಾವತಿ ವಿದ್ಯುತ್ ಯೋಜನೆಗಾಗಿ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲಾಯಿತು. ಗಾಯದ ಮೇಲೆ ಬರೆ ಎಳೆದಂತೆ ಇದು ಇನ್ನಷ್ಟು ಜನರು ಸಂತ್ರಸ್ತರಾಗಲು ಕಾರಣವಾಯಿತು. ನಿಂತ ಭೂಮಿಯನ್ನೆಲ್ಲ ನೀರು ಆವರಿಸಿಕೊಂಡಾಗ ಉಳಿದ ಬದುಕಿಗಾಗಿ ಅನಿವಾರ್ಯವಾಗಿ ಊರು ಬಿಡುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಕಷ್ಟವಾದೀತು. ಅಳಿದುಳಿದ ಆಸ್ತಿ, ಮನೆ ಬಿಟ್ಟು ಹೋಗದೇ ಅಲ್ಲಿಯೇ ಬದುಕು ಸವೆಸುತ್ತಿರುವವ ಇವರ ಬಾಳು ಇನ್ನೂ ಅಸಹನೀಯ.

ಇಷ್ಟು ವರ್ಷಗಳ ಕಾಲ ನದಿ ದಾಟಲು ‘ಲಾಂಚ್’ ಇರಲಿಲ್ಲ. ಇದರಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಎಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಹೆರಿಗೆ ನೋವುಂಟಾದ ಮಹಿಳೆಯರು ಇಹಲೋಕವನ್ನೇ ತ್ಯಜಿಸಿದ್ದಾರೆ. ತೀವ್ರವಾದ ಹೋರಾಟದ ಫಲವಾಗಿ  ಇಲ್ಲಿಯವರೆಗೆ ಸಿಕ್ಕಿದ್ದು ‘ಲಾಂಚ್‌’ ಸೌಲಭ್ಯ ಮಾತ್ರ.
ಆದರೆ ಸೇತುವೆ ಬೇಕು ಎಂಬ ಇವರ ಕನಸು ಮಾತ್ರ ಇದುವರೆಗೂ ನನಸಾಗಿಲ್ಲ. ಸೇತುವೆ ನಿರ್ಮಾಣದ ಭರವಸೆ ನೀಡಿ ಅರ್ಧ ಶತಮಾನ ಕಳೆದಿದೆ. ಸೇತುವೆ ನಿರ್ಮಿಸಿಕೊಡುವುದಾಗಿ ಜನರಲ್ಲಿ ಬಿತ್ತಿದ ಕನಸು ಎರಡನೇ ತಲೆಮಾರಿನ ಜನರಿಗೆ ವರ್ಗಾಯಿಸಲಾಗಿದೆ!

ಚಿಗುರಿದ್ದ ಆಸೆ
ಕಳೆದ 50 ವರ್ಷಗಳಲ್ಲಿ ರಾಜ್ಯದಲ್ಲಿ ಅನೇಕ ಸರ್ಕಾರಗಳು ಅಧಿಕಾರಕ್ಕೆ ಬಂದರೂ ತುಮರಿ ಸೇತುವೆ ವಿಚಾರ ಮುಖ್ಯವಾಗಿ ಪರಿಗಣನೆಗೆ ಬರಲೇ ಇಲ್ಲ. ಅಧಿಕಾರದ ಕಣ್ಣಿಗೂ ಇವರು ಕತ್ತಲಲ್ಲಿರುವುದು ಗೋಚರಿಸಲಿಲ್ಲ.

2009ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿತ್ತು. ಶಂಕುಸ್ಥಾಪನೆಯೂ ನೆರವೇರಿತ್ತು. ಆದರೆ ಯೋಜನೆಗೆ ಹಣ ಬಿಡುಗಡೆ ಭಾಗ್ಯ ಕಾಣಲಿಲ್ಲ. ಪರಿಣಾಮ, ಮತ್ತೆ ಸೇತುವೆ ವಿಚಾರ ನೆನೆಗುದಿಗೆ ಬಿತ್ತು.

ಈ ಸೇತುವೆ ನಿರ್ಮಾಣಕ್ಕೆ ಬೇಕಿರುವ ಸುಮಾರು 200 ಕೋಟಿ ರೂಪಾಯಿ ಹಣವನ್ನು ನಬಾರ್ಡ್ ಸಾಲವಾಗಿ ಕೊಡಲು ಮುಂದೆ ಬಂದಿದೆ. ಅದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಬೇಕು. ಆದರೆ ಸರ್ಕಾರ ಹಿಂದೇಟು ಹಾಕುತ್ತಿದೆ!

ಕೋಟಿ ಕೋಟಿ ಆದಾಯ
ಶರಾವತಿ ವಿದ್ಯುತ್ ಯೋಜನೆಯಿಂದ ರಾಜ್ಯಕ್ಕೆ ಶೇ 40 ರಷ್ಟು ವಿದ್ಯುತ್ ಸಿಗುತ್ತಿದೆ. ಕಳೆದ 50 ವರ್ಷಗಳಲ್ಲಿ ರಾಜ್ಯ ಸರ್ಕಾರ ಇದರಿಂದ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸಿದೆ. ಯೋಜನೆಯ ಫಲದಿಂದ ಸಾವಿರಾರು ಸರ್ಕಾರಿ ಪೋಷಿತ ಅಧಿಕಾರಿಗಳು ಶ್ರೀಮಂತಿಕೆಯಲ್ಲಿ ತೇಲಾಡುತ್ತಿದ್ದಾರೆ. ವಿದ್ಯುತ್ ಕಾರಣದಿಂದ ಹವಾನಿಯಂತ್ರಿತ ಕೊಠಡಿಯಲ್ಲಿ ಇವರ ಜೀವನ ಮೆರೆದಾಡುತ್ತಿದೆ. ಆದರೆ ಬೆಳಕಿಗಾಗಿ ತ್ಯಾಗ ಮಾಡಿದ ಜನರಿಗೆ ಸಿಕ್ಕಿದ್ದು ಕತ್ತಲೆ! ಈ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯವೂ ಸಿಕ್ಕಿಲ್ಲ ಎಂಬುದು ಯೋಜನೆಯ ದುರಂತದಲ್ಲೊಂದು !

ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ಕಾರ ಮಾತ್ರ ದಿವ್ಯ ಮೌನ ತಾಳಿದೆ. ಕಳೆದ ನವೆಂಬರ್‌ನಲ್ಲಿ 30 ಕಿ.ಮೀ. ದೂರ ಹಕ್ಕೊತ್ತಾಯದ ಪಾದಯಾತ್ರೆ ನಡೆಸಲಾಗಿದೆ. ಅಂಬಾರಗೊಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಸಂಚಾಲಕ ಕೆರೆಕೈ ಪ್ರಸನ್ನ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿದೆ.

ಬರುವ ಬಜೆಟ್‌ನಲ್ಲಾದರೂ ತುಮರಿ ಸೇತುವೆಗೆ ಹಣ ಮೀಸಲಿಟ್ಟು ಸೇತುವೆ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ ತಾಳೀತೇ ಎಂಬುದು ಸಂತ್ರಸ್ತ ಜನರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT