ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ಸಾಕು ನಡುಗಡ್ಡೆಯ ಬದುಕು

Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ಮಳೆಗಾಲ ಬಂದರೆ ಸಾಕು ಬೆಳಗಾವಿ ಜಿಲ್ಲೆ ಕೃಷ್ಣಾ ತೀರದ ಜನರ ಎದೆಯಲ್ಲಿ ನಡುಕ ಹುಟ್ಟುತ್ತದೆ. ಮಳೆಯ ಭಯದಿಂದ ಮನೆಗಳನ್ನು ತೊರೆಯುತ್ತಾ  ಗಂಟುಮೂಟೆ ಕಟ್ಟಿಕೊಂಡು ಪುನರ್ವಸತಿ ಕೇಂದ್ರಗಳತ್ತ ಧಾವಿಸುತ್ತಾರೆ. ರಸ್ತೆಗಳ ತುಂಬಾ ನೀರು ತುಂಬಿ ಕೆರೆಯಂತಾಗಿ ಸಂಚಾರ ಕಡಿತಗೊಂಡು ಪರದಾಡುತ್ತಾರೆ. ಕೆಲವರು ಸಾರಿಗೆಗಾಗಿ ಸಣ್ಣ ಪುಟ್ಟ ದೋಣಿಗಳನ್ನು ಅವಲಂಬಿಸುವುದೂ ಉಂಟು. ಎಲ್ಲರಿಗೂ ಮಳೆಗಾಲ ಸಂತಸ ತಂದರೆ ಇವರಿಗೆ ಮಳೆಗಾಲ ಎಂದರೆ ನರಕ ಯಾತನೆ.

ಮಳೆ ಬಂದರೆ ತಪ್ಪದು ಪ್ರವಾಹ 
ಈ ರೀತಿ ಆಗಲು ಕಾರಣ ಮಳೆ ಬರುತ್ತಿದ್ದಂತೆ ಉಂಟಾಗುವ ಪ್ರವಾಹ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಕೃಷ್ಣಾ ಮತ್ತು ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಇಲ್ಲಿನ ಹತ್ತಾರು ಸೇತುವೆಗಳು ಜಲಾವೃತಗೊಳ್ಳುತ್ತವೆ.

ಈ ಊರಿನ ರಸ್ತೆಗಳಲ್ಲಿ ಸಂಚಾರ ಮಾಡಲು ಸಾಧ್ಯವೇ ಆಗುವುದಿಲ್ಲ ಎನ್ನುವಷ್ಟು ನೀರು ತುಂಬಿಕೊಳ್ಳುತ್ತದೆ. ಮನೆಗಳಿಗೆ ನೀರು ನುಗ್ಗಿ ಕೆಲ ಗ್ರಾಮಗಳಂತೂ ನಡುಗಡ್ಡೆಯಾಗಿ ಮಾರ್ಪಾಡುಗೊಳ್ಳುತ್ತವೆ. ಇದೇ ಕಾರಣಕ್ಕೆ ಊರಿನ ಜನರೆಲ್ಲ ಪುರ್ನವಸತಿ ಕೇಂದ್ರಗಳತ್ತ ಮುಖ ಮಾಡುತ್ತಾರೆ. ಮಳೆ ಯಾವಾಗ ಹೋಗುತ್ತದೋ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

ಈ ಸ್ಥಿತಿ ನಿನ್ನೆ ಮೊನ್ನೆಯದಲ್ಲ. ಸಮಸ್ಯೆ ಹಲವಾರು ವರ್ಷಗಳಿಂದಲೂ ಇದ್ದದ್ದೇ. ಪ್ರತಿ ವರ್ಷ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕಿನ ಜನರು ಕೃಷ್ಣೆಯ ಕೋಪಕ್ಕೆ ಗುರಿಯಾಗುತ್ತಿದ್ದರು. ಆದರೆ ಅದೃಷ್ಟವಶಾತ್ ಈ ವರ್ಷ ಇಲ್ಲಿಯವರೆಗೆ  ಪ್ರವಾಹ ಬಾರದೆ ಇರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಉಕ್ಕಿಹರಿದು ತನ್ನ ಒಡಲ ಮಕ್ಕಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ಕೃಷ್ಣೆ ಇಂದು ಶಾಂತಳಾಗಿ ಹರಿಯುತ್ತಿದ್ದಾಳೆ. ಆದರೆ ಪರಿಸ್ಥಿತಿ ಹೀಗೇ ಸಾಗುತ್ತದೆ ಎಂಬ ಖಾತರಿ ಇಲ್ಲಿ ಯಾರಿಗೂ ಇಲ್ಲ. ಮಳೆಯಾದರೂ ಚಿಂತೆಯಿಲ್ಲ, ಪ್ರವಾಹ ಬಾರದಿದ್ದರೆ ಸಾಕು ಎಂದು ಭಯದಲ್ಲಿಯೇ ದಿನದೂಡುತ್ತಿದ್ದಾರೆ.

ದ್ವೀಪಗಳಾಗುವ ಗ್ರಾಮಗಳಿವು
ಚಿಕ್ಕೋಡಿಯ ಕಲ್ಲೋಳ, ಯಡೂರ, ಚಂದೂರ, ಇಂಗಳಿ ರಾಯಬಾಗದ ಗುಂಡವಾಡ, ಶಿರೂರ, ಹಳೆದಿಗ್ಗೇವಾಡಿ, ಪರಮಾನಂದವಾಡಿ, ಬಾವಾನಸೌಂದತ್ತಿ ಖೇಮಲಾಪುರ, ಸಿದ್ದಾಪುರ ಅಥಣಿಯ ಜುಗೂಳ, ಮಂಗಾವತಿ, ಶಹಾಪೂರ, ಕುಸನಾಳ, ಮೋಳವಾಡ, ಹುಲಗಬಾಳ, ತೀರ್ಥ, ಸಪ್ತಸಾಗರ, ಸವದಿ, ನದಿ-ಇಂಗಳಗಾವ, ಬಣಜವಾಡ, ಕಾತರಾಳ ಮುಂತಾದ ಗ್ರಾಮಗಳು ಮಳೆ ಬಂದಾಕ್ಷಣ ದ್ವೀಪಗಳಂತಾಗುತ್ತವೆ.

ಜಲಾವೃತಗೊಳ್ಳುವ ಸೇತುವೆಗಳು 
ಜಿಲ್ಲೆಯ ಕಲ್ಲೋಳ-ಯಡೂರ, ಕಾರದಗಾ-ಭೊಜ, ಸಿದ್ದನ್ನಾಳ-ಅಕ್ಕೋಳ, ಜತ್ರಾಟ-ಬಿವಶಿ, ಮಲ್ಲಿಕವಾಡ-ದತ್ತವಾಡ, ಉಗಾರ-ಕುಡಚಿ ಸೇರಿದಂತೆ ಹತ್ತಾರು ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡ್ಡಿಯಾಗುತ್ತವೆ. ಜಿಲ್ಲೆಯ ಹಲವಾರು ಕೆಳಮಟ್ಟದ ಸೇತುವೆಗಳು ಪ್ರವಾಹಕ್ಕೆ ಕಾರಣಗಳಾಗಿರಬಹುದು. ಪ್ರತಿ ವರ್ಷ ಸೃಷ್ಟಿಯಾಗುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಜನಪ್ರತಿನಿಧಿಗಳು ಮತ್ತು ಸರ್ಕಾರ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ. ತಳಮಟ್ಟದ ಸೇತುವೆಗಳಿಂದ ಪ್ರತಿ ವರ್ಷ ಉಂಟಾಗುವ ಈ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT