ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಏನೆಲ್ಲಾ..!

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ಮಳೆ ಧರೆಗಿಳಿಯುವ ಹೊತ್ತಿದು. ಬೇಸಿಗೆ ಬೇಗೆಯಲಿ ಕಳೆಗುಂದಿದ್ದ ಇಳೆ ನವಿರು ರೂಪಗಳೊಂದಿಗೆ ಕಂಗೊಳಿಸುವ ಸಮಯ. ಇನ್ನು ವರುಣ ಕೃಪೆತೋರಿದರಷ್ಟೇ ಕೃಷಿ ಕಾರ್ಯಗಳು ಚಾಲನೆಗೆ ಬರುವುದು. ಆದರೆ ರಾಜ್ಯದ ಇನ್ನೂ ಹಲವೆಡೆ ಮಳೆಯೇ ಆಗಿಲ್ಲ. ಇದು ಪ್ರತಿ ಬಾರಿಯೂ ಕಾಡುವ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಲವು ಕಡೆ ವಿವಿಧ ಆಚಾರಗಳು ರೂಢಿಯಲ್ಲಿವೆ. ಅವೆಲ್ಲದರ ಒಟ್ಟಾರೆ ಚಿತ್ರಣ ಇಲ್ಲಿದೆ.

   ಕಳೆದ ವಾರ ಬಾಗಲಕೋಟೆ ಜಿಲ್ಲೆಯ ಮುಧೋಳ್ ಪಟ್ಟಣದ ಸಮೀಪ ಇರುವ ನಂದಗಾಂವ್ ಗ್ರಾಮದ ಜನ ಅದ್ದೂರಿಯ ಮದುವೆಗಾಗಿ ಎದುರು ನೋಡುತ್ತಿದ್ದರು. ಊರೆಲ್ಲ ಸಿಂಗಾರಗೊಂಡಿತ್ತು. ಎಲ್ಲೆಲ್ಲೂ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಅಂತೂ ಆ ಮದುವೆ ದಿನ ಬಂದೇ ಬಿಟ್ಟಿತು. ಹೊಸ ದಿರಿಸು ತೊಟ್ಟು, ಬಾಸಿಂಗ ಧರಿಸಿ, ಕೊರಳಲ್ಲಿ ಹೂಮಾಲೆ ಹಾಕಿಕೊಂಡ ಮದುಮಕ್ಕಳು ಬಾಜಾ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿಕೊಂಡು ಹಸೆಮಣೆ ಏರಿದರು.

ನಾಚಿಕೆ ಬದಲು ಭಯಗೊಂಡಿದ್ದ ಮದುಮಗಳಿಗೆ ಅಷ್ಟೇ ಭಯಗೊಂಡಿದ್ದ ಮದುಮಗನ ಸಮ್ಮುಖದಲ್ಲಿ ಊರ ಹಿರಿಯ ವ್ಯಕ್ತಿ ತಾಳಿ ಕಟ್ಟಿದರು! ಆದರೂ ಮದುಮಗ ಏನೂ ತಿಳಿಯದೇ ಕಣ್‌ಕಣ್‌ ಬಿಡುತ್ತಿದ್ದ. ಗ್ರಾಮಸ್ಥರು ಅಕ್ಷತೆ ಹಾಕಿ, ಮಂಗಳಾರತಿಯನ್ನೂ ಮಾಡಿದರು! ಅಲ್ಲಿ ನಡೆದಿದ್ದು ಕತ್ತೆಗಳ ಮದುವೆ. ಮಳೆಯನ್ನು ಕಾಣದೇ ಕಂಗೆಟ್ಟ ಜನ ಹಲವೆಡೆ ಮಾಡುವಂತೆ ಇಲ್ಲಿಯೂ ಕತ್ತೆ ಮದುವೆ ಮಾಡಿಸಿ ಮಳೆಯ ಬರುವಿಕೆಗಾಗಿ ಆಗಸ ನೋಡುತ್ತಿದ್ದಾರೆ.

ಬಾಟಲಿಯೊಳಗೆ ವಧು- ವರ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಮದುಮಕ್ಕಳನ್ನು ಪ್ಲಾಸ್ಟಿಕ್ ಬಾಟಲಿಯೊಳಗೆ ಕೂಡಿಹಾಕಿದ್ದರು. ಹೊರಗಡೆ ಹೋಗಲು ಮದುಮಕ್ಕಳು ಕೂಗಿಕೊಳ್ಳುತ್ತಿದ್ದರೂ ಅಲ್ಲಿ ನೆರೆದಿದ್ದವರು ಜಪ್ಪಯ್ಯ ಎಂದರೂ ಬಿಡಲಿಲ್ಲ. ಅದೂ ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ!

ಅಲ್ಲಿ ಹಸೆಮಣೆ ಏರಿದ್ದು ಕಪ್ಪೆಗಳು. ಮಳೆಗಾಗಿ ಅಲ್ಲಿ ಮದುವೆ ನಡೆದಿತ್ತು. ಎರಡು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೆಣ್ಣು ಮತ್ತು ಗಂಡು ಕಪ್ಪೆಯನ್ನು ಹಾಕಿಡಲಾಗಿತ್ತು. ಬಾಟಲಿಗೇ ಬಾಸಿಂಗವನ್ನೂ ಕಟ್ಟಲಾಗಿತ್ತು. ತಾಳಿ ಕಟ್ಟುವ ಮುಹೂರ್ತ ಬಂದ ತಕ್ಷಣ ಹೆಣ್ಣು ಕಪ್ಪೆಯನ್ನು ಹೊರತೆಗೆದು ಗಟ್ಟಿಮೇಳ ಸಹಿತ ತಾಳಿ ಕಟ್ಟಲಾಯಿತು. ಕಪ್ಪೆಗಳು ಹಿಂಸೆ ಅನುಭವಿಸುತ್ತಿದ್ದರೆ, ಊರ ಜನರು ಮಾತ್ರ ಭರ್ಜರಿ ಸಿಹಿಯೂಟ ಸವಿದರು.

ಮಕ್ಕಳಿಂದ ಗುರ್ಜಿ
ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ
ಹಳ್ಳ ಕೊಳ್ಳ ಹರಿದಾಡಿ ಬಂದೆ
ಕಾರ ಮಳಿಯ, ಕಪಾಟ ಮಳೆಯೆ...
ಬಣ್ಣ ಕೊಡತೀನಿ ಬಾ ಮಳಿಯೆ...
ಸುಣ್ಣ ಕೊಡತೀನಿ ಸುರಿ ಮಳಿಯೇ...ಸುರಿ ಮಳಿಯೇ...
ಮಳೆ ಸುರಿಯೋ ಮಳೆ ಸುರಿಯೋ...
ಎಂದು ಹಾಡುತ್ತಾ ತಲೆ ಮೇಲೆ ರೊಟ್ಟಿಯ ಹೆಂಚಿನ ಗುರ್ಜಿ ಹೊತ್ತುಕೊಂಡು 12 ವರ್ಷದೊಳಗಿನ ಬಾಲಕ, ಬಾಲಕಿಯರು ಮನೆಮನೆಗೆ ಸುತ್ತಾಡುವುದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಿಗೇರಿ ಗ್ರಾಮದಲ್ಲೀಗ ಸಾಮಾನ್ಯ.

ಹೆಂಚಿನ ಮೇಲೆ ಮಣ್ಣಿನ ಗುಪ್ಪೆ ಮಾಡಿ ಅದರಲ್ಲಿ ಜೀವಂತ ಕಪ್ಪೆ ಇಡುತ್ತಾರೆ. ಕಪ್ಪೆಯ ಉಸಿರಾಟಕ್ಕೆ ಚಿಕ್ಕ ಕಿಂಡಿಯಿಡುತ್ತಾರೆ. ಗುಪ್ಪೆಯ ಮೇಲೆ ಗರಿಕೆಯಿಡುತ್ತಾರೆ. ಇದೇ ಗುರ್ಜಿ. ಇದನ್ನು ತಲೆಯ ಮೇಲೆ ಹೊತ್ತುಕೊಂಡ ಮಕ್ಕಳು ಹಾಡು ಹಾಡುತ್ತಾ ಮನೆಮನೆಗಳಿಗೆ ಹೋಗುತ್ತಾರೆ. ಮನೆಯವರು ಬಂದು ನೀರಿನ ತಂಬಿಗೆಯಿಂದ ಗುರ್ಜಿಗೆ ನೀರು ಹಣಿಸುವಾಗ ಬಾಲಕಿ ಒಂದೆರಡು ಸುತ್ತು ತಿರುಗುತ್ತಾಳೆ. ಗುರ್ಜಿಗೆ ಕುಂಕುಮ ಇಡುವ ಮಹಿಳೆಯರು ಊದುಬತ್ತಿಯಿಂದ ಅದಕ್ಕೆ ಪೂಜೆ ಸಲ್ಲಿಸಿ, ಮಳೆಯಾಗಲಿ ಎಂದು ಪ್ರಾರ್ಥಿಸುತ್ತಾರೆ.

ಅಲ್ಲಿಂದ ಆ ಮಕ್ಕಳ ಪಯಣ ರೈತರ ಮನೆಮುಂದೆ. ಮಳೆರಾಯನನ್ನು ಕರೆಯುತ್ತಾ ಅನ್ನದಾತನಿಗೆ ಸುಖ ಸಮೃದ್ಧಿ ತರಲಿ ಎಂದು ಹರಸುತ್ತಾ ಈ ಮಕ್ಕಳು ರೈತನ ಮನೆ ಮುಂದೆ  ಬಂದು ಭಿಕ್ಷೆ ಬೇಡುತ್ತಾರೆ. ಅವರೂ ಗುರ್ಜಿಗೆ ನೀರು ಹಾಕಿ, ರೊಟ್ಟಿ ಮತ್ತಿತರ ಧಾನ್ಯ ನೀಡಿ ಕಳಿಸುತ್ತಾರೆ. ಇದೇ ಹಾಡನ್ನು ಹೇಳುತ್ತಾ ಮಳೆರಾಯನನ್ನು ಕರೆಯುತ್ತಾರೆ. ನಂತರ ಮಕ್ಕಳು ಗುರ್ಜಿಯಲ್ಲಿನ ಕಪ್ಪೆಯನ್ನು ಬಾವಿಗೆ ಬಿಟ್ಟು ಭಿಕ್ಷೆ ಬೇಡಿ ತಂದ ಆಹಾರ ಪದಾರ್ಥಗಳನ್ನೂ ಬಾವಿಗೆ ಬಿಡುತ್ತಾರೆ.

ದೇವರಿಗೇ ನೀರು!
ಕತ್ತೆ, ಕಪ್ಪೆ ಮದುವೆ ಮಾಡಿದರೂ ಹಲವೆಡೆ ಪ್ರಯೋಜನವಾಗದೇ ಇರುವುದನ್ನು ಕಂಡ ಯಾದಗಿರಿ ಜಿಲ್ಲೆಯ ನಾಯ್ಕಲ್‌ ಗ್ರಾಮದ ಜನರು ಮಳೆ ನೀಡದೇ ಮುನಿಸಿಕೊಂಡ ದೇವರಿಗೇ ನೀರು ಕುಡಿಸುತ್ತಾರೆ! ‘ದೇವರೇ ನೀನೇಕೆ ಮುನಿಸಿಕೊಂಡಿರುವೆ? ಮಳೆ ನೀಡಿ ನಮ್ಮನ್ನೆಲ್ಲ ಹರಸು’ ಎಂದು ಬೇಡುವ ಸಂಪ್ರದಾಯ ಹಲ ವರ್ಷಗಳಿಂದ ನಡೆದುಬಂದಿದೆ. ಇದುವರೆಗೆ ಕೃಪೆ ತೋರದ ವರುಣನಿಗಾಗಿ ಈ ಬಾರಿಯೂ ಜನ ನೀರಿನ ಜೊತೆ ದೇವರ ಮೊರೆ ಹೋಗಿದ್ದಾರೆ. ಗ್ರಾಮಸ್ಥರಿಗೆ ಇಲ್ಲಿರುವ ಭೀಮಾ ನದಿಯೇ ಜೀವಾಳ. ಆದ್ದರಿಂದ ಭೀಮೆಯ ನೀರನ್ನು ಕೊಡಗಳ ಮೂಲಕ ಹೊತ್ತು ತಂದು ದೇವರಿಗೆ ನೀಡುತ್ತಿದ್ದಾರೆ.

ಪಾನಕ ಜಾತ್ರೆ
ನಾಯ್ಕಲ್‌ ಗ್ರಾಮದಲ್ಲಿ ದೇವರಿಗೆ ನೀರು ನೀಡಿದರೆ, ಯಾದಗಿರಿ ಜಿಲ್ಲೆಯ ಸಾಯಿನಗರ ಗ್ರಾಮದಲ್ಲಿ ದೇವರಿಗೆ ಪಾನಕದ ಅಭಿಷೇಕ, ಪಾನಕ ಜಾತ್ರೆ!ಮಳೆಗಾಗಿ ಪ್ರಾರ್ಥಿಸಿ ಹಿತ್ತಾಳೆ ಕೊಡಗಳಲ್ಲಿ ಪಾನಕ ಮತ್ತು ಅರಿಶಿಣದ ನೀರು ತುಂಬಿಕೊಂಡು  ಮಾರಮ್ಮನಿಗೆ ಅಭಿಷೇಕ ಮಾಡುತ್ತಾರೆ. ‘ಕೆಲವು ಕಡೆ ತಮ್ಮ ಇಷ್ಟಾರ್ಥ ಸಿದ್ಧಿಗೆ ಮಾರಮ್ಮನಿಗೆ ಪ್ರಾಣಿ ಬಲಿ ಕೊಡುತ್ತಾರೆ. ಇದು ಹಿಂಸೆಯ ಮಾರ್ಗ. ಇದರ ಬದಲು ಅಹಿಂಸಾತ್ಮಕವಾಗಿ ಪಾನಕ ಮತ್ತು ಅರಿಶಿಣ ನೀರಿನ ಅಭಿಷೇಕ ಮಾಡುತ್ತೇವೆ’ ಎನ್ನುತ್ತಾರೆ ಗ್ರಾಮಸ್ಥರು. ಹೀಗೆ ಮಾಡಿದರೆ ವರುಣ ದೇವ ಕೃಪೆ ತೋರುತ್ತಾನೆ ಎನ್ನುವ ನಂಬಿಕೆ ಜನರದ್ದು.

ಹಸುವಿಗೆ ಸೀಮಂತ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿಯ ಮಿನಕಗುರ್ಕಿಯಲ್ಲಿ ಮಳೆರಾಯನ ಕೃಪೆಗಾಗಿ ಹಸುವಿಗೆ ಸೀಮಂತದ ಭಾಗ್ಯ. ಹೊಸ ಬಟ್ಟೆ ತೊಟ್ಟು, ಪುಷ್ಪಗಳಿಂದ ಸಿಂಗಾರಗೊಂಡಿದ್ದ ಹಸುವಿಗೆ ಸೀಮಂತ ಮಾಡಲಾಯಿತು. ಬಗೆಬಗೆ ತಿನಿಸು, ಹಣ್ಣು ಹಂಪಲುಗಳನ್ನು ಹಸುವಿಗೆ ನೀಡಿದರು, ಸೋಬಾನೆ ಪದಗಳನ್ನೂ ಹಾಡಿದರು. ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಲಾಯಿತು. ಈಗ ಆಗಸ ನೋಡುವುದಷ್ಟೇ ಗ್ರಾಮಸ್ಥರ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT