ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಿಮಿರಿ ಕೆಂಗುರಿಗೊಂದು ಸಂತೆ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಿಂಧನೂರ ಸಂತೆ ತಲುಪಿದಾಗ ಸಮಯ ಬೆಳಿಗ್ಗೆ ಏಳು ಗಂಟೆಯಾಗಿತ್ತು. ಸಿಂಧನೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಾಗಲೇ ಜನಜಂಗುಳಿ. ಜನರು ಗುಂಪು ಗುಂಪಾಗಿ ಸಂತೆಯ ಆವರಣದಲ್ಲೆಲ್ಲ ತುಂಬಿಕೊಂಡಿದ್ದರು. ಇಡೀ ಸಂತೆ ಮೈದಾನವೇ ಕೆಂದು ಕುರಿಗಳಿಂದ ತುಂಬಿಹೋಗಿತ್ತು. ಬೇರೆ ಬಣ್ಣದ ಕುರಿಗಳ ಕುರುಹೇ ಇಲ್ಲ. ಆಗ ಗೊತ್ತಾಯ್ತು ನಾವು ಇದ್ದುದು ಕೆಂದು ಕುರಿ, ಕೆಂಗುರಿಯ ಸಂತೆಯಲ್ಲಿ ಎಂದು.

ಸುತ್ತಮುತ್ತ ನೋಡಿದಾಗ, ಹತ್ತು ಹೆಣ್ಣು ಕುರಿಗಳೊಂದಿಗೆ ಅಂದು ಸಂತೆಗೆ ಬಂದ ಸಿಂಧನೂರು ತಾಲ್ಲೂಕಿನ ಬೋಗಾಪುರ ಗ್ರಾಮದ ದುರ್ಗಪ್ಪ ಕಣ್ಣಿಗೆ ಬಿದ್ದರು. ಅವರು ತಂದಿದ್ದ ಕುರಿಗಳು ನವಿರಾದ ಕೂದಲು ಹಾಗೂ ಆಕರ್ಷಕ ಕಣ್ಣುಗಳಿಂದ ಮಿರಿಮಿರಿ ಮಿಂಚುತ್ತಿದ್ದವು.

ಖರೀದಿಗಾಗಿ ಬಂದವರು ಕುರಿಗಳ ನಡುವಲ್ಲಿ ಶೇಖರಣೆಗೊಂಡ ಮಾಂಸದ ಪ್ರಮಾಣವನ್ನು ತಮ್ಮ ಹಸ್ತದ ಸಹಾಯದಲ್ಲೇ ಅಂದಾಜಿಸಿ, ಹಿಂಗಾಲುಗಳ ಮಧ್ಯೆ ಕೈ ಹಾಕಿ ದೇಹವನ್ನು ಒಂದಿಷ್ಟು ಎತ್ತಿ ಅವುಗಳ ತೂಕವನ್ನು ಊಹಿಸಿದರು. ದುರ್ಗಪ್ಪನವರಿಂದ ಪ್ರತಿ ಕುರಿಗೆ ಏಳು ಸಾವಿರ ರೂಪಾಯಿಗಳ ಸವಾಲು ಮೊದಲಾಯಿತು. ಆ ಕಡೆಯಿಂದ ನಾಲ್ಕು ಸಾವಿರದ ಪಾಟೀಸವಾಲು.

ತಮ್ಮ ತಮ್ಮ ಸವಾಲಿನ ಸಮರ್ಥನೆಯ ಮಾತುಗಳು ದೊಡ್ಡದನಿಯಲ್ಲಿ ವಿನಿಮಯವಾದವು. ಅಷ್ಟರಲ್ಲಿ ಮೂರನೆ ವ್ಯಕ್ತಿಯೊಬ್ಬ ಥಟ್ಟನೆ ಮಧ್ಯೆ ಪ್ರವೇಶಿಸಿ, ಇಬ್ಬರೂ ಒಪ್ಪುವಂತೆ ಐದು ಸಾವಿರದ ಮೇಲೆ ಇನ್ನೂರಕ್ಕೆ ವ್ಯಾಪಾರ ಮುಗಿಸಿದ. ಕುರಿಗಳ ಬೆನ್ನ ಮೇಲ್ಭಾಗದ ಒಂದಿಷ್ಟು ಕೂದಲುಗಳನ್ನು ತನ್ನ ಬ್ಲೇಡಿನಿಂದ ಕತ್ತರಿಸಿ, ಮುಗಿದ ಒಪ್ಪಂದಕ್ಕೆ ಷರಾ ಬರೆದ.

‘ವ್ಯಾಪಾರಕ್ಕೆ ಬಂದೋರು ಬರಿಗೈಲಿ ಹೋಗ್ಬಾರ್ದು ನೋಡ್ರಿ, ಜೊತೆಗೆ ಸಾಕಿದೋನಿಗೂ ಲುಕ್ಸಾನ ಆರ್ಗಬಾರ್ದು. ಏನೋ ಖುಷಿಗೆ ಅಂತ ಎರಡು ಕಾಸು ಕೊಟ್ರೆ ಇಸ್ಕತೀವಿ. ಅದು ಬಿಟ್ರೆ ಇದ್ರಾಲ್ಲಿ ನಮ್ದೇನೂ ಇಲ್ಲ’ ಎಂದು ಮೂರನೇ ವ್ಯಕ್ತಿಯಾಗಿ ಒಳನುಸುಳಿ ವ್ಯಾಪಾರ ಮುಗಿಸಿಕೊಟ್ಟ ಹಮ್ಮಿನಲ್ಲಿ ಮಧ್ಯವರ್ತಿ ಮಾರೆಪ್ಪ ನಸುನಕ್ಕ.

‘ಸಂತೆ ಮುಕ್ಕಾಲ್ವಾಸಿ ವ್ಯಾಪಾರನ ಜಬರ್ದಸ್ತು ಮಾಡಿ ಇವರುಗಳೇ ಮುಗಿಸ್ತಾರೆ ಸ್ವಾಮಿ. ಕೊಂಡೋರತ್ರ ಕಾಸು ಕೀಳೋದಲ್ದೆ, ನಮ್ನೂ ಬಿಡೋದಿಲ್ಲ’ ಎಂದು ತನ್ನ ಅಳಲನ್ನೂ, ಅಸಹಾಯಕತೆಯನ್ನೂ ದುರ್ಗಪ್ಪ ಹೊರಹಾಕಿದರು.

ಕೆಂಬಣ್ಣದ ಕುರಿ ಸಿಂಧನೂರು, ಕೊಪ್ಪಳ, ಗಂಗಾವತಿ ಮತ್ತು ರಾಯಚೂರು ಭಾಗದಲ್ಲಿ ಕಂಡುಬರುವ ವಿಶಿಷ್ಟ ತಳಿ. ದೇಶದಾದ್ಯಂತ ಅತ್ಯುತ್ತಮ ಮಾಂಸದ ತಳಿಯೆಂದೇ ಗುರುತಿಸಲಾಗುವ ಈ ತಳಿಗೆ ಸಿಂಧನೂರು ತಳಿ ಎಂಬ ಹೆಸರೂ ಇದೆ. ಸಾಕಾಣಿಕೆಗೆ ಪರ್ಯಾಯವಾಗಿ ಇತರೆ ತಳಿಯೇ ಇಲ್ಲವೇನೋ ಎಂಬಂತೆ, ಇಲ್ಲಿಯ ಪ್ರತಿ ಕುರಿಗಾರನ ಹಿಂಡೂ ಕೆಂಗುರಿಮಯ. ಹೀಗಾಗಿಯೇ ಸಿಂಧನೂರಿನ ಕುರಿಸಂತೆ ಅಕ್ಷರಶಃ ಕೆಂಗುರಿಗೇ ಮೀಸಲಾದ, ಪ್ರತಿ ಸೋಮವಾರದ ಸಂತೆ.

ಬೆಳಿಗ್ಗೆ ಆರಕ್ಕೆಲ್ಲ ಶುರುವಾಗುವ ಕುರಿ ವ್ಯಾಪಾರ ಒಂಬತ್ತು ಮೀರುವುದರಲ್ಲಿ ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತದೆ. ನಂತರ ಖರೀದಿಸಿದ ಕುರಿಗಳನ್ನು ಸಾಗಿಸುವ ಕೆಲಸ. ಸಂತೆ ಮೈದಾನದ ಒಳಾಂಗಣದಲ್ಲೇ ನಿಂತಿರುವ ಲಾರಿ, ಟ್ರಕ್ಕುಗಳ ಚಾಲಕರು ಚುರುಕಾಗುತ್ತಾರೆ. ಕುರಿ ಖರೀದಿಸಿದವರೊಂದಿಗೆ ವ್ಯವಹಾರವೊಂದನ್ನು ಕುದುರಿಸಿ ಕುರಿಗಳನ್ನು ತುಂಬಿಕೊಂಡು ಹೊರಡಲು ಅಣಿಯಾಗುತ್ತಾರೆ.

ಕೆಂಗುರಿಗಳ ಕೊಂಬು ಅರ್ಧ ಇಂಚು  ಬೆಳೆಯುವಷ್ಟರಲ್ಲಿಯೇ ಮರಿಗಳು ಯಾವುದೇ ಮೇವನ್ನು ತಿಂದು ಅರಗಿಸಿಕೊಳ್ಳುವ ಶಕ್ತಿ ಪಡೆಯುತ್ತವೆ. ತೂಕದಲ್ಲಿ ಬನ್ನೂರು, ದೆಕ್ಕನಿ ಇನ್ಯಾವುದೇ ಕುರಿತಳಿಗಳನ್ನು ಮೀರಿಸುವುದರಿಂದ, ಇತ್ತೀಚಿನ ದಿನಗಳಲ್ಲಿ ಕೆಂಗುರಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕಟ್ಟಿ ಮೇಯಿಸಿ, ಕುರಿ ಕೊಬ್ಬಿಸುವ ಸ್ಟಾಲ್ ಫೀಡಿಂಗ್ ಪದ್ಧತಿ ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದ್ದು, ಈ ಪದ್ಧತಿಗೂ ಸುಲಭವಾಗಿ ಹೊಂದಿಕೊಂಡು ಕೊಬ್ಬುವ ಕೆಂಗುರಿಗಳ ಗುಣದಿಂದ ಇವುಗಳ ಬೇಡಿಕೆ ಮತ್ತಷ್ಟು ಹೆಚ್ಚಿದೆ.

ಇದರಿಂದಾಗಿ ಪ್ರತಿವಾರವೂ ಸಿಂಧನೂರಿನಲ್ಲಿ ಖರೀದಿಯಾಗುವ ಕೆಂಗುರಿಗಳು ದಾವಣಗೆರೆ, ಹಾಸನ, ಮಂಗಳೂರು, ಬೆಂಗಳೂರು ಅಷ್ಟೇಕೆ ತಮಿಳುನಾಡಿನ ವಿವಿಧ ಭಾಗಗಳನ್ನೂ ಸೇರುತ್ತಿವೆ.

ಶ್ರಾವಣ ಮಾಸವೊಂದನ್ನು ಬಿಟ್ಟು ಬೇರೆಲ್ಲ ತಿಂಗಳುಗಳಲ್ಲಿ ಕುರಿ ವ್ಯಾಪಾರ ಏರುಗತಿಯಲ್ಲೇ ಇರುತ್ತದೆ. ಪ್ರತಿವಾರ ಏನಿಲ್ಲಾಂದ್ರು ಏಳೆಂಟು ಸಾವಿರ ಕುರಿಗಳು ಮಾರಾಟವಾಗುತ್ತವೆ. ತಿಂಗಳ ವಹಿವಾಟು ಹಲವು ಕೋಟಿಗಳನ್ನು ಮೀರುತ್ತದೆ.

‘ಈಗ್ಗೆ ಸುಮಾರು ಮೂವತ್ತೈದು ನಲವತ್ತು ವರ್ಷಗಳಿಂದಲೂ ಈ ಸಂತೆ ನಡೀತಿರಬಹುದು. ಮೊದಲೆಲ್ಲ ಸ್ಥಳೀಯರ ಮಧ್ಯೆಯೇ ನಡೆಯುತ್ತಿದ್ದ ವ್ಯಾಪಾರ, ಕಳೆದ ಏಳೆಂಟು ವರ್ಷಗಳಿಂದೀಚೆಗೆ ಹೊರಗಿನವರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ’ ಎನ್ನುತ್ತಾರೆ ಇಲ್ಲಿಯ ಕೃಷಿ ಮಾರುಕಟ್ಟೆ ಸಿಬ್ಬಂದಿ. 40–50 ಕುರಿಗಳನ್ನು ಸಾಗಿಸುವ ಸುಮಾರು 50–60 ಸಣ್ಣ ವಾಹನಗಳು, 250–300 ಕುರಿಗಳನ್ನು ಸಾಗಿಸುವ 12–15 ಲಾರಿಗಳು ಪ್ರತಿವಾರವೂ ಮಾರುಕಟ್ಟೆಗೆ ಬರುತ್ತವೆ.

ಮಿಳಿತಕೊಂಡ ಉಪಕಸುಬುಗಳು
ಕುರಿ ಮಾರಾಟದ ಭರಾಟೆಯೇ ಸಂತೆಯ ಪ್ರಮುಖ ಆಕರ್ಷಣೆಯಾದರೂ, ಅದರೊಂದಿಗೆ ಮಿಳಿತಗೊಂಡ ಇತರ ಉಪಕಸುಬುಗಳೂ ಗಮನ ಸೆಳೆಯುತ್ತವೆ. ಕುರಿಗಾರರ ಪಾದರಕ್ಷೆಗಳನ್ನು ಮಾರಾಟ ಮಾಡುವ ಮಂದಿ ಒಂದೆಡೆಯಾದರೆ, ಕುರಿ ಕಟ್ಟಲು ಬಳಸುವ ಹಗ್ಗ, ಅಲಂಕಾರದ ಗೆಜ್ಜೆ ಇತ್ಯಾದಿ ಪರಿಕರಗಳನ್ನು ಮಾರುವ ಮಂದಿ ಮತ್ತೊಂದೆಡೆ.

ಕುರಿ ಮಂದೆಯನ್ನು ಹಟ್ಟಿಯ ಬಳಿ ತಂಗಿಸುವಾಗ ಕುರಿಗಾರರು ಬಳಸುವ ಕುರಿಬಲೆಗಳನ್ನಷ್ಟೇ ಮಾರಲು ಪ್ರತಿವಾರ ಸಂತೆಗೆ ಬರುವ ದಢೇಸೂಗೂರಿನ ನಾಗಪ್ಪ, ಒಂದೇ ದಿನದಲ್ಲಿ ಎಂಟ್ಹತ್ತು ಸಾವಿರ ರೂಪಾಯಿಗಳ ವ್ಯಾಪಾರವನ್ನು ಕಾಣುತ್ತಾರೆ. ಅದರಂತೆ, ಸಂತೆಯ ದಿನಕ್ಕೆಂದೇ ನೆಲಸಾರಿಸಿಕೊಂಡು ಗಿರಾಕಿಗಳ ಸ್ವಾಗತಕ್ಕೆ ಸಿದ್ಧವಾಗುವ ಚಹಾ ತಿಂಡಿ ಹೋಟೆಲಿನವರು ಒಂದೇ ದಿನದಲ್ಲಿ ಸಾವಿರಾರು ರೂಪಾಯಿಗಳನ್ನು ಗಳಿಸುತ್ತಾರೆ.

‘ಸಾವಿರಾರು ಜನ, ಕುರಿ ಓಡಾಡುವ ಜಾಗ ಸರ್. ದೂಳಂತೂ ಇದ್ದದ್ದೇ. ಕುರಿಗಳನ್ನು ನಿಲ್ಲಿಸಿ ನೆರಳ ನೆಮ್ಮದಿಯಲ್ಲಿ ವ್ಯಾಪಾರ ಮಾಡಲು ಗಿಡಮರಗಳಂತೂ ಇಲ್ಲಿಲ್ಲ. ಕುರಿಗಳಿಗೆ ಒಂದಿಷ್ಟು ಕುಡಿಯುವ ನೀರಿನ ವ್ಯವಸ್ಥೆಯಾದರೂ ಬೇಕಿತ್ತು. ಸಂತೆ ಹಿಂದಿನ ದಿನ ಸಂಜೆಯವರೆಗಿನ ಅಲೆದಾಟದಲ್ಲಿ ಸಿಕ್ಕಷ್ಟೇ ಮೇವು-ನೀರು ಅವಕ್ಕೆ. ಸಂತೆಯಲ್ಲಿ ಮಾರಾಟವಾಗಿ ತಮ್ಮ ಗುರಿ ತಲುಪುವವರೆಗೂ ಮೇವು ನೀರಿಲ್ಲದೆಯೇ ಇರಬೇಕವು.

ಒಮ್ಮೊಮ್ಮೆ ಆ ದಾರಿ ಹತ್ತಾರು ತಾಸುಗಳಾಗುವುದೂ ಇದೆ’ ಎನ್ನುತ್ತ ಕುರಿಗಳ ಬಗೆಗಿನ ತಮ್ಮ ಕಾಳಜಿ ವ್ಯಕ್ತಪಡಿಸಿದರು ಹೋಟೆಲೊಂದರಲ್ಲಿ ಚಹಾ ಹೀರುತ್ತಾ ಕುಳಿತಿದ್ದ ಕುರಿಗಾರ ಹನುಮಪ್ಪ. ಹೊರಟ ವಾಹನಗಳ ನೆತ್ತಿಯಲ್ಲಿ ತಲೆ ಹೊರಹಾಕಿ ಕುಳಿತಿದ್ದ ಕುರಿಗಳು ತಾವು ಸೇರುವ ಹೊಸ ಜಾಗದ ಕನವರಿಕೆಯಲ್ಲಿರುವಂತೆ ಕಂಡವು.

ಕೆಂಗುರಿಯ ವೈಶಿಷ್ಟ್ಯಗಳು: ಮೈ ತುಂಬಾ ಕೆಂದು ಕೂದಲುಗಳಿರುವುದರಿಂದ ಈ ಕುರಿ, ಕೆಂದು ಕುರಿ ಕೆಂಗುರಿ. ಕೆಂದು ಬಣ್ಣವೇ ಪ್ರಧಾನವಾದರೂ, ಹಣೆ ಮೇಲೆ ಬಿಳಿ ಪಟ್ಟೆ ಮತ್ತು ಹೊಟ್ಟೆಯ ಕೆಳಗೆ ಕಪ್ಪು ಕೂದಲುಗಳೂ ಸಾಮಾನ್ಯವೇ. ಟಗರುಗಳಿಗೆ ದೊಡ್ಡದಾದ ತಿರುಚಿದ ಕೊಂಬುಗಳಿದ್ದರೆ, ಬೋಡು ತಲೆಯೇ ಹೆಣ್ಕುರಿಗಳ ಲಕ್ಷಣ. ವರ್ಷದ ಬಹುಸಮಯ ಬಿಸಿಲಿಗೆ ಮೈಯೊಡ್ಡಿ, ಬಯಲು, ಬೆಟ್ಟ-ಗುಡ್ಡಗಳೆನ್ನದೆ ಅಲೆಯುತ್ತ ಮೇವನ್ನು ಅರಸಬೇಕಾದ ಅನಿವಾರ್ಯತೆಗೆ ಅನುಗುಣವಾಗಿ ಇವುಗಳ ದೇಹವೂ ಸಧೃಡವಾಗಿದೆ.

ಬಳ್ಳಾರಿ, ಬನ್ನೂರು ಕುರಿತಳಿಗಳಿಗೆ ಹೋಲಿಸಿದರೆ, ಎತ್ತರದ ನಿಲುವಿನ ಈ ತಳಿಗಳ ದೇಹ ತೂಕವೂ ಹೆಚ್ಚು. ಮೂರ್ನಾಲ್ಕು ತಿಂಗಳ ಮರಿಗಳೇ 14–16 ಕಿಲೋಗ್ರಾಂ ತೂಗುವುದುಂಟು.

‘ಇಲ್ಲಿ ಜನ, ಮಾಂಸ ಎಳೆಯದಿಲ್ಲಾಂದ್ರೆ ಕೊಳ್ಳಲ್ಲ. ಬಿರಿಯಾನಿಗೆ ಎಳೆ ಮಾಂಸನೇ ಆಗಬೇಕು ಅಂತಾರೆ. ಮಾಂಸಾನೂ ಎಳೆದಿರಬೇಕು, ತೂಕಾನು ಇದ್ದು ನಮ್ಗೂ ಒಂದಿಷ್ಟು ಗಿಟ್ಟಬೇಕಂದ್ರೆ, ಕೆಂಗುರಿನೇ ಸರಿ. ಐದಾರೂ ತಿಂಗಳಿಗೆಲ್ಲ ಇಪ್ಪತ್ತಕ್ಕೂ ಮಿಕ್ಕಿ ತೂಗುತ್ತವೆ.

ಇಷ್ಟು ತೂಕ ಕರಿ ಕುರಿಗಳು ಬರಕಿಲ್ಲ. ಅವು ತೂಕ ಬರೋದ್ರೊಳಗೆ, ಬಲಿತು ಬಿಟ್ಟಿರುತ್ತವೆ’ ಎನ್ನುತ್ತಾರೆ ಬಳ್ಳಾರಿ ನಗರದಲ್ಲಿ ದಿನಕ್ಕೆ ಒಂದು ಅಥವಾ ಎರಡು ಕುರಿಗಳ ಮಾಂಸವನ್ನಷ್ಟೇ ಮಾರಾಟ ಮಾಡಿ ಜೀವನ ಸಾಗಿಸುವ ಶಹನಾಬಿ.

ಗಂಡು ಕುರಿಗಳನ್ನು ಕೊಬ್ಬಿಸಲು ಸಾಮಾನ್ಯವಾಗಿ ಸಂಕ್ರಾಂತಿಯ ಆಸುಪಾಸಿನಲ್ಲಿ ಮೂರು ಮೂರೂವರೆ ತಿಂಗಳಿನ, ಆಗಷ್ಟೇ ಕೊಂಬು ಮೂಡತೊಡಗಿದ ಮರಿಗಳನ್ನು ರೈತರು ಕೊಳ್ಳುತ್ತಾರೆ. ಕೊಂಡ ಮರಿಗಳು ಮನೆ ಸೇರಿದ ಒಂದೆರಡು ತಿಂಗಳು, ಹಟ್ಟಿಯಲ್ಲೇ ಆರೈಕೆಗೆ ಒಳಪಡುತ್ತವೆ. ಪುಷ್ಟಿ ನೀಡುವ ವಿವಿಧ ಬಗೆಯ ತೊಪ್ಪಲುಗಳ ಜೊತೆಗೆ ಮೆಕ್ಕೆಜೋಳ, ಜೋಳ, ಸಜ್ಜೆ ಇತ್ಯಾದಿ ಧಾನ್ಯಗಳನ್ನು ತಿನ್ನಿಸಿ ಮರಿಗಳನ್ನು ಗಟ್ಟಿಮುಟ್ಟಾಗಿ ಬೆಳೆಸಲಾಗುತ್ತದೆ.

ಆನಂತರದ ತಿಂಗಳುಗಳಲ್ಲಿ ಅವುಗಳನ್ನು ಹಟ್ಟಿಯ ಇತರ ಕುರಿಗಳೊಡನೆ ಅಲೆದಾಡಿಸಿ ಮೇಯಿಸಲಾಗುತ್ತದೆ. ಇನ್ನೇನು ಬಕ್ರೀದ್ ಹಬ್ಬ ಒಂದರೆಡು ತಿಂಗಳಿದೆ ಎನ್ನುವಾಗ ಅಲೆದಾಡಿ ಬಂದ ಅವುಗಳಿಗೆ ಮತ್ತೊಮ್ಮೆ ಹಟ್ಟಿಯಲ್ಲಿ ಧಾನ್ಯಗಳನ್ನು ತಿನ್ನಿಸಿ ಕೊಬ್ಬಿಸಲಾಗುತ್ತದೆ. ಬಕ್ರೀದ್ ಹಬ್ಬಕ್ಕೆ ಸರಿಯಾಗಿ ಹನ್ನೊಂದರಿಂದ ಹನ್ನೆರೆಡು ತಿಂಗಳಿನ, 40–45 ಕಿಲೋ ಗ್ರಾಂ ತೂಕದ ವಯಸ್ಕ ಟಗರುಗಳಾಗಿ ಮರಿಗಳು ಬದಲಾಗಿರುತ್ತವೆ.

ದೇಹ ತೂಕಕ್ಕೆ ಅನುಗುಣವಾಗಿ, ಪ್ರತಿ ಕಿಲೋಗ್ರಾಂಗೆ ಇನ್ನೂರ ಮೂವತ್ತು ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟ ಮಾಡಲಾಗುತ್ತದೆ. ಕುರಿ ಸಾಕಲು ಮಾಡಿದ ಖರ್ಚನ್ನೂ ಕಳೆದು, ಏನಿಲ್ಲವೆಂದರೂ ಪ್ರತಿ ಕುರಿಗೆ 3800–4000 ರೂಪಾಯಿಗಳವರೆಗಿನ ಖಚಿತ ಲಾಭ. ಕೇವಲ ಐವತ್ತು ಮರಿಗಳನ್ನು ಕೊಬ್ಬಿಸಿದರೂ ಕೇವಲ ಎಂಟೊಂಬತ್ತು ತಿಂಗಳ ಪಾಲನೆಯಲ್ಲಿ ಎರಡು ಲಕ್ಷ ರೂಪಾಯಿಗಳ ಆದಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT