ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆಯಲಿ ಬೇಕರವಳ್ಳಿ...

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಗಾರು ಮಳೆಯ ಹಿತಾನುಭವ ಸವಿಯಬೇಕು ಎನಿಸುತ್ತಿತ್ತು. ಅದಕ್ಕೆ ನಮ್ಮ ರೋಡ್ ಟ್ರಿಪ್ ಕಳೆದ ವರ್ಷದ ಚಳಿಗಾಲದಿಂದ ಈ ವರ್ಷದ ಮಳೆಗಾಲದವರೆಗೆ ಮುಂದೆ ಹೋಗ್ತಾ ಇತ್ತು. ಕೊನೆಗೆ ಅದಕ್ಕೊಂದು ಪೂರ್ಣ ವಿರಾಮವನ್ನಿಟ್ಟು, ಹೊರಡುವ ಸರದಿ ಬಂತು.
ಬಹಳ ದಿನಗಳ ನಂತರ ಪ್ರವಾಸಕ್ಕೆ ಹೊರಟಿದ್ದರಿಂದ  ಸುಂದರ, ಹಚ್ಚ ಹಸಿರಿನ,ಸ್ಫಟಿಕದಷ್ಟು ಶುದ್ಧ, ನೋಡುತ್ತಿದ್ದರೆ ತನ್ಮಯಗೊಳಿಸುವಂಥ ‘ಸ್ವರ್ಗ’ದ ಅನ್ವೇಷಣೆಯ ಕಾರ್ಯ ನನ್ನ ಕೈಗೆ ಬಂತು.

ಗೂಗಲ್ನಲ್ಲಿ ತಡಕಾಡಿ, ಹೋಮ್ ಸ್ಟೇಗಳ ದೂರವಾಣಿ ಸಂಖ್ಯೆ ಹೆಕ್ಕಿ, ಅಲ್ಲಿಗೆಲ್ಲ ಕರೆ ಮಾಡಿ ಅಂತೂ ಮಾಹಿತಿ ಪಡೆದುಕೊಂಡದ್ದೂ ಆಯಿತು. ನಮ್ಮ ಕನಸನ್ನು ಸಾಕಾರ ಮಾಡುವಂಥ ಸ್ಥಳಕ್ಕಾಗಿ ನಾವು ಆಯ್ಕೆ ಮಾಡಿದ್ದು ಪಶ್ಚಿಮ ಘಟ್ಟಗಳ ದಟ್ಟ ಕಾನನದ ಮಡಿಲಿನಲ್ಲಿರುವ ಕಾಫಿ, ಏಲಕ್ಕಿ, ಮೆಣಸು ತೋಟಗಳ ಶ್ರೇಣಿಯ ಹಾಸನ ಜಿಲ್ಲೆ ಸಕಲೇಶಪುರದ ಹತ್ತಿರದ
ಬೇಕರವಳ್ಳಿ ಗ್ರಾಮ.

ಶನಿವಾರ ಮುಂಜಾನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಿಂದ 6.30ಕ್ಕೆ ಹೊರಟು,11.30ಕ್ಕೆ ಸಕಲೇಶಪುರವನ್ನು ತಲುಪುವುದೆಂದು ನಿಗದಿಯಾಯಿತು. ಮಾರ್ಗ ಮಧ್ಯದಲ್ಲಿ ನಮ್ಮ ಉಪಾಹಾರ ಮುಗಿಸಿ, 11.30ಕ್ಕೆ ನಮ್ಮ ಮೊದಲ ಮಲೆನಾಡು ಕಾಫಿಯನ್ನು ಹೊಸೂರು ಹೋಟೆಲಿನಲ್ಲಿ ಸವಿದು ಸಕಲೇಶಪುರದ ಮಂಜರಾಬಾದ್ ಕೋಟೆ ಕಡೆ ಹೆಜ್ಜೆ ಹಾಕಿದೆವು.

ಮಂಜರಾಬಾದ್ ಕೋಟೆ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ ಮುಂದಕ್ಕೆ 5 ಕಿ.ಮೀ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟ್ ಹಾಗೂ ಬಿಸಿಲೆ ಘಾಟ್ ರಸ್ತೆಗಳ ಕವಲಿನಲ್ಲಿ ಇದೆ. ಇದನ್ನು ಟಿಪ್ಪು ಸುಲ್ತಾನ್ 18ನೇ ಶತಮಾನದಲ್ಲಿ ನಿರ್ಮಿಸಿದ್ದ. ಸುಮಾರು 250 ಮೆಟ್ಟಿಲುಗಳನ್ನು ಏರಿ ಕೋಟೆಯನ್ನು ತಲುಪಬಹುದು.

ಇದು ಸಮುದ್ರ ಮಟ್ಟದಿಂದ ಸುಮಾರು 3,240 ಅಡಿ ಎತ್ತರವಿದೆ. ಇದನ್ನು ಸುಮಾರು 5 ಎಕರೆ ಪ್ರದೇಶದಲ್ಲಿ ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು  ನಕ್ಷತ್ರಾಕಾರದಲ್ಲಿದೆ. ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗೂ ಶೌಚಾಲಯಗಳಿವೆ.

ಸಕಲೇಶಪುರದ ಮಂಜರಾಬಾದ್ ಕೋಟೆಯಲ್ಲಿ ವರುಣ ಮತ್ತು ಸೂರ್ಯನ ಕಣ್ಣಾ ಮುಚ್ಚಾಲೆ ಆಟದ ನಡುವೆ ನಮ್ಮ ಕ್ಯಾಮೆರಾ ಬ್ರೇಕ್ ಇಲ್ಲದೆ ನಮ್ಮ ಎಲ್ಲ ಭಾವ ಮತ್ತು ಭಂಗಿಗಳನ್ನು ಅಚ್ಚೊತ್ತಿ, ಮಲೆನಾಡ ಸೌಂದರ್ಯವನ್ನು ಸವಿಯುತ್ತ ಬೇಕರವಳ್ಳಿಯ ಕಡೆಗೆ ಮುನ್ನುಗ್ಗಿತು.
ಬೇಕರವಳ್ಳಿಗೆ ಕಾಲಿಡುತ್ತಿದ್ದಂತೆ ಹೋಮ್ ಸ್ಟೇ ಮಾಲೀಕರು ಹೊಟ್ಟೆಗೆ ಮಲೆನಾಡ ರುಚಿಯನ್ನು ಉಣಬಡಿಸಿದರು. ಊಟದ ನಂತರ ಎಲ್ಲರೂ ಸುಖ ನಿದ್ರೆಗೆ ಜಾರಿದೆವು.

ಸಂಜೆ. ಆಗ ತಾನೇ ಬಿದ್ದ ಮಳೆಗೆ ಭೂತಾಯಿಯು ಹಸಿರು ಸೀರೆಯನ್ನುಟ್ಟಂತೆ ಭಾಸವಾಯಿತು. ಹೋಮ್ ಸ್ಟೇ ಮಾಲೀಕರು ನಮ್ಮನ್ನು ಇರುಳಿನ ವಾಯು ವಿಹಾರಕ್ಕೆ ಆಹ್ವಾನಿಸಿದರು. ತಮ್ಮ ಎಸ್ಟೇಟ್ ಸುತ್ತಲಿನ ಪರಿಸರವನ್ನು ಪರಿಚಯ ಮಾಡಿಸುತ್ತ ‘ನಿಮಗೊಂದು ಸುಂದರವಾದ ಸ್ಥಳ ತೋರಿಸುತ್ತೇನೆ’ ಎಂದು ಮುನ್ನಡೆದರು. 

ಬೇಕರವಳ್ಳಿಯ ದೇವಸ್ಥಾನದ ಹಿಂದಿನ ಬಯಲಿನ ಹುಲ್ಲುಗಾವಲಿಗೆ ನಮ್ಮನ್ನು ಕರೆತಂದಾಗ ನಮ್ಮ ಕ್ಯಾಮೆರಾ, ಮಳೆರಾಯ ಮತ್ತು ನಮ್ಮ ಛತ್ರಿಗಳ ನಡುವೆ ಸ್ಪರ್ಧೆ ಶುರುವಾಯಿತು. ಮುಂದೆ ಸಾಗಿದಾಗ ಕಂಡ ದೃಶ್ಯವನ್ನು ನೋಡಿ ‘ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲ್ಲೂ ರಸದೌತಣ’ ಬಂಗಾರದ ಮನುಷ್ಯ ಚಿತ್ರದ ಹಾಡಿನ ತುಣುಕು ಹಾಗೆ ಕಿವಿಯಲ್ಲಿ ಮಾರ್ದನಿಸಿತು. 

ಅದೊಂದು ಮನಸಿಗೆ ಮುದ ನೀಡುವ ಹುಲ್ಲುಗಾವಲು. ಅಲ್ಲಲ್ಲಿ ಹಸುಗಳು ಹುಲ್ಲು ಮೇಯುತ್ತಿದ್ದವು. ಹುಲ್ಲುಗಾವಲಿನ ಮಧ್ಯದಲ್ಲಿದ್ದ ಮರದಲ್ಲಿದ್ದ ಆರ್ಕಿಡ್‌ ನಗೆ ಬೀರಿ ನಮ್ಮನ್ನು ಸ್ವಾಗತಿಸುವಂತೆ ಗೋಚರಿಸಿತು. ಸ್ಕಾಟ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ದೇಶವನ್ನು ಒಮ್ಮೆ ಹೊಕ್ಕಂತಿತ್ತು ಆ ಪ್ರದೇಶ. ಮಳೆ ಇಲ್ಲದಿದ್ದರೆ ಅಲ್ಲಿಯೇ ಟೆಂಟ್ ಹಾಕಿ ರಾತ್ರಿ ಕಳೆಯಬೇಕು ಅಂಥಹ ಸ್ಥಳ ಅದು. ಭರ್ಜರಿ ಸೋಲೊ ಮತ್ತು ಗ್ರೂಪ್ ಫೋಟೊಶೂಟ್ ನಂತರ, ಮನೆಯ ಕಡೆ ಹೆಜ್ಜೆ ಹಾಕಿದೆವು.

ಅಲ್ಲಿಂದ ನಿರ್ಗಮಿಸಿದ ಮೇಲೂ ಆ ಪ್ರದೇಶದ ಸೌಂದರ್ಯ ಮನಸಿನಲ್ಲಿ ಹಾಗೆಯೇ ತನ್ನ ಪುಟವನ್ನು ಮುದ್ರಿಸಿತು. ಇತ್ತೀಚಿನ ಕನ್ನಡ ಚಲನಚಿತ್ರಗಳಲ್ಲಿ ಬೇಕರವಳ್ಳಿಯ ಈ ಹುಲ್ಲುಗಾವಲಿಗೆ ಒಂದು ಅನುಪಮ ಸ್ಥಾನವಿದೆ. ಮುಂಗಾರು ಮಳೆ ಸೇರಿದಂತೆ ಹಲವಾರು ಚಿತ್ರದ ಚಿತ್ರೀಕರಣ ಇಲ್ಲಿಯೇ ನಡೆದಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಚ್ಚುಮೆಚ್ಚಿನ ಚಿತ್ರೀಕರಣ ತಾಣವಿದು. ಅವರ ಬಹುತೇಕ ಚಿತ್ರದ ಚಿತ್ರೀಕರಣವು ಇಲ್ಲಿಯೇ ನಡೆದಿದೆ. 

ಬೆಳಿಗ್ಗೆ ಬೇಗ ಎದ್ದು ಮಳೆ ಅನುವು ಮಾಡಿಕೊಟ್ಟರೆ ಹತ್ತಿರದ ಸ್ಥಳಗಳ ಭೇಟಿ ಕೊಡುವ ಕಾರ್ಯಕ್ರಮ ಇತ್ತು. ಆದರೆ ಮಳೆರಾಯನ ಅಬ್ಬರ ಜೋರಾಗಿ ಇದ್ದಿದ್ದರಿಂದ ನಮ್ಮ ರೈಲ್ವೆ ಟ್ರ್ಯಾಕ್ ಟ್ರೆಕ್, ಬಿಸಿಲೆ ಘಾಟ್ ಮತ್ತು ಅತ್ತಿಹಳ್ಳಿ ಜಲಪಾತಕ್ಕೆ ಹೋಗಲಾಗಲಿಲ್ಲ. ಬೆಳಗಿನ ವಾಯು ವಿಹಾರಕ್ಕೆ ಹೋಮ್ ಸ್ಟೇ ಮಾಲೀಕರು ನಮ್ಮನ್ನು ಅಣಿ ಮಾಡಿಸಿ, ಅವರ ತೋಟದ ಪರಿಚಯ ಮಾಡಿಸಿದರು.

ಅವರ ತೋಟ ಒಂದು ಸಣ್ಣ ಕೃಷಿ ವಿಶ್ವ ವಿದ್ಯಾಲಯ ಅಂದರೆ ತಪ್ಪಾಗಲಾರದು. ಎಲ್ಲ ವಿಧದ ತಳಿಯ ಗಿಡ ಮರಗಳನ್ನು ಕಾಣಬಹುದು. ಮಳೆಯ ಆರ್ಭಟ ಜಾಸ್ತಿ ಆಗಿದ್ದರಿಂದ ನಮ್ಮ ಉಪಾಹಾರ ಮುಗಿಸಿ ಹೊರಡುವುದೆಂದು ತಿರ್ಮಾನಿಸಿದೆವು. ದಾರಿಯಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ಕೊಟ್ಟು, ಬೆಂಗಳೂರು ತಲುಪಿದೆವು.

ಬೇಕರವಳ್ಳಿಯ ಪ್ರಶಾಂತ, ರಮಣೀಯ, ಮನಮೋಹಕ ಪರಿಸರ, ಮಲೆನಾಡ ಮೊದಲ ಮಳೆ, ಹುಲ್ಲುಗಾವಲು, ಬೆಚ್ಚನೆ ಕಾಫಿ ಮತ್ತು ಮಲೆನಾಡ ಊಟ ಮನಸಿನಲ್ಲಿ ಹೊಸ ಪುಟವನ್ನು ಮುದ್ರಿಸಿತು. ಮತ್ತೊಮ್ಮೆ ಮಗದೊಮ್ಮೆ ಭೇಟಿ ಕೊಡಬೇಕು ಅನಿಸುತಿದೆ. ಬೇಕರವಳ್ಳಿ ಸಕಲೇಶಪುರದಿಂದ 16 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 230 ಕಿ.ಮೀ. ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT