ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಿಯೊಳಗೆ ಕಲೆಯ ಸಿದ್ಧಿ

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಇಂದಿನ ವೃತ್ತಪತ್ರಿಕೆಗಳೆಲ್ಲ ನಾಳೆ ರದ್ದಿಯಾಗುತ್ತವೆ.  ಎಲೆಕ್ಟ್ರಾನಿಕಲ್‌ ಸಾಮಗ್ರಿ ತಂದಾಗ ಅದರ ಜೊತೆ ಬರುವ ಥರ್ಮಾಕೋಲ್ ಮೂಲೆ ಸೇರುತ್ತವೆ. ಆದರೆ ಇವೆಲ್ಲ ಕಲಾವಿದನ ಕೈ ಸೇರಿದರೆ...  ಹೌದು. ಇಲ್ಲಿ ಇವೆಲ್ಲ ವಿವಿಧ ಕಲಾವಿದರ ಕೈಸೇರಿ ಸುಂದರ ಕಲಾಕೃತಿಗಳಾಗಿ ಅರಳಿ ನಿಂತಿವೆ. ಕಲಾಕೃತಿಯ ಮೂಲ ಯಾವುದು ಎನ್ನುವಷ್ಟು ಅಚ್ಚರಿ ತರುವಂತೆ ಎಲ್ಲರ ಗಮನ ಸೆಳೆಯುತ್ತಿವೆ,  ಕೆಲವು ದಾಖಲೆಯತ್ತಲೂ ದಾಪುಗಾಲು ಹಾಕುತ್ತಿವೆ!

ಅರಳಿದ ಹಾಳೆ
ಈ ಕಲಾವಿದನ ಹೆಸರು ಸಯ್ಯದ್ ಫಕ್ರುದ್ದೀನ್ ಹುಸೇನಿ. ಮೂಲತಃ ಮಂಡ್ಯದ ಮಳವಳ್ಳಿ ತಾಲ್ಲೂಕಿನ ಶಿವನ ಸಮುದ್ರದವರಾದ ಇವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ನೆಲೆಸಿದ್ದರಿಂದ ಮೈಸೂರು ಹುಸೇನಿ ಎಂದೇ ಪರಿಚಿತರು.

ಕಾಗದದ ಕಲೆಯಾಗಿರುವ ‘ಸಾಂಝಿ’ಯಲ್ಲಿ ಇವರದ್ದು ಸಿದ್ಧ ಹಸ್ತ. ಚೀನಾ, ಜಪಾನ್, ಪೋಲೆಂಡ್, ಫ್ರಾನ್ಸ್, ಅಮೆರಿಕ ಮುಂತಾದ ದೇಶಗಳಲ್ಲಿ ವಿವಿಧ ಹೆಸರಿನಲ್ಲಿ ಕರೆಯಾಗುವ ಈ ‘ಸಾಂಝಿ’ಯಲ್ಲಿ ಇವರ ಕೈಚಳಕ ಅಷ್ಟಿಷ್ಟಲ್ಲ. ಪಟಪಟನೆ ಕಾಗದ ಇವರ ಕೈಯಲ್ಲಿ ವಿವಿಧ ಆಕಾರ ಪಡೆದು ನೋಡುಗರನ್ನು ವಿಸ್ಮಯಗೊಳಿಸುತ್ತದೆ.

ರಾಜ್ಯದ 22 ಜಿಲ್ಲೆಗಳಲ್ಲಿ ಈ ಕಲೆಯ ಬಗ್ಗೆ ಶಿಬಿರ ನಡೆಸಿ ಮಕ್ಕಳಿಗೂ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಜಪಾನ್ ಹಬ್ಬದ ಪೇಪರ್ ಕಟಿಂಗ್ ಆರ್ಟ್ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತು ಚಿತ್ರಕಲಾ ಪರಿಷತ್ ನಡೆಸಿದ ಚಿತ್ರ ಸಂತೆಯಲ್ಲಿ ಪ್ರದರ್ಶನ ನಡೆದಿದೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ವತಿಯಿಂದ ನಡೆದ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ, 1999 ರಲ್ಲಿ ಮೈಸೂರು ದಸರಾ ಪ್ರಶಸ್ತಿ, ಮೈಸೂರಿನ ಕನ್ನಡ ಸಂಸ್ಕೃತಿ ಇಲಾಖೆಯ ಸಂಭ್ರಮ ಪ್ರಶಸ್ತಿ, ಬೆಸ್ಟ್ ಮ್ಯೂರಲ್ ಅವಾರ್ಡ್‌ ಪಡೆದುಕೊಂಡಿದ್ದಾರೆ. ಇವರ ಸಂಪರ್ಕಕ್ಕೆ 9845153277.

ಮಕ್ಕಳಿಗಾಗಿ ‘ಮುಖವಾಡ’
ಮಕ್ಕಳನ್ನು ರಂಜಿಸಲು ಮಾರುಕಟ್ಟೆಯಲ್ಲಿ ಎಷ್ಟೆಲ್ಲ ಬಗೆಯ ಗೊಂಬೆಗಳಿವೆ. ಆದರೆ ಅವುಗಳನ್ನು ನೋಡಿ ಸಂತಸ ಪಡುವ ಬದಲು ಆ ಪುಟಾಣಿ ಕೈಗಳಿಂದಲೇ ಅವುಗಳನ್ನು ಮಾಡಿಸಿದರೆ...!

ಇಂಥದ್ದೊಂದು ಯೋಚನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೆ.ಎಲ್.ಇ ಸಂಸ್ಥೆಯ ಬಾಲೋದ್ಯಾನದ ಮುಖ್ಯೋಪಾಧ್ಯಾಯಿನಿ ವಾಸಂತಿ ಬೋರಕರ್ ಅವರದ್ದು.

ಅದಕ್ಕಾಗಿಯೇ ವಿವಿಧ ಮುಖವಾಡಗಳನ್ನು ತಂದು ಅದರಿಂದಲೇ ಹೊಸ ಮುಖವಾಡದ ಸೃಷ್ಟಿ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ ಇವರು.
‘ರೆಡಿಮೇಡ್ ಮುಖವಾಡ ತಂದು ನೀರು ಚಿಮುಕಿಸಿ ತೇವಗೊಳಿಸಬೇಕು. ಎರಡು ಪದರು ಹಾಳೆಯ ಚೂರುಗಳನ್ನು ಅದರ ಮೇಲೆ ಅಂಟಿಸಿ ಬಿಸಿಲಿನಲ್ಲಿ ಇಡೀ ದಿನ ಒಣಗಿಸಬೇಕು. ಆಗ ಹಾಳೆಯ ಚೂರುಗಳು ಗಟ್ಟಿಯಾಗುತ್ತವೆ ಮತ್ತು ಮುಖವಾಡದಿಂದ ಸರಾಗವಾಗಿ ಈಚೆಗೆ ಬರುತ್ತವೆ.

ಆಗ ಮತ್ತೆ ಹಾಳೆಯ ಚೂರುಗಳನ್ನು ಒಳಗೂ ಹೊರಗೂ ದಪ್ಪವಾಗಿ ಅಂಟಿಸಿ ಇಡಬೇಕು. ಮರುದಿನ ಹಾಳೆಗಳನ್ನು ದಂಟೆಗುಂಟ ಅಂಟಿಸಿ ಸಮಗೊಳಿಸಬೇಕು. ಆಗ ಮುಖವಾಡ ಪೂರ್ಣ ಹಂತಕ್ಕೆ  ಬರುತ್ತದೆ. ನಂತರ ನಮಗಿಷ್ಟವಾದ ಬಣ್ಣ ತುಂಬಿದರೆ ಮುಖವಾಡ ರೆಡಿ’ಎಂದು ಹೊಸ ಮುಖವಾಡಗಳ ವರ್ಣನೆ ಮಾಡುತ್ತಾರೆ ವಾಸಂತಿ.

‘ಕಾಗದದ ಚೂರುಗಳನ್ನು ಅಂಟಿಸುವುದರಿಂದ ಮಕ್ಕಳ ಬೆರಳುಗಳ ಸ್ನಾಯುಗಳು ಚೆನ್ನಾಗಿ ಬೆಳವಣಿಗೆಯಾಗುತ್ತವೆ. ಕಾಗದದ ಚೂರುಗಳನ್ನು ಅಂಟಿಸುವ ಕೌಶಲ ಅವುಗಳಿಗೆ ತಿಳಿಯುತ್ತದೆ. ವಿವಿಧ ಮುಖವಾಡ ಮತ್ತು ಬಣ್ಣಗಳ ಪರಿಚಯವೂ ಆಗುತ್ತದೆ. ಅಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳನ್ನು ಗುರುತಿಸಿ ಮಕ್ಕಳು ಅವುಗಳ ಅನುಕರಣೆ ಮಾಡುತ್ತಾರೆ. ಮುಖವಾಡಗಳನ್ನು ಖರೀದಿಸುವ ಹಣವೂ ಉಳಿತಾಯವಾಗುತ್ತದೆ. ಕಾಳಜಿಯಿಂದ ಉಪಯೋಗಿಸಿದರೆ ಹಲವು ತಿಂಗಳವರೆಗೂ ಬಾಳಿಕೆ ಬರುತ್ತವೆ’ಎನ್ನುವುದು ಅವರ ಅನುಭವದ ನುಡಿ.  ಒಂದು ಮುಖವಾಡ ಮಕ್ಕಳ ಬೆಳವಣಿಗೆಗೆ ಇಷ್ಟೆಲ್ಲ ಪ್ರಯೋಜನ ಆಗುತ್ತದೆಯೆಂದಾದರೆ ನೀವೂ ಯಾಕೆ ಪ್ರಯತ್ನಿಸಬಾರದು...?

ನಲಿದಾಡುವ ಬುಡ್ಡಾ ಬುಡ್ಡಿ
ದೊಡ್ಡ ಮುಖದ, ಉದ್ದ ಮೂಗಿನ, ಬೊಚ್ಚು ಬಾಯಿಯ ಈ ಮುಖವಾಡ ಗೊಂಬೆಗಳ ಬ್ಯಾಂಡ್, ವಾದ್ಯ, ತಾಳಗಳಿಗೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರೆ ಮೆರವಣಿಗೆ ರಂಗೇರುತ್ತದೆ. ನೋಡುತ್ತ ನಿಂತ ಜನರು ಹಾಸ್ಯದ ಹೊನಲಲ್ಲಿ ತೇಲುತ್ತಿರುತ್ತಾರೆ. ಊರಲ್ಲಿನ ಯಾವುದೇ ಉತ್ತಮ ಮೆರವಣಿಗೆಗಳಿಗೆಲ್ಲ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿರುವ ಈ ಕಾಮಿಡಿ ಕಾರ್ಟೂನ್‌ಗಳು.

ಇವುಗಳ ಸೃಷ್ಟಿಕರ್ತ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಲಗೇರಿಯ ಸುರೇಶ ವೆರ್ಣಿಕರ್, ಇವರನ್ನು ಮೀಸೆ ಸುರೇಶ್ ಎಂತಲೂ ಕರೆಯುವುದುಂಟು.
ಹಿಂದೊಮ್ಮೆ ಉತ್ಸವದ ಸಂದರ್ಭದಲ್ಲಿ ಬೊಂಬೆಗಳನ್ನು ಮುಟ್ಟಿದಾಗ ಮಾಲೀಕರು ಗದರಿದ್ದೇ ಇವರ ಜೀವನದ ದಿಕ್ಕನ್ನು ಬದಲಿಸಿತು. ತಾವೂ ಇಂತಹ ಬೊಂಬೆಗಳನ್ನು ತಯಾರಿಸಿ ಪ್ರದರ್ಶನ ಮಾಡುವ ಛಲ ತೊಟ್ಟರು.

ಇದರ ಫಲವಾಗಿ ಇವರೀಗ ಥರ್ಮಾಕೋಲ್ ಬಳಸಿ ಮುಖವಾಡಗಳನ್ನು ರೂಪಿಸಿ ಕಲ್ಪನೆಗೆ ತಕ್ಕಂತೆ ಜೀವ ತುಂಬುತ್ತಾರೆ. ಮುಖದ ಅಂದಕ್ಕೆ ಆಯಿಲ್ ಪೇಂಟ್ ಬಳಿದು ವಿಶೇಷ ರೂಪ ಕೊಡುತ್ತಾರೆ. ಬುಡ್ಡಾ ಬುಡ್ಡಿ ಅರ್ಥಾತ್ ಮುದುಕ ಮುದುಕಿ ಹೆಸರಿನ ಗೊಂಬೆಗಳು ಹಗುರಾಗಿದ್ದು, ಒಬ್ಬ ವ್ಯಕ್ತಿ ಐದಾರು ತಾಸುಗಳ ತನಕ ಹಾಕಿಕೊಂಡು ನರ್ತಿಸಬಹುದು. ಉಸಿರಾಟ ಮತ್ತು ನೋಟಕ್ಕಾಗಿ ಸಣ್ಣ ಕಿಂಡಿಯೂ ಇರುತ್ತದೆ. ಮುಖವಾಡವನ್ನು ಹಾಕಿಕೊಂಡಾಗ ಅದರೊಳಗೊಬ್ಬ ವ್ಯಕ್ತಿ ಇದ್ದಾನೆಂಬ ಕಲ್ಪನೆಯೂ ಬರುವುದಿಲ್ಲ. ಯಕ್ಷಗಾನ ತಟ್ಟಿರಾಯ, ರಾಜಾರಾಣಿ, ಕೀಲುಕುದುರೆ, ಹುಲಿ, ಕರಡಿ, ನವಿಲು ಮುಂತಾದ ಗೊಂಬೆಗಳು ಭಾರಿ ಜನಪ್ರಿಯ ಗಳಿಸಿವೆ.

ಸುರೇಶರು ‘ಜೈ ಹಿಂದೂಸ್ತಾನ ಜಾಂಜ್ ಹವ್ಯಾಸಿ ಕಲಾ ತಂಡ’ ಕಟ್ಟಿದ್ದಾರೆ. ಈ ತಂಡ 60 ಸದಸ್ಯರನ್ನು ಹೊಂದಿದೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಗೊಂಬೆ ಮತ್ತು ಜಾಂಜ್‌ನ ಪ್ರದರ್ಶನ ನೀಡಿದ್ದಾರೆ. ‘ನನ್ನ ಕಲಾ ಜೀವನಕ್ಕೆ 30 ವರ್ಷ ಮುಗಿದಿದೆ. ಸಣ್ಣ ಪುಟ್ಟ ತೊಂದರೆಯಿದ್ದರೂ ಈ ಕಸುಬು ಸಂತೃಪ್ತಿ ಜೀವನಕ್ಕೆ ನೆರವು ನೀಡುತ್ತಿದೆ’ ಎನ್ನುತ್ತಾರೆ ಮೀಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT