ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಿನಾಳಕ್ಕೆ ಶುಚಿಯ ರೂಪು

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಯಲ್ಲಿ ಕಸದ ಬುಟ್ಟಿ, ಬೆಳಗಿನ ಐದಕ್ಕೆ ಆನ್ ಡ್ಯೂಟಿ! ಮೈ ಕೊರೆವ ಚಳಿಯನ್ನು ಲೆಕ್ಕಿಸದೇ ಬೆಳಗಿನ ಐದರ ಮುಂಜಾವಿನಲ್ಲಿ ಗ್ರಾಮದ ಬೀದಿ ಬೀದಿಗಳಲ್ಲಿ ಕಸಗೂಡಿಸಿ, ಸ್ವಚ್ಛಗೊಳಿಸುತ್ತಿರುವ ‘ಜ್ಯೋತಿ’ ಗ್ರಾಮವನ್ನು ಬೆಳಗುತಿದೆ ನೋಡಿ!

ಅರೇ, ಇದೇನಿದು ಎಂದು ಅಚ್ಚರಿಯಾಯಿತೆ! ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ರೂಪಿನಾಳ ಗ್ರಾಮದ ಜ್ಯೋತಿ ಲಕ್ಷ್ಮಣ ಪವಾರ ಎಂಬ 66 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ನಿತ್ಯ ಬೆಳಗಾಗುತ್ತಲೇ ಗ್ರಾಮವನ್ನು ಸ್ವಚ್ಛಗೊಳಿಸುವ ಕಾಯಕಕ್ಕೆ ಇಳಿಯುವ ಪರಿ ಇದು.

ಬೆಳಗಿನ ಐದಕ್ಕೆ ಆರಂಭಗೊಳ್ಳುವ ಜ್ಯೋತಿ ಪವಾರ ಅವರ ದಿನಚರಿ ನಿರಂತರವಾಗಿ ಐದು ಗಂಟೆಗಳ ಕಾಲ ನಡೆಯುತ್ತದೆ. ಪೊಲೀಸ್ ಹವಾಲ್ದಾರ್ ಆಗಿದ್ದ ಜ್ಯೋತಿ ಪವಾರ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಅವರ ಸ್ವಚ್ಛತಾ ಕಾಯಕಕ್ಕೆ ಇನ್ನೂ ನಿವೃತ್ತಿ ಸಿಕ್ಕಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದ ಸ್ವಚ್ಛತಾ ಕಾಯಕಕ್ಕೆ ಅಣಿಯಾದ ಪವಾರ ಅವರ ಸಾಮಾಜಿಕ ಕಾರ್ಯ ಇನ್ನೂ ನಿಂತಿಲ್ಲ!

ಹಿಂದಿನಿಂದಲೂ ತಾವು ವಾಸಿಸುವ ಸ್ಥಳ, ಪರಿಸರ, ಸ್ವಚ್ಛತೆಯಿಂದ ಇರಬೇಕೆಂದು ಬಯಸುತ್ತಿದ್ದ ಜ್ಯೋತಿ ಪವಾರ ಅವರು, ತಾವು ಸೇವೆ ಸಲ್ಲಿಸಿದ ಕಚೇರಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸ್ವಂತ ಹಣದಿಂದ ಗ್ರಾಮವನ್ನು ಶುಚಿಗೊಳಿಸಿ, ಗ್ರಾಮೀಣ ಸ್ವಚ್ಛತಾ ಅಭಿಯಾನಕ್ಕೆ ಜೀವ ತುಂಬಿದ್ದಾರೆ.

ನಿಂದನೆಗೆ ಕಿವಿಗೊಡರು
ನಿತ್ಯ ಬೆಳ್ಳಂಬೆಳಿಗ್ಗೆ ಇವರ ಕೈಯಲ್ಲಿ ಪೊರಕೆ ನೋಡಿ ಅಪಹಾಸ್ಯ ಮಾಡುವವರೇ ಹೆಚ್ಚು. ಆದರೆ, ಜ್ಯೋತಿಯವರು ಇದ್ಯಾವುದಕ್ಕೂ ಕಿವಿಗೊಡುವುದಿಲ್ಲ. ತಮ್ಮ ಕಾಯಕಕ್ಕೆ ಪೂರ್ಣವಿರಾಮ ನೀಡಿಲ್ಲ! ಪೊಲೀಸ್ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅವರು, ಪೊಲೀಸ್ ಪೇದೆ ಹುದ್ದೆಯಿಂದ ಹೆಡ್ ಕಾನ್‌ಸ್ಟೆಬಲ್, ಹವಾಲ್ದಾರ್ ಆಗಿ ಬಡ್ತಿ ಹೊಂದಿದವರು.

ಖಾನಾಪುರ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದವರು. ಅಷ್ಟೇ ಅಲ್ಲ, ಕಾಡುಗಳ್ಳ ವೀರಪ್ಪನ್ ಹಿಡಿಯುವ ತಂಡದಲ್ಲಿ 120 ದಿನಗಳ ಕಾಲ ಕಾರ್ಯನಿರ್ವಹಿಸಿದ ಹೆಮ್ಮೆ ಇವರದ್ದು. ನಿವೃತ್ತಿ ಹೊಂದಿದಾಗ ಬಂದ ಹಣದಿಂದ ಎರಡು ಎಕರೆ ಕೃಷಿಭೂಮಿ ಖರೀದಿಸಿ, ಒಕ್ಕಲುತನ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಐಸ್ ಕ್ಯಾಂಡಿ, ದ್ರಾಕ್ಷಿ, ಮಾರಾಟ, ಬಾವಿ ಕೆಲಸ ಹೀಗೆ... ಕಷ್ಟ ಪಟ್ಟು ದುಡಿದ ದಿನಗಳನ್ನು ನೆನೆಯುತ್ತಾರೆ.

ಒಂಬತ್ತನೇ ತರಗತಿಯವರೆಗೆ ಓದಿರುವ ಜ್ಯೋತಿ ಪವಾರ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ, ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಪ್ರಧಾನ ಮಂತ್ರಿಗಳ ಸ್ವಚ್ಛತಾ ಆಂದೋಲನದ ಕಾವು ದೇಶದೆಲ್ಲೆಡೆ ಹರಡುವ ಮೊದಲೇ ಇಂಥದ್ದೊಂದು ಸಾಧನೆ ಮಾಡುತ್ತಿರುವ ಹೆಮ್ಮೆ ಜ್ಯೋತಿ ಅವರದ್ದು.  ಅವರ ಸಂಪರ್ಕ ಸಂಖ್ಯೆ 9731284861.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT