ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತನದಿ ನಾಡಲಿ ಹನಿ ನೀರಿಗೂ ತತ್ವಾರ

Last Updated 11 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ನೂರು ಪದಗಳು ಹೇಳುವ ಭಾವಾರ್ಥವನ್ನು ಕೇವಲ ಒಂದು ಭಾವಚಿತ್ರ ಹೇಳುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ. ಇಗೋ ನೋಡಿ ಈ ಚಿತ್ರಗಳು ನೀರಿನ ಬವಣೆಯನ್ನು ಕಣ್ಣ ಮುಂದೆ ತೆರೆದು ತೋರಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆಯ ಭೀಕರತೆಯನ್ನು ಸಾರುತ್ತಿರುವಂತಿವೆ. ಆಳುವವರು, ಅಧಿಕಾರಶಾಹಿ ಆಡಳಿತದ ನಿಷ್ಕ್ರಿಯತೆಗೆ ಇದು ಜೀವಂತ ಸಾಕ್ಷಿಯಾಗಿ ಮನಸ್ಸು ಕಲಕುತ್ತದೆ.

ಇದು ರಾಜ್ಯದ ಬಹುತೇಕ ಕಡೆಗಳ ಚಿತ್ರಣ. ಗಡಿಭಾಗದ ಬೆಳಗಾವಿ ಜಿಲ್ಲೆಯ ದುರಾದೃಷ್ಟ ಎಂದರೆ ಸಪ್ತ ನದಿಗಳು ಹರಿದರೂ ಹನಿ ನೀರಿಗೆ ತತ್ವಾರ ಇಲ್ಲಿ ಸಾಮಾನ್ಯ ಎನಿಸಿದೆ.

ಒಂದಿಷ್ಟು ಮಲೆನಾಡಿನ ಸೆರಗು ಹಾಗೂ ಬಯಲು ಸೀಮೆಯನ್ನೇ ತನ್ನ ಒಡಲೊಳಗೆ ಹಾಕಿಕೊಂಡಿರುವ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ ಏಳು ನದಿಗಳು ಹರಿದಿವೆ. ಆದರೆ, ದೀಪದ ಬುಡದಲ್ಲಿ ಕತ್ತಲೆ ಎಂಬಂತೆ ಈ ನದಿಗಳು ಹರಿಯುತ್ತಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ನೀರಿನ ಸಮಸ್ಯೆ ಕಂಟಕ ಪ್ರಾಯವಾಗಿ ಮಾರ್ಪಟ್ಟಿದೆ.

ಬೇಸಿಗೆ ಎಂದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಭಯ. ಕುಟುಂಬದ ಎಲ್ಲ ಸದಸ್ಯರು ನೀರಿನ ಒರತೆಗಳತ್ತ ಬಿರು ಬಿಸಿಲಿನಲ್ಲಿ ಕಂಕುಳಲ್ಲಿ ಬಿಂದಿಗೆ ಹೊತ್ತುಕೊಂಡು ನೀರಿಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಸರ್ಕಾರ ಕೊಡುವ ಅಕ್ಕಿಗೂ ಅಷ್ಟು ಸರದಿ ಇರುವುದಿಲ್ಲ. ಆದರೆ ಇಲ್ಲಿ ನಿತ್ಯ ನೀರಿಗಾಗಿ ಹಲವು ಕಿಲೋ ಮೀಟರುಗಟ್ಟಲೆ ಹೋಗಬೇಕು. ಇನ್ನು ಕೆಲವು ಊರುಗಳಲ್ಲಿ ದನಕರಗಳನ್ನು ಸಾಕುವುದು ಕಷ್ಟವಾಗಿ ಅವುಗಳನ್ನು ಮಾರುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಜನರು ತಮ್ಮ ಕೃಷಿ ಕಾಯಕವನ್ನು ಬದಿಗಿಟ್ಟು ನೀರು ಸಂಗ್ರಹಿಸುವುದಕ್ಕಾಗಿಯೇ ಹರ ಸಾಹಸ ಪಡಬೇಕಾಗಿದೆ. ಇನ್ನು, ರೈತ ಮಿತ್ರ ಎತ್ತುಗಳು ಉಳುಮೆಗೆ ಬಳಕೆಯಾಗುವ ಬದಲು, ನೀರು ತರಲು ಉಪಯೋಗವಾಗುತ್ತಿವೆ. ಅಲ್ಲದೇ ಹಾಲು ಕೊಡುವ ಎಮ್ಮೆ, ಹಸುಗಳೂ ನೀರು ತರುವ ಸಾಧನಗಳಾಗಿ ಮಾರ್ಪಟ್ಟಿವೆ.

ಒಟ್ಟಾರೆ ಹೇಳಬೇಕೆಂದರೆ, ಕುಡಿಯುವ ನೀರಿನ ಭೀಕರ ಸಮಸ್ಯೆ ತಾಂಡವವಾಡುತ್ತಿದ್ದರೂ, ಆಳುವವರ ಮತ್ತು ಆಡಳಿತ ನಡೆಸುವವರ ಕಣ್ಣುಗಳು ಕುರುಡಾಗಿವೆ, ಕಿವಿಗಳು ಕಿವುಡಾಗಿವೆ. ಹೀಗಾಗಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಜನಸಾಮಾನ್ಯರ ಪರದಾಟದ ಬದುಕಿನ ಬಂಡಿ ಹಾಗೆಯೇ ಸಾಗಿದೆ...!

ಇನ್ನು ವಯೋವೃದ್ಧರು, ತಮ್ಮ ಮಕ್ಕಳು ಮರಿಯೊಂದಿಗೆ ಹಗಲು-ರಾತ್ರಿ ಎನ್ನದೇ ಕೋಣ, ಎತ್ತು, ಇನ್ನೂ ಕೆಲವು ಕಡೆ ಹಾಲು ಕೊಡುವ ಎಮ್ಮೆಯನ್ನು ಬಳಸಿ ಚಕ್ಕಡಿಗಳಲ್ಲಿ ನೀರು ತರುತ್ತಿರುವ ದೃಶಗಳು ಎಂಥವರ ಕರುಳು  ಚುರ್‌ ಎನ್ನುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT