ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗ್ರಹ– ಒಂದು ಅಭಿಯಾನ

ಹಸಿರ ಹಗೇವು–8
Last Updated 18 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ನಮ್ಮ ಪರಿಸರವನ್ನು ಕಾಪಾಡಿಕೊಳ್ಳಲು ಇರುವ ಮಾರ್ಗವೆಂದರೆ ಶುದ್ಧವಾಗಿಡುವುದು, ಜೊತೆಗೆ ಆದಷ್ಟೂ ಹಸಿರು ತುಂಬಿರುವಂತೆ ನೋಡಿಕೊಳ್ಳುವುದು. ಈ ಕೆಲಸವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವೇ ಸ್ವಚ್ಛಗ್ರಹ. ಸಾಮಾಜಿಕ ಜಾಲತಾಣಗಳ ಮೂಲಕ ನಗರದಲ್ಲಿ ಬದಲಾವಣೆ ತರುವ ಹಂಬಲದಲ್ಲಿ ತೊಡಗಿಕೊಂಡಿದೆ ಸ್ವಚ್ಛಗ್ರಹ.

ಸ್ವಚ್ಛಗ್ರಹ–ಹೆಸರೇ ಹೇಳುವಂತೆ ನಮ್ಮ ಗ್ರಹವನ್ನು ಸ್ವಚ್ಛವಾಗಿಡುವ ಒಂದು ಪ್ರಯತ್ನ ಇದು. ಜನರ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ, ಕಸಮುಕ್ತ ರಸ್ತೆ, ಇವನ್ನು ಸಾಧಿಸುವುದೇ ಸ್ವಚ್ಛಗ್ರಹ ಅಭಿಯಾನದ ಉದ್ದೇಶ. ಬೆಂಗಳೂರಿನಲ್ಲಿ ಕೆಲವೇ ಕೆಲವು ಸಮಾನ ಮನಸ್ಕರು ಸೇರಿ ಕಟ್ಟಿಕೊಂಡಿರುವ ಗುಂಪು ಇದು.

ಯಾವುದೇ ಸಮಸ್ಯೆ ಇರಲಿ, ಜನರೆಲ್ಲಾ ಒಟ್ಟು ಸೇರಿದರೆ ಅದು ಸಲೀಸಾಗಿ ಕರಗಿಬಿಡುತ್ತದೆ. ಅಂಥ ಜನರನ್ನು ಒಗ್ಗೂಡಿಸುವ ಕೆಲಸವೇ ಸ್ವಚ್ಛಗ್ರಹದ್ದು. ತಮ್ಮ ನಗರವನ್ನು ಶುದ್ಧವಾಗಿಟ್ಟುಕೊಳ್ಳುವ, ಹಸಿರಾಗಿಟ್ಟುಕೊಳ್ಳುವ ಹಂಬಲದಲ್ಲಿರುವ ದಶಲಕ್ಷ ಬೆಂಗಳೂರಿಗರನ್ನು ತಲುಪಲೆಂದೇ ಆರಂಭಿಸಿರುವ ಒಂದು ಆನ್‌ಲೈನ್‌ ಅಭಿಯಾನ. ಸಾವಯವ ಆಹಾರದ ಪರಿಕಲ್ಪನೆಯೊಂದಿಗೆ ಸ್ವಚ್ಛಗ್ರಹ ಕೆಲಸ ನಿರ್ವಹಿಸುತ್ತಿರುವುದು.

ಜನರು ತಮ್ಮ ಮನೆಯಲ್ಲೇ ಸಾವಯವ ಆಹಾರವನ್ನು ಬೆಳೆಸುವ, ಆ ಮೂಲಕ ಕಸದ ಸಮಸ್ಯೆ ನೀಗುವುದರೊಂದಿಗೆ ಆರೋಗ್ಯಕರವಾಗಿರುವ ಮಾರ್ಗಸೂಚಿಯಂತೆಯೂ ಕೆಲಸ ಮಾಡುತ್ತಿದೆ. ಗೊಬ್ಬರ ತಯಾರಿಸುವುದು ಕಷ್ಟಕರ ಹಾಗೂ ಗಲೀಜು ಪ್ರಕ್ರಿಯೆ ಎನ್ನುವ ಮನೋಭಾವವನ್ನು ಬದಲಿಸಿ ಅವರಿಗೆ ಸಾವಯವ ಆಹಾರದ ಆರೋಗ್ಯಕರ ಅಂಶಗಳ ಕುರಿತು ಮಾಹಿತಿ ನೀಡಿ ತಿಳಿವಳಿಕೆ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ಕಸದ ಬುಟ್ಟಿಯಲ್ಲಿ ಹಾಕುವ ಮಿಶ್ರತ್ಯಾಜ್ಯಕ್ಕಿಂತ ಗೊಬ್ಬರ ಮಾಡುವುದು ಅತಿ ಶುದ್ಧವಾದ ಪ್ರಕ್ರಿಯೆ. ನಿಮ್ಮ ಮನೆಯಿಂದ ಹೊರ ಹೋಗುವ ಸುಮಾರು 60% ತ್ಯಾಜ್ಯವನ್ನು ಗೊಬ್ಬರ ವಿಧಾನದಿಂದ ಕಡಿಮೆ ಮಾಡಬಹುದು ಎಂದರೆ ಊಹಿಸಿಕೊಳ್ಳಿ ದಶಲಕ್ಷ ಮಂದಿ ಮನೆಯಿಂದ ಹೊರ ಹೋಗುವ ತ್ಯಾಜ್ಯದಲ್ಲಿ ಎಷ್ಟು ಕಡಿಮೆ ಆಗಬಹುದು! ನಮ್ಮ ಭೂಮಿ ಮೇಲಿನ ಹೊರೆ ಎಷ್ಟು ಇಳಿಯಬಹುದು.

ಈ ಅಭಿಯಾನದ ಮೂರು ಮುಖ್ಯ ಅಂಶಗಳೆಂದರೆ–ನಮ್ಮ ಮನೆಯ ಮೂರು ಹಸಿರು ತಾಣಗಳು. ಅವೇ– ಅಡುಗೆ ಮನೆ, ಅಂಗಳ, ಊಟದ ಸ್ಥಳ. ನೀವು ಅಡುಗೆ ಮನೆಯಿಂದ ಏನನ್ನು ಎಸೆಯುತ್ತೀರಿ, ಅದರಿಂದ ಏನನ್ನು ಬೆಳೆಯುತ್ತೀರಿ ಮತ್ತು ಬೆಳೆದಿದ್ದರಿಂದ ಎಷ್ಟು ಆರೋಗ್ಯಕರವಾದದ್ದನ್ನು ಸೇವಿಸುತ್ತೀರಿ ಎಂಬುದರ ಮೇಲೆ ನಡೆಯುವ ಪಯಣ.

ಎಸ್‌ಡಬ್ಲುಎಂಆರ್‌ಟಿ (ಘನತ್ಯಾಜ್ಯ ನಿರ್ವಹಣಾ ಸಂಘ) ಈ ಅಭಿಯಾನ ಆರಂಭಿಸಿದ್ದು. ಶಾಲೆ, ಕಾಲೇಜು, ಕ್ಲಬ್ಬುಗಳು, ಕಚೇರಿಗಳು, ವಸತಿ ಸಮುದಾಯ ಹಾಗೂ ಇನ್ನಿತರ ಕಡೆಗಳಲ್ಲಿ ಕಸ ನಿರ್ವಹಣೆ ಹಾಗೂ ಆರೋಗ್ಯ ವಿಷಯದ  ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಹಲವು ಕಡೆ ಪ್ರಾತ್ಯಕ್ಷಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಕೇವಲ ಅಭಿಯಾನವಲ್ಲ, ಪ್ರಾಯೋಗಿಕ ಕಲಿಕೆಗೆ ಇಲ್ಲಿ ಅವಕಾಶ ಹೆಚ್ಚು. ಸ್ವಯಂಪ್ರೇರಿತರಾಗಿ ಗುಂಪು ಸೇರಿದ ನಾಗರಿಕರಿಗೆ ಪರಿಣತರು ಮಾರ್ಗದರ್ಶನ ನೀಡುತ್ತಾರೆ. ಗೊಬ್ಬರ ಪ್ರಕ್ರಿಯೆ ಹಾಗೂ ನಗರ ಕೃಷಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಇರುವ ಒಂದಿಷ್ಟು ಜಾಗವನ್ನೇ ಹೇಗೆ ಹಸಿರುಸ್ನೇಹಿಯಾಗಿಸಬಹುದು ಎಂಬ ಸಲಹೆಯನ್ನೂ ನೀಡುತ್ತಾರೆ.

ಸ್ವಚ್ಛಗ್ರಹ ಅಭಿಯಾನದಲ್ಲಿ ತೊಡಗಿಕೊಂಡ ನಾಗರಿಕರು, ಮೊದಲು ‘ಒಂದು ವಾರದ ಸವಾಲು’ ತೆಗೆದುಕೊಳ್ಳಬೇಕು. ತಮ್ಮ ಮನೆಯಲ್ಲಿ ಕಸ– ಹಣ್ಣು, ತರಕಾರಿ ತ್ಯಾಜ್ಯವನ್ನು ವಿಲೇವಾರಿಗೆ ಕಳುಹಿಸದೆ ತಾವೇ ನಿರ್ವಹಿಸಿಕೊಳ್ಳುವ ಸವಾಲದು. ಈ ಒಂದು ವಾರದಲ್ಲಿ ಗೊಬ್ಬರ ಪ್ರಕ್ರಿಯೆಯು ಸಂಪೂರ್ಣ ತಿಳಿದು, ಇದು ಸುಲಭ ಎಂಬುದು ಮನವರಿಕೆಯಾಗುವುದು ಖಚಿತ.

ಜೊತೆಗೆ ಈ ಗೊಬ್ಬರದಿಂದ ಭೂಮಿಗೆ ಆಗುವ ಲಾಭ, ಸಾವಯವ ಸತ್ವದ ಪ್ರಯೋಜನಗಳು, ಮನೆಯಲ್ಲಿ ತಾವೇ ಬೆಳೆದು, ರಾಸಾಯನಿಕ ಮುಕ್ತವೂ, ಆರೋಗ್ಯಕರವೂ ಆಗಿರುವುದನ್ನು ತಿನ್ನುವುದರಲ್ಲಿರುವ ಸಂತೋಷ ಇವೆಲ್ಲವೂ ಅನುಭವಕ್ಕೆ ಬರುತ್ತವೆ. ನಗರ ಕೃಷಿ ಮೂಲಕ ಕಳೆದು ಹೋಗುತ್ತಿರುವ ನಮ್ಮ ಸುಂದರ ಪ್ರಕೃತಿಯನ್ನು ಮರಳಿ ಪಡೆಯಲು, ಅದರೊಂದಿಗೆ ಬೆರೆಯಲು ಒಂದು ಮಾರ್ಗವೂ ಆಗಿದೆ. ಸ್ವಚ್ಛಗ್ರಹಕ್ಕೆ ಸೇರಲು ಮೊದಲು www.swachagraha.inಗೆ ಲಾಗಿನ್ ಆಗಬೇಕು.

ನಂತರ ಒಂದು ವಾರದ ಸವಾಲನ್ನು ಸ್ವೀಕರಿಸಬೇಕು. ಒಮ್ಮೆ ನೋಂದಣಿಯಾದರೆ, ನಿಮಗೆ ಹೇಗೆ ಗೊಬ್ಬರ ತಯಾರಿಸಬೇಕು ಎಂಬ ಕುರಿತು ಮಾಹಿತಿ ಇ–ಮೇಲ್ ಮೂಲಕ ದೊರೆಯುತ್ತದೆ. ನೀವು ಬೆಳೆದ ತರಕಾರಿಗಳ ಚಿತ್ರಗಳನ್ನೂ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಬಹುದು. ಈ ಅಭಿಯಾನದಿಂದ ಪ್ರೇರೇಪಿತರಾಗಿ ಎಷ್ಟೋ ಮಂದಿ ತರಕಾರಿಗಳನ್ನು ತಾವೇ ಬೆಳೆಸುತ್ತಿದ್ದಾರೆ.

ನಿಮ್ಮ ಸ್ನೇಹಿತರನ್ನೂ ಇದಕ್ಕೆ ಪ್ರೇರೇಪಿಸಬಹುದು. ಒಂದು ಸಣ್ಣ ಪ್ರಯತ್ನ ನಿಮ್ಮ ಸುತ್ತಮುತ್ತಲಿನ, ನಿಮ್ಮ ಸಮುದಾಯದ ಚಿತ್ರಣವನ್ನೇ ಬದಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ  ಬ್ರೋಷರ್‌ಗಳನ್ನು, ಡೆಮೊ ಕಿಟ್‌ಗಳನ್ನು ನೀಡಲಾಗುತ್ತಿದೆ. ನಗರದ ವಿವಿಧೆಡೆ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಮನೆಯಲ್ಲೇ ಗೊಬ್ಬರ ಪ್ರಕ್ರಿಯೆ ಎಂಬುದನ್ನು ಅಭ್ಯಾಸ ಮಾಡಿಕೊಂಡರೆ, ಅದು ದೊಡ್ಡ ಮಟ್ಟದಲ್ಲಿ ಸಾಧ್ಯವಾದರೆ, ನಮ್ಮ ಇಡೀ ಗ್ರಹವನ್ನು ಹಸಿರಿನಿಂದ ತುಂಬಿಸಬಹುದು, ನಮ್ಮ ನಗರವನ್ನೂ ಶುದ್ಧವಾಗಿಡಬಹುದು, ನಮ್ಮ ಕುಟುಂಬವೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬಹುದು. ಇಷ್ಟೇ ಅಲ್ಲವೇ ಎಲ್ಲರಿಗೂ ಬೇಕಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT