ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಸಪ್ತ ಸಹೋದರಿಯರು!

Last Updated 11 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ನಮ್ಮ ಕಾರನ್ನು ರಸ್ತೆಗೆ ಇಳಿಸಿ ಕಾರೊಳಗೆ ತೂರಿಕೊಂಡಾಗ ಕಣ್ಣೊಳಗೆ ಸಿಕ್ಕಿಂನ ಕಾಮನಬಿಲ್ಲು. ಅಂಕುಡೊಂಕಿನ ರಸ್ತೆಯಲಿ ಕಾರು ಚಲಿಸಲು ಹೆಣಗುತ್ತಿತ್ತು.

ಗ್ಯಾಂಗ್‌ಟಾಕ್ ದಾಟುತ್ತಲೇ ದರುಶನಕೊಟ್ಟ ‘ಸಪ್ತ ಸಹೋದರಿಯರು’. ಏಳು ಜಲಪಾತಗಳ ಸರಣಿ ರಸ್ತೆಗುಂಟ ಮೈ ಚೆಲ್ಲಿತ್ತು. ಸುತ್ತಲಿನ ವನರಾಶಿಯನ್ನು ಅಪ್ಪುತ್ತಾ ಬಂಡೆಗಳನು ತಡವುತ್ತಾ ಬಳುಕಿತ್ತು ಜಲರೇಖೆ. ಒಂದಕ್ಕಿಂತ ಒಂದು ಚಂದ. ಗಂಟೆಗಳ ಪ್ರಯಾಣಕ್ಕೆ ಸೋನೆ ಮಳೆಯ ಕೊನೆ. ಮಳೆ ಮುಗಿಯುತ್ತಲೇ ಹೆಜ್ಜೆ ಹೊರಗಿಟ್ಟು ಕ್ಲಿಕ್ ಕ್ಲಿಕ್ ಕೋಲ್ಗೇಟ್‌ ಜಾಹೀರಾತಿನಂತೆ ಫೋಟೊ ಶೂಟ್ ಪ್ರಾರಂಭ. ಎಷ್ಟು ಫೋಟೊ ತೆಗೆದಿದ್ದೆವೋ ಲೆಕ್ಕವಿಟ್ಟಿಲ್ಲ!

ಬೆಳಕಿನ ಜೊತೆಗೆ ಕಾಡುವ ವಿಷಾದ

ಕೆಳಗಿನ ತಿರುವಿನಲ್ಲೆಲ್ಲೋ ಮೋಟಾರ್ ಸದ್ದು. ಬಳುಕಿನ ಸುಂದರಿಯ ಬಗ್ಗಿಸಿ ಬೆಳಕ ತಯಾರಿಯಲಿ ತೊಡಗಿಸಿದ್ದರು. ಅಚ್ಚರಿಯ ಜೊತೆಗೊಂದಿಷ್ಟು ವಿಷಾದ ತೇಲಿತು. ಉತ್ತರಾಖಂಡದ ಉದ್ದಗಲಕ್ಕೂ ಇಂತಹ ನೂರಾರು ವಿದ್ಯುತ್ ಗಿರಣಿಗಳ ಬಿಡಾರವೇ ಬೀಡುಬಿಟ್ಟಿದ್ದರಿಂದ 2014ರ ಜಲಪ್ರಳಯಕ್ಕೆ ಕಾರಣ ಎನ್ನಲಾಗುತ್ತಿದೆ.

‘ಸಪ್ತ ಸಹೋದರಿ’ಯರನ್ನು ಸುಮೋಹಿಸಿ ಗ್ಯಾಂಗ್‌ಟಾಕ್‌ನ ಉತ್ತರಕ್ಕೆ ಪ್ರಯಾಣಿಸಿದೆವು. ಗಿಲೀಟಿನ ರಸ್ತೆ. ಗಾಳಿಗೆ ತೊನೆಯುವ ವಿಚಿತ್ರ ಬಾವುಟಗಳು. ಚದುರಿದ ಹನಿಗಳನು ಚದುರಿಸುತ್ತಾ ಚಲಿಸುವ ಜೀಪ್ ಚಕ್ರಗಳ ಹಿಮ್ಮೇಳದ ದನಿ. ಹಸಿರು ಮುಕ್ಕಳಿಸುವ ಬೆಟ್ಟಗಳ ಭುಜಕ್ಕಂಟಿದ ಪ್ರಯಾಣ. ಎದುರಿಗೆಲ್ಲಾ ಒಬ್ಬರ ಮೇಲೊಬ್ಬರು ಆತು ನಿಂತಂತಿರುವ ಬೆಟ್ಟ ಸಾಲುಗಳು. ಬೆಟ್ಟವನ್ನು ಅಮರಿಕೊಂಡ ಮೋಡ. ಅಲ್ಲಲ್ಲಿ ಗುಡ್ಡ ಕುಸಿತ. ಕಾಡ ತೊಟ್ಟಿಲಿನಲಿ ಜೀಕುವ ನೀರ ಜೋಕಾಲಿಗಳು. ಸಾಸಿವೆ ಚದುರಿದಂತೆ ಮನೆಗಳು. ಅಲ್ಲಿಂದ ನಿರುಕುವ ಮುದುಕರ ನಿರುಪದ್ರವಿ ನೋಟ. ಚಲಿಸುವ ಗಾಲಿಗಡ್ಡ ಬರುವ ಅವರ ಕೋಳಿ ಹಿಂಡುಗಳು. ಶತಮಾನಗಳಿಂದ ಹರಿವ ನೀರ ಹಾಡು. ಇಲ್ಲಿನ ಕಾಡುಗಳಿಗೆ, ಸ್ನೇಹಮಯಿ ಜನಕ್ಕೆ, ಅವರ ಪ್ರೀತಿಗೆ ಸಾಟಿ ಎಲ್ಲಿ? ಹೊಟ್ಟೆ ಚುಂಯಿಗುಡುವುದಕ್ಕೂ ಕ್ಯಾವೆಂಡಿಶ್, ಲಿಚಿಯ ದರುಶನಕ್ಕೂ ಸರಿ ಹೋಯ್ತು. ಎಲ್ಲವನ್ನೂ ಹೊಟ್ಟೆ ದೇವರಿಗೆ ಅರ್ಪಿಸಿದೆವು. ಜೊತೆಗೊಂದಿಷ್ಟು ಅನ್ನ ಸಾಂಬಾರು ಹೊಟ್ಟೆಗಿಳಿಸಿ ಜೀಪಿಗೂ ಪೆಟ್ರೋಲು ಉಣಿಸಿ, ಜೀಪಿನೊಳಗೆ ತೂರಿಕೊಂಡು ಮತ್ತೊಂದಿಷ್ಟು ಜಲರೇಖೆಯನು ಸವಿಯಲು ಲಾಚೆನ್‌ನತ್ತ ಹೊರಟೆವು. ಅಲ್ಲಲ್ಲಿ ಕೈ ಬೀಸುವ ಸುಂದರಿಯರು. ಅವರ ನಗು, ನಾಚಿಕೆ. ಜೊತೆಗೆ ಲಾಚೆನ್ ಸಾಗುವವರೆಗೂ ಬೀದಿಗೊಂದು ಬಸವನಂತೆ ಕಾಣಸಿಕ್ಕ ಜಲರೇಖೆಗಳ ಮೇಳ. ಅವುಗಳೊಂದಿಗೆ ನಮ್ಮ ಸರಸ ಮುಂದುವರಿದಿತ್ತು.

ಗ್ಯಾಂಗ್‌ಟಾಕ್‌ vs ಲಾಚೆನ್

ನಿಯಾನ್‌ ಸರಣಿ ಬೆಳಕಿನಿಂದ ಸಿಕ್ಕಿಂನ ನಿಜದ ನೆಲೆಗಳಿಗೆ ತೆರೆದುಕೊಂಡಿತ್ತು ಕಣ್ಣು. ಸಿಕ್ಕಿದ್ದನ್ನೆಲ್ಲಾ ಮಾರಾಟಕ್ಕಿಟ್ಟ ಲೌಕಿಕ ಗ್ಯಾಂಗ್‌ಟಾಕ್‌ನ ಮುಂದೆ ಲಾಚೆನ್ ಸಿಕ್ಕಿಂನ ಅಲೌಕಿಕತೆ ತೆರೆದಿಟ್ಟಿತ್ತು. ಲೌಕಿಕ ಜಗತ್ತಿಗಿಂತ ಈ ಜಗತ್ತು ಇಷ್ಟವಾಗಿತ್ತು ಎನ್ನುವುದು ಕಡಿಮೆಯೆ. ನೈಜ ಸಹಜ ಜೀವನವನ್ನು ಹೊಂದಿದ ಮುಗ್ಧ ಜನ ಸಮೂಹ.

ಅಲ್ಲಲ್ಲಿ ನನ್ನನ್ನು ಬಳಸಿ ಎಂಬ ಬೋರ್ಡನ್ನು ತಬ್ಬಿದ ಬುಟ್ಟಿ. ಬಯಲು ಶೌಚಕ್ಕೆ ನಿರ್ಬಂಧ. ಸಿಕ್ಕಿ ಬಿದ್ದರೆ ₹ 5 ಸಾವಿರದವರೆಗೆ ದಂಡ! ಸಪ್ತ ಸುಂದರಿಯರ ದರ್ಶನವಿತ್ತು ಹೊರಟು ಲಾಚೆನ್ ಬೀದಿ ತಲುಪಿ ಅರಮನೆಯಂತಹ ರೆಸಾರ್ಟ್‌ ಒಂದರಲ್ಲಿ ತಂಗಿದೆವು. ರೆಸಾರ್ಟ್‌ ಎದುರಿಗೇ ಅತಿ ಸುಂದರ ಜಲಧಾರೆ.

ಉರಗ ಸುಂದರಿಯ ಸುತ್ತು ಬಳಸಿ

ಬೆಳಗ್ಗೆ ನಾಲ್ಕಕ್ಕೆದ್ದು ಗುರುದೊಂಗ್‌ಮಾರ ಸರೋವರಕ್ಕೆ ಸುತ್ತು ಬಂದು ಲಾಚುಂಗ್‌ಗೆ ಹೊರಟಾಗ ಕಾಣ ಸಿಕ್ಕ ಮತ್ತೊಬ್ಬ ಚೆಲುವಿಯ ಹೆಸರು ‘ಕೀಮಾ’. ‘ಕೀಮಾ’ ಎಂದರೆ ಹಾವು. ಸ್ನೇಕ್ ಫಾಲ್ಸ್ ಎಂಬ ವಿಶೇಷಣ ಹೊತ್ತ ಈಕೆ ನಿಜಕ್ಕೂ ಅಪ್ರತಿಮ ಸುಂದರಿಯೇ. ತನ್ನ ಬಳುಕು ಮೈ ಮಾಟವನ್ನು ರಸ್ತೆಗುಂಟ ಸ್ವಲ್ಪವೂ ನಾಚಿಕೆ ಇಲ್ಲದೆ ಹರವಿ ನಿಂತಿದ್ದಳು!

ಜಲಧಾರೆ ನೋಡುತ್ತಲೆ ಹೊಟ್ಟೆ ಚುಂಯ್‌ಗುಡ ಹತ್ತಿತು. ಸಣ್ಣ ಗೂಡಂಗಡಿ ಹೊಕ್ಕು ತಿಂಡಿಗೆ ಆರ್ಡರಿಸಲು ಹೋದೆವು. ಅಂಗಡಿ ಮುಚ್ಚಿತ್ತು. ಜಲಪಾತವನ್ನೇ ನಿರುಕಿಸುತ್ತಾ ಕಾರು ಏರಿದೆವು. ಅಲ್ಲಿಂದ ಹೊರಟಿದ್ದು ಲಾಚುಂಗ್ ಕಡೆಗೆ.

ಲಾಚುಂಗ್ ಮತ್ತು ಹೆಸರಿಲ್ಲದ ಸುಮನೋಹರಿ!

ಲಾಚುಂಗ್‌ನ ನಮ್ಮ ಹೊಟೇಲ್ ಎದುರಿನ ಬೀದಿಯಲಿ ಹಗಲು ರಾತ್ರಿ ಎನ್ನದೇ ಧೋ ಎಂದು ಸುರಿವ ಸುಂದರಿಯ ಕಡೆಗೆ ಯಾರೂ ಗಮನ ಕೊಟ್ಟಂತಿಲ್ಲ. ಬಜ್ಜಿ ತಿನ್ನುವಾಗ ಅದರ ಸೌಂದರ್ಯವನ್ನೇ ನೆಂಜಿಕೊಂಡು ತಿಂದೆ. ಹೆಸರಿನ ಫಲಕ ಜಲಧಾರೆಯ ಸನಿಹ ನನಗೆ ಕಾಣಿಸದೇ ನಿರಾಶೆಯಾಯಿತು. ಇಷ್ಟೊಂದು ನಿರ್ಲಕ್ಷವೇ? ಎನ್ನುವಂತೆ ಒಂದೆರಡು ಚಿತ್ರಗಳನ್ನು ಕ್ಯಾಮೆರಾಕ್ಕೆ ಸೇರಿಸಿದೆ. ಜಲ ರೇಖೆಯ ಸನಿಹದಲ್ಲೆಲ್ಲಾ ಬೆಳೆದ ವೈಲ್ಡ್ ಸ್ಟ್ರಾಬೆರಿ ಹಣ್ಣುಗಳು.
ನಮ್ಮೂರಿನಲ್ಲಾದರೆ ಜಲಧಾರೆಯನ್ನು ಕಮರ್ಷಿಯಲ್‌ ಆಗಿಸಿ ಸ್ಟ್ರಾಬೆರಿ ಕೊಯ್ದು ಮಾರುತ್ತಿದ್ದರು. ಅವರ ಈ ಮುಗ್ಧತೆ, ಅಲೌಕಿಕತೆ ಇಷ್ಟವಾಯಿತು. ಬುದ್ಧನ ನಾಡು ಇಲ್ಲಿಂದ ಕೆಲವೇ ಕಿಲೊಮೀಟರ್. ಹೀಗೆ ಬುದ್ಧನ ನಾಡಿನಲ್ಲೊಮ್ಮೆ ಮನಸೋ ಇಚ್ಚೆ ಅಲೆಯಬೇಕು.

ಕೊನೆಯಲ್ಲಿ ಸಿಕ್ಕವಳು!

ಲಾಚುಂಗ್‌ನ ಜೀರೊ ಪಾಯಿಂಟ್ ತಲುಪಿ ಅಲ್ಲಿಂದ ಮತ್ತೆ ಗ್ಯಾಂಗ್‌ಟಾಕ್‌ಗೆ ಹೊರಟಾಗ ಕಂಡ ಜಲಧಾರೆಯನು ಜೀವನದಲಿ ಮರೆಯಲುಂಟೆ. ನಮ್ಮ ಜೋಗಕ್ಕಿಂತಲೂ ಎತ್ತರದ ನೋಟ, ಮೈ ಮಾಟ. ನಾವು ನೋಡುತ್ತಲೇ ಮೋಡದ ಸೆರಗಿನಲ್ಲಿ ಅಡಗಿದ ಕೊನೆಯ ಜಲರೇಖೆಯನ್ನು ನೋಡುತ್ತಲೆ ನೆನಪು ತಮ್ಮ ತಮ್ಮ ಪ್ರೇಯಸಿ/ ಪ್ರಿಯತಮನ ಕಡೆಗೆ ವಾಲಿದ್ದರಿಂದ ಎಲ್ಲರೂ ಮೌನ. ಇಹಕ್ಕೆ ಕಾಲಿಟ್ಟರೂ ಮೋಡದ ಸೆರಗಿನಿಂದ ಸತಾಯಿಸುತ್ತಲೇ ಇತ್ತು. ಸುತ್ತಲಿನ ಮಂಗಗಳು ಏನಾದರು ತಿಂಡಿ ಸಿಗಬಹುದೇ ಎಂದು ನಿರುಕಿಸಹತ್ತಿ ನಮ್ಮ ಚೀಲಗಳನ್ನು ತಡವಲು ಬಂದವು. ಹೆಸರ ಹುಡುಕಾಟದಲಿ ತೊಡಗಿದವನಿಗೆ ಸಿಕ್ಕಿದ್ದು ನಿರಾಶೆ. ಗಾಳಿಯಬ್ಬರಕ್ಕೆ ಸಿಡಿದ ಕೆಲವು ಹನಿಗಳು ಕ್ಯಾಮೆರಾ ಹೊಕ್ಕವು. ತೆರೆದ ನೋಟ್‌ಬುಕ್ಕಿನಲಿ ಆ ಕೊನೆಯ ಜಲರೇಖೆ ದಾಖಲಾಯಿತು. ನೆನಪ ಬುತ್ತಿಯೊಳಗೆ ಈ ಸುಂದರ ಹೆಸರೊಂದು ಅಚ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT