ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೂ ಗ್ಯಾಸೆಟಿಯರ್‌ ಲಭ್ಯ

Last Updated 19 ಮೇ 2016, 19:32 IST
ಅಕ್ಷರ ಗಾತ್ರ

ಕೇವಲ ಅಕಾಡೆಮಿಕ್ ಸಂಸ್ಥೆಗಳಲ್ಲಿ ನೋಡಬಹುದಾಗಿದ್ದ ಗ್ಯಾಸೆಟಿಯರ್‌ಗಳು ಇನ್ನೂ ಮುಂದೆ ನಮ್ಮ ಮನೆಯ ಕಂಪ್ಯೂಟರ್‌ಗಳಲ್ಲಿ ಲಭ್ಯ. ಗ್ಯಾಸೆಟಿಯರ್‌ಗಳೊಂದಿಗೆ ಇಲಾಖೆ ಇದೀಗ ಪ್ರಕಟಿಸಿರುವ 54 ಗ್ರಂಥಗಳಿಗೂ ಆನ್‌ಲೈನ್ ಯೋಗ ಅಭಿಸಿದೆ.

ಹಲವು ಹತ್ತು ವಿಶೇಷಗಳ ಆಕರಗಳೆಂದೇ ಪರಿಗಣಿಸಲ್ಪಟ್ಟಿರುವ ಗ್ಯಾಸೆಟಿಯರ್‌ಗಳು ಈವರೆಗೆ ಗ್ರಂಥಾಲಯಗಳು, ಶಾಲಾ ಕಾಲೇಜುಗಳಲ್ಲಿ ಮಾತ್ರ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಅವು ಅಂತರ್ಜಾಲದಲ್ಲಿಯೂ ಇಣುಕಲಿವೆ.

ಈ ಸಾಂಸ್ಕೃತಿಕ ಖಜಾನೆ ಕಳೆದ 240 ವರ್ಷಗಳಿಂದ ಪುಸ್ತಕ ರೂಪದಲ್ಲಿತ್ತು. ಚರಿತ್ರೆ, ಆಡಳಿತ, ಇತಿಹಾಸ, ಸಾಂಸ್ಕೃತಿಕ ವಿವರಗಳು, ಶೈಕ್ಷಣಿಕ ವ್ಯವಸ್ಥೆ, ಜನಾಂಗೀಯ ಮಾಹಿತಿ, ಪ್ರೇಕ್ಷಣೀಯ ಸ್ಥಳಗಳ ಪರಿಚಯ ಸೇರಿದಂತೆ ನಾಡಿನ ಇಣುಕು ನೋಟ ನೀಡುವ ಗೆಸೆಟಿಯರ್‌ಗಳು ಈಗ ಹೊಸ ಮಾಧ್ಯಮಕ್ಕೆ ತೆರೆದುಕೊಂಡಿವೆ.

ಅದು 1876. ಮೈಸೂರು ಪ್ರಾಂತ್ಯದ ವಿದ್ಯಾಭ್ಯಾಸ ಇಲಾಖೆಯ ಮೊದಲ ನಿರ್ದೇಶಕರಾಗಿದ್ದ ಬಿ.ಎಲ್‌. ರೈಸ್‌ ಅವರು ಮೈಸೂರು ಗ್ಯಾಸೆಟಿಯರ್‌ನ ಎರಡು ಸಂಪುಟಗಳು ಮತ್ತು ಕೊಡಗು (ಕೂರ್ಗ್) ಗ್ಯಾಸೆಟಿಯರ್‌ನ ಒಂದು ಸಂಪುಟವನ್ನು ಮೊದಲ ಬಾರಿಗೆ ಸಂಪಾದಿಸಿಕೊಟ್ಟರು.

ಇದಾದ ಬಳಿಕ ವಿದ್ವಾಂಸರು, ಅಧಿಕಾರಿಗಳು ನಿರಂತರವಾಗಿ ಇಂತಹ ದೇಶಕೋಶಗಳನ್ನು ವಿವಿಧ ರೀತಿಗಳಲ್ಲಿ ಪೂರ್ಣಗೊಳಿಸುತ್ತಲೇ ಇದ್ದಾರೆ. ಇವುಗಳಲ್ಲಿ ಅನೇಕವು ಮರುಮುದ್ರಣಗೊಂಡಿವೆ. ಕೆಲವು ಪರಿಷ್ಕರಣೆಗೊಂಡು ಪ್ರಕಟಣೆಗೆ ಸಿದ್ಧವಾಗಿವೆ.

ಕೋಲಾರ ಜಿಲ್ಲೆಯ ಗ್ಯಾಸೆಟಿಯರ್‌ (ರಚನೆ ಕೃಷ್ಣ ಅಯ್ಯಂಗಾರ್‌) ನಂತರ ಕೆಲವು ನಿದರ್ಶನಗಳನ್ನು ಹೊರತುಪಡಿಸಿದರೆ ಮೈಸೂರು ಪ್ರಾಂತ್ಯದ ಗ್ಯಾಸೆಟಿಯರ್‌ಗಳನ್ನು ರಚಿಸಿದವರೆಲ್ಲರೂ ಬಹುತೇಕ ವಿದೇಶಿ ವಿದ್ವಾಂಸರೇ.

ಮುಂಬೈ – ಹೈದರಾಬಾದ್ – ಮದ್ರಾಸ್‌ ಹೀಗೆ ವಿವಿಧ ಪ್ರಾಂತ್ಯಗಳಿಗೆ ಹಂಚಿ ಹೋಗಿದ್ದ ಕನ್ನಡ ನೆಲದ ಚರಿತ್ರೆಯನ್ನು ಸ್ಥಳೀಯರೇ ರಚಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು  1930ರ ಕಾಲಘಟ್ಟದಲ್ಲಿ.

ಆಗ ಸಿ.ಹಯವದನರಾವ್‌ ಕೈಗೆತ್ತಿಕೊಂಡ ಗ್ಯಾಸೆಟಿಯರ್‌ಗಳ ಸಿದ್ಧತಾ ಕಾರ್ಯ ತಲಸ್ಪರ್ಶಿಯಾಗಿ ನಡೆಯಿತು. ಎಂಟು ಸಂಪುಟಗಳಲ್ಲಿ ಗ್ಯಾಸೆಟಿಯರ್‌ಗಳು ಸಿದ್ಧಗೊಂಡವು.

ಉದ್ಯಮಿಗಳಿಗೆ, ಸಂಶೋಧಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ, ವಿದ್ವಾಂಸರಿಗೆ ಗ್ಯಾಸೆಟಿಯರ್‌ ಉಪಯುಕ್ತ ಎಂದು ಮನಗಂಡ ಸರ್ಕಾರ ರಾಷ್ಟ್ರಮಟ್ಟದಲ್ಲಿ ಬೃಹತ್‌ ಗ್ಯಾಸೆಟಿಯರ್‌ಗಳನ್ನು ಸಿದ್ಧಗೊಳಿಸಲು ಯೋಜನೆ ರೂಪಿಸಿತು.

ಸ್ವಾತಂತ್ರ್ಯಾನಂತರ ಪ್ರತ್ಯೇಕ ಕನ್ನಡ ರಾಜ್ಯ ರೂಪಗೊಂಡ ಸಂದರ್ಭದಲ್ಲಿ ವಿಶಾಲ ಮೈಸೂರಿನ ಸಮಗ್ರ ಗ್ಯಾಸೆಟಿಯರ್‌ಗಳನ್ನು ತಯಾರಿಸುವ ನಿರ್ಧಾರಕ್ಕೆ ಬರಲಾಯಿತು. ಈ ಗ್ರಂಥ ರಚನೆ ವಿತರಣೆ ಮಹತ್ವ ಅರಿತ ರಾಜ್ಯ ಸರ್ಕಾರ 1958 ರಲ್ಲಿ ಪ್ರತ್ಯೇಕ ಗ್ಯಾಸೆಟಿಯರ್‌ ಇಲಾಖೆಯನ್ನು ಆರಂಭಿಸಿತು.

ಬಿ.ಎಸ್‌. ಸತ್ಯನ್‌ ಅವರು ಗ್ಯಾಸೆಟಿಯರ್‌ ಇಲಾಖೆಯ ಮೊದಲ ಮುಖ್ಯ ಸಂಪಾದಕರು. ಆಗ ಜಿಲ್ಲಾ ಗ್ಯಾಸೆಟಿಯರ್‌ ಸಂಪುಟಗಳ ತಯಾರಿಕೆ ಶುರುವಾಯಿತು.

ಆಗ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ಜಿಲ್ಲೆಗಳ ಸಂಪುಟಗಳು ಸಿದ್ಧಗೊಂಡವು. ಇಂಗ್ಲಿಷ್‌ನಲ್ಲಿ ಪ್ರಕಟವಾದ ಗ್ಯಾಸೆಟಿಯರ್‌ಗಳನ್ನು ನಂತರ ಕನ್ನಡಕ್ಕೆ ಅನುವಾದಿಸಲಾಯಿತು.

ಪ್ರಸ್ತುತ ಬೆಂಗಳೂರು ಕೆಂಪೇಗೌಡ ರಸ್ತೆ, ಕಾವೇರಿ ಭವನದಲ್ಲಿ ನೆಲೆಗೊಂಡಿರುವ ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ರಾಜ್ಯವಾರು, ಜಿಲ್ಲಾವಾರು ಮಾಹಿತಿ ಕೋಶಗಳನ್ನು ಪ್ರಕಟಿಸುವ ಜೊತೆಗೆ ಹಿಂದೆ ಪ್ರಕಟವಾಗಿದ್ದ ಇಂಪೀರಿಯಲ್‌ (ಕರ್ನಾಟಕ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ) ಗ್ಯಾಸೆಟಿಯರ್‌ಗಳು ಪ್ರಸಿದ್ಧ ಅನುಭವ ಕಥನಗಳು (ಫ್ರಾನ್ಸಿಸ್‌ ಬುಕಾವಿನ್‌ ಕೃತಿ ಸೇರಿದಂತೆ) ಆಂಗ್ಲ – ಕನ್ನಡ ಅನುವಾದಗಳನ್ನು ನಿರ್ವಹಿಸುತ್ತಿದೆ.

ಇವುಗಳ ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ದಶವಾರ್ಷಿಕ ಪ್ರಕಟಣೆಗಳು. ಕರ್ನಾಟಕ ವಿಶೇಷ ಗ್ರಂಥ (ಗ್ಲಿಂಪ್ಲೆಸ್‌ ಆಫ್‌ ಕರ್ನಾಟಕ) ಕರ್ನಾಟಕ ಮಿನುಗುನೋಟ ಮೊದಲಾದ ಮಾಹಿತಿ ಪೂರ್ಣ ಕೃತಿಗಳನ್ನು ಹೊರತರುವ ಕೆಲಸ ಮಾಡುತ್ತಿದೆ.

‘ತಂತ್ರಜ್ಞಾನದ ಉಪಯೋಗ ಪಡೆದುಕೊಂಡು ಹಳೆಯ ಅತ್ಯಮೂಲ್ಯ ಗ್ರಂಥಗಳನ್ನು ಸ್ಕ್ಯಾನ್‌ ಮಾಡಿ ಮುದ್ರಿಸಲು ಆರಂಭಿಸಿದೆ. ಇದೀಗ ಅಂತರ್ಜಾಲದಲ್ಲೂ ಗ್ಯಾಸೆಟಿಯರ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ’ ಎನ್ನುತ್ತಾರೆ ಕರ್ನಾಟಕ ಗ್ಯಾಸೆಟಿಯರ್‌ನ ಮುಖ್ಯ ಸಂಪಾದಕ  ಕೆ.ವಿ. ದಯಾನಂದ್‌.

‘ರಾಷ್ಟ್ರೀಯ ಮಾಹಿತಿ ಕೇಂದ್ರದ ನೆರವಿನಿಂದ ಈವೆರಗೆ ಗ್ಯಾಸೆಟಿಯರ್‌ ಇಲಾಖೆಯ 54 ಗ್ರಂಥಗಳನ್ನು ಆನ್‌ಲೈನ್‌ಗೆ ಸೇರ್ಪಡೆಗೊಳಿಸಲಾಗಿದೆ. ಉಳಿದ ಕೃತಿಗಳನ್ನು ಅಂತರ್ಜಾಲಕ್ಕೆ ಶೀಘ್ರ ಸೇರಿಸಲಾಗುವುದು’ ಎನ್ನುತ್ತಾರೆ ಅವರು.

ಹೊಸ ಜಿಲ್ಲೆಗಳ ಮಾಲಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್‌ ಬಿಡುಗಡೆಯಾಗಿದೆ. ಅದರ ಆಂಗ್ಲ ಅನುವಾದ ಕಾರ್ಯ ಆರಂಭವಾಗಲಿದೆ. ಟಿಪ್ಪುಸುಲ್ತಾನ್‌ ಕುರಿತ ಸಮಗ್ರ ಗ್ರಂಥದ ಕನ್ನಡ ತರ್ಜುಮೆ ಕೆಲಸವೂ ನಡೆದಿದೆ.

ಕರ್ನಾಟಕ  ಸಮಗ್ರ ನೋಟವನ್ನು ನೀಡುವ ‘ಎ ಹ್ಯಾಂಡ್‌ ಬುಕ್‌ ಆನ್‌ ಕರ್ನಾಟಕ’ ಹಾಗೂ ಅದರ ಕನ್ನಡ ಅವತರಣಿಕೆ ‘ಕರ್ನಾಟಕ ಕೈಪಿಡಿ’ ಕೃತಿಗಳು ಬಹುಬೇಡಿಕೆಯಲ್ಲಿರುವ ಇಲಾಖೆಯ ಪ್ರಕಟಣೆಗಳು.

ಕರ್ನಾಟಕ ಕೈಪಿಡಿ ಹಾಗೂ ಕರ್ನಾಟಕ ಮಿನುಗು ನೋಟ ಎರಡೂ ಕೃತಿಗಳು ಆಸಕ್ತರಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ‘ಕಣಜ’ ವೆಬ್‌ಸೈಟ್‌ಗೆ ಲಿಂಕ್ ಕಲ್ಪಿಸಲಾಗಿದೆ.

ಕನ್ನಡ ಭಾಷೆಯ ಗ್ಯಾಸೆಟಿಯರ್‌ಗಳ ಸಂಪರ್ಕವನ್ನು ‘ಕಣಜ’ಕ್ಕೆ ಸಂಪರ್ಕಿಸುವ ಯೋಜನೆ ನಮ್ಮ ಮುಂದಿದೆ ಎನ್ನುತ್ತಾರೆ ದಯಾನಂದ್‌.
ವಿಶ್ವಕೋಶ ಮಾದರಿಯ ಈ ವಿಶಿಷ್ಟ ಗ್ರಂಥಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳ ಬಗ್ಗೆ  ಹೊರತರುವುದರ ಜೊತೆಗೆ ಪ್ರಾಯೋಗಿಕವಾಗಿ ಈಗಾಗಲೇ ಆರಂಭಿಸಿರುವ ತಾಲ್ಲೂಕು ಗ್ಯಾಸೆಟಿಯರ್‌ಗಳನ್ನು ಮುಂದುವರೆಸುವ ಮುನ್ನೋಟ ಸಂಸ್ಕೃತಿ ಇಲಾಖೆಗೆ ಇದೆ.

ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಗ್ಯಾಸೆಟಿಯರ್‌  ಮಾದರಿಯಲ್ಲಿ ಇತರ ಆಕರಗ್ರಂಥಗಳಿಗೂ ಮುಂದಿನ ದಿನಗಳಲ್ಲಿ ಅನ್ವಯಿಸಲಾಗುವುದು.

www.gazetteer.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT