ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದ್ದಾನೆ ನೋಡಿ ದುಬಾರಿ ಗಣಪ

Last Updated 7 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜಾಜಿನಗರದ ಮಿಲ್ಕ್ ಕಾಲೊನಿಯಲ್ಲಿ ಸ್ವಸ್ತಿಕ್‌ ಯುವಕರ ಸಂಘ ಪ್ರತಿ ವರ್ಷ ಪ್ರತಿಷ್ಠಾಪಿಸುವ ಗಣೇಶ ವೈವಿಧ್ಯ, ವೈಭವ ಮತ್ತು ಅದ್ದೂರಿತನಕ್ಕೆ ಮನೆಮಾತು.ಒರಾಯನ್‌ ಮಾಲ್‌ನ ಹಿಂಭಾಗ ಸುಮಾರು ₹15 ಲಕ್ಷ ವೆಚ್ಚದಲ್ಲಿ ತಲೆ ಎತ್ತಿರುವ ಬಾದಾಮಿ– ಐಹೊಳೆಯ ಗುಹಾಂತರ ದೇವಾಲಯವನ್ನು  ಹೋಲುವ ಅದ್ದೂರಿ ಸೆಟ್‌ನಲ್ಲಿ ನವಿಲಿನ  ಮೇಲೆ  ವಿನಾಯಕ ವಿರಾಜಮಾನ.

₹14.50 ಲಕ್ಷ ಮೌಲ್ಯದ   45 ಕೆ.ಜಿ  ಮಿನುಗುವ ಅಮೆರಿಕನ್ ಡೈಮಂಡ್‌ (ಕೃತಕ ವಜ್ರ) ಮತ್ತು ನವರತ್ನಗಳಿಂದ ಕಂಗೊಳಿಸುತ್ತಿರುವ 5.5 ಅಡಿ ಎತ್ತರದ ಗಣೇಶನ ಅಂದಕ್ಕೆ ಮನ ಸೋಲದವರಿಲ್ಲ. ಈತ ಬೆಂಗಳೂರಿನ ಅತಿ ಶ್ರೀಮಂತ ಹಾಗೂ ದುಬಾರಿ ಗಣಪ  ಎಂಬ ಹೆಗ್ಗಳಿಕೆಯೊಂದಿಗೆ ಬೀಗುತ್ತಿದ್ದಾನೆ.

ಹುಬ್ಬಳ್ಳಿಯ ಮಹೇಶ್ ಮುರುಗೋಡ ಹಾಗೂ ಇತರ ಕಲಾವಿದರು ಮೂರು ತಿಂಗಳಿಂದ  ನವಿಲು ಮೇಲೆ ಕುಳಿತ ವಿಘ್ನೇಶನಿಗೆ ಜೀವ ತುಂಬಲು ಶ್ರಮಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಹುಟ್ಟಿದ ಗಜವದನನ್ನು ಒಂದು ಕೂದಲು ಕೊಂಕಾಗದಂತೆ ಬೆಂಗಳೂರಿಗೆ ರೈಲಿನಲ್ಲಿ ತರುವುದು ಸಂಘದ ಸದಸ್ಯರಿಗೆ ಸವಾಲಿನ ಕೆಲಸವಾಗಿತ್ತು.

ಗುಹಾಂತರ ದೇಗುಲ
ಕಳೆದ ಬಾರಿ ಬೇಲೂರು ಚನ್ನಕೇಶವ ದೇವಾಲಯವನ್ನು ಮರು ಸೃಷ್ಟಿಸುವ ಮೂಲಕ ಜನಮನ ಗೆದ್ದಿದ್ದ ಸಂಘ ಈ ಬಾರಿ ಬಾದಾಮಿ– ಐಹೊಳೆ ವೈಭವವನ್ನು ಬೆಂಗಳೂರಿಗೆ ತಂದಿದೆ.

ಹಲವು ದಿನಗಳಿಂದ ಹತ್ತಾರು  ಕಲಾವಿದರು  ಹಗಲು–ರಾತ್ರಿ   ದುಡಿದು  ಗುಹಾಂತರ ದೇವಸ್ಥಾನಕ್ಕೆ ಜೀವ ತುಂಬಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗಿದೆ.ಗಣಪನ ಸುತ್ತಲೂ ಬೆಳಗುವ ಸಾವಿರಾರು ಬಣ್ಣದ ದೀಪಗಳ ಮೆರಗನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. 

ಒಟ್ಟಾರೆ 32 ವರ್ಷಗಳಿಂದ  ಸ್ವಸ್ತಿಕ್‌ ಯುವಕರ ಸಂಘದ ಆಚರಿಸಿಕೊಂಡು ಬರುತ್ತಿರುವ ಈ ಗಣೇಶ ಉತ್ಸವ ಮುಂಬೈ, ಪುಣೆ ಹಾಗೂ ಬೆಳಗಾವಿ, ಹುಬ್ಬಳ್ಳಿ–ಧಾರವಾಡದ ಗಣೇಶೋತ್ಸವದ ವೈಭವವನ್ನು ನೆನಪಿಗೆ ತರುತ್ತದೆ. ಚಿತ್ರ ನಿರ್ಮಾಪಕ ಡಿ. ಸುರೇಶ್ ಗೌಡ  ನೇತೃತ್ವದಲ್ಲಿ 1984ರಲ್ಲಿ ಆರಂಭವಾದ ಸ್ವಸ್ತಿಕ್ ಯುವಕರ ಸಂಘ ಬೆಳ್ಳಿಹಬ್ಬ  ಪೂರೈಸಿದೆ.

ಗಣೇಶ ಉತ್ಸವ ಕೇವಲ ಅದ್ದೂರಿ ಉತ್ಸವವಾಗಿರದೆ  ಸದಭಿರುಚಿಯ ಸಂಕೇತವಾಗಿದೆ. ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ ಸುತ್ತಮುತ್ತಲಿನ ಜನರ ಪಾಲಿಗೆ ಸಾಂಸ್ಕೃತಿಕ ಹಬ್ಬವಾಗಿದೆ. ವಿಶೇಷ ಸಿಡಿಮದ್ದು ಪ್ರದರ್ಶನ   ಗಣೇಶ ವಿಸರ್ಜನೆಯ ಆಕರ್ಷಣೆಯ ಕೇಂದ್ರ ಬಿಂದು. ಈ ಸಂದರ್ಭ ₹ 1 ಲಕ್ಷಕ್ಕೂ ಹೆಚ್ಚು ಮೊತ್ತದ ಮದ್ದು ಸುಡಲಾಗುತ್ತದೆ.

ಮಂಟಪಕ್ಕೆ ತಾಗಿಕೊಂಡಿರುವ ಮಿಲ್ಕ್ ಕಾಲೊನಿಯ ಆಟದ ಮೈದಾನದಲ್ಲಿ  ಐದು ದಿನ ಸಂಜೆ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸೆಳೆಯುತ್ತವೆ. ಜನಪ್ರಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸುಧೆ ಹರಿಯಲಿದೆ. ರಾಜ್ಯದ ಮೂಲೆ, ಮೂಲೆಯ ಹಿರಿ, ಕಿರಿಯ ಪ್ರತಿಭೆಗಳನ್ನು ಗುರುತಿಸಿ  ಗೌರವಿಸಿ ಅವರಿಗೊಂದು ವೇದಿಕೆ ಒದಗಿಸಿರುವ ಹೆಗ್ಗಳಿಕೆ ಸ್ವಸ್ತಿಕ್‌ ಸಂಘದ್ದು. ಸ್ವಸ್ತಿಕ್ ಯುವಕರ ಸಂಘ ಈ ಐದು ದಿನ ಬಡಾವಣೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT