ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಕ್ ನೃತ್ಯ ವೈಭವದ ಸೊಬಗು...

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಮಲ್ಲೇಶ್ವರದಲ್ಲಿ ಹೆಜ್ಜೆ, ಹೆಜ್ಜೆಗೂ ಸುವಾಸನೆ ಸೂಸುವ ನೂರಾರು ಸಂಪಿಗೆ ಮರಗಳಿವೆ. ಮತ್ತೊಂದು ಖುಷಿಯ ವಿಚಾರವೆಂದರೆ ಅಷ್ಟೇ ಸಂಖ್ಯೆಯ ಸಂಗೀತ ಮತ್ತು ನೃತ್ಯ  ಶಾಲೆಗಳಿವೆ.

ತಂಗಾಳಿಯಲ್ಲಿ ತೇಲಿ ಬರುವ ಗೆಜ್ಜೆಗಳ ಸದ್ದಿನ ಜಾಡು ಹಿಡಿದು ಹೊರಟರೆ ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ‘ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ’ ತಲುಪುತ್ತೇವೆ.

ಉತ್ತರ ಭಾರತದ ನೃತ್ಯ ಪ್ರಕಾರಗಳಲ್ಲಿ ಜನಪ್ರಿಯವಾದ ಕಥಕ್ ನೃತ್ಯವನ್ನು ದಶಕಗಳ ಹಿಂದೆ ಬೆಂಗಳೂರಿಗೆ ಪರಿಚಯಿಸಿದ ಕಥಕ್ ಗುರು ಡಾ.ಮಾಯಾರಾವ್ ಅವರ ಕನಸಿನ ಕೂಸು ಈ ನಾಟ್ಯ ಶಾಲೆ.

ದಶಕಗಳಿಂದ ನೂರಾರು ಮೇರು ಕಥಕ್ ಕಲಾವಿದರನ್ನು ರೂಪಿಸಿರುವ ಈ ನೃತ್ಯಶಾಲೆಯಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವದ ಜತೆ  ‘ಥಾ ಥೇ ಥೇ ತಥ್ ಆ ಥೇ ಥೇ ತಥ್...’ ಎಂಬ ಮಧುರ ಕಂಠಕ್ಕೆ ಪುಟಾಣಿಗಳು ಹಾಕುವ ಹೆಜ್ಜೆಗಳು ಎಂಥವರನ್ನಾದರೂ ಮಂತ್ರಮುಗ್ಧಗೊಳಿಸದೆ ಇರಲಾರದು.

86ರ ಇಳಿ ವಯಸ್ಸಿನಲ್ಲೂ ‘ಕಥಕ್ ಥ್ರೂ ದ ಏಜಸ್’ (kathak through the ages) ಮೂಲಕ ಗೆಜ್ಜೆ ಕಟ್ಟಿ, ಅಚ್ಚರಿ ಮೂಡಿಸಿದ್ದ ಮಕ್ಕಳ ಪ್ರೀತಿಯ ‘ಮಾಯಾ ದೀದಿ’ ಶತಮಾನಗಳ ಪರಂಪರೆಯ  ಕಥಕ್ ಗತವೈಭವ ಕಟ್ಟಿಕೊಟ್ಟಿದ್ದು ಇದೇ ಜಾಗದಲ್ಲಿ.

ಮಾಯಾರಾವ್ ಅವರ ಪುತ್ರಿ ಮಧು ನಟರಾಜ್ ಹಾಗೂ ಅವರ ಗೆಳೆಯರ ಬಳಗ ‘ನಾಟ್ಯ ಸ್ಟೆಮ್’ ಮೂಲಕ  ಶಾಸ್ತ್ರೀಯ ಹಾಗೂ ಸಮಕಾಲೀನ ನೃತ್ಯವನ್ನು (ಕಂಟೆಂಪರರಿ) ಸಮನಾಗಿ ಸಮೃದ್ಧಿಗೊಳಿಸುತ್ತಿದ್ದಾರೆ.

ಶಿಸ್ತುಬದ್ಧ ಶಾಸ್ತ್ರೀಯ ನೃತ್ಯದ ಚೌಕಟ್ಟಿನೊಳಗೆ ಸಮಕಾಲೀನ ನೃತ್ಯದ ಪ್ರಯೋಗ ಮಾಡುತ್ತಿದ್ದಾರೆ.  ಸಮಕಾಲೀನ ನೃತ್ಯಕ್ಕೆ  ಶಾಸ್ತ್ರೀಯ ಸ್ಪರ್ಶ ನೀಡುವ ಮೂಲಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ‘ನಾಟ್ಯ’ ಸಂಸ್ಥೆಯು ಕಥಕ್ ನೃತ್ಯದಲ್ಲಿ ಪದವಿ, ಡಿಪ್ಲೊಮಾ ಕೋರ್ಸ್‌ಗಳನ್ನು  ಆರಂಭಿಸಿದೆ.

ಹಳೇ ಬೇರು, ಹೊಸ ಚಿಗುರು
ಮಾಯಾ ರಾವ್ ಕಥಕ್ ನೃತ್ಯದ ಬೇರಾದರೆ, ಅವರ ಶಿಷ್ಯಂದಿರಾದ  ಮಧು ನಟರಾಜ್, ರಮ್ಯಾ ನಾಗರಾಜ್, ದಿವ್ಯಾ, ಜನಾರ್ಧನ ಅರಸ್, ಕೀರ್ತಿ ಕುಮಾರ್ ಮುಂತಾದವರು ಹೊಸ ಚಿಗುರು. ಇದರಿಂದಾಗಿಯೇ ನಾಟ್ಯ ಇನ್‌ಸ್ಟಿಟ್ಯೂಟ್ ಮತ್ತು ಸ್ಟೆಮ್ ‘ಹಳೆ ಬೇರು ಮತ್ತು ಹೊಸ ಚಿಗುರುಗಳ’ ಸಂಗಮದಂತಿದೆ. 

ಈ ಕಲಾವಿದರು ಐದಾರು ವರ್ಷದ ಪುಟ್ಟ ಮಕ್ಕಳಿಂದ ನಾಲ್ವತ್ತರ ವಯೋಮಾನದವರಿಗೆ ಕಥಕ್ ಜತೆಗೆ ಸಮಕಾಲೀನ ನೃತ್ಯವನ್ನು ಶ್ರದ್ಧೆ, ತಾಳ್ಮೆಯಿಂದ ಧಾರೆ ಎರೆಯುತ್ತಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ನೃತ್ಯ ಕಲಿಸುವ ಇವರನ್ನು ಕಂಡರೆ ಚಿಣ್ಣರಿಗೆ ಎಲ್ಲಿಲ್ಲದ ಪ್ರೀತಿ.

ವಿವಿಧ ರಾಜ್ಯಗಳ ಮಕ್ಕಳು ಸೇರಿದಂತೆ ಹಲವು ವಿದೇಶಿಯರೂ ಇಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ನೃತ್ಯಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿರುವ ವಿದೇಶಿಯರು ಆಗಾಗ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಾರೆ.

ಕಥಕ್ ಕಲಿಸಲೆಂದೇ ನಗರದ ಮೂಲೆ, ಮೂಲೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆ ತರುತ್ತಾರೆ. ನಾಟ್ಯ ಮತ್ತು ಸ್ಟೆಮ್ ಜಂಟಿಯಾಗಿ ಆಯೋಜಿಸುವ ‘ನಮ್ಮ ಡ್ಯಾನ್ಸ್ ಉತ್ಸವ್’, ‘ಮಾಯಾರ್ಪಣ’, ‘ಬಸಂತ್ ಪಂಚಮಿ’ ಕಾರ್ಯಕ್ರಮಗಳು ಭಾರತೀಯ ನೃತ್ಯ ಮತ್ತು ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸುತ್ತವೆ.ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕೊರಿಯಾಗ್ರಫಿ: ‘ಮಾಯಾರ್ಪಣ್’ ವಾರ್ಷಿಕ ನೃತ್ಯೋತ್ಸವ. ಸಾರೆ ಜಹಾಂ ಸೇ ಅಚ್ಛಾ ಹಾಡಿಗೆ

ನೂರಾರು ಮಕ್ಕಳಿಂದ ಕಥಕ್ ನೃತ್ಯ ಮತ್ತು ಸಮರ ಕಲೆ ಪ್ರದರ್ಶನ.
ಸ್ಥಳ: ಗುರುನಾನಕ್ ಭವನ, ವಸಂತನಗರ. ಭಾನುವಾರ ಮಧ್ಯಾಹ್ನ 3.30 ಮತ್ತು ರಾತ್ರಿ 7.

*
ಕಥಕ್ ನೃತ್ಯದಲ್ಲಿ ರಾಗ ಮತ್ತು ಲಯದೊಂದಿಗೆ ತಾಳದ ವೇಗ ಹೆಚ್ಚಿದಂತೆ ಕಲಾವಿದನ ಹೆಜ್ಜೆಯ ವೇಗವೂ ಹೆಚ್ಚುತ್ತದೆ.  ಇದು ಕಲಾವಿದರ ಕಠಿಣ ಪರಿಶ್ರಮ, ಅಭ್ಯಾಸ, ಆಸಕ್ತಿ, ಏಕಾಗ್ರತೆ, ಮನಸ್ಸಿನ ಹತೋಟಿಯನ್ನು ಬಯಸುತ್ತದೆ.
–ರಮ್ಯಾ ನಾಗರಾಜ್,
ಹಿರಿಯ ನೃತ್ಯಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT