ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಲಕ್ಷ್ಮಿ!

Last Updated 9 ಜೂನ್ 2015, 19:30 IST
ಅಕ್ಷರ ಗಾತ್ರ

ಚಿಕ್ಕ ವಯಸ್ಸಿನಿಂದ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡು ಇಂದಿಗೂ ಅದನ್ನು ಮುಂದುವರಿಸುತ್ತಾ ಬಂದಿರುವವರು ನಗರದ ನಿವಾಸಿ ವಿಜಯಲಕ್ಷ್ಮಿ ವೆಂಕಟೇಶ್‌.

ಮ್ಯೂರಲ್‌ ಪೇಂಟಿಂಗ್‌, ಗ್ಲ್ಯಾಸ್‌ ಪೇಂಟಿಂಗ್‌, ಪಾಟ್‌ ಪೇಂಟಿಂಗ್‌, ಬಾಗಿಲಿಗೆ ಹಾಕುವ ಅಲಂಕಾರಿಕ ತೋರಣಗಳು, ಕುಂದನ್‌ ರಂಗೋಲಿಗಳು, ಕ್ಯಾಂಡಲ್‌ಗಳು, ದೀಪದ ತಟ್ಟೆಗಳು, ಆರತಿ ತಟ್ಟೆಗಳು ಹಾಗೂ ಟೆರಾಕೋಟ ಆಭರಣಗಳನ್ನು ಇವರು ಮಾಡುತ್ತಾರೆ.

ತಂದೆಯೇ ಸ್ಫೂರ್ತಿ
‘ನನ್ನ ತಂದೆ ಚಿತ್ರ ಕಲಾವಿದ ಆದ್ದರಿಂದ  ಸಹಜವಾಗಿಯೇ ನನಗೂ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ಶಾಲಾ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ನನ್ನ ಹವ್ಯಾಸಕ್ಕೂ ಅಷ್ಟೇ ಪ್ರಾಮುಖ್ಯ ನೀಡುತ್ತಿದ್ದೆ. ಕಲೆಯ ಬಗ್ಗೆ ನನಗಿದ್ದ ಒಲವನ್ನು ಗುರುತಿಸಿದ ತಂದೆ, ನನ್ನ  ಹವ್ಯಾಸದ ಹಾದಿಯನ್ನು ಮುಂದುವರಿಸಲು ಪ್ರೇರಣೆ ನಿಡುವುದರ ಜೊತೆಗೆ ತರಬೇತಿಯನ್ನು ನೀಡಿದರು’ ಎಂದು ಈ ಹವ್ಯಾಸ ರೂಢಿಸಿಕೊಂಡ ಬಗೆಯನ್ನು ವಿವರಿಸುತ್ತಾರೆ ವಿಜಯಲಕ್ಷ್ಮಿ.

ಕ್ಯಾಂಡಲ್‌ನಲ್ಲಿ ಕಲಾಕೃತಿ
‘ಕ್ಯಾಂಡಲ್‌ ಕಲಾಕೃತಿಗಳ ತಯಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಮರದ ಹಲಗೆಗಳ ಮೇಲೆ ಕ್ಯಾಂಡಲ್‌, ಕುಂದನ್‌, ಬೀಡ್ಸ್‌ ಹಾಗೂ ವಿವಿಧ ಬಣ್ಣಗಳನ್ನು ಬಳಸಿಕೊಂಡು ಸಾಂಪ್ರದಾಯಿಕವಾಗಿ ಕಲಾಕೃತಿಗಳನ್ನು ರಚಿಸುವುದೆಂದರೆ ಬಹಳ ಇಷ್ಟ’ ಎನ್ನುತ್ತಾರೆ. ವಿಶೇಷವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ  ಕ್ಯಾಂಡಲ್‌ ಕಲಾಕೃತಿಗಳಿಗೆ  ಹೆಚ್ಚು ಬೇಡಿಕೆ ಇರುತ್ತದೆ.

ಕ್ಯಾಂಡಲ್‌ಗಳಿಂದ ತಯಾರಿಸುವ ಕಲಾಕೃತಿಗಳು ಕೇವಲ ದೀಪಗಳ ಮಾದರಿಯಾಗಿರದೆ, ಮನೆಯ ವಿವಿಧ ಕೋಣೆಗಳ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳನ್ನು ಕೂಡ ಸಿದ್ಧಪಡಿಸುತ್ತಾರೆ ಇವರು.

ಹಬ್ಬಕ್ಕೆ ತಕ್ಕಂತೆ ಕಲಾಕೃತಿ
ವಿಜಯಲಕ್ಷ್ಮಿ ಅವರ ಹವ್ಯಾಸದ ಮತ್ತೊಂದು ವಿಶೇಷತೆ ಎಂದರೆ ದೀಪಾವಳಿ, ನವರಾತ್ರಿ, ಗೌರಿ–ಗಣೇಶ ಹಬ್ಬ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಿಗೆಂದೇ ವಿಭಿನ್ನ ಕಲಾಕೃತಿಗಳನ್ನು ತಯಾರಿಸುವುದು. ಹೀಗೆ ಇವರು ತಯಾರಿಸುವ ಕಲಾಕೃತಿಗಳಲ್ಲಿ ಹೆಚ್ಚು ಆಕರ್ಷಕವಾಗಿ ಇರುವುದು ಕ್ಯಾಂಡಲ್‌ನಲ್ಲಿ ತಯಾರಿಸಲಾಗುವ ಕಲಾಕೃತಿಗಳು. ಇವನ್ನು ಮಾಡಲು ಕನಿಷ್ಠ ಎರಡರಿಂದ ಮೂರು ದಿನಗಳು ಬೇಕು.

ಗೌರಿ ಹಬ್ಬ ಹಾಗೂ ನವರಾತ್ರಿ ಸಂದರ್ಭದಲ್ಲಿ ಅಲಂಕಾರಿಕ ಗೊಂಬೆಗಳನ್ನು  ಕೂಡ  ಮಾಡುತ್ತಾರೆ. ಒಂದು  ಮ್ಯೂರಲ್‌ ಪೇಂಟಿಂಗ್‌ ಮಾಡಲು ಕನಿಷ್ಠ ಒಂದು ತಿಂಗಳು ಬೇಕು. ಮದುವೆ, ಸಮಾರಂಭಗಳು, ಗೃಹಪ್ರವೇಶ, ನಾಮಕರಣದ ಸಂದರ್ಭದಲ್ಲಿ ಉಡುಗೊರೆ ನೀಡುವವರು ಹೆಚ್ಚಾಗಿ ಮ್ಯೂರಲ್‌ ಪೇಂಟಿಂಗ್‌ ಅನ್ನು ಕೇಳುತ್ತಾರೆ.
 
ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಮದುಮಗಳನ್ನು ಮನೆ ತುಂಬಿಸಿಕೊಳ್ಳುವಾಗ ಅಕ್ಕಿ ತುಂಬಿದ ಸೇರು  ಇಡುವುದು ಪದ್ಧತಿ. ಅದಕ್ಕೂ ಇವರು ಆಧುನಿಕ ಸ್ಪರ್ಶ ನೀಡಿದ್ದಾರೆ.

ಮನಸ್ಸಿಗೆ ನೆಮ್ಮದಿ
‘ಕೇಳುಗರ ಅಭಿರುಚಿಗೆ ತಕ್ಕಂತೆ ಕಲಾಕೃತಿಗಳನ್ನು ಮಾಡಿಕೊಡುವುದರಿಂದ ನನ್ನ ಹವ್ಯಾಸಕ್ಕೆ ಪ್ರತಿ

ಬಾರಿಯೂ ಹೊಸ  ರೂಪ ದೊರಕುತ್ತದೆ. ಗೃಹಿಣಿಯಾದದ್ದರಿಂದ ಇವೆಲ್ಲಾ ಮಾಡಲು ನನಗೆ ಹೆಚ್ಚು ಸಮಯ ದೊರಕುತ್ತದೆ. ಹಾಗಾಗಿ ಯಾರು ಕೇಳಿದರೂ ಇಲ್ಲ ಎನ್ನದೆ ಅವರಿಗೆ ಬೇಕಾದ ಉತ್ಪನ್ನಗಳನ್ನು ಮಾಡಿಕೊಡುತ್ತೇನೆ. ಈ ಹವ್ಯಾಸದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ’ ಎಂದು ತಮ್ಮ ಹವ್ಯಾಸದ ಬಗ್ಗೆ ವಿವರಿಸುತ್ತಾರೆ.

‘ಕುಟುಂಬದ ಸದಸ್ಯರು ನನ್ನ ಕಲೆಗೆ ಪ್ರೋತ್ಸಾಹ ನೀಡುತ್ತಾರೆ. ಕೆಲವೊಮ್ಮೆ ಮನೆಯಲ್ಲಿಯೇ ನಾನು ಮಾಡಿದ ಕಲಾಕೃತಿಗಳ ಪ್ರದರ್ಶನ ಮಾಡುತ್ತೇನೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT