ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ ದೇಶ ಮೀರಿ ನಿಲ್ಲುವ ‘ಮೃತ್ಯುಂಜಯ’

ರಂಗಭೂಮಿ
Last Updated 6 ಮಾರ್ಚ್ 2016, 19:49 IST
ಅಕ್ಷರ ಗಾತ್ರ

ಖ್ಯಾತ ಕಾದಂಬರಿಕಾರ ನಿರಂಜನರ ಎರಡು ಪ್ರಮುಖ ಕಾದಂಬರಿಗಳಾದ ‘ಚಿರಸ್ಮರಣೆ’ ಹಾಗೂ ‘ಮೃತ್ಯುಂಜಯ’ಗಳನ್ನು ಆಧರಿಸಿ ಡಾ. ಎಂ.ಜಿ. ಹೆಗಡೆಯವರು ‘ಮೃತ್ಯುಂಜಯ’ ಹೆಸರಲ್ಲಿ ರಂಗಪಠ್ಯವನ್ನು ಸಿದ್ಧಪಡಿಸಿದ್ದಾರೆ. ಡಾ. ಶ್ರೀಪಾದ ಭಟ್‌ ಅವರು ಸಮುದಾಯದ ರೆಪರ್ಟರಿ ಕಲಾವಿದರಿಗೆ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರೆಪರ್ಟರಿಯ ಸಮಾರೋಪ ಸಮಾರಂಭದಲ್ಲಿ ‘ಮೃತ್ಯುಂಜಯ’ ನಾಟಕ ಪ್ರಯೋಗಗೊಂಡಿತು.
ನಿರಂಜನರ ‘ಚಿರಸ್ಮರಣೆ’ ಕಾದಂಬರಿ ಜಮೀನ್ದಾರರ ಶೋಷಣೆ ಹಾಗೂ ಬ್ರಿಟಿಷ್ ಪ್ರಭುತ್ವದ ನಿರಂಕುಶತೆಗೆ ಬಲಿಯಾದ ರೈತಾಪಿ ಜನಗಳ ಸಂಕಟಗಳನ್ನು ಹೇಳಿದರೆ, ‘ಮೃತ್ಯುಂಜಯ’ ಕಾದಂಬರಿ ಅರಮನೆ ಮತ್ತು ಗುರುಮನೆಗಳ ಮೇಲಾಟದಲ್ಲಿ ಬಲುಪಶುವಾದ ರೈತನಾಯಕರ ದುರಂತವನ್ನು ತಿಳಿಸುತ್ತದೆ.

ಈ ಎರಡೂ ಕಾದಂಬರಿಯಲ್ಲಿರುವ ವರ್ಗ ಸಂಘರ್ಷದ ಸಾಮ್ಯತೆ ಹಾಗೂ ಪರಿಣಾಮಗಳನ್ನು ಆಯ್ದುಕೊಂಡು ‘ಮೃತ್ಯುಂಜಯ’ ನಾಟಕವನ್ನು ಕಟ್ಟಲಾಗಿದೆ. ಒಂದು ಚಾರಿತ್ರಿಕ ಘಟನೆಯಾದರೆ ಇನ್ನೊಂದು ಪೌರಾಣಿಕ ಕಲ್ಪನೆ. ಇವೆರಡನ್ನೂ ಸಮೀಕರಿಸಿ ಸಮಕಾಲೀನ ಸಂಘರ್ಷವನ್ನು ಹೇಳುವ ಆಶಯದಲ್ಲಿ ‘ಮೃತ್ಯುಂಜಯ’ ನಾಟಕ ಯಶಸ್ವಿಯಾಗಿದೆ.

ಕೈಯೂರಿನ ಮಾಸ್ತರರ ನೇತೃತ್ವದಲ್ಲಿ, ಪಂಡಿತ ಎನ್ನುವ ಕ್ರಾಂತಿಕಾರಿಯ ಮಾರ್ಗದರ್ಶನದಲ್ಲಿ ಕೆಲವು ಯುವಕರು ರೈತರ ಹಕ್ಕುಗಳಿಗಾಗಿ ಕ್ರಾಂತಿಕಾರಿ ಚಟುವಟಿಕೆ ಆರಂಭಿಸುತ್ತಾರೆ. ರಹಸ್ಯ ಸಭೆಗೆಂದು ಬಂದ ಪಂಡಿತ ಕ್ರಾಂತಿಕಾರಿ ಯುವಕರಿಗೆ ಈಜಿಪ್ಟ್‌ನಲ್ಲಿ ನಡೆದ ರೈತ ದಂಗೆ ಹಾಗೂ ಅಲ್ಲಿಯ ಪ್ರಭುತ್ವದ ಮೇಲಾಟಗಳ ಕುರಿತು ಕತೆಯನ್ನು ಹೇಳತೊಡಗುತ್ತಾರೆ. ಕೈಯೂರಿನಲ್ಲಾಗುವ ವರ್ಗ ಸಂಘರ್ಷದ ಸನ್ನಿವೇಶಗಳು ಹಾಗೂ ಈಜಿಪ್ಟಿನ ಪೆರೋ ರಾಜ್ಯದಲ್ಲಾಗುವ ಸಂಘರ್ಷಗಳ ಸಂದರ್ಭಗಳು ಒಂದಕ್ಕೊಂದು ಮಿಳಿತಗೊಂಡು ಇಡೀ ನಾಟಕ ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ.

ರಾಜಪ್ರಭುತ್ವ ಹಾಗೂ ವಸಾಹತುಶಾಹಿ ಪ್ರಭುತ್ವದ ಸನ್ನಿವೇಶಗಳು ಬೇರೆ ಬೇರೆ ಕಾಲ ದೇಶಗಳಲ್ಲಾದ ಘಟನೆಗಳಾದರೂ, ಈ ಎರಡೂ ಕಥಾನಕಗಳ ಕಾಲಘಟ್ಟದ ನಡುವೆ ಐದು ಸಾವಿರ ವರ್ಷಗಳಷ್ಟು ಅಂತರವಿದ್ದರೂ ಎರಡೂ ಒಂದೇ ಆಶಯವನ್ನು ಹೇಳುವಂತಿವೆ. ಜೊತೆಗೆ ಇವೆರಡೂ ಕಥೆಗಳು ಒಂದಕ್ಕೊಂದು ಸಂಯೋಜನೆಗೊಂಡು ಪ್ರಸ್ತುತ ಪ್ರಜಾಪ್ರಭುತ್ವದೊಳಗಿನ ಫ್ಯಾಸಿಸ್ಟ್ ಪ್ರಭುತ್ವದ ಪ್ರತಿಬಿಂಬವೇನೋ ಎನ್ನುವಂತೆ ಮೂಡಿಬಂದಿವೆ.

ಪುರಾಣ ಇತಿಹಾಸಗಳನ್ನು ಸಮಕಾಲೀನಗೊಳಿಸುವ ಮೂಲಕ ಸರ್ವಾಧಿಕಾರಿ ಆಡಳಿತದ ಅಪಾಯಗಳ ಕುರಿತು ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ‘ಮೃತ್ಯುಂಜಯ’ ನಾಟಕವು ಯಶಸ್ವಿಯಾಗಿ ಮಾಡಿ ತನ್ನ ಉದ್ದೇಶಿತ ಗುರಿ ಮುಟ್ಟುವಲ್ಲಿ ಸಫಲವಾಗಿದೆ. ಆದರೆ ಗುರಿ ಮುಟ್ಟುವ ಮುಂಚೆ ಸಾಗುವ ದಾರಿಯ ನಡೆಯ ಬಗ್ಗೆಯೂ ನಿರ್ದೇಶಕರು ಒಂದಿಷ್ಟು ಗಮನ ಕೊಡಬಹುದಾಗಿತ್ತು. ಆಶಯದ ಸಾಕಾರದ ಧಾವಂತದಲ್ಲಿ ಆಕೃತಿಯನ್ನು ಅನಾವರಣಗೊಳಿಸುವಾಗ ಇನ್ನಷ್ಟು ಸ್ಪಷ್ಟತೆ ಬೇಕಾಗಿತ್ತು.

ಆಶಯಕ್ಕೆ ಬದ್ಧವಾಗಿ ದೃಶ್ಯಗಳನ್ನು ಕಟ್ಟುವಾಗ ಸಂವಹನದ ಮಾಧ್ಯಮಕಾರರಾದ ನಟರನ್ನೂ ಹಾಗೂ ಸಮ್ಮೋಹನಕ್ಕೊಳಗಾಗುವ ಪ್ರೇಕ್ಷಕರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು. ಯಾಕೆಂದರೆ ಇಡೀ ನಾಟಕ ನೋಡಿದ ಮೇಲೆ ನಾಟಕದ ಆಶಯ ಪ್ರೇಕ್ಷಕರಿಗೆ ದಕ್ಕಿದಷ್ಟು ದೃಶ್ಯದೊಳಗಿನ ಭಾವತೀವ್ರತೆ ಕಾಡಲಿಲ್ಲ. ನೋಡುಗರ ಮೆದುಳಿಗೆ ದಕ್ಕಿದಷ್ಟು ಹೃದಯಕ್ಕೆ ಹತ್ತಿರವಾಗಲಿಲ್ಲ.

ಇದಕ್ಕೆ ಪ್ರಮುಖ ಕಾರಣ ರೆಪರ್ಟರಿಯ ಅನಿವಾರ್ಯತೆಗಳಾಗಿವೆ. ಸೀಮಿತ ನಟರು, ನಿರ್ದಿಷ್ಟ ಸೆಟ್‌ಗಳು, ಪೂರ್ವಮುದ್ರಿತ ಸಂಗೀತಗಳು ಪ್ರೇಕ್ಷಕರಲ್ಲಿ ನೈಜತೆಯ ಭಾವನೆ ಹಾಗೂ ರಸಾನುಭೂತಿಯನ್ನು ಸ್ಫುರಿಸುವಲ್ಲಿ ವಿಫಲವಾದವು. ಹನ್ನೆರಡು ಜನ ನಟವರ್ಗ ನಾಟಕದಲ್ಲಿರುವ 36ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಬೇಕಾದ ಒತ್ತಡಕ್ಕೊಳಗಾಗಿದ್ದರಿಂದ ಕಲಾವಿದರು ತಮ್ಮ ಪಾತ್ರದೊಳಗೆ ತಲ್ಲೀನರಾಗಲು ಸಾಧ್ಯವಾಗದೇ ಹೋಯಿತು.

ಒಂದು ಪಾತ್ರ ಮುಗಿದ ತಕ್ಷಣ ಮುಂದಿನ ಪಾತ್ರಕ್ಕೆ ಕಾಸ್ಟ್ಯೂಮ್ ಬದಲಾಯಿಸಿಕೊಂಡು ಸಿದ್ಧರಾಗುವ ಗಡಿಬಿಡಿಯಲ್ಲಿ ಪಾತ್ರದೊಳಗೆ ಪ್ರವೇಶ ಮಾಡಲು ಕಲಾವಿದರಿಗೆ ಸಾಧ್ಯವಾಗಲೇ ಇಲ್ಲ. ಕನಿಷ್ಠ ಸಂಖ್ಯೆಯ ನಟರನ್ನು ಬಳಸಿ ಅವರ ಮೂರು ಪಟ್ಟು ಹೆಚ್ಚು ಪಾತ್ರಗಳನ್ನು ನಿರ್ವಹಿಸುವಂತೆ ಮಾಡಿದ ನಿರ್ದೇಶಕರ ಪರಿಶ್ರಮವನ್ನು ಮೆಚ್ಚಲೇಬೇಕು. ಆದರೆ ಹೀಗೆ ಮಾಡುವುದರಿಂದ ನಟರುಗಳು ಅಭಿನಯಿಸುವಾಗ ಪಾತ್ರವಾಗದೇ ಭಾವನೆಗಳಿಲ್ಲದ ಯಂತ್ರಗಳಂತಾದದ್ದು ಗೋಚರವಾಗುತ್ತದೆ. ಭಾವಾಭಿನಯದಲ್ಲಿ ಸೋತ ನಾಟಕ ವಾಚಿಕ ಹಾಗೂ ಆಂಗಿಕಾಭಿನಯದಲ್ಲಿ ಗಮನ ಸೆಳೆಯುತ್ತದೆ.

ಈ ನಾಟಕದೊಳಗಿನ ಈಜಿಪ್ಟ್‌ ಕಾಲದ ದೃಶ್ಯಗಳಲ್ಲಿ ಅಳವಡಿಸಿದ ಆಹಾರ್‍ಯಾಭಿನಯ ನೋಡುವುದೇ ಸೊಗಸು. ಪಾತ್ರಧಾರಿಗಳಿಗಿಂತಲೂ ಅವರು ತೊಟ್ಟ ಉಡುಗೆ ತೊಡುಗೆ ಆಭರಣಗಳ ನಿರ್ಮಾಣ ಹಾಗೂ ಬಳಕೆ ಇಡೀ ನಾಟಕದ ಹೈಲೈಟ್ ಆಗಿವೆ. ವಿಶಿಷ್ಟ ವಸ್ತ್ರವಿನ್ಯಾಸ ಮಾಡಿದ ದಾಮೋದರ ನಾಯ್ಕ ಅವರನ್ನು ಅಭಿನಂದಿಸಲೇಬೇಕಿದೆ. ಎಂ.ಎಸ್. ಸತ್ಯು ವಿನ್ಯಾಸಗೊಳಿಸಿದ ಸ್ಥಾಪಿತ ಸ್ಥಿರ ಸೆಟ್ ಈ ನಾಟಕದ ಆಕರ್ಷಕ ಶಕ್ತಿಯೂ ದೌರ್ಬಲ್ಯವೂ ಆಗಿದೆ.

ಪಿರಾಮಿಡ್ ಆಕಾರದ ತ್ರಿಕೋನದಲ್ಲಿ ಬಾಗಿಲು ಮಾಡಿ ತಲಬಾಗಿಲ ಮೇಲೆ ಸಿಂಹದ ಮುಖವನ್ನು ಅಳವಡಿಸಲಾಗಿದ್ದು, ಅಕ್ಕಪಕ್ಕ ಕೆಲವು ಬಣ್ಣದ ಬಾವುಟಗಳನ್ನು ಹಾಕಲಾಗಿದೆ. ಎರಡು ವಿಭಿನ್ನ ಕಾಲಘಟ್ಟ ಹಾಗೂ ಸಂಸ್ಕೃತಿಯಲ್ಲಿ ನಡೆಯುವ ನಾಟಕದ ದೃಶ್ಯಗಳು ಒಂದೇ ರೀತಿಯ ಸ್ಥಿರವಾದ ಸೆಟ್ ಮುಂದೆಯೇ ಪ್ರದರ್ಶನಗೊಳ್ಳುವಾಗ ನೋಡುಗರಲ್ಲಿ ಅದೇನೋ ಗೊಂದಲ ಉಂಟಾಗುತ್ತದೆ. ಲೊಕೇಶನ್ ಬದಲಾದರೂ ಹಿನ್ನೆಲೆ ಮಾತ್ರ ಒಂದೇ ಆಗಿದೆ.  ಕೆಲವೊಂದು ದೃಶ್ಯಕ್ಕೂ ಬ್ಯಾಕ್‌ಡ್ರಾಪ್‌ಗೂ ಸಂಬಂಧವೇ ಇಲ್ಲವಾಗಿದೆ. ವೇದಿಕೆಯನ್ನು ಇನ್ನೂ ಸಮರ್ಥವಾಗಿ  ಬಳಸಿಕೊಂಡಿದ್ದರೆ ನಾಟಕ ಕಳೆಗಟ್ಟುತ್ತಿತ್ತು.

ಹಾಡು ಸಂಗೀತಗಳು ಅದ್ಯಾಕೋ ನಾಟಕದ ದೃಶ್ಯಗಳಿಗೆ ಸಿಂಕ್ ಆಗಲೇ ಇಲ್ಲ. ನಟರೇ ಹಾಡುವ ಕೋರಸ್ ಹಾಡಿನ ಒಳಗಿನ ಸಾಹಿತ್ಯ ಕೇಳುಗರಿಗೆ ಅರ್ಥವಾಗುತ್ತಿರಲಿಲ್ಲ. ಮನೆಪ್ಟಾ ಊರು ಬಿಟ್ಟು ಹೋಗುವಾಗ ಕೇಳು ಬರುವ ಹಾಡು ಸಿನೆಮಾ ಹಾಡಿನ ಶೈಲಿಯಲ್ಲಿ ಸಂಯೋಜಿಸಲಾಗಿದ್ದು ಆ ದೃಶ್ಯಕ್ಕದು ಬೇಕಿರಲಿಲ್ಲ. ಆದರೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಮೂಡಿಬಂದ ಹಿನ್ನೆಲೆ ಸಂಗೀತದ ಎಫೆಕ್ಟ್ ಮಾತ್ರ ರೋಮಾಂಚನವನ್ನುಂಟು ಮಾಡುವಂತಿತ್ತು. 

ಬೆಳಕಿನ ವಿನ್ಯಾಸ (ವಿನಯ್ ಚಂದ್ರ) ಪ್ರತಿ ದೃಶ್ಯವನ್ನೂ ನಿರ್ಣಾಯಕವಾಗಿ ಬೆಳಗಿದೆ. ನಾಟಕದ ಆರಂಭ ಹಾಗೂ ಅಂತ್ಯಗಳ ದೃಶ್ಯಗಳನ್ನಂತೂ ಮಾರ್ಮಿಕವಾಗಿಸಿದೆ. ಈಜಿಪ್ಟ್‌ ಕಾಲದ ದೃಶ್ಯ ಸಂಯೋಜನೆಯಲ್ಲಿ ಸಿನಿಮಿಯಾಟಿಕ್ ಅದ್ಭುತವಾಗಿ ವರ್ಕಔಟ್ ಆಗಿದೆ. ದಾಮೋದರ ನಾಯ್ಕ ನಿರ್ಮಿಸಿದ ರಂಗಪರಿಕರಗಳನ್ನಂತೂ ನೋಡುವುದೇ ಚೆಂದ. ಕಾಲದ ಕರೆಗೆ ಸ್ಪಂದಿಸುವ ಈ ‘ಮೃತ್ಯುಂಜಯ’ ನಾಟಕವು ಸೃಜನಶೀಲತೆಗೂ ಹೆಚ್ಚಾಗಿ ಸ್ಪಂದಿಸಿದ್ದರೆ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ನಾಟಕವಾಗಬಹುದಾಗಿತ್ತು.

ಒಂದು ರೀತಿಯಲ್ಲಿ ಬೀದಿ ನಾಟಕದ ಕೆಲವು ತಂತ್ರಗಾರಿಕೆಯನ್ನು  ಈ ರಂಗನಾಟಕ ಪ್ರಸ್ತುತಿಗೆ ಅಳವಡಿಸಿದಂತಿತ್ತು. ಚಿಕ್ಕಪುಟ್ಟ ದೃಶ್ಯಗಳು, ಇದ್ದಕ್ಕಿದ್ದಂತೆ ಬದಲಾಗುವ ಪಾತ್ರಗಳು ನಟರಿಗೂ ಹಾಗೂ ನೋಡುಗರಿಗೂ ನಾಟಕದ ರಸಾನುಭವವನ್ನು ಅನುಭವಿಸಲು ಅಸಾಧ್ಯವಾಗಿಸಿವೆ. ಎರಡು ದೊಡ್ಡ ಕಾದಂಬರಿಗಳನ್ನು ಸೇರಿಸಿ, ಎರಡು ವಿಭಿನ್ನ ಕಾಲಘಟ್ಟದ ಸನ್ನಿವೇಶಗಳನ್ನು ಪೋಣಿಸಿ ಕಟ್ಟಿದ ಈ ನಾಟಕವು ರಂಗಭೂಮಿಗೆ ಹೊಸದಾಗಿ ಬಂದ ಯುವ ನಟರಿಗೆ ಭಾರವೆನಿಸುವಂತಿದೆ. ಆಶಯದ ಹೊಣೆಗಾರಿಕೆಯನ್ನು ಹೊರಲು ಆಕೃತಿ ಇನ್ನೂ ತನ್ನ ಇತಿಮಿತಿಗಳನ್ನು ಮೀರಿ ಸಶಕ್ತವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT