ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಚಿತ್ರಗಳ ಹಿರಿತನದ ಗರಿಮೆ

Last Updated 16 ಜೂನ್ 2015, 19:30 IST
ಅಕ್ಷರ ಗಾತ್ರ

‘ಒಂದು ವಸ್ತುವಿನ ಬಗ್ಗೆ ಮೂರು ಗಂಟೆಯ ಸಿನಿಮಾದಲ್ಲಿ ಹೇಳುವ  ಕಥೆಯನ್ನು ಒಂದು ಗಂಟೆಯ ಟೆಲಿಫಿಲ್ಮ್‌ನಲ್ಲೂ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಲು ಸಾಧ್ಯ’ ಎನ್ನುತ್ತಾರೆ ಕಳೆದ 15 ವರ್ಷಗಳಿಂದ ಟೆಲಿಫಿಲ್ಮ್ ನಿರ್ದೇಶನದಲ್ಲಿ ತೊಡಗಿಕೊಂಡಿರುವ  ಗುಣವಂತ ಮಂಜು.

ಈವರೆಗೂ ಸುಮಾರು 300ಕ್ಕೂ ಹೆಚ್ಚು ಟೆಲಿಫಿಲ್ಮ್‌ಗಳನ್ನು ನಿರ್ದೇಶನ ಮಾಡಿರುವ ಮಂಜು, ಅವುಗಳಲ್ಲಿ ರಾಜ್ಯ ಸರ್ಕಾರದ ಹೊಸ ಯೋಜನೆಗಳು, ಸಾಮಾಜಿಕ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಮಕ್ಕಳ ಕಥೆಗಳನ್ನು ತೋರಿರುವುದು ವಿಶೇಷ.
‘ಕನ್ನಡ ಸಿನಿಮಾರಂಗದಲ್ಲಿ  ಸಹಾಯಕ  ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದಿಂದಲೇ ಸಿನಿಮಾ ಜೊತೆಗೆ ಟೆಲಿಫಿಲ್ಮ್‌ಗಳಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಮಂಜು.

ನಿರ್ದೇಶನವಷ್ಟೇ ಅಲ್ಲದೆ ಸಾಹಿತ್ಯದಲ್ಲೂ ಅಸಕ್ತಿ ಹೊಂದಿರುವ ಮಂಜು, ‘ಮತ್ತೊಂದು ಸ್ವಾತಂತ್ರ್ಯ’, ‘ಡಜನ್ ಚಿತ್ರಗಳು’, ‘ಅಂದು ಆಂಗ್ಲರು ಇಂದು ಉಗ್ರರು’ ಸೇರಿದಂತೆ ಹಲವು  ಮಕ್ಕಳ  ಪುಸ್ತಕಗಳನ್ನು ಬರೆದಿದ್ದಾರೆ. ಟೆಲಿಫಿಲ್ಮ್‌ಗಳಿಗೆ ಕಥೆಗಳನ್ನು ತಾವೇ ಬರೆದರೆ ನಿರ್ದೇಶನ ಮಾಡಲು  ಸುಲಭವಾಗುತ್ತದೆ ಎಂದು ನಂಬಿರುವ ಮಂಜು, ಸರ್ಕಾರದ ಕೆಲವು ಯೋಜನೆಗಳ ಹೊರತಾಗಿ ಉಳಿದ ಎಲ್ಲಾ ಟೆಲಿಫಿಲ್ಮ್‌ಗಳಿಗೆ ತಾವೇ ಸ್ಕ್ರಿಪ್ಟ್ ಬರೆದವರು.

ಅಧ್ಯಯನಕ್ಕೆ ಒತ್ತು
‘ಯಾವುದೇ ಟೆಲಿಫಿಲ್ಮ್ ಮಾಡಬೇಕಾದರೆ ಅದಕ್ಕೆ ಆಳವಾದ ಅಧ್ಯಯನ ಅವಶ್ಯಕ.  ಸ್ಕ್ರಿಪ್ಟ್ ಬರೆಯುವುದಕ್ಕೆ ಮೊದಲು ನಿರ್ದಿಷ್ಟ ವಸ್ತುವಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುತ್ತೇನೆ’ ಎನ್ನುತ್ತಾರೆ.

‘ಟೆಲಿಫಿಲ್ಮ್‌ಗಳಲ್ಲಿ ಒಂದು ಗಂಟೆಯ ಅವಧಿಯೊಳಗೆ ಕಥೆಯ ಸಾರವನ್ನು ಚಿತ್ರಿಸಬೇಕಾಗುತ್ತದೆ. ಹಾಗಾಗಿ ಅನುಭವಿ  ಕಲಾವಿದರ ಆಯ್ಕೆಗೆ ಒತ್ತು ನೀಡಬೇಕಾಗುತ್ತದೆ.  ಯುವಕಲಾವಿದರ ಜೊತೆಗೆ ಅನುಭವಿ ಕಲಾವಿದರು ತಂಡದಲ್ಲಿ ಇದ್ದಾಗ ಕಡಿಮೆ  ಸಮಯದ ಟೆಲಿಫಿಲ್ಮ್‌ಗಳಲ್ಲೂ ಗಮನ ಸೆಳೆಯುವ ಪಾತ್ರಗಳಿಗೆ ಹಿರಿಯ ಕಲಾವಿದರು ಜೀವತುಂಬುತ್ತಾರೆ. ಅದಕ್ಕೇ ನಾನು ಹೆಚ್ಚು ಹಿರಿಯ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ’ಎಂದು ತಮ್ಮ ಪಾತ್ರಗಳ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಯಶಸ್ಸು ತಂದುಕೊಟ್ಟ ಟೆಲಿಫಿಲ್ಮ್
ಡಿಎಸ್ಇಆರ್‌ಟಿ ಕಾರ್ಯಕ್ರಮದ ಭಾಗವಾಗಿ ತೋಟಗಾರಿಕೆ ಇಲಾಖೆಯ ಸಹಾಯದಿಂದ ರೇಣುಕಾ ಶಾಲೆಯ ಮಕ್ಕಳನ್ನು ದೊಡ್ಡಬಳ್ಳಾಪುರದ  ಗಂಗನಹಟ್ಟಿ ಶಾಲೆಗೆ ಕರೆದುಕೊಂಡು ಹೋಗಿ  ಎರೆಹುಳುವಿನ ಬಗ್ಗೆ ಶಾಲೆಯ ಮಕ್ಕಳೆ ಮಾಡಿದ ಪಾಠವನ್ನು  ‘ಎರೆಹುಳು’ ಶೀರ್ಷಿಕೆ ಅಡಿಯಲ್ಲಿ ಚಿತ್ರಿಸಿ,  ವಿದ್ಯಾರ್ಥಿಗಳಿಗೆ ತೋರಿಸಿದಾಗ ಹೆಚ್ಚು ಸಂತೋಷಪಟ್ಟರು.  ಇದರಿಂದ ತಮಗೆ ಒಳ್ಳೆ ಹೆಸರು ಬಂದಿತು ಎಂದು ನೆನಪಿಸಿಕೊಂಡರು ಮಂಜು.

ಯುವಕರ ಉತ್ಸಾಹ
‘ತಾವು ಈ ವೃತ್ತಿಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ಕಲಿತವರ ಸಂಖ್ಯೆ ಕಡಿಮೆ. ಜೊತೆಗೆ ಜನರು ಸಿನಿಮಾ ಮಾಧ್ಯಮಕ್ಕೆ ಹೆಚ್ಚಾಗಿ ಆಕರ್ಷಿತರಾಗಿದ್ದರು. ಈಗ ವಿದ್ಯಾವಂತರ ಸಂಖ್ಯೆ ಬೆಳೆಯುತ್ತಿದೆ. ಟೆಲಿಫಿಲ್ಮ್‌ ರೂಪಿಸಲು ಅಗತ್ಯವಾದ ತರಬೇತಿ ಪಡೆದ ಯುವಕರು  ಈ ಕ್ಷೇತ್ರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ.  ಹೊಸ ಆಲೋಚನೆಗಳೊಂದಿಗೆ ಯುವ ಕಲಾವಿದರು ಹೆಚ್ಚು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದರಿಂದ ನಮಗೂ ಹೊಸ ವಿಚಾರಗಳನ್ನು ಕಲಿಯಲು ಹಾಗೂ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದು ಟೆಲಿಫಿಲ್ಮ್‌ಗಳಲ್ಲಿ ತೊಡಗಿಕೊಳ್ಳುತ್ತಿರುವ ಯುವ ಕಲಾವಿದರ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮಂಜು, ‘ಕನ್ನಡಕ್ಕೆ ಹೋಲಿಸಿದರೆ ಹಿಂದಿಯಲ್ಲಿ ಟೆಲಿಫಿಲ್ಮ್‌ಗಳು ಹೆಚ್ಚು ಜನಪ್ರಿಯವಾಗಿವೆ’ ಎನ್ನುತ್ತಾರೆ.

ಮುಂದಿನ ಗುರಿ
ಸಿನಿಮಾರಂಗದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿರುವ  ಮಂಜು, ನಟ ಪ್ರೇಮ್ ಅಭಿನಯದ ‘ಗುಣವಂತ’ ಸಿನಿಮಾಗೆ ಸ್ಕ್ರಿಪ್ಟ್ ಬರೆದು ಅಂದಿನಿಂದ ‘ಗುಣವಂತ ಮಂಜು’ ಎಂದೇ ಗುರುತಿಸಿಕೊಂಡಿದ್ದಾರೆ.
‘ನಮಸ್ತೆ ಇಂಡಿಯಾ’ ಶೀರ್ಷಿಕೆಯ ಎರಡು ಗಂಟೆಯ ಸಿನಿಮಾವನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸುವ ವಿಚಾರವಾಗಿ ಈಗಾಗಲೇ ಸುದ್ದಿಯಲ್ಲಿದ್ದರು. ‘ಡಜನ್ ಚಿತ್ರಗಳು’ ಪುಸ್ತಕದಲ್ಲಿನ ಹನ್ನೆರಡು ಭಿನ್ನ ಕಥೆಗಳನ್ನು ಟೆಲಿಫಿಲ್ಮ್‌ಗಳಾಗಿ ಮಾಡುವ ಯೋಜನೆ ಹೊಂದಿದ್ದು,    ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ  ‘ರಾಷ್ಟ್ರೀಯ ಯುವ ರತ್ನ’ ಪ್ರಶಸ್ತಿ ಪಡೆದಿರುವ ‘ಮತ್ತೊಂದು ಸ್ವಾತಂತ್ರ್ಯ’ ಟೆಲಿಫಿಲ್ಮ್‌ ಅನ್ನು ಎಲ್ಲ ಶಾಲಾ  ಮಕ್ಕಳಿಗೆ ಪ್ರದರ್ಶಿಸಬೇಕು ಎಂಬುದು ಮಂಜು ಅವರ ಮಹದಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT