ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಲೆಯಿಂದಲೇ ನೆನಪಾಗುವ ಗೆಳೆಯ

ಕ್ಯಾಂಪಸ್ ಕಲರವ
Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಎಲ್ಲರಂತೆ ನನಗೂ ಪದವಿ ತರಗತಿಯ ಬಗ್ಗೆ ಒಂದು ರೀತಿಯಲ್ಲಿ ಖುಷಿ. ಅಂದು ಪದವಿ ತರಗತಿಯ ಮೊದಲ ದಿನ ಕಾಲೇಜಿಗೆ ಹೋಗುವುದಕ್ಕೆ ತಯಾರಾಗಿ   ಕಾಲೇಜಿನ  ಮೊದಲನೆ ಹಂತದ ಮೆಟ್ಟಿಲುಗಳ ಎಡಬದಿಯಲ್ಲಿದ್ದ ತರಗತಿಯ ಒಳಗೆ ಹೋದೆ.

ಪದವಿ ತರಗತಿ  ಹಾಗೂ  ನನ್ನ ಜೊತೆ ಮೂರು ವರ್ಷ ಒಟ್ಟಾಗಿ  ವ್ಯಾಸಂಗ ಮಾಡುವ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲದ ಜೊತೆಗೆ ಸ್ವಲ್ವ ಭಯ ಮನಸ್ಸಲ್ಲಿ ಮನೆಮಾಡಿತ್ತು. ಮೊದಲನೆ ದಿನ ಕ್ಲಾಸ್‌ಗೆ ಬರುವ  ಹೊಸ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಬಂದು ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ ಎಂದು ತಿಳಿದಿತ್ತು ಆದರೂ  ಮನಸ್ಸಿನಲ್ಲಿ ಸ್ವಲ್ಪ ಅಳುಕು.

ಅದೇ ಭಯದಲ್ಲಿ ಕ್ಲಾಸ್‌ ರೂಂ ಒಳಗೆ ಹೋದೆ. ಆದರೆ ಅಲ್ಲಿ ನಾನು ಊಹಿಸಿದ್ದಕ್ಕಿಂತ ಭಿನ್ನವಾದ ವಾತಾವರಣವಿತ್ತು. ನಾನು ಕ್ಲಾಸ್‌ ಒಳಗೆ ಹೋಗುವುದಕ್ಕೂ ಮೊದಲೇ ನನಗಿಂತ ಮೊದಲು ಬಂದಿದ್ದವರೆಲ್ಲಾ ಪರಸ್ಪರ ಪರಿಚಯ ಮಾಡಿಕೊಂಡು ಆರಾಮಾಗಿ ಮಾತುಕತೆ ನಡೆಸುತ್ತಿದ್ದರು. ಈ ಬಾರಿ ಕ್ಲಾಸ್‌ ಒಳಗೆ ಯಾರು ಬರುತ್ತಾರೋ ಅವರನ್ನು ಹಿರಿಯ ವಿದ್ಯಾರ್ಥಿಗಳ ರೀತಿಯಲ್ಲಿ ಪ್ರಶ್ನೆ ಕೇಳಿ ಗಾಬರಿಗೊಳಿಸಬೇಕು ಎಂದು ಅವರೆಲ್ಲಾ ಮೊದಲೇ ಯೋಜಿಸಿ ಕಾಯುತ್ತಿದ್ದರು. ಅದರಂತೆ ಅವರ ಪ್ಲಾನ್‌ಗೆ ನಾನೇ ಸಿಕ್ಕಿ ಹಾಕಿಕೊಂಡೆ.
 
ಆ ಗುಂಪಿನಲ್ಲಿ ನರೇಶ್‌ಬಾಬು ಅನ್ನೋ ತರಲೆ ಈಗಾಲೇ ಎಲ್ಲರ ಪರಿಚಯ ಮಾಡಿಕೊಂಡು ಕ್ಲಾಸ್‌ ರೂಂ ಹಿಂದಿನ ಬಾಗಿಲ ಬಳಿಯಿದ್ದ ಎರಡು ಬೆಂಚುಗಳ ಮೇಲೆ ಗುಂಪಾಗಿ ಎಲ್ಲರನ್ನು ಸೇರಿಸಿಕೊಂಡು ಕುಳಿತಿದ್ದ. ಒಳಗೆ ಬಂದ ನನ್ನನ್ನು ಹಿರಿಯ ವಿದ್ಯಾರ್ಥಿಯ ಗತ್ತಿನಲ್ಲಿ ಕರೆದು ಪ್ರಶ್ನೆಗಳನ್ನು ಕೇಳುತ್ತಿದ್ದ. ನಾನು ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ. ಆದರೆ ನನ್ನ ಸುತ್ತು ಕುಳಿತಿದ್ದವರು ಮಾತ್ರ ಅವನು ಮಾಡುತ್ತಿದ್ದ ಕೀಟಲೆಯನ್ನು ನೋಡುತ್ತಾ ಮುಗುಳುನಗುತ್ತಿದ್ದರು.  ಈ ಎಲ್ಲದರ ಬಗ್ಗೆ ಮೋದಲೇ ಯೋಜಿಸಿಕೊಂಡಿದ್ದರಿಂದ ಯಾರೊಬ್ಬರೂ ಅದರ ಬಗ್ಗೆ ಸುಳಿವು ಕೊಡಲಿಲ್ಲ.

ಪ್ರಶ್ನೋತ್ತರಗಳೆಲ್ಲ ಮುಗಿದ ಮೇಲೆ ‘ಕಾಲೇಜ್‌ಗೆ ಬರುವಾಗ, ಹೋಗುವಾಗ ಹುಷಾರಾಗಿ ಇರಬೇಕು. ಇಲ್ಲಾಂದ್ರೆ ಸಿನಿಯರ್ಸ್ ನನ್ನಂಗೆ ರ‍್ಯಾಂಗಿಂಗ್ ಮಾಡುತ್ತಾರೆ ಹುಷಾರು’ ಎಂದು ಹೇಳಿದವನೇ ಕ್ಲಾಸಿಗೆ ಹೋಗಿ ಕುಳಿತುಕೊಳ್ಳುವಂತೆ ಗತ್ತಿನಲ್ಲೇ ಹೇಳಿದ. ಆಮೇಲೆ ಆ ಗುಂಪಿನಿಂದ ನನ್ನ ಕಡೆಗೆ ಬಂದ ಗೆಳತಿ ದಯಾ, ‘ಆ ತರಲೆ ನರೇಶ ಸಿನಿಯರ್‌ ಅಲ್ಲ. ನಮ್ಮ ಕ್ಲಾಸ್‌ಮೇಟ್‌. ನಾವೆಲ್ಲ ಬೇಕೆಂತಲೇ ಈ ರೀತಿ ಪ್ಲಾನ್‌ ಮಾಡಿದ್ದು. ಆದರೆ ಅವನು ನಾವು ಹೇಳಿದ್ದಕ್ಕಿಂತ ಹೆಚ್ಚಾಗಿ ನಿನ್ನ ಬಳಿ ಆ್ಯಕ್ಟ್‌ ಮಾಡಿದ’ ಎಂದು ಬಹಿರಂಗಪಡಿಸಿದಾಗ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.
 
ಇನ್ನೇನು ಪದವಿ ತರಗತಿಯ ಮೊದಲ ದಿನದ ತರಗತಿ ಆರಂಭವಾಗಬೇಕು. ಅಷ್ಟರಲ್ಲಿ ನಾನು ಕುಳಿತಿದ್ದ ಬೆಂಚಿನ ಬಳಿ ಬಂದ  ನರೇಶ ‘ತಮಾಷೆಗಾಗಿ ಆ ರೀತಿ  ಮಾಡಿದ್ದು. ನೀವು ಬರುವುದಕ್ಕೂ ಮೊದಲೇ ಸಿನಿಯರ್ಸ್‌ ನಮ್‌ ಕ್ಲಾಸ್‌ಗೆ ಬಂದು ನಮ್ಮೆಲ್ಲರ ಪರಿಚಯ ಮಾಡಿಕೊಂಡರು. ನಮಗೂ ಇದೇ ರೀತಿ ಪ್ರಶ್ನೆಗಳನ್ನು ಕೇಳಿ ನಮ್ಮನ್ನು ಗಾಬರಿಪಡಿಸಿದ್ದರು’ ಎಂದು ಹೇಳಿದ. ಅಷ್ಟು ಹೇಳಿ ಬಾಗಿಲ ಬಳಿ ಇದ್ದ ಬೆಂಚಿನ ಬಳಿ ಹೋಗುತ್ತಿದ್ದವನು ಮತ್ತೆ ಹಿಂತಿರುಗಿ ಬಂದು ‘ನಮ್‌ ಡಿಗ್ರಿ ಮುಗಿದ ಮೇಲೆ ನೀವು ಯಾರನ್ನು ಮರೆತರೂ ನನ್ನ ಮಾತ್ರ ಮರೆಯುವುದೇ ಇಲ್ಲ ಅಲ್ವಾ?’ ಎಂದು ಕೇಳು ದೊಡ್ಡದಾಗಿ ನಕ್ಕ.

ನಮ್ಮ ಪದವಿ ಮುಗಿದು ಏಳು ವರ್ಷಗಳಾದರೂ ಅವನ ಅತಿ ಬುದ್ದಿವಂತಿಕೆಯ ನಟನೆ, ಎಲ್ಲರನ್ನೂ ಖುಷಿಯಾಗಿ ಮಾತನಾಡಿಸುವ ಅವನ ಸ್ವಾಭಾವ, ಕ್ಲಾಸ್‌ಮೇಟ್‌ಗಳನ್ನೂ ಬಿಡದೇ ಕೀಟಲೆ ಮಾಡುತ್ತಿದ್ದ ಅವನ ಸ್ನೇಹವನ್ನು ಪದವಿ ತರಗತಿಯಲ್ಲಿ ಹೆಚ್ಚು ಆತ್ಮೀಯವಾಗಿದ್ದ ನನ್ನ ಆಪ್ತ ಸ್ನೇಹಿತರು  ಮರೆತಿಲ್ಲ.

ನಮ್ಮ ತರಗತಿಯ ಎಲ್ಲಾ ಹುಡುಗಿಯರನ್ನು ಹುಡುಗಾಟದಿಂದ ಕೀಟಲೆ ಮಾಡುತ್ತಿದ್ದ ಅವನು ನನ್ನ ಗೆಳತಿ ಅರ್ಚನಳನ್ನು ಕಂಡರೆ ಸುಮ್ಮನಾಗುತ್ತಿದ್ದ. ನರೇಶನಂತೆ ಅರ್ಚನಾ ಕೂಡ ಅಷ್ಟೇ ಹಾಸ್ಯ ಪ್ರಜ್ಞೆ ಹೊಂದಿದ್ದಳು. ಬೇರೆಯವರನ್ನು ಸುಲಭವಾಗಿ ಕೀಟಲೆ ಮಾಡುತ್ತಿದ್ದ ನರೇಶನನ್ನು ಅಚ್ಚು ಮಾತ್ರ ಅಷ್ಟೇ ಸಲೀಸಾಗಿ ಹುಡುಗಿಯರ ಪರವಾಗಿ ಆಟವಾಡಿಸುತ್ತಿದ್ದಳು. ಎಲ್ಲರೊಂದಿಗೆ ಸಲಿಗೆಯಿಂದ ಮಾತನಾಡುತ್ತಿದ್ದ ನರೇಶ ಯಾವುದೇ ಸಂದರ್ಭದಲ್ಲೂ ಸ್ನೇಹಿತರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದ. ನರೇಶ ಮಾಡುತ್ತಿದ್ದ  ತರಲೆ ಕೆಲಸಕ್ಕೆ ಸಿರಿಯಸ್‌ ಆಗಿದ್ದಕ್ಕಿಂತ, ಖುಷಿಯಾಗಿ ನಗುತ್ತಿದ್ದ ದಿನಗಳೇ ಹೆಚ್ಚಾಗಿ ನಮ್ಮ ನೆನಪಿನಲ್ಲಿ ಹಾಗೆ ಉಳಿದುಕೊಂಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT