ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂದಿದೆ ಮೇಕೆ ಹಾಲು

Last Updated 31 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕಾಲ ಬದಲಾದಂತೆ ಜನರ ಅವಶ್ಯಕತೆಗಳು ಬದಲಾಗುತ್ತವೆ. ಆಧುನಿಕತೆಯ ಧಾವಂತದಲ್ಲಿರುವ ಜನರಿಗೆ ಎಲ್ಲವೂ ಬೇಗ ಕೈಗೆಟುಕುವಂತೆ ಇರಬೇಕು.
ದೋಸೆ ಹಿಟ್ಟಿನಿಂದ ಹಿಡಿದು ಎಲ್ಲವೂ ಸಿದ್ಧವಾಗಿ ಲಭ್ಯವಿರುವ ಇಂದಿನ ದಿನಮಾನದಲ್ಲಿ ಮೇಕೆ ಹಾಲನ್ನು ಜನರಿಗೆ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ ಯಶೋದವನ ಫಾರ್ಮ್.

ಮೇಕೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿಯೊಂದಿಗೆ 2012ರಲ್ಲಿ ಯು.ಕೆ.ಶ್ರೀನಿವಾಸ ಆಚಾರ್ಯ ಅವರು ಯಶೋದವನ ಮೇಕೆ ಫಾರ್ಮ್ ಅನ್ನು ಸ್ಥಾಪಿಸಿದರು. ‘ಆಡಿನ ಹಾಲಿನಲ್ಲಿ  ಔಷಧೀಯ ಗುಣಗಳು ಸಮೃದ್ಧವಾಗಿದೆ. ಅದು ಜನರಿಗೆ ಸುಲಭವಾಗಿ ಸಿಗುವಂತೆ ಆಗಬೇಕು ಎನ್ನುವುದು ನನ್ನ ಆಶಯ’ ಎನ್ನುತ್ತಾರೆ ಅವರು.

ಪದವಿ ಮುಗಿದ ನಂತರ ಆರಂಭದಲ್ಲಿ ಸಾವಯವ ಕೃಷಿ ಮಾಡುವ ಉದ್ದೇಶದಿಂದ ಜಮೀನು ಖರೀದಿಸಿ, ಅದರಲ್ಲಿ ಮಾವು, ತೆಂಗು, ನಿಂಬೆ ಮರಗಳನ್ನು ಹಾಕಿಸಿದ್ದರು. ನಂತರ ನಿರ್ವಹಣೆ ಕಷ್ಟವೆನಿಸಿ ಅದನ್ನು ಕೈಬಿಟ್ಟು  ನಂಜನಗೂಡು ತಾಲ್ಲೂಕಿನ ಹುಲ್ಲಹಲ್ಲಿಯಲ್ಲಿ 50 ಎಕರೆ ಜಮೀನು ಖರೀದಿಸಿ ಮೇಕೆ ಕೃಷಿ ಆರಂಭಿಸಿದರು.

‘ಮೇಕೆ ಹಾಲು, ಅಸ್ತಮಾ ಮತ್ತು ದೀರ್ಘಕಾಲದ ರೋಗಗಳಿಗೆ ಉತ್ತಮ ಔಷಧಿಯಾಗಿದ್ದು, ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ 200 ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದ್ದು, ‘ನನ್ನ ಮೇಕೆ’ ಹೆಸರಿನ ಮೂಲಕ ವ್ಯಾಪಾರ ಆರಂಭಿಸಿದ್ದಾರೆ ಆಚಾರ್ಯ.

ಹಾಲಿನ ಸಂಸ್ಕರಣೆ
ಯಶೋದವನ ಫಾರ್ಮ್ ಯಾಂತ್ರೀಕೃತ ಹಾಲು ಕರೆಯುವ ಕೋಣೆ ಮತ್ತು ವಿಶೇಷ ಪ್ಯಾಶ್ಚೀಕರಣ ಘಟಕ ಹೊಂದಿದೆ.  ಸಂಸ್ಕರಣಾ ಘಟಕವೂ ಇದ್ದು, 75 ಡಿಗ್ರಿ ಉಷ್ಣಾಂಶದಲ್ಲಿ ಕಾಯಿಸಲಾಗುತ್ತದೆ.  ನಂತರ 4 ಡಿಗ್ರಿ ಉಷ್ಣಗೆ ಹಾಲನ್ನು ತಣಿಸಿ, ಪ್ಯಾಕ್‌ ಮಾಡಲಾಗುತ್ತದೆ. ಈ ಹಾಲನ್ನು 3 ದಿನಗಳವರೆಗೂ ಬಳಸಬಹುದು.

ಎಲ್ಲೆಲ್ಲಿ ಹಾಲು ಲಭ್ಯ?
*ಓಜಸ್‌ ನಿಸರ್ಗ ಆರ್ಗ್ಯಾನಿಕ್‌– ಗಾಂಧಿ ಬಜಾರ್‌, ಜೆ ಪಿ ನಗರ
*ಗ್ರಾಮೀಣ ಅಂಗಡಿ– ಜಯನಗರ, ರಾಜಾಜಿನಗರ
*ನ್ಯಾಚುರೊ ಆರ್ಗ್ಯಾನಿಕ್‌(Naturo Organic–ರಾಜಾರಾಜೇಶ್ವರಿ ನಗರ, ಬಿಟಿಎಂ ಬಡಾವಣೆ
*ಬನಶಂಕರಿ ಆರ್ಗ್ಯಾನಿಕ್‌ – ಬನಶಂಕರಿ
*ಶಿವಾನಿ ಆರ್ಗ್ಯಾನಿಕ್‌ –ವಿಜಯನಗರ, ಕೆಂಗೇರಿ
*ಪರಿಸರ ಆರ್ಗ್ಯಾನಿಕ್‌ – ಮಲ್ಲೇಶ್ವರಂ
*ಸಾತ್ವಿಕ್‌ ಆರ್ಗ್ಯಾನಿಕ್‌ – ಬಸವನಗುಡಿ
*ಆರೋಗ್ಯ ಆರ್ಗ್ಯಾನಿಕ್‌ – ಗಿರಿನಗರ
200 ಮಿ.ಲೀ. ಹಾಗೂ 500 ಮಿ.ಲೀ. ಹಾಲಿನ ಪ್ಯಾಕೆಟ್‌ಗಳು ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ.

ನಿರ್ವಹಣೆ ಹೇಗೆ?
ವರ್ಷ ಪೂರ್ತಿ ಯಾವ ಮೇಕೆಯೂ  ಹಾಲು ನೀಡದು. ಆದ್ದರಿಂದ 25 ಮೇಕೆಗಳ ಒಂದು ಗುಂಪು ಮಾಡಿ, ಮರಿ ಹಾಕುವ ಕಾಲವನ್ನು ಅನುಸರಿಸಿ, ಹಾಲು ಸಂಗ್ರಹಿಸಲಾಗುತ್ತಿದೆ. 50 ಎಕರೆ ಜಮೀನಿನಲ್ಲಿ ಮೇಕೆ ಫಾರ್ಮ್‌ ವೈಜ್ಞಾನಿಕವಾಗಿ ವಿನ್ಯಾಸಗೊಂಡಿದೆ. 40 ಎಕರೆ ಜಾಗದಲ್ಲಿ ಮೇಕೆಗಳಿಗೆ ಬೇಕಾದ ಮೇವನ್ನು ಬೆಳೆಯಲಾಗುತ್ತಿದೆ.

ನಾಲ್ಕು ಸೂತ್ರಗಳು
ಬೆಲೆ ಬಾಳುವ ವಿವಿಧ ತಳಿಯ ಆಡುಗಳು, ಯೋಜಿತ ಮೂಲಸೌಕರ್ಯ, ಸಮತೋಲಿತ ಪೌಷ್ಟಿಕ ಮೇವು ಮತ್ತು ಉತ್ತಮ ನಿರ್ವಹಣೆ ಮೇಕೆ ಕೃಷಿ ಯಶಸ್ವಿಯಾಗಲು ಕಾರಣ ಎಂಬುದು ಆಚಾರ್ಯರ ನಂಬಿಕೆ.

ಉತ್ತಮ ತಳಿಯ ಮೇಕೆಗಳನ್ನು ರಾಜಸ್ತಾನ್‌, ಗುಜರಾತ್‌, ತಮಿಳುನಾಡು ಹಾಗೂ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ತರಿಸಲಾಗಿದೆ. ಪಂಜಾಬ್‌ನ ‘ಬೀತಲ್‌’ ತಳಿಯ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಕಾರಣ ಇದು ಬಹಳ ಬೇಗ ಬೆಳೆಯುತ್ತದೆ. ಅಲ್ಲದೆ ಹೆಚ್ಚು ಮಾಂಸ ಹಾಗೂ ಹೆಚ್ಚು ಹಾಲು ನೀಡುವ ತಳಿಯಾಗಿದೆ. ‘ಮೊದಮೊದಲು ಕಷ್ಟವೆನಿಸಿದರೂ ಈಗ ಇದು ನನ್ನ ನೆಚ್ಚಿನ ಕಾಯಕವಾಗಿದೆ’ ಎನ್ನುತ್ತಾರೆ ಆಚಾರ್ಯ.

ಸಂಪರ್ಕಕ್ಕೆ: 09620590777
ವೆಬ್‌ಸೈಟ್‌: www.yashodavanagoatfarm.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT