ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ನಿಮ್ಮ ಒಳ ಮನಸಿನ ಶಾಪ’

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮುಖಕ್ಕೆ ಬಿಳಿ ಬಣ್ಣ ಬಳಿದ, ಕಣ್ಣಿಗೆ ಕಪ್ಪು, ತುಟಿಯ ಅಂಚುಗಳನ್ನು ಮೀರಿ ಕೆಂಪು ಬಣ್ಣ ಬಳಿದುಕೊಂಡ, ಕೆದರಿದ ಕೂದಲಿನ ಗಂಭೀರ ವ್ಯಕ್ತಿಯ ಚಿತ್ರ ಫೇಸ್‌ಬುಕ್‌, ವಾಟ್ಸ್‍ಆ್ಯಪ್‌ಗಳಲ್ಲಿ, ಕಾರು ಬೈಕ್‌ಗಳ ಹಿಂದೆ ಆಗಾಗ ಕಾಣಸಿಗುತ್ತದೆ. ಇದು ಹಾಲಿವುಡ್‌ನಲ್ಲಿ ಖಳನಾಯಕನ ಪಾತ್ರಕ್ಕೆ ಹೊಸ ಖದರ್ ತಂದುಕೊಟ್ಟ ಹೀತ್ ಲೆಡ್ಜರ್ (ಜೋಕರ್) ಅವರ ಚಿತ್ರ.

2008ರಲ್ಲಿ ಬಿಡುಗಡೆಯಾದ ‘ಬ್ಯಾಟ್‌ಮನ್‌’ ಸರಣಿಯ ಎರಡನೇ ಚಿತ್ರ ಡಾರ್ಕ್‌ನೈಟ್‌ನಲ್ಲಿ ಜೋಕರ್‌ನದ್ದು  ಖಳನಾಯಕನ ಪಾತ್ರ. ಚಿತ್ರದ ನಾಯಕ ಬ್ಯಾಟ್‌ಮನ್‌ನನ್ನು ಮೊದಲಿನಿಂದ ಕೊನೆಯವರೆಗೂ ಕಾಡುವ ಜೋಕರ್, ಬ್ಯಾಟ್‌ಮನ್‌ಗೆ ಉಳಿಗಾಲವೇ ಇಲ್ಲದಂತೆ ಮಾಡಿರುತ್ತಾನೆ. ಚಿತ್ರದ ಆರಂಭ ಮತ್ತು ಮಧ್ಯಂತರ ಹೇಗಿದ್ದರೂ ಕೊನೆಯಲ್ಲಿ ಗೆಲ್ಲಬೇಕಾದ್ದು ಹೀರೋ ತಾನೆ? ಈ ಚಿತ್ರವೂ ಅದಕ್ಕೆ ಅಪವಾದವಾಗಿ ಇರಲಿಲ್ಲ.

ಡಾರ್ಕ್‌ನೈಟ್ ಚಿತ್ರ ಬಿಡುಗಡೆಯಾಗಿ 8 ವರ್ಷವಾದರೂ ಜೋಕರ್ ಜನಪ್ರಿಯತೆ ಇಂದಿಗೂ ಕುಗ್ಗಿಲ್ಲ, ವಿಶಿಷ್ಟ ಶೈಲಿಯ ಮಾತುಗಾರಿಕೆ ಮತ್ತು  ಸಮಾಜದೆಡೆಗಿನ ಭಿನ್ನ ದೃಷ್ಟಿಕೋನದಿಂದಾಗಿ ಜೋಕರ್ ಇಂದಿಗೂ ಯುವಕರ ಪಾಲಿಗೆ ಫೇವರೇಟ್ ಆಗಿಯೇ ಉಳಿದಿದ್ದಾನೆ.

ಫೇಸ್‌ಬುಕ್ ಮತ್ತು ವಾಟ್ಸ್‍ಆ್ಯಪ್‌ಗಳಲ್ಲಿ ಕಟುಸತ್ಯವನ್ನು ಹೇಳಲು, ಸಂಪ್ರದಾಯವನ್ನು ಟೀಕಿಸಲು ಜೋಕರ್ ಚಿತ್ರ ಬಳಕೆಯಾಗುತ್ತಲೇ ಇರುತ್ತದೆ. ಫೇಸ್‌ಬುಕ್‌ ಮೀಮ್‌ಗಳಿಗೆ ಜೋಕರ್ ಆರಾಧ್ಯ ದೈವ.

ಜೋಕರ್ ಅದ್ಭುತ ಮಾತುಗಾರ. ಭಿನ್ನ ಹಾದಿಯ ದಾರ್ಶನಿಕ. ಉಳಿದ ವಿಲನ್‌ಗಳಂತೆ ಈತನಿಗೆ ಹಣದ ಮೇಲೆ, ಹೆಣ್ಣಿನ ಮೇಲೆ ಮೋಹವಿಲ್ಲ. ಎಲ್ಲರ ಮುಖವಾಡ ಕಳಚುವುದು ಇವನ ಉದ್ದೇಶ.

‘ನಾನೊಬ್ಬನೇ ಖಳನಲ್ಲ. ಅನೇಕರು ಖಳರಾಗುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಎಲ್ಲರೂ ಖಳರೇ’ ಎಂಬುದನ್ನು ಪ್ರೂವ್ ಮಾಡಲು ಈತ ಡಾರ್ಕ್‌ನೈಟ್‌ನಲ್ಲಿ ಚಿತ್ರದುದ್ದಕ್ಕೂ ಹೆಣಗುತ್ತಾನೆ, ಸ್ವಲ್ಪಮಟ್ಟಿಗೆ ಯಶಸ್ಸೂ ಕಾಣುತ್ತಾನೆ.

ಇಂಥ ವಿಶಿಷ್ಟ ಪಾತ್ರ ಸೃಷ್ಟಿಸಿದ ಕೀರ್ತಿ ಸೇರಬೇಕಾದ್ದು ನಿರ್ದೇಶಕ  ಕ್ರಿಸ್ಟೋಫರ್‌ ನೊಲಾನ್ ಅವರಿಗೆ. ಜಗತ್ತು ಇಂದು ಕ್ರಿಸ್ಟೋಫರ್ ಅವರನ್ನು ಮರೆತರೂ ಅವರು ಸೃಷ್ಟಿಸಿದ ‘ಜೋಕರ್’ ಪಾತ್ರವನ್ನು ನೆನಪಿನಲ್ಲಿಟ್ಟುಕೊಂಡಿದೆ.

ಡಾರ್ಕ್ ನೈಟ್ ಚಿತ್ರದಲ್ಲಿ ನಾಯಕ ಬ್ಯಾಟ್‌ಮನ್‌ಗೆ ಜೋಕರ್ ಹೀಗೆ ಹೇಳುತ್ತಾನೆ. ‘ಎಲ್ಲರೂ ಸ್ವಾರ್ಥಿಗಳೇ, ಎಲ್ಲರಿಗೂ ತಾವು ಬದುಕುವುದಷ್ಟೇ ಬೇಕು, ಜೀವಕ್ಕೆ ಕುತ್ತು ಬಂದಾಗ ಹೊರ ನೋಟಕ್ಕೆ ನಾಗರಿಕರಂತೆ ಕಾಣುವ ಈ ಜನ ಮೃಗಗಳಾಗಿ ಒಬ್ಬರನ್ನೊಬ್ಬರು ತಿಂದು ಮುಗಿಸುತ್ತಾರೆ, ನಾನು ರಾಕ್ಷಸನಲ್ಲ ನಿಮ್ಮಗಳ ಒಳ ಸತ್ಯ ತಿಳಿಸಲು ಬಂದಿರುವ ಶಾಪ.’

ಯೋಚಿಸಿ ನೋಡಿದರೆ ಇದು ಸತ್ಯ ಎನಿಸುವುದಿಲ್ಲವೇ?
ಬ್ಯಾಟ್‌ಮನ್ ಚಿತ್ರದ ‘ಜೋಕರ್‌’ ಪಾತ್ರಧಾರಿ ಹೀತ್‌ ಲೆಡ್ಜರ್‌ಗೆ ಶ್ರೇಷ್ಠ ಅಭಿನಯಕ್ಕಾಗಿ ಆಸ್ಕರ್‌ ಪ್ರಶಸ್ತಿ ಸಿಕ್ಕಿತು. ಆದರೆ ಗೌರವ ಸ್ವೀಕರಿಸಲು ಆತನೇ ಇರಲಿಲ್ಲ. ಚಿತ್ರ ಬಿಡುಗಡೆಗೂ ಮುನ್ನವೇ ಆತ ಸತ್ತು ಹೋಗಿದ್ದ.

*
ನಾನೊಬ್ಬನೇ ಖಳನಲ್ಲ. ಅನೇಕರು ಖಳರಾಗುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಎಲ್ಲರೂ ಖಳರೇ.
–ಹೀತ್ ಲೆಡ್ಜರ್ (ಜೋಕರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT