ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದೊಡಲ ಚಿತ್ರಪಟ

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಿ ಸಿಟಿಯ ಸಬ್‌ಲೈಮ್‌ ಗ್ಯಾಲರಿಯಲ್ಲಿ ‘ತ್ರೀ’ ಎಂಬ ಹೆಸರಿನಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ವಿಶ್ವದ ಟಾಪ್‌ 3ರ ಪಟ್ಟಿಯಲ್ಲಿರುವ ಹೆಸರಾಂತ ಛಾಯಾಗ್ರಾಹಕ ಶರದ್‌ ಹಕ್ಸರ್‌ ಅವರ ಛಾಯಾಚಿತ್ರಗಳು ನೋಡುಗರನ್ನು ಬೆರಗುಗೊಳಿಸುತ್ತಿವೆ.

ಮೂಲತಃ ಚೆನ್ನೈನವರಾದ ಹಕ್ಸರ್‌ ಅವರಿಗೆ ಚಿಕ್ಕಂದಿನಿಂದಲೇ ಛಾಯಾಗ್ರಹಣ ಎಂದರೆ ಬಹಳ ಅಚ್ಚುಮೆಚ್ಚು. 3ನೇ ವಯಸ್ಸಿನಲ್ಲಿರುವಾಗಲೇ ಕ್ಯಾಮೆರಾವನ್ನು ಪಡೆದು ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಛಾಯಾಚಿತ್ರಗಳ ಬಗ್ಗೆ ಅವರಿಗೆ ಒಲವು.

ಹಕ್ಸರ್‌ ಸೆರೆಹಿಡಿದ ಚಿತ್ರಗಳನ್ನು ಜನಪ್ರಿಯ ಛಾಯಾಗ್ರಾಹಕ ಇಕ್ಬಾಲ್‌ ಮೊಹಮ್ಮದ್‌ ಅವರೊಂದಿಗೆ ಹಂಚಿಕೊಳ್ಳುವ ಸದಾವಕಾಶ ದೊರೆತದ್ದು  11ನೇ ತರಗತಿಯಲ್ಲಿ. ಅವರ ಮಾರ್ಗದರ್ಶನವೇ ಹಕ್ಸರ್‌ ಛಾಯಾಗ್ರಹಣದ ಕನಸನ್ನು ಗಟ್ಟಿಗೊಳಿಸಿದ್ದು.

ಕ್ಯಾನಸ್ ಸಿಲ್ವರ್ ಲಯನ್ ಪ್ರಶಸ್ತಿ ಮತ್ತು ಡಿ ಆ್ಯಂಡ್ ಎಡಿ ಪ್ರಶಸ್ತಿಗೆ ಏಷ್ಯಾದಿಂದ ಆಯ್ಕೆಯಾದ ಏಕೈಕ ಛಾಯಾಗ್ರಾಹಕ ಇವರಾಗಿದ್ದಾರೆ. ಪ್ರತಿಷ್ಠಿತ  ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಭಾಗದಲ್ಲಿ 21 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ ಪ್ರಥಮ ಕ್ಯಾಮೆರಾ ಲೆನ್ಸ್ ಕ್ಯಾಲೆಂಡರ್ ಹಿಂದಿನ ರೂವಾರಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.

ಇವರು ಛಾಯಾಗ್ರಹಣಕ್ಕೆಂದೇ ಪ್ರವಾಸ ಹೋಗುವ ಹವ್ಯಾಸ ಉಳ್ಳವರು. ವಿಶ್ವದ ನಾನಾ ಸ್ಥಳಗಳಿಗೆ ಭೇಟಿ ನೀಡಿ ಸುಂದರ ಚಿತ್ರಗಳನ್ನು ತೆಗೆಯುವುದರಲ್ಲಿ ನಿಸ್ಸೀಮರು. ಜಪಾನ್‌, ಕೀನ್ಯಾದ ದ್ವೀಪ ಪ್ರದೇಶ ಹಾಗೂ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ವರ್ಷದಲ್ಲಿ 2 ಪ್ರವಾಸವನ್ನು ಕೈಗೊಂಡು ವಿಶಿಷ್ಟವಾದ ಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ. ಉತ್ತಮ ಚಿತ್ರ ಕ್ಲಿಕ್ಕಿಸಲು ಬೆಳಿಗ್ಗೆ ಮತ್ತು ರಾತ್ರಿ ವೇಳೆ ಸೂಕ್ತ ಎಂಬುದು ಇವರ ಅಭಿಪ್ರಾಯ.

ಛಾಯಾಚಿತ್ರಗಳ ವಿವರಣೆ
ಪ್ರತಿಯೊಬ್ಬ ಛಾಯಾಗ್ರಾಹಕನೂ ತನಗೆ ಆಸಕ್ತಿ ಇರುವ ವಸ್ತು ವಿಷಯದ ಆಧಾರದ ಮೇಲೆ ಚಿತ್ರಗಳನ್ನು ಸೆರೆಹಿಡಿದು ವರ್ಚಸ್ಸನ್ನು ರೂಪಿಸಿಕೊಳ್ಳುತ್ತಾರೆ. ಹಾಗೆ ಹಕ್ಸರ್‌ ಕೂಡ ಪ್ರಕೃತಿ ಹಾಗೂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಆ್ಯಂಗಲ್‌ಗಳಲ್ಲಿ ವಿಶಿಷ್ಟವೆನಿಸುವ ಚಿತ್ರಗಳನ್ನು ಕ್ಲಿಕ್ಕಿಸಿ ಗುರುತಿಸಿಕೊಂಡಿದ್ದಾರೆ. 

ಹಕ್ಸರ್ ಅವರ ಕ್ರೊಯೇಷಿಯಾ ಮತ್ತು ಇಟಲಿ ಪ್ರವಾಸದಲ್ಲಿ ಕಂಡುಬಂದ ಸ್ಥಿರ ಛಾಯಾಚಿತ್ರಗಳ ಒಟ್ಟು 37 ಫೋಟೊಗಳು ಈ ಪ್ರದರ್ಶನದಲ್ಲಿವೆ.
ವಾಸ್ತುಶಿಲ್ಪದ ಹಲವು ಆಯಾಮ ಹಾಗೂ ಕೆಲವು ಸೂಕ್ಷ್ಮತೆಯನ್ನು ಸೆರೆಹಿಡಿಯುವಲ್ಲಿ ಹಕ್ಸರ್‌ ಅವರ ಪ್ರತಿಭೆ ನಿರೂಪಿತಗೊಂಡಿದೆ. ವಿವಿಧ ಶೈಲಿಯ ಮನೆಗಳ ವಿನ್ಯಾಸ ಬಣ್ಣ, ಆಕಾರ, ಇವುಗಳು ಸಮಗ್ರವಾಗಿ ಕಾಣುವ ಹಾಗೆ ಕ್ಯಾಮೆರಾ ಕಣ್ಣಲ್ಲಿ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ.

ಪ್ರಕೃತಿಯಲ್ಲಿನ ಸೌಂದರ್ಯ ಶ್ರೀಮಂತಿಕೆಯನ್ನು ಗುರುತಿಸುವ ಹಕ್ಸರ್‌ ಅವರ ಬಹುತೇಕ ಚಿತ್ರಗಳು ನೋಡುಗರು ಹುಬ್ಬೇರಿಸುವಂತೆ ಮಾಡುತ್ತವೆ. ಇನ್ನು ಕೆಲವು ಚಿತ್ರಗಳು ವಸ್ತು ವಿಷಯಕ್ಕೆ ಹೆಚ್ಚು ಒತ್ತು ನೀಡಿ ಗಾಢ ಬಣ್ಣಗಳೊಂದಿಗೆ ನೆರಳಿನ ಸಂಯೋಜನೆಯಲ್ಲಿ ಬೆರೆತು ವಿಶಿಷ್ಟ ಎನಿಸುತ್ತವೆ.

ವೈಭವದ ಅರಮನೆ, ಬೆಳಕಿನ ಸಂಯೋಜನೆಯಲ್ಲಿ ಬಂಗಾರದಂತೆ ಕಂಗೊಳಿಸುತ್ತದೆ. ಇಟಲಿಯ ಟೆರ್ರಾಕೋಟಾ ಚಾವಣಿಯ ಮನೆಯ ಚಿತ್ರವನ್ನು ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡುವ ಮನಸ್ಸಾಗುತ್ತದೆ. ಸುಂದರ ಸಮುದ್ರದ ತಪ್ಪಲಿನಲ್ಲಿರುವ  ಕೋಟೆಯಂತಹ ಮನೆಗಳು ನೋಡುಗರ ಮೊಗದಲ್ಲಿ ಆನಂದ ಮೂಡಿಸುತ್ತವೆ.

ಬೆಟ್ಟ ಗುಡ್ಡಗಳಲ್ಲಿ ಸಾಲು ಸಾಲು ಮೆಟ್ಟಿಲ ರೀತಿಯಲ್ಲಿ ಕಟ್ಟಿರುವ ಮನೆಗಳು ಅಚ್ಚರಿಯಂತೆ ಕಾಣುತ್ತವೆ. ಈ ರೀತಿಯ ಛಾಯಚಿತ್ರ ಸೆರೆಹಿಡಿದು  ದೇಶ ವಿದೇಶಗಳ ಚಿತ್ರಣವನ್ನು ಕಲಾಪ್ರೇಮಿಗಳಿಗೆ ಅರ್ಪಿಸಿದ್ದಾರೆ. 

ಕೊರೆಯುವ ಚಳಿಯಲ್ಲಿ ಮಂಜಿನ ಹೊದಿಕೆಯ ಮಧ್ಯೆ ಇರುವ ಸುಂದರ ಚಿತ್ರಗಳು ನೋಡುಗರನ್ನು ಮಂಜಿನೆಡೆಗೆ ಕೊಂಡೊಯ್ಯುವ ಭಾವನೆ ಹುಟ್ಟಿಸುತ್ತವೆ.
ಮಂಜಿನ ಹನಿ ಹಿಮಗೂಡಿ ಹೆಪ್ಪುಗಟ್ಟುವಿಕೆಯ ಚಿತ್ರಗಳು ಕನ್ನಡಿ ಮುಂದೆ ನಿಂತ ಭಾವನೆ ಅರಳಿಸುತ್ತವೆ.

ಅತ್ಯಂತ ಗಾಢ ಬಣ್ಣಗಳಿಂದ ಕೂಡಿರುವ ಚಿತ್ರಗಳು ನೋಡುಗರನ್ನು ಬಣ್ಣದ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಇಲ್ಲಿನ ಸ್ಥಳಗಳಿಗೆ ಭೇಟಿ ನೀಡದಿದ್ದರೂ ಇವರು ಕ್ಲಿಕ್ಕಿಸಿರುವ ಅದ್ಭುತ ಚಿತ್ರಗಳನ್ನು ನೋಡಿದರೆ ನೈಜ ಅನುಭವ ಪಡೆದ ಖುಷಿ ನಮ್ಮದಾಗುತ್ತದೆ.

ಸ್ಥಳ:
ಯುಬಿ ಸಿಟಿ, 8ನೇ ಮಹಡಿ ಸಬ್‌ಲೈಮ್‌ ಗ್ಯಾಲರಿ. ಬೆಳಗ್ಗೆ 11ಗಂಟೆಯಿಂದ ರಾತ್ರಿ 8 ರವರೆಗೆ  ವೀಕ್ಷಣೆಗೆ ಅವಕಾಶ. ಮಾರ್ಚ್‌ 4 ಕೊನೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT