ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಳ ಮೇಲೆ ಪ್ರಾಣಿಲೋಕ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸೌಂದರ್ಯವೆಂಬುದು ಹೆಣ್ಣಿಗೆ ಒಲಿದು ಬಂದ ವರ. ಅದನ್ನು ಸದಾ ತಾಜಾ ಆಗಿ ಇರಿಸಿಕೊಳ್ಳುವುದು ಮತ್ತು ಪಕ್ಕದವರ ಕಣ್ಣು ತನ್ನನ್ನು ಗಮನಿಸುವಂತೆ ಅಲಂಕರಿಸಿಕೊಳ್ಳಬೇಕು ಎಂಬುದು ಆಕೆಯ ಮನದಿಚ್ಛೆ.

ಈ ಉದ್ದೇಶ ಸಾಧನೆಗೆ ಫ್ಯಾಷನ್ ಒಂದು ಅಸ್ತ್ರ. ಎಲ್ಲರೂ ಚಂದದ ಪ್ಯಾಂಟ್ ಹಾಕಿಕೊಂಡಾಗ ಒಬ್ಬಾಕೆಯ ಪ್ಯಾಂಟ್ ಮಂಡಿ ಬಳಿ ಹರಿದಿದ್ದರೆ ಅದು ಆಕರ್ಷಕ ಎನಿಸದೇ? ಈಗ ಇದೇ ಮಾತನ್ನು ಉಂಗುರದ ವಿಚಾರಕ್ಕೂ ಹೇಳಬೇಕಾದ ಕಾಲ ಬಂದಿದೆ.

ಉಂಗುರ ಎನ್ನುವುದು ಸ್ತ್ರೀ– ಪುರುಷರಿಬ್ಬರೂ ಇಷ್ಟಪಡುವ ಆಭರಣ. ಆದರೆ ಮಹಿಳೆಯರು ಧರಿಸುವ ಉಂಗುರಗಳ ವೈವಿಧ್ಯ ಅಸಾಧಾರಣ. ಉಡುಗೆ ವಿಚಾರದಲ್ಲಿಯೂ ಈ ಮಾತು ನಿಜ ತಾನೆ?

ಎಂ.ಜಿ.ರಸ್ತೆಯು ಬ್ರಿಗೇಡ್ ರಸ್ತೆಯನ್ನು ಸಂಧಿಸುವ ಜಾಗದಲ್ಲಿ ಮೊನ್ನೆ ನಿಧಾನವಾಗಿ ನಡೆದು ಹೋಗುತ್ತಿದ್ದೆ. ಹುಡುಗನೊಬ್ಬನ ಬೆರಳಿಗೆ ಬೆರಳು ಬೆಸೆದಿದ್ದ ಚೆಂದುಳ್ಳಿ ಚೆಲುವೆಯ ಮಧ್ಯದ ಬೆರಳಿನಿಂದ ಒಕ್ಕಣ್ಣಿನ ಬೆಕ್ಕು ಇಣುಕಿದಂತೆ ಆಯಿತು.

‘ಅಯ್ಯಯ್ಯೋ ಇದೇನಿದು’ ಎಂದು ದಿಟ್ಟಿಸಿ ನೋಡಿದೆ. ಕಣ್ಣಿನ ಲೆನ್ಸ್‌ ಸರಿಯಾಗಿ ಫೋಕಸ್‌ ಆದ ನಂತರ ಅದು ‘ಮರಿ ಲೂ’ ವಿನ್ಯಾಸದ ಉಂಗುರ ಎಂದು ಅರ್ಥವಾಯಿತು.ಆಮೇಲೆ ನಿಧಾನವಾಗಿ ಇನ್ನೊಂದಿಷ್ಟು ಯುವತಿರ ಕೈ ಬೆರಳುಗಳನ್ನು ಗಮನಿಸಿದೆ. ಕೆಲವರ ಕೈಲಿ ನಾಯಿ, ಆಮೆ, ಜಿಂಕೆಗಳೂ ಕಾಣಿಸಿದವು. ‘ಮರಿ ಲೂ’ ಉಂಗುರ ಈಗ ಯುವತಿಯರ ಪಾಲಿಗೆ ನೆಚ್ಚಿನ ಆಭರಣ ಎನಿಸಿದೆ ಎನ್ನಲು ಇಷ್ಟು ಪುರಾವೆ ಸಾಕು ಎನಿಸುತ್ತೆ.

ನಮ್ಮ ಪ್ರಾಣಿಪ್ರಿಯ ಮನಸ್ಥಿತಿಯನ್ನು ಬಿಂಬಿಸಲು, ಈ ಜಗತ್ತು ಮನುಷ್ಯರಿಗಷ್ಟೇ ಸೇರಿದ್ದಲ್ಲ ಎಂಬ ಸತ್ಯವನ್ನು ಎಲ್ಲರಿಗೂ ಮನಗಾಣಿಸಲು, ನಾನು ಫ್ಯಾಷನ್ ವಿಚಾರದಲ್ಲಿ ಸದಾ ಅಪ್‌ಡೇಟ್ ಆಗಿರುವೆ ಎಂಬ ಹೆಮ್ಮೆಯನ್ನು ಸಾರಿ ಹೇಳಲು ಮರಿ ಲೂ ಆಭರಣ ದೊಡ್ಡವರ ಎನಿಸಿದೆ.

ಈ ಆಭರಣ ವಿನ್ಯಾಸ ಮೊದಮೊದಲು ಬ್ಯಾಂಕಾಕ್‌ನಲ್ಲಿ ಜನಪ್ರಿಯವಾಗಿತ್ತು. ಕಾಡುಪಾಪ, ಜಿಂಕೆ, ಕೊಕ್ಕರೆ, ಸಿಟ್ಟು ಮಾಡಿಕೊಂಡ ಬೆಕ್ಕಿನ ಚಿತ್ತಾರಗಳನ್ನು ಅಲ್ಲಿ ಉಂಗುರವಾಗಿಸಿದ್ದಾರೆ. ಈ ಉಂಗುರಗಳನ್ನು ನೀವು ಎಲ್ಲ ಐದೂ ಬೆರಳಿಗೂ ಒಮ್ಮೆಲೆ ಧರಿಸಬಹುದು ಅಥವಾ ಪ್ರತ್ಯೇಕವಾಗಿ ಒಂದೊಂದು ಬೆರಳಿಗೆ ಒಂದೊಂದು ಹಾಕಿಕೊಳ್ಳಬಹುದು.

ಬಹುತೇಕ ಆಭರಣಗಳು ಸುಮಾರು 20 ಮಿ.ಮೀ. ಉದ್ದ ಹಾಗೂ ಅಷ್ಟೇ ಅಗಲ ಇವೆ. ಈಚೆಗೆ ಅಳಿಲು, ಹೆಸರಕತ್ತೆ, ಬೆಳ್ಳಕ್ಕಿ, ಮೊಲ, ಆಮೆಗಳ ಉಂಗುರಗಳೂ ಸಿಗುತ್ತಿವೆ. ಮುದ್ದಾಗಿ ಮತ್ತು ಮೊದ್ದಾಗಿ ಕಾಣುವ ಪ್ರಾಣಿಗಳ ಮುಖ ಇರುವ ಈ ಉಂಗುರಗಳು ಧರಿಸಿದರ ವ್ಯಕ್ತಿತ್ವವನ್ನೂ ಸಾರಿ ಹೇಳುತ್ತವೆ.

ಪ್ರಾಣಿಗಳ ಚಿತ್ರವಿರುವ ಉಂಗುರಗಳು ಮತ್ತು ಪದಕಗಳು ಮ್ಯಾಟ್ ಹಾಗೂ ಗ್ಲಾಸಿ ಫಿನಿಶಿಂಗ್‌ನಲ್ಲಿ ಲಭ್ಯ. ಆಭರಣಗಳ ತಯಾರಿಗೆ ಕಂಚು, ಹಿತ್ತಾಳೆ ಮತ್ತು ಪಿಂಗಾಣಿ ಬಳಕೆಯಾಗಿದೆ. ನಯವಾಗಿರುವ ಈ ಆಭರಣಗಳು ಹೆಚ್ಚು ತೂಕವೂ ಇಲ್ಲ.

ಕೆಲ ನಿರ್ದಿಷ್ಟ ವಿನ್ಯಾಸದ ಉಂಗುರ, ಕಿವಿಯೋಲೆ, ನೆಕ್ಲೆಸ್ ಮತ್ತು ಪದಕಗಳಿಗೆ ಪ್ಲಾಟಿನಮ್ ಮತ್ತು ಚಿನ್ನದ ಲೇಪನವೂ ಇದೆ. ಬಹುತೇಕ ಆಭರಣಗಳು ಅಚ್ಚಿನಿಂದ ಬಂದಿಲ್ಲ.

ಬದಲಿಗೆ ಕುಶಲ ಕಲೆ ಪಳಗಿಸಿಕೊಂಡ ಕೈಗಳೇ ತಯಾರಿಸಿವೆ.  ಎಲ್ಲ ವಯಸ್ಸಿನ ಮಹಿಳೆಯರಿಗೂ ಒಪ್ಪುತ್ತವೆಯಾದರೂ, ಬೆಂಗಳೂರಿನಲ್ಲಿ ಹರೆಯದ ಹುಡುಗಿಯರೇ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಧರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT