ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಂವೇದನೆಯ ನಾಟಕ ‘ಅನಾಹತ’

ರಂಗಭೂಮಿ
Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕಾಲಘಟ್ಟ ಯಾವುದೇ ಆಗಿರಲಿ ಮಹಿಳೆಯರ ಶೋಷಣೆಗೆ ಕೊನೆಮೊದಲಿಲ್ಲ. ಅವರ ಬದುಕು ಮತ್ತು ಭಾವನೆಗಳಿಗೆ ಬೆಲೆಯಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಮೊದಲೇ ಇಲ್ಲ...  ಈ ಅಂಶಗಳನ್ನು ಸಾಬೀತುಪಡಿಸುವಂತಹ ಪೌರಾಣಿಕ ಪಾತ್ರಗಳ ಆಧುನಿಕ ನಾಟಕ ‘ಅನಾಹತ’.

ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯದಿಂದ ಆಯ್ದ ಐದು ಮಹಿಳಾ ಪಾತ್ರಗಳನ್ನು ಮುಖಾಮುಖಿಯಾಗಿಸಿ ಮಹಿಳೆಯರ ಸಂಕಷ್ಟಗಳನ್ನು ಅನಾವರಣಗೊಳಿಸುವ ಈ  ನಾಟಕವು ಮಹಿಳಾ ಸಂವೇದನೆಯನ್ನು ಕೇಂದ್ರವಾಗಿಟ್ಟುಕೊಂಡು ಪುರುಷರ ಸ್ವಾರ್ಥವನ್ನು ಪ್ರಶ್ನಿಸುತ್ತದೆ.

ಬೆಂಗಳೂರು ಲಲಿತಕಲಾ ಪರಿಷತ್ತು ಇತ್ತೀಚೆಗೆ ಜಯನಗರದ ಡಾ.ಎಚ್.ಎನ್. ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ.ವಿ. ಭಾರತಿಯವರು ರಚಿಸಿದ ‘ಅನಾಹತ’ ನಾಟಕವನ್ನು ‘ಥೇಮಾ’ ತಂಡದ ಕಲಾವಿದರು ಎಸ್.ವಿ.ಸುಷ್ಮಾ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು.

ಊರ್ಮಿಳೆ, ಅಹಲ್ಯೆ, ಗಾಂಧಾರಿ, ಮಂಡೋದರಿ ಹಾಗೂ ರಾಧೆ– ಈ ಐದೂ ಪೌರಾಣಿಕ ಪಾತ್ರಗಳು ಸ್ವರ್ಗದಲ್ಲಿ ಜೊತೆ ಸೇರಿ ಭೂಲೋಕದಲ್ಲಿ ಬದುಕಿದ್ದಾಗ ನಂಬಿದ ಪುರುಷರಿಂದಾದ ವಿಶ್ವಾಸದ್ರೋಹಗಳ ಕುರಿತು ಪರಸ್ಪರ ಸಂವಾದಿಸುವುದೇ ಅನಾಹತ ನಾಟಕದ ಒಂದೆಳೆ ಸಾರಾಂಶ.

ಈ ಪಾತ್ರಗಳು ಕಳೆದುಕೊಂಡ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿ ತಳಮಳಿಸುತ್ತವೆ. ನಾಟಕದ ಪ್ರಮುಖ ಪಾತ್ರಗಳು ತಾವು ಮೆಚ್ಚಿದ ಸಂಗಾತಿಗಳು ಸ್ವಾರ್ಥಕಾರಣಕ್ಕೆ ತಮ್ಮನ್ನು ಬಿಟ್ಟು ಹೋದ ಅಗಲಿಕೆಯ ಸಂಕಟದಲ್ಲಿ ತಲ್ಲಣಿಸುತ್ತವೆ.

ಈ ನಾಟಕವನ್ನು ರಚಿಸಿದ್ದು ಹಾಗೂ ನಿರ್ದೇಶಿಸಿದ್ದು ಮಹಿಳೆಯರೇ ಆಗಿದ್ದರಿಂದ ಇಡೀ ನಾಟಕ ಮಹಿಳೆಯರ ದೃಷ್ಟಿಕೋನದಲ್ಲೇ ಸಾಗುತ್ತದೆ. ಎಲ್ಲಾ ಪೌರಾಣಿಕ ಪ್ರಮುಖ ಪಾತ್ರಗಳಿಗೆ ಸಮರ್ಥನೆಗಳು ಹಾಗೂ ಆರೋಪಗಳೂ ಇವೆ. ಯಾಕೆಂದರೆ ಎಲ್ಲವೂ ಊಹಾತರ್ಕಗಳು. ಅವರವರ ಆಲೋಚನಾ ಕ್ರಮದ ದೃಷ್ಟಿಕೋನದಂತೆ ಪ್ರತಿ ಪಾತ್ರಗಳನ್ನು ವಿಶ್ಲೇಷಿಸಬಹುದಾಗಿದೆ.

ನಾಟಕಕಾರ್ತಿ ಹಾಗೂ ನಿರ್ದೇಶಕಿಯ ದೃಷ್ಟಿಕೋನದಲ್ಲಿ ನೊಂದ ಪರಿತ್ಯಕ್ತ ಪೌರಾಣಿಕ ಮಹಿಳಾ ಪಾತ್ರಗಳು ಎಲ್ಲಾ ಕಾಲಘಟ್ಟದ ಮಹಿಳಾ ಸಂವೇದನೆಯ ಸಂಕೇತವಾಗಿ ನಾಟಕದ ಉದ್ದಕ್ಕೂ ರೂಪ ಪಡೆಯುತ್ತವೆ.

ಕಾಲೈಕ್ಯ, ಸ್ಥಳೈಕ್ಯಗಳಿಲ್ಲದ, ಅಸಲಿಗೆ ಕಥೆಯೇ ಇಲ್ಲದ, ಸಂಭಾಷಣಾ ಪ್ರಧಾನವಾದ ಈ ರಂಗಪಠ್ಯವನ್ನು ರಂಗಮಾಧ್ಯಮಕ್ಕೆ ಅಳವಡಿಸುವುದು ಸವಾಲಿನ ಕೆಲಸ. ಯಾವುದೋ ಕಾಲದ, ಒಂದಕ್ಕೊಂದು ಸಂಬಂಧವೇ ಇಲ್ಲದ ಪಾತ್ರಗಳನ್ನು ಒಂದು ಕಡೆ ಸೇರಿಸಿ ನಾಟಕವಾಗಿ ಕಟ್ಟಿಕೊಡುವುದು ಸುಲಭ ಸಾಧ್ಯವಲ್ಲ.

ಆದರೆ, ಅನುಭವಿ ನಟಿ ಹಾಗೂ ನಿರ್ದೇಶಕಿ ಸುಷ್ಮಾರವರು ತಮ್ಮೆಲ್ಲಾ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಸೂಕ್ಷ್ಮ ಸಂವೇದನೆಯ ‘ಅನಾಹತ’ವನ್ನು ದೃಶ್ಯಕಾವ್ಯವಾಗಿ ಕಟ್ಟಿಕೊಡುವ ದಿಟ್ಟ ಪ್ರಯತ್ನವನ್ನು ಮಾಡಿದ್ದಾರೆ.

ಹಾಡು, ಸಂಗೀತ, ನೃತ್ಯ, ಅಭಿನಯ, ಪರಿಕರಗಳನ್ನು ಒಂದಕ್ಕೊಂದು ಪೂರಕವಾಗಿ ಸಂಯೋಜಿಸಿ ಇಡೀ ನಾಟಕವನ್ನು ನೋಡುಗರ ಕಣ್ಮನ ಸೆಳೆಯುವಂತೆ ಅನಾವರಣಗೊಳಿಸಿದ್ದಾರೆ. ಈ ನಾಟಕದಲ್ಲಿ ಬಳಸಿದ ರಂಗತಂತ್ರಗಳು ಬಲು ವಿಶಿಷ್ಟವಾಗಿವೆ.

ಲೈವ್ ಮತ್ತು ಪ್ಲಾಶ್‌ಗಳನ್ನು ಬ್ಲೆಂಡ್ ಮಾಡಿದ ರೀತಿ ನಿರ್ದೇಶಕಿಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಒಂದು ವೈಚಾರಿಕ ಪ್ರಜ್ಞೆಯ ಸೂಕ್ಮ ಸಂವೇದಿ ನಾಟಕವನ್ನು ರಂಗತಂತ್ರ ಸಂಯೋಜನೆಗಳ ಮೂಲಕ ಅದು  ಹೇಗೆ ಜನಸಾಮಾನ್ಯರಿಗೂ ತಲುಪಿಸಬಹುದು ಎನ್ನುವುದಕ್ಕೆ ‘ಅನಾಹತ’ ನಾಟಕ ಮಾದರಿಯಾಗಿದೆ.

ನಾಟಕದ ಇನ್ನೊಂದು ಪ್ರಮುಖ ಹೈಲೈಟ್ ಎಂದರೆ ಅರ್ಥಪೂರ್ಣ ಹಾಡುಗಳು. ಬಿ.ವಿ.ಭಾರತಿ, ಸಂಧ್ಯಾರಾಣಿ ಹಾಗೂ ರೇಣುಕಾ ನಿಡಗುಂದಿಯವರು ಬರೆದ ಹಾಡುಗಳಿಗೆ ಎಂ.ಡಿ.ಪಲ್ಲವಿ ಸಂಗೀತ ಸಂಯೋಜನೆ ಮಾಡಿ, ಹಾಡಿದ್ದಾರೆ. ಆದರೆ ಯಾಕೋ ಈ ಹಾಡುಗಳು ರಂಗಗೀತೆಗಳಾಗಿ ಮೂಡಿಬರದೇ ಭಾವಗೀತೆಗಳಂತೆಯೇ ಕೇಳಿಸುತ್ತವೆ.

ಈ ಹಾಡು ಸಂಗೀತಕ್ಕೆ ಪೂರಕವಾಗಿ ಕ್ಲಾಸಿಕಲ್ ನೃತ್ಯ ಸಂಯೋಜನೆಯನ್ನು ಎಸ್.ವಿ.ಸುಷ್ಮಾರವರೇ ಮಾಡಿದ್ದು ನೃತ್ಯ ರೂಪಕ ರಂಗದ ಮೇಲೆ ಅನಾವರಣಗೊಂಡಿದೆ. ರಂಗಮಾಧ್ಯಮದ ಬಹುತೇಕ ಕಲಾಸಾಧ್ಯತೆಗಳನ್ನು ಬಳಸಿಕೊಂಡಿದ್ದರಿಂದ ನಾಟಕ ಆಕರ್ಷಕವಾಗಿ ಮೂಡಿಬಂದಿದೆ.

ನಿರ್ದೇಶಕಿ ಸುಷ್ಮಾರವರೇ ಅಹಲ್ಯೆಯ ಪಾತ್ರದಲ್ಲಿ ನಟಿಸಿದ್ದು. ಅವರ ಭಾವತೀವ್ರತೆಯ ಅಭಿನಯಕ್ಕೆ ಪ್ರೇಕ್ಷಕರ ಚಪ್ಪಾಳೆಯ ಸ್ಪಂದನವೇ ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಮಂಡೋದರಿಯಾಗಿ ಛಾಯಾ ಭಗವತಿ, ಗಾಂಧಾರಿಯಗಿ ಡಾ.ಬೃಂದಾ, ಊರ್ಮಿಳೆಯಾಗಿ ಡಾ.ಮಂಗಳಾ ಹಾಗೂ ರಾಧೆಯಾಗಿ ನಿತ್ಯಾ ಜೋಷಿ– ಈ ಕಲಾವಿದೆಯರೆಲ್ಲಾ ತಮ್ಮ ಪಾತ್ರಗಳಿಗೆ ಜೀವದುಂಬಿ ಅಭಿನಯಿಸಲು ಪ್ರಯತ್ನಿಸಿದ್ದಾರೆ.

ಮಹಿಳಾ ಕಲಾವಿದೆಯರನ್ನು ಪಾತ್ರವಾಗಿಸಲು ಶ್ರಮವಹಿಸಿದ ನಿರ್ದೇಶಕಿ ಅದ್ಯಾಕೋ ಪುರುಷ ಪಾತ್ರಗಳ ಅಭಿನಯಕ್ಕೆ ಅಷ್ಟೊಂದು ಗಮನ ಕೊಟ್ಟಿಲ್ಲ ಎನಿಸುತ್ತದೆ. ಆಂಗಿಕ ಹಾಗೂ ವಾಚಿಕದಷ್ಟೇ ಸಾತ್ವಿಕಾಭಿನಯದಲ್ಲೂ ತಮ್ಮ ಅಭಿನಯ ಸಾಮರ್ಥ್ಯವನ್ನು ಕಲಾವಿದರು ತೋರಬೇಕಿದೆ.

ವಿಭಿನ್ನ ಕಾಲಘಟ್ಟದ ಪಾತ್ರಗಳು ಒಂದೆಡೆ ಸೇರಿ ಮಹಿಳಾ ಜಗತ್ತಿನ ತಲ್ಲಣಗಳಿಗೆ ಧ್ವನಿಯಾಗುವ ಪ್ರಯತ್ನವನ್ನು ‘ಅನಾಹತ’ದಲ್ಲಿ ಮಾಡುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಮಹಿಳೆಯರ ಮೇಲೆ ನಡೆಯುವ ಯಜಮಾನಿಕೆಯನ್ನು ಮತ್ತು ಪುರುಷರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ನಂಬಿದ ಹೆಣ್ಣನ್ನು ನಿರ್ಲಕ್ಷಿಸುವುದನ್ನು ಈ ನಾಟಕ ಪ್ರಶ್ನಿಸುತ್ತದೆ.

‘ಎಲ್ಲದಕ್ಕಿಂತಲೂ ಬದುಕು ಮುಖ್ಯ’ ಎಂದು ಸಾರುವ ಅಹಲ್ಯೆಯ ಕೊನೆಯ ಮಾತುಗಳು ನೊಂದ ಮಹಿಳಾ ಸಮುದಾಯಕ್ಕೆ  ಬದುಕಲು ಪ್ರೇರಣೆ ಕೊಡುವಂತಿದೆ. ಎಲ್ಲ ಸಂಕಟಗಳನ್ನು ಸವಾಲಾಗಿ ತೆಗೆದುಕೊಂಡು ಬದುಕುವ ಛಲವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎನ್ನುವ ಈ ನಾಟಕದ ಆಶಯ ಸಾರ್ವಕಾಲಿಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT