ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಾರೆವ್ವನ ಅರಮನೆಯಲ್ಲಿ ಸ್ತ್ರೀ ತಲ್ಲಣದ ಅನಾವರಣ

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಲಿಪಶುವಾಗುವ ಮಹಿಳೆಯ ತಳಮಳಗಳನ್ನು ತೋರಿಸುವ ‘ಕಂಚುಕಿ’ ನಾಟಕವು ಮಹಿಳೆ ಸಿಡಿದೆದ್ದು ಪ್ರತೀಕಾರಕ್ಕೆ ನಿಂತರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ‘ನಾಟಕ ಬೆಂಗಳೂರು’ ಈಚೆಗೆ ಆಯೋಜಿಸಿದ ನಾಟಕೋತ್ಸವದಲ್ಲಿ  ‘ನಟರಂಗ’ದ ಕಲಾವಿದರು ‘ಕಂಚುಕಿ’ ನಾಟಕವನ್ನು ಪ್ರದರ್ಶಿಸಿದರು.

ಡಾ.ಚಂದ್ರಶೇಖರ ಕಂಬಾರರು ಬರೆದ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು  ದಿವ್ಯಾ ಕಾರಂತರು ‘ಕಂಚುಕಿ’ ಹೆಸರಲ್ಲಿ ರಂಗ ರೂಪಾಂತರಗೊಳಿಸಿ ನಿರ್ದೇಶಿಸಿದ್ದಾರೆ.

ಊಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೇಗೆಲ್ಲಾ ಶೋಷಣೆಗೆ ಒಳಗಾಗುತ್ತಾಳೆ ಎನ್ನುವುದನ್ನು ಈ ನಾಟಕ ಸೊಗಸಾಗಿ ಹೇಳುತ್ತದೆ. ಅಪ್ಪ ಆಸ್ತಿಗಾಗಿ ಮಗಳನ್ನೇ ದಾಳವಾಗಿ ಬಳಿಸಿದರೆ, ಗಂಡ ತನ್ನ ಪ್ರತಿಷ್ಠೆಗಾಗಿ ಮದುವೆಯಾಗಿ ಹೆಂಡತಿಯ ಬೇಡಿಕೆಗೆ ಸ್ಪಂದಿಸದೇ ಕಡೆಗಣಿಸುತ್ತಾನೆ.

ಮನೆಯ ಆಳು ಮಾರಿಯಾ ಸಹ ಆಕೆಯ ಮೇಲೆ ದೌರ್ಜನ್ಯ ಮಾಡಿ ಆಕೆಯ ಅಪ್ಪನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಹೀಗೆ  ಪಿತ, ಪತಿ ಹಾಗೂ ಆಳು ಈ ಮೂವರ ವಿಭಿನ್ನ ರೀತಿಯ ದಮನಕ್ಕೆ ತುತ್ತಾಗಿ ಸಿಂಗಾರೆವ್ವ ತತ್ತರಿಸಿ ಹೋಗುತ್ತಾಳೆ. ಸಿಂಗಾರೆವ್ವ ಕೊನೆಗೆ ಆಳುಮಗ ಮಾರಿಯಾನನ್ನು ಬಳಸಿಕೊಂಡು ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ.

ಆಕೆಗೆ ಮಾನಸಿಕ ದಮನದಿಂದ ಪಾರಾಗುವ ಏಕೈಕ ಮಾರ್ಗವಾಗಿ ಮಾರಿಯಾ ಗೋಚರಿಸುತ್ತಾನೆ. ಅರಮನೆಗೆ ವಾರಸುದಾರನನ್ನು ಕೊಡುವುದು, ದೈಹಿಕ ಬಯಕೆ ತೀರಿಸಿಕೊಳ್ಳುವುದು ಹಾಗೂ ದೌರ್ಬಲ್ಯ ಗೊತ್ತಿದ್ದೂ ವಂಚಿಸಿದ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳುವುದು ಸಿಂಗಾರೆವ್ವನ ನಿರ್ಧಾರವಾಗಿತ್ತು.

ಅದೆಲ್ಲದರಲ್ಲೂ ಯಶಸ್ವಿಯೂ ಆದ ಆಕೆ ಯಾಕೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಗಂಡನನ್ನು ಕೊಲೆ ಮಾಡಿದೆನೆಂದು ಒಪ್ಪಿಕೊಂಡು ಜೈಲಿಗೆ ಹೋದಳು ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ. 

ನೈತಿಕ–ಅನೈತಿಕತೆಗಳನ್ನು ಮೀರಿ ಸಿಂಗಾರೆವ್ವನ ವ್ಯಕ್ತಿತ್ವವನ್ನು ಕಂಬಾರರು ಬಲು ಸಂಕೀರ್ಣವಾಗಿ ಕಟ್ಟಿಕೊಟ್ಟಿದ್ದಾರೆ.  ಪುರುಷ ಪ್ರಧಾನ ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದೆದ್ದ ಮಹಿಳೆಯೆಂದು ಸಿಂಗಾರೆವ್ವನನ್ನು ಪರಿಗಣಿಸುವಷ್ಟರಲ್ಲಿ ಆಕೆ ಪೊಲೀಸರಿಗೆ ಶರಣಾಗಿದ್ದು ಪಲಾಯನವಾದ ಎನಿಸುತ್ತದೆ.

ತನ್ನ ಅಹಮಿಕೆಗೆ ಏಟು ಬಿದ್ದಾಗ ಸಹಿಸದೇ ತಾನೇ ತಾನಾಗಿ ಸತ್ತ ದೇಸಾಯಿಯ ಸಾವನ್ನು ಸಿಂಗಾರೆವ್ವ ಒಪ್ಪಿಕೊಂಡು ಏನು ಸಾಧಿಸಿದಳು? ಅರಮನೆ ಅನಾಥವಾಯಿತು. ಹಾದರದ ಜೊತೆಗೆ ಕೊಲೆಪಾತಕಿ ಎನ್ನುವ ಇಲ್ಲದ ಅಪವಾದ ತಲೆಗೇರಿತು. ಇನ್ನೂ ಹುಟ್ಟದ ಮಗುವೂ ತಾಯಿಯ ಜೊತೆಗೆ ಜೈಲು ಪಾಲಾಯಿತು. ಒಂದು ಅನರ್ಥದ ವಿರುದ್ದ ಪ್ರತಿಭಟಿಸಲು ಹೋಗಿ ಇನ್ನೊಂದಿಷ್ಟು ಅನರ್ಥಗಳನ್ನು ಆಹ್ವಾನಿಸಿದಂತಾಯಿತು.

ಹೆಣ್ಣು ಅದೆಷ್ಟೇ ಧೈರ್ಯ ತೋರಿದರೂ ಮಾನಸಿಕವಾಗಿ ದುರ್ಬಲಳೇ ಎನ್ನುವುದನ್ನು ಸಿಂಗಾರೆವ್ವನ ಪ್ರಕರಣ ಸಾಬೀತುಪಡಿಸಿದಂತಾಗಿದೆ. ಮಹಿಳೆ ರೆಬೆಲ್ ಆದಷ್ಟೂ ದುರಂತಕ್ಕೆ ಒಳಗಾಗುತ್ತಾಳೆಂಬ ಸನಾತನವಾದಿಗಳ ಥಿಯರಿ ಇಲ್ಲಿಯೂ ಪ್ರತಿಪಾದನೆಯಾಗುತ್ತದೆ. ರಂಗರೂಪದಲ್ಲಿಯಾದರೂ ಈ ಮಿತಿಯನ್ನು ಮೀರಿಕೊಳ್ಳಲು ಯತ್ನಿಸಬಹುದಿತ್ತು ಎನಿಸುತ್ತೆ. ಅರಸೊತ್ತಿಗೆಯ ಹುಸಿ ಪ್ರತಿಷ್ಠೆಯನ್ನು ಒಡೆದು ಹಾಕಿದ ಸಿಂಗಾರೆವ್ವ ಅರಮನೆಯಲ್ಲೇ ಇದ್ದು ವಾರಸುದಾರ ಮಗುವನ್ನು ಬೆಳೆಸುವ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬ ಭಾವನೆ ಪ್ರೇಕ್ಷಕರ ಮನದಲ್ಲಿ ಮೂಡಿ ಮರೆಯಾಗುತ್ತದೆ.

ಆರಂಭದ ಚಿಮನಾ ನೃತ್ಯದ ದೃಶ್ಯ ಅಸಂಬದ್ಧವಾಗಿಯೂ ಮೂಡಿ ಬಂದಿದೆ. ಆ ದೃಶ್ಯವನ್ನು ತೆಗೆದಿದ್ದರೂ ನಾಟಕಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ನಂತರದ ದೃಶ್ಯಗಳು ಶ್ರೀಮಂತಿಕೆಯಿಂದ ಕೂಡಿವೆ. ದೇಸಾಯಿಯ ಅರಮನೆಯಂತೆ ಅದ್ದೂರಿ ರಿಯಾಲಿಸ್ಟಿಕ್ ಮಾದರಿಯ ಸೆಟ್ ಹಾಕಿ ನಾಟಕಕ್ಕೆ ಭವ್ಯತೆಯನ್ನು ತಂದುಕೊಟ್ಟಿದ್ದಾರೆ.

ಕಲಾವಿದರು ಪಾತ್ರೋಚಿತವಾಗಿ ಪೈಪೋಟಿಯ ಮೇಲೆ ನಟಿಸಿದ್ದಾರೆ. ಸಿಂಗಾರೆವ್ವಳಾಗಿ ನಂದಿನಿ ಮೂರ್ತಿ ಅವರ ಭಾವಪೂರ್ಣ ಅಭಿನಯ ನೋಡುಗರನ್ನು ಕಾಡುವಂತಿದೆ. ಸಿಂಗಾರೆವ್ವನನ್ನು ಮೀರಿಸುವಂತಹ ನಟನೆಯನ್ನು ಶೀನಿಂಗಿ ಪಾತ್ರದ ಸವಿತಾ ಕೊಟ್ಟಿದ್ದಾರೆ. ಸರಗಮ್ ದೇಸಾಯಿ ಪಾತ್ರದ ಪಡಿಯಚ್ಚೇನೋ ಎನ್ನುವ ಹಾಗೆ ಅಂಜನ್ ಭಾರದ್ವಾಜ್ ನಟಿಸಿದ್ದು, ಮಾರಿಯಾ ಪಾತ್ರಕ್ಕೆ ಕೌಸ್ತುಭ ಜಯಕುಮಾರ್ ಜೀವ ತುಂಬಿದ್ದಾರೆ.

ದೃಶ್ಯದ ಅಗತ್ಯಕ್ಕೆ ತಕ್ಕಂತೆ ಮೂಡಿ ಬಂದ ಭಾವಗೀತೆಗಳು ಹಾಗೂ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ಬೆಳವಾಡಿ ಅವರ ಬೆಳಕಿನ ವಿನ್ಯಾಸ ನೋಡುಗರಲ್ಲಿ ಮೂಡ್ ಸೃಷ್ಟಿಸುವಲ್ಲಿ ಸಫಲವಾಗಿದೆ. ವಿಜಯ್ ಬೆನಚ ಅವರ ಪ್ರಸಾಧನವೂ ಸಹ ಪ್ರತಿ ವ್ಯಕ್ತಿಗಳನ್ನು ಸೂಕ್ತ ಪಾತ್ರವಾಗಿಸುವಲ್ಲಿ ಸಹಕರಿಸಿದೆ.

ಒಟ್ಟಾರೆಯಾಗಿ ಇಡೀ ನಾಟಕ ಎಲ್ಲಾ ವಿಭಾಗಗಳಲ್ಲಿ ಸಶಕ್ತವಾಗಿ ಮೂಡಿ ಬಂದಿದೆ. ನಾಟಕದಾದ್ಯಂತ ನಿರ್ದೇಶಕಿಯ ಶ್ರಮ ಎದ್ದುಕಾಣುತ್ತದೆ. ಈ ನಾಟಕದ ಮೂಲಕ ಕನ್ನಡ ರಂಗಭೂಮಿಗೆ ಕ್ರಿಯಾಶೀಲ ಮಹಿಳಾ ನಿರ್ದೇಶಕಿಯೊಬ್ಬರು ದಕ್ಕಿದಂತಾಗಿದೆ.

ಒಂದು ಕಾಲದಲ್ಲಿ ಕ್ರಿಯಾಶೀಲ ರಂಗತಂಡವಾಗಿದ್ದ ‘ನಟರಂಗ’ವು ಬರುಬರುತ್ತಾ ಬಹುತೇಕ ನಿಷ್ಕ್ರಿಯವಾಗಿತ್ತು. ಈಗ ಮತ್ತೆ ಈ ಹೊಸ ಪ್ರೊಡಕ್ಷನ್ ಮೂಲಕ ನಾಟಕ ನಿರ್ಮಿತಿಗೆ ಮುಂದಾಗಿರುವುದು ಸಂತಸದ ಸಂಗತಿ. 

ನಾಟಕ:  ‘ಕಂಚುಕಿ’
ತಂಡ: ನಟರಂಗ
ಮೂಲ: ಸಿಂಗಾರೆವ್ವ ಮತ್ತು ಅರಮನೆ
ನಿರ್ದೇಶನ: ದಿವ್ಯಾ ಕಾರಂತ
ರಚನೆ: ಡಾ.ಚಂದ್ರಶೇಖರ ಕಂಬಾರ
ತಂತ್ರಜ್ಞರು:ಪ್ರದೀಪ್‌ ಬೆಳವಾಡಿ (ಬೆಳಕು),
ವಿನಯ್ ಬೆನಚ (ಪ್ರಸಾಧನ).
ಪಾತ್ರಧಾರಿಗಳು:ನಂದಿನಿ ಮೂರ್ತಿ (ಸಿಂಗಾರೆವ್ವ),   
ಸವಿತಾ (ಶೀನಿಂಗಿ), ಅಂಜನ್ ಭಾರದ್ವಾಜ್ (ಸರಗಮ್ ದೇಸಾಯಿ), ಕೌಸ್ತುಭ ಜಯಕುಮಾರ್ (ಮಾರಿಯಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT