ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹದ ನೆನಪು

ಕ್ಯಾಂಪಸ್‌ ಕಲರವ
Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಲೇಜು ಅಂದ್ರೆ ಓದು ಮಾತ್ರವಲ್ಲ. ಪಾಠದ ಜತೆಗೆ ಸಾಕಷ್ಟು ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)  ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಇದು ನನ್ನ ಅನುಭವಕ್ಕೆ ಬಂತು. ನಮ್ಮ ಕಾಲೇಜಿನಲ್ಲಿದ್ದ ಎನ್‌ಎಸ್‌ಎಸ್‌ ಘಟಕದ ಸ್ವಯಂ ಸೇವಕರಾಗಿದ್ದವರಿಗೆ ಅಪಾರ ಸಂಖ್ಯೆಯ ಸ್ನೇಹಿತರು. ಎಷ್ಟೋ ಜನರಿಗೆ ಎನ್‌ಎಸ್‌ಎಸ್‌ ನಮ್ಮ ವಿಭಾಗದ ವಿದ್ಯಾರ್ಥಿಗಳ ಜತೆಗೆ ಮಾತ್ರವಲ್ಲದೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳ ಜತೆ ಸ್ನೇಹ ಮತ್ತು ಸ್ನೇಹದ ಆಚೆಯ ಸಂಬಂಧ ಹುಟ್ಟಲು ವೇದಿಕೆಯಾಗಿತ್ತು.

ಎನ್‌ಎಸ್‌ಎಸ್‌ನಲ್ಲಿ ಇದ್ದವರು ಸ್ನೇಹಿತರನ್ನು ಸಂಪಾದಿಸಿದ್ದೇ ಹೆಚ್ಚು. ಆದರೆ ಸ್ನೇಹದ ಆಚೆಗೂ ಸಂಬಂಧಗಳನ್ನು ವಿಸ್ತರಿಸಿದ ಕೆಲವರು   ಅನುಭವಿಸಿದ್ದು ಜಾಸ್ತಿ ಕಹಿಯನ್ನೇ. ದ್ವಿತೀಯ ವರ್ಷದ ಪದವಿಯ ಅಂತಿಮ ಪರೀಕ್ಷೆಯ ನಂತರ ಹಳ್ಳಿಯೊಂದರಲ್ಲಿ ನಡೆದಿದ್ದ ವಾರ್ಷಿಕ ಎನ್‌ಎಸ್‌ಎಸ್‌ ಶಿಬಿರದಲ್ಲಿ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡು ಎಲ್ಲಾ ತರಹದ ಕೆಲಸ, ಸ್ವಯಂ ಸೇವೆ, ಶ್ರಮದಾನ ಅಲ್ಲದೆ ಮೋಜು ಮಸ್ತಿಗಳನ್ನು ಮಾಡಿ 10 ದಿನಗಳ ಶಿಬಿರವನ್ನು ಯಶಸ್ವಿಯಾಗಿಸಿದ್ದೆವು.

ಶಿಬಿರ ಮತ್ತು ರಜೆ ಮುಗಿಸಿಕೊಂಡು ತೃತೀಯ ಪದವಿಗೆ ಬಂದಾಗ ನಮ್ಮ ಕ್ಲಾಸ್‌ನವರಲ್ಲದೆ ಎಲ್ಲಾ ಕ್ಲಾಸ್‌ಗಳ ಕೆಲವು ಹುಡುಗ–ಹುಡುಗಿಯರು ಸ್ನೇಹಿತರಾಗಿಬಿಟ್ಟಿದ್ದರು. ನಮ್ಮ ನಾಲ್ಕೈದು ಜನರ ಗುಂಪು ಮಧ್ಯಾಹ್ನ ಊಟ ಮಾಡಿ, ಕಾಲೇಜಿನಲ್ಲಿದ್ದ ಮೂರು ಫ್ಲೋರ್‌ಗಳ ಕಾರಿಡಾರಿನಲ್ಲಿ ಒಂದೊಂದು ಸುತ್ತು ಸುತ್ತಿ ಬರುವ ಅಭ್ಯಾಸವಿತ್ತು. ಇದು ನಮ್ಮ ಅಭ್ಯಾಸ ಮಾತ್ರವಲ್ಲದೆ ಅಂತಿಮ ಪದವಿಯ ಹೆಚ್ಚಿನ ಹುಡುಗರು ಊಟದ ಸಮಯದಲ್ಲಿ ಊಟ ಮಾಡಿದ ನಂತರ ಮಾಡುತ್ತಿದ್ದ ಕೆಲಸ. ಕೆಲವೊಮ್ಮೆ ದ್ವಿತೀಯ ಪದವಿ ತರಗತಿಯ ಹುಡುಗರು ಬರುತ್ತಿದ್ದರಾದರೂ ಸೀನಿಯರ್‌ಗಳ ಕ್ಲಾಸ್‌ಗಳ ಕಡೆ ಅವರು ಬರುತ್ತಿದ್ದುದು ಅಪರೂಪ.   

ಕಾಲೇಜಿನ ಕಾರಿಡಾರ್‌ ಸುತ್ತ ಹೆಚ್ಚಿನವರು ಮಧ್ಯಾಹ್ನ ಊಟದ ಸಮಯ ಆಗುವುದನ್ನೇ ಕಾಯುತ್ತಿದ್ದರು. ಯಾಕೆಂದರೆ, ಊಟದ ಸಮಯಕ್ಕೆ ಲೆಕ್ಚರ್‌ಗಳೆಲ್ಲಾ ತಮ್ಮದೇ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಆದ್ದರಿಂದ ನಮ್ಮ ರೌಂಡ್ಸ್‌ಗೆ ಊಟದ ಸಮಯದ ಹೊರತಾಗಿ ಪ್ರಶಸ್ತವಾದ ಸಮಯ ಮತ್ತೊಂದಿರಲಿಲ್ಲ. ವಾರ್ಷಿಕ ಶಿಬಿರದಲ್ಲಿ ಬಿಎಸ್ಸಿಯ ಒಬ್ಬಳು ಹುಡುಗಿ ಮತ್ತವಳ ಗೆಳತಿಯರು ನನಗೆ ಮತ್ತು ನನ್ನ ಗೆಳೆಯರಿಗೆ ಆತ್ಮೀಯರಾಗಿಬಿಟ್ಟಿದ್ದರು. ಎಷ್ಟೋ ಹುಡುಗರು ಅವಳನ್ನು ಮಾತನಾಡಿಸಲು ಪ್ರಯತ್ನಿಸಿದ್ದರೂ ಅದರಲ್ಲಿ ಸುಲಭಕ್ಕೆ ಸಫಲರಾಗಿರಲಿಲ್ಲ.

ಆ ಹುಡುಗಿ ನಮ್ಮ ನಾಲ್ಕೈದು ಗೆಳೆಯರ ಪೈಕಿ ನನ್ನೊಂದಿಗೆ ತುಸು ಹೆಚ್ಚು ಮಾತನಾಡುತ್ತಿದ್ದಳು. ಪ್ರತಿದಿನ ಮಧ್ಯಾಹ್ನದ ಸಮಯದಲ್ಲಿ ನಮ್ಮ ಊಟದ ನಂತರದ ರೌಂಡ್ಸ್ ವೇಳೆ ಅವಳ ‘ಹಾಯ್‌’ ಮತ್ತು ‘ಊಟ ಆಯಿತಾ’ ಎಂಬ ಮಾತುಗಳು ಸಿಗುತ್ತಿದ್ದದ್ದು ನನಗೆ ಮಾತ್ರ. ನನ್ನೊಂದಿಗಿದ್ದವರಿಗೆ ಸಿಗುತ್ತಿದ್ದುದು ಅವಳ ಮುಗುಳ್ನಗು ಅಷ್ಟೇ. ಹಾಯ್‌ನೊಂದಿಗೆ ಶುರುವಾದ ನಮ್ಮ ಮಾತು ಕತೆ ದಿನಕಳೆದಂತೆ ಸ್ಪಲ್ಪ ಹೊತ್ತು ನಿಂತು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುವಲ್ಲಿಗೆ ತಲುಪಿತ್ತು. ನನ್ನೊಂದಿಗೆ ಇರುತ್ತಿದ್ದವರು, ‘ಅದು ಯಾಕೆ ಅವಳು ನಿನ್ನಲ್ಲಿ ಮಾತ್ರ ಮಾತನಾಡುವುದು’ ಎಂದು ಕೇಳಿದರು. ಅದಕ್ಕೆ ಏನು ಹೇಳಬೇಕೆಂದು ತೋಚದೆ ಮೌನವಾಗಿದ್ದೆ.

ದಿನ ಕಳೆದಂತೆ ನನ್ನದೇ ತರಗತಿಯ ಒಂದಿಬ್ಬರು ತರಲೆ ಗೆಳೆಯರು ನಮ್ಮೊಂದಿಗೆ ಕಾರಿಡಾರ್‌ ಸುತ್ತಲು ಬರಲಾರಂಭಿಸಿದ್ದರು. ಒಮ್ಮೊಮ್ಮೆ ಅವರು ನಮ್ಮೊಂದಿಗೆ ಬರದಿದ್ದರೂ ಆ ಹುಡುಗಿ ಇರುವ ಫ್ಲೋರ್‌ನಲ್ಲಿಯೇ ಹೆಚ್ಚಾಗಿ ನಮಗೆ ಜತೆಯಾಗುತ್ತಿದ್ದರು. ಆ ಹುಡುಗಿ ನನ್ನ ಜೊತೆ ಮಾತನಾಡುವುದನ್ನು ನೋಡಿ ಅವರು ಅವಳಿಗೆ ತಮಾಷೆ ಮಾಡಲಾರಂಭಿಸಿದರು. ಅವರು ಮಾಡುತ್ತಿದ್ದ ತಮಾಷೆ ಅವಳ ಮನಸ್ಸನ್ನು ನೋಯಿಸಿತ್ತು ಎಂದು ತಿಳಿದದ್ದು ಅವಳು ನನ್ನ ಜತೆ ಮಾತು ಬಿಟ್ಟಾಗಲೇ. ತರಲೆ ಹುಡುಗರ ತಮಾಷೆ ನಮ್ಮ ಸ್ನೇಹಕ್ಕೆ ಕುಂದು ಉಂಟುಮಾಡಿತ್ತು.

ಯಾಕೋ ಈ ಹುಡುಗರ ತಮಾಷೆ ಅತಿಯಾಯಿತು ಎಂದೆಣಿಸಿ ಅವಳಿರುವ ಫ್ಲೋರ್‌ ಕಡೆಗೆ ಹೋಗುವುದೇ ಕಡಿಮೆ ಆಗಿತ್ತು. ಆ ತರಲೆ ಹುಡುಗರಿಗೆ ತಮಾಷೆ ಮಾಡಲು ಕುಮ್ಮಕ್ಕು ನೀಡಿದ್ದು ನನ್ನ ಆತ್ಮೀಯ ಗೆಳೆಯನೇ. ಅವನು ತಮಾಷೆ ಮಾಡಲು ಪ್ರಾರಂಭಿಸಿ ಇತರರಿಗೂ ಅದನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದ್ದ. ನಂತರ ನಿಧಾನವಾಗಿ ಅವನಿಗೇ ತಮಾಷೆಯಿಂದ ಸ್ನೇಹ ಹಾಳಾಯಿತು ಎಂದು ತಿಳಿದು ನೊಂದುಕೊಂಡಿದ್ದ. ಅಂತಿಮ ವರ್ಷದ ಪದವಿ ಮುಗಿಯಲು ಕೆಲವು ವಾರಗಳಷ್ಟೆ ಬಾಕಿ ಇದ್ದಾಗ ಮತ್ತೆ ಆ ಹುಡುಗಿ ನನ್ನ ಜತೆ ಮಾತನಾಡಲು ಪ್ರಾರಂಭಿಸಿದಳು.

ಅವಳಿಗೆ ತಮಾಷೆ ಮಾಡಲು ಪ್ರಾರಂಭಿಸಿದ್ದ ಗೆಳೆಯ, ಒಂದು ದಿನ ನಾನು ಅವಳು ಕಾರಿಡಾರಿನಲ್ಲಿ ನಿಂತು ಮಾತನಾಡುತ್ತಿದ್ದನ್ನು ನೋಡಿ, ‘ಈಗ ನಿಮ್ಮ ಸ್ನೇಹ ಸರಿ ಆಯ್ತಾ. ಇನ್ನು ಮುಂದೆ ತಮಾಷೆ ಮಾಡುವುದಿಲ್ಲ’ ಎಂದು ಹೇಳಿ ತನ್ನ ತಮಾಷೆಗೆ ಅಂತ್ಯ ಹಾಡಿದ್ದ. ಈಗ ಅವಳು ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿ. ಕಾಲೇಜಿನ ಎದುರಿನ ರಸ್ತೆಯಲ್ಲಿ ಹೋಗುವಾಗ ಕಾಲೇಜಿನ ಗೊರಗೆ ಅವಳೇನಾದರೂ ಕಾಣಸಿಗುತ್ತಾಳೋ ಎಂದು ನನ್ನ ಕಣ್ಣುಗಳು ಅವಳನ್ನು ಹುಡುಕತೊಡಗುತ್ತವೆ. ಸಿಕ್ಕಿದರೆ ಒಮ್ಮೆ ‘ಹಾಯ್‌’ ಹೇಳುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT