ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್ ಗಣೇಶನ ವೈಭವ

Last Updated 16 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮುಂಬೈ, ಪುಣೆ ಹಾಗೂ ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಗಣೇಶ ಉತ್ಸವದ ವೈಭವಕ್ಕೆ ಕಡಿಮೆ ಇಲ್ಲದಂತೆ ಬೆಂಗಳೂರಿನ ರಾಜಾಜಿನಗರದ ಮಿಲ್ಕ್ ಕಾಲನಿಯ ಗಣೇಶ ಉತ್ಸವ ಸತತ ಮೂರು ದಶಕಗಳಿಂದ ನಡೆದುಕೊಂಡು ಬಂದಿದೆ. ಅದ್ದೂರಿತನಕ್ಕೆ ಮತ್ತೊಂದು ಹೆಸರೇ ಸ್ವಸ್ತಿಕ್ ಯುವಕರ ಸಂಘದ ಗಣೇಶ ಉತ್ಸವ. ಸದಭಿರುಚಿ, ಕಲೆ, ಸಂಗೀತ, ಸಂಸ್ಕೃತಿಯ ದ್ಯೋತಕವಾಗಿದೆ.

ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ್ ಗೌಡ ಅವರ ನೇತೃತ್ವದಲ್ಲಿ 1984ರಲ್ಲಿ ಆರಂಭವಾದ ಸ್ವಸ್ತಿಕ್ ಯುವಕರ ಸಂಘ ಕಳೆದ 30 ವರ್ಷಗಳಿಂದ ಸತತವಾಗಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ.

ತಲೆ ಎತ್ತಿದ ಬೇಲೂರು ದೇವಸ್ಥಾನ
ಈ ಹಿಂದೆ ವೈರಮುಡಿ ಹಾಗೂ ವಿಷ್ಣುರೂಪಿ ಗಣಪನನ್ನು ಪ್ರತಿಷ್ಠಾಪಿಸಿ ಜನಮನ ಗೆದ್ದಿದ್ದ ಸಂಘ ಈ ಬಾರಿ ಬೇಲೂರು-ಹಳೆಬೀಡು ದೇವಸ್ಥಾನದ ಪ್ರತಿರೂಪವನ್ನು ಮಿಲ್ಕ್ ಕಾಲನಿಯಲ್ಲಿ ತಯಾರಿಸಿದೆ. ಸಿನಿಮಾಗಳ ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ನೇತೃತ್ವದಲ್ಲಿ ರಾಜಸ್ತಾನ ಕಲಾವಿದರು ಬೇಲೂರು-ಹಳೆಬೀಡು ದೇವಸ್ಥಾನದ ವೈಭವವನ್ನು ಮರು ಸೃಷ್ಟಿಸಿದ್ದಾರೆ.

ಹತ್ತಾರು ಕಲಾವಿದರು ಕಳೆದ 15 ದಿನಗಳಿಂದ ಹಗಲು, ರಾತ್ರಿ ಶ್ರಮವಹಿಸಿ ಭರ್ಜರಿ ಸೆಟ್ ನಿರ್ಮಿಸಿದ್ದಾರೆ. ಈ ವೈಭವಯುತ ಸೆಟ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಮಂಟಪದ ಸುತ್ತಲೂ ಬೆಳಗುವ ನೂರಾರು ಬಣ್ಣದ ದೀಪಗಳನ್ನು ನೋಡುವುದೇ ಒಂದು ಸೊಗಸು. 

ದುಬಾರಿ ವಿರಾಟ ವಿನಾಯಕ
ಹುಬ್ಬಳ್ಳಿಯ ಕಲಾವಿದ ಮಹೇಶ್ ಮುರುಗೋಡ ಹಾಗೂ ಮುಂಬೈ ಕಲಾವಿದರು ಈ ಬಾರಿ ತಿರುಪತಿ ತಿರುಮಲ ನಿಜಪಾದ ಬಾಲಾಜಿಯನ್ನು ಹೋಲುವ ವಿರಾಟ ವಿನಾಯಕನ ಮೂರ್ತಿ ತಯಾರಿಸಿದ್ದಾರೆ. 60 ಕೆ.ಜಿ ಆಕರ್ಷಕ ಬಣ್ಣದ ಅಮೆರಿಕನ್ ಡೈಮಂಡ್ (ಕೃತಕ ವಜ್ರ) ಹಾಗೂ ನವರತ್ನ ಹರಳುಗಳು ಐದೂವರೆ ಅಡಿ ಎತ್ತರದ ಮೂರ್ತಿಯನ್ನು ಅಲಂಕರಿಸಿವೆ.  ಇದಕ್ಕೆ 12.50 ಲಕ್ಷ ರೂಪಾಯಿ ವೆಚ್ಚವಾಗಿದೆ.

ಹುಬ್ಬಳ್ಳಿಯಲ್ಲಿ ಜನ್ಮತಾಳಿದ ವಿರಾಟ ವಿಘ್ನೇಶನಿಗೆ ಒಂದಿನಿತೂ ವಿಘ್ನವಾಗದಂತೆ ಬೆಂಗಳೂರಿಗೆ ರೈಲಿನಲ್ಲಿ ತರುವುದೇ ಸಂಘದ ಸದಸ್ಯರಿಗೆ ಒಂದು ಸವಾಲಾಗಿತ್ತು. ಬೆಂಗಳೂರಿನಲ್ಲಿ ಇಷ್ಟು ಎತ್ತರದ ಗಣೇಶನನ್ನು ಇದುವರೆಗೂ ಯಾರೂ ಪ್ರತಿಷ್ಠಾಪಿಸಿಲ್ಲ ಎನ್ನುವುದು ಸಂಘದ ಸದಸ್ಯರ ಹೆಮ್ಮೆ.

ಸಾಂಸ್ಕೃತಿಕ ಹಬ್ಬ
31ನೇ ಗಣೇಶ ಉತ್ಸವವವನ್ನು ಸ್ವಸ್ತಿಕ್ ಯುವಕರ ಸಂಘ ಈ ಬಾರಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸುತ್ತಿದೆ. ಮಿಲ್ಕ್ ಕಾಲನಿಯ ಆಟದ ಮೈದಾನದಲ್ಲಿ ಸೆ.17ರಿಂದ ಐದು ದಿನ ಪ್ರತಿನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆ. ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮ ಜನರನ್ನು ಸೆಳೆಯುತ್ತವೆ.

ಕೇರಳದ ಚಂಡೆವಾದ್ಯ, ಕುಪ್ಪುಂನ ನಾದಸ್ವರ, ಮದ್ರಾಸಿನ ಕೀಲುಕುದುರೆ, ತಮಿಳುನಾಡಿನ ಹೂವಿನ ಪಲ್ಲಕ್ಕಿ, ವಿದ್ಯುತ್ ದೀಪಗಳ ಅಲಂಕಾರ, ನೈಯಂಡಿ ಮೇಳ, ವೇಲೂರು, ದಿಂಡಿಗಲ್, ಪಾಲ್‌ಘಟ್‌ನ ಡ್ರಮ್ಸ್ ಹಾಗೂ ಬ್ಯಾಂಡ್, ಕಲ್ಲಡ್ಕದ ಗಾರುಡಿ ಗೊಂಬೆಗಳು, ಮಂಗಳೂರಿನ ಹುಲಿವೇಷ ಸೇರಿದಂತೆ ಹೆಸರಾಂತ ಕಲಾ ತಂಡಗಳು ಪ್ರದರ್ಶನ ನೀಡುತ್ತವೆ. ರಾಜ್ಯದ ವಿವಿಧೆಡೆಯ ಬಗೆ ಬಗೆಯ ಸ್ವಾದಿಷ್ಟ ಖಾದ್ಯಗಳ ಆಹಾರ ಉತ್ಸವ ಭೋಜನ ಪ್ರಿಯರ ನಾಲಿಗೆಯ ರುಚಿಯನ್ನು ತಣಿಸಲಿದೆ.

ಮಕ್ಕಳಿಗೆ ಮನರಂಜನೆ ನೀಡಲು ಪುಟಾಣಿ ರೈಲು, ಜೇಂಟ್ ವ್ಹೀಲ್ ಇತ್ಯಾದಿ ಆಟಿಕೆಗಳಿರುತ್ತವೆ. ವಿಶೇಷ ಸಿಡಿಮದ್ದು ಪ್ರದರ್ಶನ ಗಣೇಶ ವಿಸರ್ಜನೆಯ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಮದ್ದು ಸುಡಲಾಗುತ್ತದೆ. ಸಿಡಿ ಮದ್ದಿನ ಪ್ರದರ್ಶನ ನೋಡಲು ಸಾವಿರಾರು ಜನ ಸೇರುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಬಹುಮಾನ, ಅನ್ನ ಸಂತರ್ಪಣೆ ಸೇರಿ ಐದು ದಿನಗಳ ಕಾರ್ಯಕ್ರಮಕ್ಕೆ ಅಂದಾಜು ₹50 ಲಕ್ಷ ಹೆಚ್ಚು ಖರ್ಚಾಗುತ್ತದೆ.

ಸ್ವಸ್ತಿಕ್ ಯುವಕರ ಸಂಘ ಈ ಐದು ದಿನಗಳಲ್ಲಿ ಬಡಾವಣೆಯ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಸಂಜೆಯಾಗುತ್ತಿದ್ದಂತೆ ದೀಪಾಲಂಕಾರ, ದೃಶ್ಯ ರೂಪಕಗಳು, ಅಬ್ಬರದ ಸಂಗೀತಗಳ ನಡುವೆ ಸಾವಿರಾರು ಜನರು ಮೈಲುಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಗಣೇಶನ ದರ್ಶನ ಪಡೆಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT