ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಡುಗೆಯ ಚೆನ್ನಮ್ಮನ ‘ಶಿಲ್ಪವನ’

Last Updated 7 ಮಾರ್ಚ್ 2016, 19:59 IST
ಅಕ್ಷರ ಗಾತ್ರ

ನಿರಂತರ ವಾಹನಗಳ ಸದ್ದು, ಪ್ರತಿಭಟನೆ, ಮೆರವಣಿಗೆಗಳ ಗೌಜು ಗದ್ದಲಗಳೇ ತುಂಬಿರುವ ಬೆಂಗಳೂರು ಜಯಚಾಮರಾಜೇಂದ್ರ ರಸ್ತೆ (ಜೆ.ಸಿ. ರಸ್ತೆ) ಬದಿಗೆ ಹಚ್ಚ ಹಸಿರಿನಿಂದ ಕಂಗೊಳಿಸುವ, ತಂಪನೆ ವಾತಾವರಣವನ್ನು ತನ್ನಲ್ಲಿಟ್ಟುಕೊಂಡ ಉದ್ಯಾನವೇ ಚೆನ್ನಮ್ಮ ಪಾರ್ಕ್‌ ಅಥವಾ ಶಿಲ್ಪವನ.

ಬ್ರಿಟಿಷರ ವಿರುದ್ಧ ಹೋರಾಡಿದ ವೀರಾಗ್ರಣಿ ಕಿತ್ತೂರು ಚೆನ್ನಮ್ಮನ ಆಕರ್ಷಕ ಪ್ರತಿಮೆ ಇರುವ ಇದು ಹೆಮ್ಮೆಯ ಈ ಕನ್ನಡತಿಯ ಜೀವನ ಗಾಥೆಯನ್ನು ಶಿಲೆಯಲ್ಲಿ ರೂಪಿಸಿರುವ ತಾಣ. ಕೆ.ಪಿ. ಪುಟ್ಟಣ್ಣ ಚೆಟ್ಟಿ ಪುರಭವನ, ರವೀಂದ್ರ ಕಲಾಕ್ಷೇತ್ರ, ಸಂಸ, ನಯನ, ವರ್ಣ ಹೀಗೆ ಹಲವು ಸಾಂಸ್ಕೃತಿಕ ಸಭಾಂಗಣ, ಪ್ರದರ್ಶನಾಂಗಣಗಳನ್ನು ಹೊಂದಿರುವ ಕನ್ನಡ ಭವನದ ಸಮುಚ್ಚಯದೊಳಗೆ ಕಣ್ಸೆಳೆಯುವ ಚೆನ್ನಮ್ಮ ಉದ್ಯಾನ ಮನ ತಣಿಸುವ ಭೂವಿನ್ಯಾಸವಿಟ್ಟುಕೊಂಡು ಸೆಳೆಯುವ ಸ್ಥಳ.

ಖಾಲಿಯಾಗಿದ್ದ ಈ ಸ್ಥಳದಲ್ಲಿ ಪ್ರಸಿದ್ಧ ಕಲಾವಿದ ಆರ್‌.ಎಂ. ಹಡಪದ್‌ ಅವರು ಲಲಿತಕಲಾ ಅಕಾಡಮಿ ಅಧ್ಯಕ್ಷರಾಗಿದ್ದ ಸಂದರ್ಭ ಸಮೂಹ ಶಿಲ್ಪವನ್ನು ಇಲ್ಲಿ ನಿರ್ಮಿಸುವ ಮೂಲಕ ಹೊಸತನ ತಂದರೆ, ಜೆ.ಎಚ್‌. ಪಟೇಲರ ಕಾಲದಲ್ಲಿ ಅಶ್ವಾರೂಢ ಕಿತ್ತೂರು ಚೆನ್ನಮ್ಮನ ಪ್ರತಿಮೆ ಸ್ಥಾಪಿಸುವುದರೊಂದಿಗೆ ಇದರ ಕಳೆ ಹೆಚ್ಚಿತು.

ಕರ್ನಾಟಕದ ಖ್ಯಾತ ಕಲಾವಿದರು ಶಿಬಿರವೊಂದನ್ನು ಇಲ್ಲಿ ಮಾಡಿದಾಗ ಮತ್ತಷ್ಟು ಶಿಲ್ಪಗಳು ನೆಲೆ ನಿಲ್ಲುವಂತಾಯಿತು. ಸಚಿವೆ ಉಮಾಶ್ರೀ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ್‌ ಇಡೀ ಆವರಣಕ್ಕೆ ಹಸಿರುಡುಗೆ ತೊಡಿಸಲು ನಿರ್ಧರಿಸಿದ್ದರಿಂದ ಈಗ ಶಿಲ್ಪವನ ವಿವಿಧ ಮರಗಿಡಗಳು, ವರ್ಷದುದ್ದಕ್ಕೂ ಅರಳುವ ಹೂಗಳು ನಗೆ ಚೆಲ್ಲುವ ಉದ್ಯಾನವಾಗಿ ಮೈದಾಳಿದೆ.

ಹಸಿರು ಮಕಮಲ್ಲಿನ ಹುಲ್ಲು ಹಾಸಿನಲ್ಲಿ ಮಹಿಳೆಯರ ವಿವಿಧ ಶಿಲ್ಪಗಳೇ ಮುಖ್ಯ ಆಕರ್ಷಣೆ. ಹಳ್ಳಿಗಾಡಿನ ಸ್ತ್ರೀ ಬದುಕಿಗೆ ಆದ್ಯತೆ ನೀಡಿರುವ ಇಲ್ಲಿಯ ಶಿಲ್ಪಗಳಲ್ಲಿ ಭತ್ತ ಕುಟ್ಟುವ ಮಹಿಳೆಯರು, ಮಕ್ಕಳನ್ನು ಪೋಷಿಸುವ ತಾಯಂದಿರು, ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ತ್ರೀಲೋಕ– ಗಮನಸೆಳೆಯುವ ಶಿಲ್ಪಗಳಲ್ಲಿ ಕೆಲವು.

ಮುದಗೊಳಿಸುವ ಹಸಿರು ಸಿರಿಯೇ ತುಂಬಿಕೊಂಡ ಈ ಉದ್ಯಾನದಲ್ಲಿ ಅಚ್ಚುಕಟ್ಟುತನಕ್ಕೆ ಮೊದಲ ಮಣೆ. ಬಿರು ಬೇಸಿಗೆಯಲ್ಲೂ ತಂಪಾಗಿರುವ ಉದ್ಯಾನದಲ್ಲಿ ಪ್ರತ್ಯೇಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದ್ದು, ಇಂತಹ ಜನನಿಬಿಡ ಜಾಗದಲ್ಲೂ ಶುಭ್ರತೆ ಕಾಪಾಡುವ ಕಾಳಜಿ ವಹಿಸಿದೆ.

‘‘ವಿಶಿಷ್ಟ ಬಗೆಯ ಭೂವಿನ್ಯಾಸ, ಹಸಿರ ಸಿರಿ, ಹೂಗಳ ನಗೆ ಚೆನ್ನಮ್ಮ ವೀರಗಾಥೆಯನ್ನು ವಿವರಿಸುವುದರೊಂದಿಗೆ ಸ್ತ್ರೀ ಸಮಾಜವನ್ನು ಪ್ರತಿಬಿಂಬಿಸುವ ‘ಶಿಲ್ಪವನ’ ರಾತ್ರಿಯಲ್ಲೂ ಕಂಗೊಳಿಸುವಂತೆ ಮಾಡುವುದಕ್ಕಾಗಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ’’ ಎಂದ ನಿರ್ದೇಶಕ ಕೆ.ಎ. ದಯಾನಂದ್‌, ‘ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ವಿವಿಧ ಕಾರ್ಯ ಚಟುವಟಿಕೆಗಳು ಸಾರ್ವಜನಿಕರಿಗೆ, ಕಲಾವಿದರಿಗೆ ದೊರೆಯುವ ಸೌಲಭ್ಯಗಳನ್ನು ಉದ್ಯಾನದಲ್ಲಿ ವಿಶೇಷ ವಿದ್ಯುನ್ಮಾನ ಫಲಕಗಳ ಮೂಲಕ ಮಾಹಿತಿ ಒದಗಿಸಿದೆ’ ಎಂದರು.

ಉದ್ಯಾನ ನಗರಿ ಎನ್ನಿಸಿಕೊಂಡು ಹೆಸರಾಗಿರುವ ನಮ್ಮ ರಾಜಧಾನಿಯಲ್ಲಿ ಸಾಂಸ್ಕೃತಿಕ ಸಮುಚ್ಚಯವಾಗಿ ಅರಳಿರುವ ಕನ್ನಡ ಭವನದ ಆವರಣದಲ್ಲಿ ಧೀರ ಮಹಿಳೆ ಚೆನ್ನಮ್ಮನ ಶಿಲ್ಪವನ ಹಸಿರು ಸೊಗಸು ಕೊಡುವ ಆಕರ್ಷಕ ಉದ್ಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT