ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಣೆಗಾರಿಕೆಯ ಸೂಜಿಮೊನೆಗಳು

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನಮ್ಮ ಜೀವನದಲ್ಲಿ ಏನೆಲ್ಲ ಇದ್ದರೂ   ಮತ್ತೇನೋ ಬೇಕೆಂದು ಕೊರಗುತ್ತೇವೆ. ‘ಇರುವುದೆಲ್ಲ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬಂತೆ ಒಂದಲ್ಲಾ ಒಂದು ನೆಪವಿಟ್ಟುಕೊಂಡು ಬೇಸರಿಸಿಕೊಳ್ಳುತ್ತಿರುತ್ತೇವೆ.

ಆರೋಗ್ಯ, ಹಣ, ವಿದ್ಯೆ, ಆಪ್ತ ಸಂಸಾರದೊಂದಿಗೆ ಬದುಕುವಾಗ ಅಂಗವಿಲಕ, ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದರೆ ಬೇಸರಿಸಿಕೊಳ್ಳುವವರೇ ಹೆಚ್ಚು. ಅಂತಹ ವಿಶೇಷ ಮಕ್ಕಳಿಗೆ ಬದುಕಿನಲ್ಲಿ ಛಲ ತುಂಬಿ, ಕ್ರಿಯಾಶೀಲರಾಗಿ ಬದುಕು ಕಟ್ಟಿಕೊಡುವ ಬದಲು ಮತ್ಯಾವುದೋ ಕಾರಣ ಹಿಡಿದು ಶಪಿಸುತ್ತಾ ಕೂರುವವರ ಸಂಖ್ಯೆ ದೊಡ್ಡದು. ಪ್ರಜ್ವಲ್‌ ಮತ್ತು ವಿನಾಯಕ್‌ ನಿರ್ದೇಶಿಸಿರುವ ‘ಸ್ವಲ್ಪ ಬದಲಾಗಿ’ ಕಿರುಚಿತ್ರವನ್ನು ಈ ವಿಷಯದಲ್ಲಿ ಸ್ಫೂರ್ತಿ ತುಂಬುತ್ತದೆ ಎಂಬ ಕಾರಣಕ್ಕೆ ನೋಡಬೇಕು.

‘?’ ಕ್ರಿಯೇಷನ್‌ನಲ್ಲಿ ನಿರ್ಮಿಸಿರುವ ಆರೂವರೆ ನಿಮಿಷ ಅವಧಿಯ ಕಿರುಚಿತ್ರ ಇದು. ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುವ ವ್ಯಕ್ತಿ ಕುಟುಂಬದಿಂದ ದೂರಾಗಿ ರಸ್ತೆಯಲ್ಲಿ ಅಲೆಯುವಾಗ, ಹುಡುಗರ ಕಿಡಿಗೇಡಿತನಕ್ಕೆ ಒಳಗಾಗುತ್ತಾನೆ. ಆದರೂ  ಹುಡುಗರ ಕೀಟಲೆಯನ್ನು ಮರೆತು ಆ ವಿಶೇಷ ವ್ಯಕ್ತಿ ಅವರ ಜೀವವನ್ನೇ ಕಾಪಾಡಿ ಮಾನವೀಯತೆ ಮೆರೆಯುತ್ತಾನೆ. ಕಿರುಚಿತ್ರದ ಕಥೆ ಸರಳವಾಗಿ ಪ್ರಜ್ಞಾಪೂರ್ವಕವಾಗಿ ಇದೆ. ತಂಡವು ‘ಪೋಸ್ಟ್‌ಪ್ರೊಡಕ್ಷನ್‌’ನಲ್ಲಿ ಸ್ಕ್ರೀನ್‌ಪ್ಲೇಗೆ ಇನ್ನಷ್ಟು ಕುಸುರಿ ಕೆಲಸ ಮಾಡಬೇಕಿತ್ತು.

ಮೊದಲೆರಡು ನಿಮಿಷ ಶಾಟ್‌ ಬಳಕೆ ಉದಾರವಾಗಿ ಇದ್ದು, ಕೊನೆಗೆ ಥಟ್ಟನೆ ಚಿತ್ರವೇ ಮುಗಿದು ಹೋಗುತ್ತದೆ. ಹೇಳಹೊರಟ ‘ಸ್ವಲ್ಪ ಬದಲಾಗಿ’ ಎನ್ನುವ ಮುಖ್ಯ ಮಾಹಿತಿಯೇ ದಕ್ಕದೇಹೋಗುವ ಅಪಾಯವೂ ಇದೆ. ಕಾಲೇಜು ಹುಡುಗರ ಪ್ರಾಯೋಗಿಕ ಪ್ರಯತ್ನದಂತಿದ್ದರೂ ಈ ಕಿರುಚಿತ್ರ ತಾಯಾರಿಕೆ ಅಭಿನಂದನಾರ್ಹ.

ಇನ್ನು ಇದೇ ತಂಡ ‘ರೆಸ್ಟ್‌ ಪಾಸಿಬಲ್‌’ ಎಂಬ ನಾಲ್ಕು ನಿಮಿಷದ ಕಿರುಚಿತ್ರ ಮಾಡಿದೆ. ಸಾಮಾಜಿಕ ಶುಚಿತ್ವ ಮತ್ತು ಮೂಲಸೌಕರ್ಯಗಳನ್ನು ಅನಾವಶ್ಯಕವಾಗಿ ಪೋಲು ಮಾಡದಂತೆ ಸಂದೇಶವನ್ನು ನೀಡುವ ಕಥೆ ಇದು.

‘ರೆಸ್ಟ್‌ ಪಾಸಿಬಲ್‌’ ಕಿರುಚಿತ್ರದಲ್ಲಿ ಸೈಕಾಲಾಜಿಕಲ್‌ ಥ್ರಿಲ್ಲರ್‌ನಂತಹ ಸಣ್ಣ ಝಲಕ್‌ ಇದ್ದು,  ಒಡಕು ವ್ಯಕ್ತಿತ್ವವಿರುವ  ಪಾತ್ರದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನವಿದೆ. ನಾವು ಹಲವು ಬಾರಿ ಬೇಜವಾಬ್ದಾರಿಯಿಂದ ವರ್ತಿಸುವಾಗಲೂ ಕೆಲವೊಮ್ಮೆ ನಮ್ಮ ಒಳಮನಸ್ಸು ನಮ್ಮ ಹೊಣೆಗಾರಿಕೆಯನ್ನು ನೆನಪಿಸುತ್ತಿರುತ್ತದೆ.  ಇಂತಹ ಮನಸ್ಸೊಂದನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡದಂತೆ,  ರಸ್ತೆಯಲ್ಲಿ ಪ್ಲಾಸ್ಟಿಕ್ ಬಿಸಾಡದಂತೆ ಬೋಧನೆ ಮಾಡುತ್ತಿರುತ್ತಾನೆ. ತನ್ನ ಮನೆಯಲ್ಲಿ ಅನವಶ್ಯಕವಾಗಿ ವಿದ್ಯುತ್‌ ಉರಿಸುವುದು, ಪೋಲಾಗುವ ಕೊಳಾಯಿ ನೀರನ್ನು ಸರಿಯಾಗಿ ನಿಲ್ಲಿಸದಿರುವುದು ಅವನ ಸ್ವಭಾವ. ಅವನ ಒಳ ಮನಸ್ಸು ಇದನ್ನು ಗಮನಿಸಿ, ‘ನೀನೇ ಇದಕ್ಕೆ  ಹೊಣೆಗಾರ’ ಎಂದು ಮತ್ತೆ ಮತ್ತೆ ಹೇಳುತ್ತದೆ. 

ಇಂದು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು, ಪ್ಲಾಸ್ಟಿಕ್‌ ಬಿಸಾಡುವುದನ್ನು ತಡೆದರೆ ಅದೇ ದೊಡ್ಡ ಕ್ರಾಂತಿ ಮಾಡಿದಂತೆ. ನಾಲ್ಕು ಜನರ ಮುಂದೆ ಸಾಮಾಜಿಕ ಪ್ರಜ್ಞೆ ಪ್ರದರ್ಶಿಸುವ ಎಷ್ಟೋ ಜನ ಮನೆಯಲ್ಲಿ ಮಾತ್ರ ಅದನ್ನು ಅನುಸರಿಸುವುದಿಲ್ಲ ಎನ್ನುವುದನ್ನು ಕಿರುಚಿತ್ರ ಎತ್ತಿ ತೋರಿಸಿದೆ.

ಅಮೆಚ್ಯೂರ್‌ ತಂಡ ತಯಾರಿಸಿರುವ ಈ ಎರಡು ಕಿರುಚಿತ್ರಗಳು ನಿರ್ಲಕ್ಷಿತ, ಸೂಕ್ಷ್ಮ, ಸಾಮಾಜಿಕ ಜವಾಬ್ದಾರಿಯ ಸುತ್ತ ಕಥೆ ಹೆಣೆದುಕೊಂಡಿರುವುದರಿಂದ ಒಳ್ಳೆಯ ಯತ್ನಗಳಂತೂ ಹೌದು.  ‘ಸ್ವಲ್ಪ ಬದಲಾಗಿ’ ಕಿರುಚಿತ್ರದ ಕೊಂಡಿ: goo.gl/r2PSFM ‘ರೆಸ್ಟ್‌ ಪಾಸಿಬಲ್‌’ ಕಿರುಚಿತ್ರದ ಕೊಂಡಿ: goo.gl/lu2diU  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT