ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರತಿಭೆಗಳ ವೇದಿಕೆ ‘ಅಭಿಯಾನ’

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮಹಾಭಾರತ ಮಹಾಕಾವ್ಯದಲ್ಲಿ ನಲುಗಿದ ಮಹಿಳಾ ಪಾತ್ರಗಳನ್ನು ಕುಂತಿ, ಗಾಂಧಾರಿ, ದ್ರೌಪದಿ ಎಂದು ಪಟ್ಟಿ ಮಾಡಬಹುದು. ಆದರೆ ಇವೆಲ್ಲಾ ಪಾತ್ರಗಳು ಪಿತೃಪ್ರಧಾನ ವ್ಯವಸ್ಥೆಯ ಜೊತೆಗೆ ವಿರೋಧಗಳ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ತಮ್ಮ ಪಾತ್ರ ಮುಗಿಸಿದವು. 
 
ಆದರೆ ಪುರುಷ ಪ್ರಾಧಾನ್ಯದ ಸ್ವಾರ್ಥ ಸಾಧನೆ ವಿರುದ್ಧ ಬಂಡಾಯವೆದ್ದು ಬಲಿಯಾದ ಅಂಬೆಯ ಬದುಕು ಮಾತ್ರ ದುರಂತಮಯ. ಮಹಾಭಾರತದಲ್ಲಿ ನಗಣ್ಯವೆನಿಸುವ ‘ಅಂಬೆ’ಯ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಜಯಪ್ರಕಾಶ ಮಾವಿನಕುಳಿ ಅವರು ‘ಅಭಿಯಾನ’ ನಾಟಕ ರಚಿಸಿದ್ದಾರೆ. 
 
ರಂಗನಿರ್ದೇಶಕಿ ದಾಕ್ಷಾಯಣಿ  ಭಟ್ ಅವರು ತಮ್ಮ ‘ದೃಶ್ಯ’ ರಂಗತಂಡಕ್ಕೆ ಈ ನಾಟಕವನ್ನು ನಿರ್ದೇಶಿಸಿದ್ದು ರಂಗದಂಗಳದಲ್ಲಿ ದೃಶ್ಯಕಾವ್ಯವೊಂದನ್ನು ಕಟ್ಟಿಕೊಟ್ಟಿದ್ದಾರೆ. ದೃಶ್ಯ ರಂಗತಂಡ 11 ವರ್ಷ ಪೂರೈಸಿದ ಸವಿನೆನಪಿಗಾಗಿ ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ದೃಶ್ಯ ನಾಟಕೋತ್ಸವ-2017ರಲ್ಲಿ ‘ಅಭಿಯಾನ’ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಯಶಸ್ವಿಯಾಯಿತು. 
 
ನಾಟಕದಾದ್ಯಂತ ಬಳಸಿದ ರಂಗ ತಂತ್ರಗಳು ಪ್ರಯೋಗವನ್ನು ಆಕರ್ಷಣೀಯವಾಗಿಸಿವೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ತಂತ್ರಗಾರಿಕೆ ಈ ನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ.

ಕೆಲವು ದೃಶ್ಯಸಂಯೋಜನೆಗಳು, ಪೂರಕವಾಗಿರುವ ಹಿನ್ನೆಲೆ ಆಲಾಪ ಮತ್ತು ಸಂಗೀತ ನಿಜಕ್ಕೂ ಸೋಜಿಗ ಹುಟ್ಟಿಸುವಂತಿದೆ. ಸಂಗೀತ ಹಾಗೂ ಬೆಳಕಿನ ವಿನ್ಯಾಸಗಳು ಇಡೀ ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಶ ನೀಡಿವೆ. 
 
ಎಲ್ಲಾ ಪಾತ್ರಗಳ ಶೈಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಅದರಲ್ಲೂ ಅಂಬೆಯ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದವಳಂತೆ ಬಿಂಬಶ್ರೀ ಅಭಿನಯಿಸಿದ್ದನ್ನು ನೋಡುವುದೇ ಒಂದು ಅನುಭವ. ಆದರೂ ಬಿಂಬಶ್ರೀ ಸಂದರ್ಭಕ್ಕನುಗುಣವಾಗಿ ಭಾವ ತೀವ್ರತೆಯನ್ನು ನಿಯಂತ್ರಿಸಿಕೊಂಡರೆ ಅಂಬೆಯನ್ನು ಕೆಲವೊಮ್ಮೆ ಖಳನಾಯಕಿಯನ್ನಾಗಿ ಬಿಂಬಿಸುವುದನ್ನು ತಪ್ಪಿಸಬಹುದು. 
 
ಭೀಷ್ಮನಾಗಿ ತೇಜಸ್ ಕುಮಾರ್, ಸಾಳ್ವನಾಗಿ ವಿಷ್ಣು ಹಾಗೂ ಕಾಶಿರಾಜನಾಗಿ ಹೇಮಂತ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವಿದ್ಯಾ ಅವರ ಅಭಿನಯ ಗಮನಾರ್ಹವಾಗಿತ್ತು. ನೋಡುಗರ ಗಮನ ಸೆಳೆಯಲು ಕಾರಣವಾಗಿದ್ದು ಪ್ರತಿ ಪಾತ್ರಗಳ ವಸ್ತ್ರ ವಿನ್ಯಾಸ. ಒಳಗಡೆ ಒಂದೇ ರೀತಿಯ ಕಪ್ಪು ಉಡುಪುಗಳನ್ನು ಬಹುತೇಕ ಪಾತ್ರಗಳು ಧರಿಸಿದ್ದರೂ ಅದರ ಮೇಲೆ  ಮೇಲುವಸ್ತ್ರಗಳನ್ನು ಬಳಸಿ ಪ್ರೇಕ್ಷಕರ ಮನದಲ್ಲಿ ಪಾತ್ರಗಳನ್ನು ಚಿತ್ರಿಸಿದ್ದು ವಿಸ್ಮಯಕಾರಿಯಾಗಿದೆ.

ರಂಗಸಜ್ಜಿಕೆಯ ವಿನ್ಯಾಸ ತುಂಬಾ ಸರಳವಾಗಿದ್ದು ಕೇವಲ ರಾಜಲಾಂಛನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿದ್ದು ಇಡೀ ನಾಟಕವು ಅಭಿನಯ ಪ್ರಧಾನವಾಗಿ ಪ್ರಸ್ತುತಪಡಿಸಲಾಗಿದೆ. ವಯೋಗುಣಕ್ಕನುಗುಣವಾಗಿ ಕಾಶಿರಾಜ ಹಾಗೂ ಶಂತನು ರಾಜನನ್ನು ಪ್ರಸಾಧನದಲ್ಲಿ ಬಿಂಬಿಸಿದ್ದರೆ ಸೂಕ್ತವಾಗುತ್ತಿತ್ತು.   
 
ದಾಕ್ಷಾಯಣಿ ಅವರ ಸಂಪೂರ್ಣ ಪ್ರತಿಭೆ ಈ ನಾಟಕದಲ್ಲಿ ಮೂಡಿಬಂದಿದ್ದು, ನಟನೆಗೆ ಹೊಸದಾಗಿ ತೆರೆದುಕೊಂಡಿರುವ ಕಾಲೇಜು ಯುವಕ–ಯುವತಿಯರ ಪ್ರತಿಭೆಯನ್ನು ಬಳಸಿಕೊಂಡು ಸಶಕ್ತ ನಾಟಕವನ್ನು ಕಟ್ಟಿಕೊಟ್ಟಿದ್ದು ಶ್ಲಾಘನೀಯ.

ಹೊಸಬರನ್ನು ಕಟ್ಟಿಕೊಂಡು ಉತ್ತಮ ನಾಟಕ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ನೆಪ ಹೇಳುವ ಕೆಲವು ನಿರ್ದೇಶಕರಿಗೆ ‘ಅಭಿಯಾನ’ ನಾಟಕದಲ್ಲಿನ ಹೊಸಬರ ಅಭಿನಯ ಉತ್ತರ ಹೇಳಬಲ್ಲುದು. ಅಪಾರವಾದ ರಂಗಸಿದ್ಧತೆ ಹಾಗೂ ರಂಗಬದ್ಧತೆಯ ಜೊತೆಗೆ ನಿಜವಾಗಿ ಪ್ರತಿಭೆಯೂ ಇದ್ದಲ್ಲಿ ‘ಅಭಿಯಾನ’ದಂತಹ ದೃಶ್ಯಕಾವ್ಯವನ್ನು ಕಟ್ಟಿಕೊಡಲು ಸಾಧ್ಯ ಎನ್ನುವುದಕ್ಕೆ ದಾಕ್ಷಾಯಣಿ ಭಟ್ ಅವರು ಮಾದರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT