ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಡೂಟದ ಬಳಗ’ದ ಜಿಹ್ವಾ ಸಂಸ್ಕೃತಿ

Last Updated 25 ಜನವರಿ 2016, 19:30 IST
ಅಕ್ಷರ ಗಾತ್ರ

ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸಹಜ. ನಗರದ ಒತ್ತಡದ ಬದುಕಿನಲ್ಲಿ ಒಟ್ಟಿಗೆ ಕೂತು ಊಟ ಮಾಡುವುದೂ ಕಷ್ಟ ಎಂಬಂಥ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿಶಿಷ್ಟವಾಗಿ ಕಾಣುವುದು ‘ಬಾಡೂಟದ ಬಳಗ’.

‘ತುತ್ತೂಟಕ್ಕೆ ನಾವು ದುಡಿಯೋದು’ ಇದು ಎಷ್ಟೋ ಉದ್ಯೋಗಿಗಳ ಉದ್ಗಾರ. ಬೆಂಗಳೂರಿನಂಥ ಯಾಂತ್ರಿಕ ನಗರದಲ್ಲಿ  ಒತ್ತಡದ ಜೀವನ ನಡೆಸುತ್ತಿರುವ ಹಲವು ಜನರು ಕುಟುಂಬದೊಂದಿಗೆ ಕೂತು ಊಟ ಮಾಡುವ ಪದ್ಧತಿಯಿಂದ ವಂಚಿತರಾಗಿದ್ದಾರೆ. ಕೈಯಲ್ಲೊಂದು ಬರ್ಗರ್‌, ರೋಲ್‌, ಎರಡು ಬ್ರೆಡ್‌ ಪೀಸ್‌ ಹಿಡಿದು  ಬಸ್‌ಗೆ ಕಾಯುವ, ದಾರಿಯಲ್ಲಿ ತಿಂಡಿ ಮಾಡಿ, ಆಫೀಸ್‌ ಮೀಟಿಂಗ್‌ನಲ್ಲೇ ಊಟ ಮುಗಿಸಿ, ರಾತ್ರಿ ಮನೆಗೆ ಬರುವಷ್ಟರಲ್ಲಿ ಸುಸ್ತಾಗಿ ಮಲಗಿದರೆ ಸಾಕು ಎನ್ನುವವರೇ ಹೆಚ್ಚು.

ಇಂಥವರ ನಡುವೆ ಆಹಾರ ತಿನ್ನುವ ಪ್ರಕ್ರಿಯೆಯನ್ನೇ ವಿಶೇಷವಾಗಿ ಹಬ್ಬದಂತೆ ಆಚರಿಸಲು 15 ಜನರ ಗುಂಪು ಆರಂಭಿಸಿದ  ಸ್ನೇಹಕೂಟವೇ ‘ಬಾಡೂಟದ ಬಳಗ’. ಗೆಳೆಯರೆಲ್ಲ ಸೇರಿ ಊಟಕ್ಕೆಂದು ಬೆಂಗಳೂರಿನಿಂದ ರಾಮನಗರಕ್ಕೆ ಹೋಗಿ ಬಂದಿದ್ದರು. ಇದರ ಅನನ್ಯ ನೆನಪಿನಿಂದಾಗಿ ಮತ್ತೊಮ್ಮೆ ಇಂತಹ ಭೋಜನ ಕೂಟದಲ್ಲಿ ಸೇರಬೇಕು ಎಂದುಕೊಂಡು ವ್ಯವಸ್ಥಿತ ತಂಡ ಕಟ್ಟಲು ಮುಂದಾದವರು ಕೆ.ಟಿ. ಸತೀಶ್‌.

ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿರುವ ಸತೀಶ್‌ ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಪ್ರತಿ ತಿಂಗಳೂ ಉತ್ತಮ, ವಿಭಿನ್ನ ಆಹಾರ ಸಿಗುವಲ್ಲಿಗೆ ಊಟಕ್ಕೆ ಹೋಗುತ್ತಿದ್ದರಂತೆ. ನಂತರದ ದಿನಗಳಲ್ಲಿ  ಗೆಳೆಯರಿಂದ ಗೆಳೆಯರಿಗೆ ಹಬ್ಬಿ ಇಂದು ‘ಬಾಡೂಟದ ಬಳಗ’ದಲ್ಲಿ  ಮೂರು ಸಾವಿರ ಗೆಳೆಯರಿದ್ದಾರೆ. ಅವರಲ್ಲಿ ಸಕ್ರಿಯವಾಗಿ ಭಾಗವಹಿಸುವವರು 100 ಮಂದಿ.

2012ರಲ್ಲಿ ಆರಂಭವಾದ ಬಳಗವಿದು. ಈ ಬಳಗದವರು ವಿಭಿನ್ನ ಶೈಲಿಯ ಹೋಟೆಲ್‌ಗಳಿಗೆ  ಹೋಗುತ್ತಾರೆ, ಎಷ್ಟು ದೂರವಾದರೂ ಸರಿ, ನಗರದ ವಿವಿಧ ಪ್ರದೇಶಗಳಲ್ಲಿನ ಸವಿರುಚಿಗಳನ್ನು ಅರಿತಿರುವ ಬಳಗದವರು ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ರಾಮನಗರ ಹೀಗೆ ವಿಭಿನ್ನ ಸ್ಥಳಗಳ ದೇಸಿ ಶೈಲಿಯ  ಆಹಾರ ಉಣಬಡಿಸುವ ಹೋಟೆಲ್‌ಗಳಿಗೆ ಹೋಗುತ್ತಾರೆ. ತಂಡ ಒಟ್ಟಿಗೆ ಇರುವಷ್ಟೂ ಹೊತ್ತು ಎಲ್ಲರಿಗೂ ಒಂದೇ ನಿಯಮ. ಯಾವ ಆಹಾರ ಸೇವಿಸುವರೋ ಅದರ ಇತಿಹಾಸ, ಬೆಳೆದು ಬಂದ ಬಗೆ, ರುಚಿ, ಪ್ರಾದೇಶಿಕ ವಿಶೇಷ ಎಲ್ಲದರ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುತ್ತಾರೆ. ನಂತರ ಆಹಾರವನ್ನು ಸೇವಿಸುವುದು ಅಭ್ಯಾಸ. ಎಲ್ಲ ವಯಸ್ಸಿನವರು ಬಳಗದ ಸದಸ್ಯರಾಗಿದ್ದಾರೆ. ಜೊತೆಯಲ್ಲಿ ಇರುವವರೆಗೂ ಮದ್ಯಪಾನ, ಧೂಮಪಾನ ನಿಷಿದ್ಧ.

‘ಅಜಿತ ಪುರಾಣ’ವೇ ಮೂಲ
ಈ ತಂಡಕ್ಕೆ ಹೆಸರಿಡಲು ಸ್ಫೂರ್ತಿ ನೀಡಿದ್ದೇ ರನ್ನನ ‘ಅಜಿತ ಪುರಾಣ’. ಅದರ
"ಕಟ್ಟಿದ ಕುರಿಗಳ್ ಬೋನದೊ
ಳಟ್ಟೇರಿಸಿ ಬಯ್ತ ಬಾಡುಗಳ್‌ ಬಡ್ಡಿಸಿ ತಂ
ದಿಟ್ಟಾ(ಖಾ)ದ್ಯಂಗಳ್‌ ಮುಂ
ದಿಟ್ಟ ನಿವೇದ್ಯಂಗಳಂತಕಂಗೆ ಜನಂಗಳ್‌"

ಎಂಬ ಪದ್ಯದಲ್ಲಿ ಇರುವ ‘ಬಾಡು’ ಶಬ್ದದಿಂದಲೇ ಬಾಡೂಟದ ಬಳಗ ಎಂದು ಹೆಸರಿಟ್ಟಿಕೊಂಡಿರುವುದು. ತಿನ್ನುವುದರ ಬಗ್ಗೆ ಇವರೆಷ್ಟು ಗಂಭೀರವಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಬೇರೆ ಬೇರೆ ಊರುಗಳಿಂದ ನಗರಕ್ಕೆ ಉದ್ಯೋಗ ನಿಮಿತ್ತ ಬಂದ ಜನರಿಗೆ ಏಕಾಂಗಿ ಭಾವ ಕಾಡದಂತೆ ಗೆಳಯರೊಟ್ಟಿಗೆ ಊಟ ಮಾಡಿ ಕಥೆ–ಕಾವ್ಯಗಳ ಚರ್ಚೆ ಮಾಡುತ್ತಾರೆ.

ಬಾಡೂಟದ ವಾರ್ಷಿಕೋತ್ಸವ
ಬಾಡೂಟದ ಬಳಗ ಆರಂಭವಾಗಿ ಮೂರು ವರ್ಷವಾಗಿದೆ. ಬಳಗದ ವಾರ್ಷಿಕೋತ್ಸವನ್ನು ಆಚರಿಸುವುದು ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ.  ಅಂದು 24 ಗಂಟೆ ಹಗಲೂ ರಾತ್ರಿ ಬಾಡೂಟವೇ. ಮಧ್ಯಾಹ್ನ ಆರಂಭವಾಗುವ ಕಾರ್ಯಕ್ರಮ ಮರುದಿನ ಮಧ್ಯಾಹ್ನದವರೆಗೂ ನಡೆಯುತ್ತದೆ. ಬೆಳದಿಂಗಳ ದಿನ ವಾರ್ಷಿಕೋತ್ಸವ ನಡೆಸುವ ಬಳಗದವರು ರಾತ್ರಿ ಪೂರ್ತಿ ಸಿನಿಮಾ, ಸಂಗೀತ, ಸಾಹಿತ್ಯ ವಿಚಾರ ಚರ್ಚೆ ಮಾಡುತ್ತಾ ಮರುದಿನದ ಮಧ್ಯಾಹ್ನದವರೆಗೂ ಅಲ್ಲಿಯೇ ಅಡುಗೆ ಮಾಡಿಕೊಂಡು ಬಾಡೂಟ ಸವಿಯುತ್ತಾರೆ. ಬಾಡೂಟದಲ್ಲಿ ಸಾಹಿತಿ ಕೆ.ವೈ. ನಾರಾಯಣಸ್ವಾಮಿ, ಜಿ.ಎನ್‌. ನಾಗರಾಜ್‌, ಕನ್ನಡವೇ ಸತ್ಯ ರಂಗಣ್ಣ,  ಪಚ್ಚೆ ನಂಜುಡಸ್ವಾಮಿ ಹಲವರು ಭಾಗವಹಿಸುತ್ತಿರುತ್ತಾರೆ.   

ಅಣ್ಣಾವ್ರೇ ರಾಯಭಾರಿ
‘ಬಾಡೂಟದ ಬಳಗಕ್ಕೆ ಡಾ.ರಾಜಕುಮಾರ್‌ ರಾಯಭಾರಿ’ ಎನ್ನುತ್ತಾರೆ ಸತೀಶ್‌. ಅಣ್ಣಾವ್ರು ಹೇಳುತ್ತಿದ್ದ ‘ಜಮಾಯ್ಸಿಬಿಡಿ’ ಶಬ್ಬವನ್ನೇ  ಟ್ಯಾಗ್‌ಲೈನ್‌ ಆಗಿ ಇಟ್ಟುಕೊಂಡಿರುವ ಬಳಗ, ‘ಬಾಡೂಟಾನ ಜಮಾಯ್ಸಿಬಿಡಿ. ಆದರೆ ಅಲ್ಪ ತೃಪ್ತರಾಗಬೇಡಿ. ತಿಂದಮೇಲೆ ಕೈಗೆ ಸಾಬೂನು ಹಾಕದೆ ಕೈತೊಳೆಯಿರಿ. ಇಡೀ ದಿನ ಕೈ ವಾಸನೆ ನೋಡಿಕೊಂಡು ಸಂಪೂರ್ಣ ತೃಪ್ತರಾಗಿ’ ಅಂತ ರಾಜಣ್ಣ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವುದು ಬಳಗದ  ಆಶಯವಂತೆ.

‘ತಿನ್ನುವಿಕೆಯನ್ನು ಯಾರು ಪ್ರೀತಿಸುತ್ತಾರೋ ಅವರು ಯಾವಾಗಲೂ ಶ್ರೇಷ್ಠ ವ್ಯಕ್ತಿಗಳಾಗಿರುತ್ತಾರೆ’ ಎಂದು ಅಮೆರಿಕದ ಪಾಕ ಪ್ರವೀಣೆ ಜೂಲಿಯ ಚೈಲ್ಡ್ ಹೇಳಿದ್ದಾರೆ. ಆ ಮಾತನ್ನೂ ಬಳಗ ಪಾಲಿಸುತ್ತಿದೆ. ಪಂಕ್ತಿ ಭೋಜನ ಮಾಡಿ, ಪ್ರತಿಬಾರಿ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳುತ್ತಾ ನಗರದ ಒಂಟಿತನವನ್ನು ಬಳಗದವರು ನಿವಾರಿಸಿಕೊಳ್ಳುತ್ತಿದ್ದಾರೆ. ಗೆಳೆತನವಷ್ಟೇ ಅಲ್ಲದೆ, ಒಬ್ಬರೊಂದಿಗೆ ಒಬ್ಬರು ಕೂಡು ಕುಟುಂಬದ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾರೆ. ಬಳಗಕ್ಕೆ ಸೇರಲು  ಕ್ಲಿಕ್ಲಿಸಿ. goo.gl/yQPDKZ

***
ಬಳಗದಲ್ಲಿ ಆಹಾರ ತಜ್ಞ
ಬಳಗದಲ್ಲಿ ಒಬ್ಬರು ಆಹಾರ ತಜ್ಞರಿದ್ದಾರೆ. ಬಳಗವನ್ನು ಕರೆದುಕೊಂಡು ಹೋಗುವ ಮೊದಲು ಅವರು ನಿರ್ದಿಷ್ಟ ಹೋಟೆಲ್‌ನ ಖಾದ್ಯಗಳ ರುಚಿ ನೋಡಿರುತ್ತಾರೆ. ದೇಸಿ ರುಚಿ ಪತ್ತೆಮಾಡುವುದರಲ್ಲಿ ಅವರ ನಾಲಗೆ ಪಳಗಿದೆ.
–ಜಿ.ಎನ್‌. ನಾಗರಾಜ್‌, ಬಾಡೂಟದ ಬಳಗದ ಸದಸ್ಯರು

***
ಹದಿನೈದು ಐಟಂ

ಬಾಡೂಟದ ಬಳಗ ನಮ್ಮ ಹೋಟೆಲಿಗೆ ಊಟಕ್ಕೆ ಬರುವುದಾಗಿ ತಿಳಿಸಿದಾಗ ಖುಷಿ ಆಯ್ತು. ಕಾಲೇಜು ಹುಡುಗರು, ಶಿಕ್ಷಕರ ಟೀಂ ಬರುತ್ತಿರುತ್ತದೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಗೆಳೆಯರೆಲ್ಲ ಸೇರೋದು ನೋಡಿ ಆಶ್ಚರ್ಯವಾಯ್ತು. ಮಂಡ್ಯ ನಾಟಿ ಶೈಲಿ ಅಡುಗೆ ಬೇಕು ಎಂದಿದ್ದರು,  ಇವರಿಗಾಗಿ ಮೆನುವಿನಲ್ಲಿ ಇಲ್ಲದಿದ್ದರೂ ನಮ್ಮ ಮನೆಯಲ್ಲಿ ಮಾಡುವ ಪಾರಂಪರಿಕವಾದ ಅಡುಗೆಗಳನ್ನು ಮಾಡಿಕೊಟ್ಟಿದ್ದೆವು. ಕುರಿ, ನಾಟಿಕೋಳಿ, ಬೋಟಿ, ತಲೆ ಕಾಲು ಒಟ್ಟು 15 ಐಟಂಗಳನ್ನು ತಯಾರಿಸಿದ್ದೆವು, ಬಾಡೂಟದ ಬಳಗಕ್ಕೂ ನಮ್ಮ ಅಡುಗೆ ಇಷ್ಟವಾಯಿತು.
–ನಾಗರಾಜು, ಮಾಲೀಕರು, ಬಿರಿಯಾನಿ ಕೆಫೆ, ಮಂಡ್ಯ

***

ಪ್ರಜಾಪ್ರಭುತ್ವದ ಪಾಲಿಸಿ
ಇಲ್ಲಿ ನಾವು ಯಾರೂ ಹೊಟ್ಟೆ ಬಾಕರಲ್ಲ. ರುಚಿಕಟ್ಟಾದ ಬಾಡೂಟವನ್ನು ಪರಿಶೋಧಿಸುವವರು. ‘ಬಾಡೂಟ’  ಗಲ್ಲೀಲಿ ಇರಲಿ, ಸಂದೀಲಿ ಇರಲಿ, ಹಳ್ಳೀಲಿ ಇರಲಿ, ದಿಲ್ಲೀಲಿ ಇರಲಿ, ಜಪ್ಪಂತ ನಮ್ಮ ಬಳಗ ರೆಡಿ. ಚಕ್ಕಳ ಮಕ್ಕಳ ಹಾಕಿಕೊಂಡು ಜಮಾಯ್ಸಿಬಿಡೋದೆ. ಪ್ರೀತಿ-ಸ್ನೇಹವನ್ನು ಯಥೇಚ್ಛವಾಗಿ ಹಂಚಿಕೊಳ್ಳುತ್ತೇವಾದರೂ  ಬಾಡೂಟದ ವಿಷಯ ಬಂದಾಗ ಬೈಟೂ ಮಾತೇ ಇಲ್ಲ. ಇನ್ನು ಬಿಲ್ಲಿನ ವಿಚಾರಕ್ಕೆ ಬಂದರೆ, ನಮ್ಮದು ಪ್ರಜಾಪ್ರಭುತ್ವದ ಪಾಲಿಸಿ. ಸಮಾನವಾಗಿ ಹಂಚಿಕೊಳ್ಳುತ್ತೇವೆ. ತಿನ್ನುವುದು ನಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುವ ಕ್ರಿಯೆ ಎಂದೇ ಭಾವಿಸಿದ್ದೇವೆ. ಪೊಗದಸ್ತಾಗಿ ಊಟವನ್ನೂ ಮಾಡ್ತೀವಿ, ಪಸಂದಾಗಿ ಮಾತೂ ಆಡ್ತೀವಿ.
–ಡಾ.ಐಶ್ವರ್ಯಾ, ಚೈತ್ರಾ ವೆಂಕಟ್, ಭವ್ಯಾ, ಗೀತಾ ರೋನುರ್‌, ಪ್ರತಿಭಾ, ಸವಿತಾ, ಮಮತಾ, ಸ್ವಪ್ನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT