ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ಸ್ಯಗಂಧಿ’: ತಿದ್ದಿಕೊಳ್ಳಲು ಇವೆ ದಟ್ಟ ಅವಕಾಶಗಳು

ರಂಗಭೂಮಿ
Last Updated 27 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮಹಾಭಾರತ ಮಹಾಕಾವ್ಯದ ಮಹಾತಿರುವು ಇರುವುದೇ ಮತ್ಸ್ಯಗಂಧಿ ಪ್ರಕರಣದಲ್ಲಿ. ಬೆಸ್ತನ ಮಗಳು ಮತ್ಸ್ಯಗಂಧಿ ಹಲವಾರು ಸ್ಥಿತ್ಯಂತರಗಳಿಗೆ ಸಿಲುಕಿ ಕುರುವಂಶದ ಮಹಾರಾಣಿಯಾಗಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಹಾಗೂ ಅವುಗಳಿಂದಾಗುವ ಪರಿಣಾಮಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನವೇ ‘ಮತ್ಸ್ಯಗಂಧಿ’ ರಂಗಪ್ರಯೋಗ.

ರೂಪಾಂತರ ರಂಗತಂಡಕ್ಕೆ 25 ವರ್ಷ ತುಂಬಿದ ಬೆಳ್ಳಿಹಬ್ಬದ ನೆನಪಿನಲ್ಲಿ 2016ರ ಮಾರ್ಚ್ 18ರಿಂದ 20ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಬೆಳ್ಳಿ ಬೆಳಕು’ ರಜತರಂಗ ಸಂಭ್ರಮ ನಾಟಕೋತ್ಸವದ ಕೊನೆಯ ದಿನ ಡಾ.ಪ್ರಭಾಕರ ಶಿಶಿಲ ಅವರು ಬರೆದ ಕಾದಂಬರಿ ಆಧರಿಸಿ ಎನ್.ಟಿ. ಪ್ರಸನ್ನಕುಮಾರ್‌ ರಂಗರೂಪಗೊಳಿಸಿದ ‘ಮತ್ಸ್ಯಗಂಧಿ’ ನಾಟಕವು ಕೆಎಸ್‌ಡಿಎಲ್ ಚಂದ್ರು ಅವರ ನಿರ್ದೇಶನದಲ್ಲಿ ‘ರೂಪಾಂತರ’ ತಂಡದ ಕಲಾವಿದರಿಂದ ಪ್ರದರ್ಶಿತವಾಯಿತು.

ಮತ್ಸ್ಯಗಂಧಿಯನ್ನು ಕೇಂದ್ರವಾಗಿಟ್ಟುಕೊಂಡು ಮಹಾಭಾರತದ ಪ್ರಮುಖ ಘಟ್ಟವನ್ನು ಕಟ್ಟಿಕೊಡುವ ಪ್ರಯತ್ನವನ್ನು ಈ ನಾಟಕವು ಮಾಡುತ್ತದೆ. ಬೆಸ್ತರ ಮಹಿಳೆ ಮತ್ಸ್ಯಗಂಧಿ ತನ್ನ ಬದುಕಿನಲ್ಲಿ ಬಂದ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದನ್ನು ಮನೋಜ್ಞವಾಗಿ ತೋರಿಸಲಾಗಿದೆ. ಮತ್ಸ್ಯಗಂಧಿಯು ಒಂದಾದ ನಂತರ ಒಂದು ಸಮಸ್ಯೆಗಳ ಭಾರವನ್ನು ತನ್ನ ಎದೆಯ ಮೇಲೆ ಹೇರಿಕೊಂಡೇ ಬಳಲಿದವಳು. ಎಲ್ಲದಕ್ಕೂ ತಾನೇ ಕಾರಣನಾದೆನೆಲ್ಲಾ ಎನ್ನುವ ಪಾಪಪ್ರಜ್ಞೆಯಿಂದ ತಲ್ಲಣಿಸಿ ಹೋದವಳು.

ಇಡೀ ಕುರುಕುಲದ ಆಗುಹೋಗುಗಳಿಗೆ ತನ್ನ ನಿರ್ಧಾರಗಳೇ ಮುಳುವಾದದ್ದು ಕಂಡು ಅಪಾರವಾಗಿ ನೊಂದುಕೊಂಡವಳು. ಮಹಾಭಾರತದಲ್ಲಿ ಮತ್ಸ್ಯಗಂಧಿ ಕೇವಲ ಒಂದು ಪಾತ್ರವಾಗಿರಬಹುದು. ಈ ಮಹಾಕಾವ್ಯದಲ್ಲಿ ಕುಂತಿ, ದ್ರೌಪದಿ ಎರಡು ಮಾತ್ರ ದುರಂತ ಮಹಿಳಾ ಪಾತ್ರಗಳೆಂದರೆ, ಅವರ ಪಟ್ಟಿಯಲ್ಲಿ ಮತ್ಸ್ಯಗಂಧಿ ಕೂಡ ನೊಂದ ಮಹಿಳೆಯೇ ಆಗಿದ್ದನ್ನು ಈ ನಾಟಕ ಸಾಬೀತು ಪಡಿಸುತ್ತದೆ. ಪುರುಷ ಪ್ರಧಾನವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಮತ್ಸ್ಯಗಂಧಿ ಎನ್ನುವ ದುರಂತ ಮಹಿಳಾ ಪಾತ್ರದ ತಲ್ಲಣಗಳನ್ನು ಈ ನಾಟಕವು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಟ್ಟಿದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೇಗೆ ಪುರುಷನಿಂದ ಬಳಕೆಗೊಳಗಾಗಿ ಬಲಿಪಶುವಾಗುತ್ತಾಳೆ ಎಂಬುದನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಯುವತಿಯಾದ ಮತ್ಸ್ಯಗಂಧಿಯನ್ನು ಪರಾಶರ ಮುನಿ  ತನ್ನ ದೇಹ ಬಯಕೆಗೆ ಬಳಸಿಕೊಂಡು ಹುಟ್ಟಿದ ಮಗುವಿನೊಂದಿಗೆ ಹೊರಟು ಹೋಗುತ್ತಾನೆ. ಆತನಿಗೆ ತನ್ನ ಬಯಕೆ ತೀರಿಸಿಕೊಳ್ಳಲು ಹಾಗೂ ಬೀಜ ಬೆಳೆಯಲು ಭೂಮಿ ಬೇಕಾಗಿತ್ತೇ ಹೊರತು ಭೂಮಿ ಜೊತೆಗಿನ ಸಂಬಂಧವಲ್ಲ. ಸಂತೋಷ ಹಾಗೂ ಸಂತಾನಕ್ಕಾಗಿ ಹೆಣ್ಣು ಇರುವುದೇ ಹೊರತು ಮಹಿಳೆಗೆ ಸ್ವಂತ ಅಸ್ತಿತ್ವವೇ ಇಲ್ಲ ಎನ್ನುವುದಕ್ಕೆ ಮತ್ಸ್ಯಗಂಧಿ ರೂಪಕವಾಗಿದ್ದಾಳೆ.

ಶಂತನು ರಾಜನಿಗೂ ವಿರಹದುರಿ ತಣಿಸಲು ಹೆಣ್ಣು ಬೇಕಾಗಿತ್ತು. ಭೀಷ್ಮನಿಗೆ ತ್ಯಾಗಮಯಿಯಾಗುವ ಬಯಕೆ. ಗೆದ್ದು ಬಲವಂತದಿಂದ ಕರೆತಂದ ಕಾಶಿಯ ರಾಜಕುವರಿಯರಿಗೂ ಇಲ್ಲಿ ಆಯ್ಕೆ ಸ್ವಾತಂತ್ರ್ಯ ಎನ್ನುವುದಿಲ್ಲ. ನಪುಂಸಕನೆಂದು ಗೊತ್ತಿದ್ದರೂ ವಿಚಿತ್ರ ವೀರ್ಯನೊಂದಿಗೆ ಮದುವೆಯಾಗುವ ಅನಿವಾರ್ಯತೆಯನ್ನು ಪಿತೃಪ್ರಧಾನ ವ್ಯವಸ್ಥೆ ಸೃಷ್ಟಿಸುತ್ತದೆ. ಇರುವ ವ್ಯವಸ್ಥೆಯನ್ನು ವಿರೋಧಿಸಿದರೆ ಎಲ್ಲಿಯೂ ಸಲ್ಲದವರಾಗಿ ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಅಂಬೆಯ ಪ್ರಕರಣ ಸಾಬೀತುಪಡಿಸುತ್ತದೆ.

ಜನಸಾಮಾನ್ಯರನ್ನು ಬಿಡಿ; ಋಷಿಮುನಿಗಳು, ರಾಜ ಮಹಾರಾಜರುಗಳು ತಮ್ಮ ತಮ್ಮ ಸ್ವಾರ್ಥಹಿತಾಸಕ್ತಿಗೆ ಮಹಿಳೆಯರನ್ನು ಬಳಸಿಕೊಳ್ಳತ್ತಲೇ ಬಂದಿರುವುದಕ್ಕೆ ಈ ದೇಶದ ಪ್ರಾತಿನಿಧಿಕ ಮಹಾಕಾವ್ಯವಾದ ಮಹಾಭಾರತದಲ್ಲಿ ಅನೇಕಾನೇಕ ಉದಾಹರಣೆಗಳಿವೆ. ಅದರಲ್ಲಿ ಮತ್ಸ್ಯಗಂಧಿ, ಅಂಬೆ ಸಹೋದರಿಯರು ಕೇವಲ ಪಾತ್ರಗಳಷ್ಟೇ. ಆಧುನಿಕ ರಂಗಭೂಮಿಯ ವಿಶೇಷತೆ ಇರುವುದು ಪುರಾಣಗಳನ್ನು ಮುರಿದು ಮತ್ತೆ ಕಟ್ಟಿಕೊಡುವುದರಲ್ಲಿ. ಆದರೆ, ಈ ‘ಮತ್ಸ್ಯಗಂಧಿ’ ನಾಟಕದಲ್ಲಿ ಪುರಾಣದಲ್ಲಿ ಇದ್ದದ್ದನ್ನು ಇದ್ದ ಹಾಗೆಯೇ ತೋರಿಸುತ್ತಾ, ಜನರಿಗೆ ಈಗಾಗಲೇ ಗೊತ್ತಿರುವುದನ್ನೇ ಮತ್ತೆ ತೋರಿಸುವ ಪ್ರಯತ್ನ ಮಾಡಲಾಗಿದೆ.

ಗೊತ್ತಿರುವುದನ್ನೇ ಹೇಳಲು ನಾಟಕವಾದರೂ ಯಾಕೆ ಬೇಕು. ಅದರಲ್ಲಿ ಏನಾದರೂ ವಿಶೇಷವಿರಬೇಕಲ್ಲವೇ? ಅಂತಹ ಯಾವುದೇ ವಿಶೇಷತೆಗಳು ಈ ನಾಟಕದಲ್ಲಿ ಇಲ್ಲ. ಯಥಾವತ್ ದೃಶ್ಯಗಳನ್ನು ಮರುಸೃಷ್ಟಿಸುವುದಕ್ಕೆ ಸೀಮಿತವಾದ ಈ ನಾಟಕವು ಆಕೃತಿಯ ಅಂತರಾಳವನ್ನು ಹೊಕ್ಕು ಹೊಸದಾದ ನೋಟವನ್ನು ಕಟ್ಟಿಕೊಡುವುದರಲ್ಲಿ ವಿಫಲವಾಗಿದೆ. ರಂಗಪಠ್ಯದಲ್ಲಿ ಅಂತಹ ಹೊಸತನವೇನಿಲ್ಲ. ನಿರ್ದೇಶಕರು ಸಹ ಹೊಸ ಹೊಳಹುಗಳತ್ತ ಗಮನಕೊಟ್ಟಿದ್ದರೆ ಸೊಗಸಾಗಿರುತ್ತಿತ್ತು. ಮರೆತು ಮಸುಕಾಗಿರಬಹುದಾದ ಮಹಾಭಾರತದ ಘಟನೆಗಳನ್ನು ಮತ್ತೊಮ್ಮೆ ಪ್ರೇಕ್ಷಕರ ಮನದಲ್ಲಿ ಮರುಕಳಿಸುವಂತೆ ಮಾಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಪ್ರತಿಯೊಂದು ದೃಶ್ಯವನ್ನು ಸಂಯೋಜಿಸಿದ ರೀತಿ ತುಂಬಾ ವಿಶೇಷವಾಗಿ ಮೂಡಿಬಂದಿದ್ದು, ಇಡೀ ನಾಟಕವನ್ನು ತೂಗಿಸಿಕೊಂಡು ಹೋಗುವಲ್ಲಿ ಮತ್ಸ್ಯಗಂಧಿ ಪಾತ್ರಧಾರಿ ರಂಜಿತಾ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ. ಅವರ ಮಾತಿನಲ್ಲಿ ಇರುವ ಸ್ಪಷ್ಟತೆ, ನಟನೆಯಲ್ಲಿರುವ ಶಕ್ತಿ, ಮುಖದಲ್ಲಿ ಮೂಡುವ ಭಾವನೆಗಳು ಗಮನಾರ್ಹವಾಗಿದ್ದವು. ಪರಾಶರ, ವೇದವ್ಯಾಸ ಈ ಎರಡೂ ಪಾತ್ರಗಳನ್ನು ಮೈದುಂಬಿ ನಟಿಸಿದ ಹರೀಶ್ ಅಭಿನಯ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಅಂಬೆ ಪಾತ್ರಕ್ಕೆ ಸಿತಾರಾ ನ್ಯಾಯ ಒದಗಿಸಿದ್ದಾರೆ. ಭೀಷ್ಮನ ಪಾತ್ರಕ್ಕೆ ವೇಣು ನಟನೆ ಯಾಕೋ ದುರ್ಬಲವೆನ್ನಿಸಿತು.

ಶಂತನು ರಾಜನ ಪಾತ್ರಕ್ಕೆ ಶ್ರೀಹರ್ಷ ಇನ್ನೂ ಪಳಗಬೇಕಿದೆ. ಮಿಕ್ಕೆಲ್ಲಾ ಪಾತ್ರಗಳನ್ನು ಹೊಸ ಹುಡುಗರೇ ನಟಿಸಿದ್ದು, ತಮ್ಮ ಪಾತ್ರಗಳಲ್ಲಿ ಇಳಿದು ಅಭಿನಯಿಸಲು ಇನ್ನೂ ಪರಿಶ್ರಮ ಪಡಬೇಕಿದೆ. ವಸ್ತ್ರಾಲಂಕಾರ ಪಾತ್ರಕ್ಕೆ ಪೂರಕವಾಗಿ ಇತ್ತಾದರೂ, ಸಮಯದ ಅಂತರದಲ್ಲಿ ಉಡುಪು ಬದಲಾಯಿಸಿದ್ದರೆ ಚೆನ್ನಾಗಿತ್ತು. ಯುವಕ ದೇವವ್ರತ ಮುಂದೆ ಭೀಷ್ಮಾಚಾರ್ಯ ಎನ್ನಿಸಿಕೊಳ್ಳುವ ಹಂತದಲ್ಲಿ ಒಂದಿಷ್ಟು ಉಡುಗೆ ತೊಡುಗೆ ಹಾಗೂ ಮೇಕಪ್‌ನಲ್ಲಿ ಬದಲಾವಣೆ ಮಾಡಿದ್ದರೆ ಸೂಕ್ತವೆನಿಸುತ್ತಿತ್ತು.

ಕಾಲ ಸರಿದಂತೆ ಪಾತ್ರಕ್ಕಾಗುವ ವಯೋಮಾನಕ್ಕೆ ತಕ್ಕಂತೆ ಮತ್ಸ್ಯಗಂಧಿ, ಭೀಷ್ಮ, ಶಂತನು ಪಾತ್ರಗಳಲ್ಲಿ ಬದಲಾವಣೆ ಅಗತ್ಯವೆನಿಸುತ್ತದೆ.  ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಬೆಳಕಿನ ವಿನ್ಯಾಸ ಈ ನಾಟಕದಲ್ಲಿ ನೋಡುಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದವು. ಪರಾಶರ ಮತ್ತು ಮತ್ಸ್ಯಗಂಧಿಯ ಮಿಲನದ ದೃಶ್ಯ ಒಂಚೂರು ಅತಿ ಅನ್ನಿಸಿದರೂ ಹಿತವೆನಿಸಿದ್ದಂತೂ ಸತ್ಯ. ಯಮುನಾ ನದಿಯ ಎಫೆಕ್ಟ್‌ ಅನ್ನು ಸೈಕ್ ಬಳಿಸಿ ತೋರಿಸಿದ್ದು ಹಾಗೂ ನಾಟಕದ ದೃಶ್ಯಗಳಿಗೆ ತಕ್ಕಂತೆ ಸೈಕ್ ಬಣ್ಣವನ್ನು ಬದಲಿಸಿದ್ದು ಈ ನಾಟಕದ ಹೈಲೈಟ್.

ಬೆಳಕಿನ ವಿನ್ಯಾಸಕ್ಕೆ ಕೊಟ್ಟಷ್ಟೇ ಗಮನವನ್ನು ಸಂಗೀತಕ್ಕೂ ಕೊಟ್ಟಿದ್ದರೆ ಈ ನಾಟಕದ ಪರಿಣಾಮವೇ ಬೇರೆಯಾಗುತ್ತಿತ್ತು. ನಾಟಕದ ಮೂಡ್‌ಗೆ ತಕ್ಕಂತೆ ಸ್ಪಂದಿಸಬಹುದಾಗಿದ್ದ ಸಂಗೀತ ಹಾಗೂ ಹಾಡುಗಳು ನಾಟಕದಾದ್ಯಂತ ದುರ್ಬಲವಾಗಿ ಮೂಡಿಬಂದು ದೃಶ್ಯಕ್ಕೆ ಅಗತ್ಯವಾದ ಮೂಡ್ ಸೃಷ್ಟಿಸುವಲ್ಲಿ ವಿಫಲವಾದವು. ಸಂಗೀತ ಕೂಡ ಸಶಕ್ತವಾಗಿ ಇಲ್ಲ. ಹಾಡಿನಲ್ಲಿ ಮಾಧುರ್ಯವೂ ಇರಲಿಲ್ಲ. ಹಾಡುಗಳು ದೃಶ್ಯಗಳಿಗೆ ಸರಿಯಾಗಿ ಬ್ಲೆಂಡ್ ಆಗಲಿಲ್ಲ. ನಿರ್ದೇಶಕರು ಈ ನಿಟ್ಟಿನತ್ತ ಗಮನಹರಿಸುವುದು ಉತ್ತಮ.

ಹಾಡು ಸಂಗೀತಗಳ ನಿರ್ವಹಣೆಯನ್ನು ದೃಶ್ಯಕ್ಕನುಗುಣವಾಗಿ ಮಾಡಿದ್ದರೆ, ಬ್ಲಾಕ್‍ಔಟ್‌ಗಳ ಸಮಯ ಕಡಿತಗೊಳಿಸದ್ದರೆ, ಕಥಾ ಮುಂದುವರಿಕೆಯನ್ನು ಕೇವಲ ಮೈಕಲ್ಲಿ ಹೇಳದೇ ದೃಶ್ಯಗಳ ಮೂಲಕವೋ ಇಲ್ಲವೇ ಪಾತ್ರಗಳ ಮೂಲಕವೋ ಹೇಳಿಸಿದ್ದರೆ, ಮುಖ್ಯ ಪಾತ್ರಧಾರಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪಾತ್ರಧಾರಿಗಳ ನಟನೆ ಹಾಗೂ ಸಂಭಾಷಣೆಯಲ್ಲಿ ಫೋರ್ಸ್‌ ಇದ್ದಿದ್ದರೆ, ಇಡೀ ನಾಟಕ ಹೊಸ ಹೊಳಹುಗಳನ್ನು ಹೇಳುವಂತಿದ್ದರೆ.. ಅತ್ಯುತ್ತಮ ನಾಟಕವಾಗಿ ಮೂಡಿಬರುವಲ್ಲಿ ಸಂದೇಹವೇ ಇಲ್ಲ. ಮರು ಪ್ರದರ್ಶನಗಳಲ್ಲಿ ಸರಿಪಡಿಸುವ ಸಾಧ್ಯತೆಗಳಂತೂ ಮುಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT