ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಿನ ಅಹಿಂದ ಪ್ರಾತಃಸ್ಮರಣೀಯರು

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕರ್ನಾಟದಕಲ್ಲಿ ಅಹಿಂದ (ಅಲ್ಪಸಂಖ್ಯಾತ, ದಲಿತ, ಹಿಂದುಳಿದ) ರಾಜಕೀಯ ಮತ್ತೆ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ‘ಅಹಿಂದ ರಾಜಕೀಯ’ ತಾರ್ಕಿಕ ಅಂತ್ಯ ತಲುಪಿತು ಎಂದೇ ಭಾವಿಸಿದಂತಿದ್ದ ಅಹಿಂದ ಪ್ರತಿಪಾದಕರಿಗೆ ಇದು ಆಘಾತ ಉಂಟುಮಾಡಿದೆ.

ಆದರೆ, ಈ ಬಾರಿಯ ‘ಅಹಿಂದ’ ಅನಿರೀಕ್ಷಿತ ದಿಕ್ಕಿನಿಂದ ಮುನ್ನುಗ್ಗುತ್ತಿರುವುದು ಕಂಡು ಕಾಂಗ್ರೆಸ್ಸಿನವರು, ‘ಅದು ಅಹಿಂದವಲ್ಲ, ಹಿಂದ’ (ಹಿಂದುಳಿದ ಮತ್ತು ದಲಿತ) ಎಂದು ಮುಸಿಮುಸಿ ನಗುತ್ತಿದ್ದಾರೆ. ಈ ಹೊಸ ಬೆಳವಣಿಗೆಯಿಂದ ಅಹಿಂದ ತಮ್ಮ ‘ರಾಜಕೀಯ ಆಸ್ತಿ’ ಎಂದೇ ಭಾವಿಸಿದ್ದವರು ವಿಚಲಿತರಾಗಿದ್ದಾರೆ. ಅಂದು ವಿಧಾನಸೌಧದ ಮೂರನೇ ಮಹಡಿಯ ಯಜಮಾನಿಕೆ ತಪ್ಪಿಸಿದರೆಂದು ಎಚ್.ಡಿ. ದೇವೇಗೌಡರೊಂದಿಗೆ ಮುನಿಸಿಕೊಂಡ ಸಿದ್ದರಾಮಯ್ಯನವರು ಅಹಿಂದ ಚಾಮರದಡಿ ಯುದ್ಧಕ್ಕೆ ಹೊರಟಿದ್ದರು.

ಇಂದು ಮೊದಲ ಬಾರಿ ‘ಹಿಂದ’ ಕಹಳೆ ಮೊಳಗಿಸಲು ಹೊರಟಿರುವ ಬಿಜೆಪಿಯ ಕೆ.ಎಸ್. ಈಶ್ವರಪ್ಪನವರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಮುನಿಸಿಕೊಂಡಿದ್ದಾರೆ. ಬಿಜೆಪಿಯ ನಾಯಕರ ಮುನಿಸಿಗೆ ಕಾರಣವು ಸಿದ್ದರಾಮಯ್ಯ–ದೇವೇಗೌಡರ ನಡವಣ ಮುನಿಸಿನ ಕಾರಣದಷ್ಟು ಬೃಹತ್ ಆಗಿಲ್ಲ. ಆದರೆ ಎರಡರಲ್ಲೂ ಕೊಂಚ ಸಾಮ್ಯತೆಯಿದೆ.

‘ಬಿಜೆಪಿಯ ನೂತನ ಸಾರಥಿ ನನ್ನನ್ನು ಒಂದು ಮಾತು ಕೂಡ ಕೇಳದೆ ತಮ್ಮ ಬಲಗೈ ಬಂಟನನ್ನು ಶಿವಮೊಗ್ಗೆಯ ಬಿಜೆಪಿಗೆ ನಾಯಕನನ್ನಾಗಿ ನೇಮಿಸಿದ್ದಾರೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ತಾವು ಸ್ಥಾನವಂಚಿತರಾಗಬಹುದು’ ಎಂಬ ಶಂಕೆ ಈಶ್ವರಪ್ಪನವರನ್ನು ಕಾಡುತ್ತಿದೆ.

‘ನೀವು ಈಗಾಗಲೇ ವಿಧಾನಪರಿಷತ್ ಸದಸ್ಯರಾಗಿದ್ದು, ಮುಂದೆ ಬಿಜೆಪಿ ಅಧಿಕಾರ ಹಿಡಿದರೆ ಮಂತ್ರಿಸ್ಥಾನ ದೊರಕುವುದು ಖಚಿತವಿರುವುದರಿಂದ ರುದ್ರೇಗೌಡರಿಗೆ ಒಮ್ಮೆ ಸ್ಥಾನ ಬಿಟ್ಟುಕೊಡಿ ಎಂಬ ಸೂಚನೆ ಈಶ್ವರಪ್ಪನವರಿಗೆ ಬಂದಿದೆ’ ಎಂದು ಕೆಲವು ವರದಿಗಳು ಹೇಳುತ್ತಿವೆ. ಆದರೆ, ಶಿವಮೊಗ್ಗೆಯ ‘ಗೌಡಿಕೆ’ ಪಡೆಯಲು ಈಶ್ವರಪ್ಪನವರು ಇಷ್ಟೆಲ್ಲಾ ಆರ್ಭಟಿಸಬೇಕಾಗಿಲ್ಲ. ಮೇಲ್ನೋಟಕ್ಕೆ ಒರಟಾಗಿಯೇ ಕಾಣುವ ಅವರು ಏನೋ ಮುಂದಾಲೋಚನೆ ಇಟ್ಟುಕೊಂಡೇ ‘ಹಿಂದ’ಕ್ಕೆ ಕೈಹಾಕಿದಂತಿದೆ. ಮುಂದಿನ ಬಾರಿ ಅಧಿಕಾರ ದಕ್ಕುವ ಭ್ರಮೆ ಬಿಜೆಪಿಯಲ್ಲಿ ದಟ್ಟವಾಗುತ್ತಿದ್ದಂತೆಯೇ ಆ ಪಕ್ಷದ ಮುಖ್ಯಮಂತ್ರಿ ಆಕಾಂಕ್ಷಿಗಳು ಮನಸ್ಸಿನಲ್ಲೇ ಮಂಡಿಗೆ ತಿನ್ನಲು ಪ್ರಾರಂಭಿಸಿದ್ದಾರೆ.

ಬಿಜೆಪಿಯ ಲಿಂಗಾಯತರು ಮತ್ತು ಒಕ್ಕಲಿಗರು ವಿಧಾನಸೌಧದಲ್ಲಿನ ಅಧಿಕಾರದ ಗದ್ದುಗೆಯನ್ನು ಒಮ್ಮೆ ಅನುಭವಿಸಿದ್ದಾರೆ. ಈಗ ಬಾಕಿಯಿರುವುದು ಪಕ್ಷದಲ್ಲಿರುವ ಹಿಂದುಳಿದ ವರ್ಗದವರ ಸರದಿ. ಬಹುಶಃ ತಮ್ಮ ಸರದಿಯನ್ನು ದೃಢಪಡಿಸಲೆಂದೇ ಈಶ್ವರಪ್ಪನವರು ‘ಹಿಂದ’ ಕುದುರೆ ಏರಲು ತಿಣುಕಾಡುತ್ತಿದ್ದಾರೆಯೇ?!

ಅಹಿಂದ ರಾಜಕೀಯ ಹೊಸದಲ್ಲ, ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಅಹಿಂದ ನಾಯಕರಲ್ಲಿ ಸಿದ್ದರಾಮಯ್ಯ ಮೊದಲಿಗರಲ್ಲ, ಈಶ್ವರಪ್ಪ ಕೊನೆಯವರೂ ಅಲ್ಲ.ಸ್ವಾತಂತ್ರ್ಯ ಪೂರ್ವದಿಂದಲೂ ಅಹಿಂದ ಪ್ರಜ್ಞೆ ಜಾಗೃತಗೊಳಿಸಲು ಮತ್ತು ಅಹಿಂದ ವರ್ಗಗಳನ್ನು ಸಂಘಟಿಸಲು ಪ್ರಯತ್ನಗಳು ನಡೆದಿವೆ. ರಾಷ್ಟ್ರಮಟ್ಟದಲ್ಲಿ ಬಹು ಹಿಂದೆಯೇ ಘಟಾನುಘಟಿಗಳು ಅಹಿಂದ ರಾಜಕೀಯ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಹಿಂದ ಸಂಘಟನೆಗೆ ಬಳಸಿದ ಹೆಸರು ಬೇರೆ ಬೇರೆ ಇದ್ದಿರಬಹುದು.

1967ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಅಣ್ಣಾದೊರೈ ಅಜೇಯ ಕಾಂಗ್ರೆಸ್ಸನ್ನು ಸೋಲಿಸಿ ಮುಖ್ಯಮಂತ್ರಿಯಾದರು.ಆ ಚುನಾವಣೆಯಲ್ಲಿ ದ್ರಾವಿಡ ಪ್ರಜ್ಞೆ ಅದೆಷ್ಟು ಪ್ರಚಂಡವಾಗಿತ್ತೆಂದರೆ ಶ್ರೀನಿವಾಸನೆಂಬ ಕಾಲೇಜು ಹುಡುಗನ ಎದುರು ಕಾಂಗ್ರೆಸ್‌ನ ಭೀಷ್ಮ ರಾಜಕಾರಣಿ ಕಾಮರಾಜ್ ಅವರೇ ಸೋಲುಣ್ಣಬೇಕಾಯಿತು.

ಅಣ್ಣಾದೊರೈ ಮುಖ್ಯಮಂತ್ರಿಯಾಗುತ್ತಲೇ ಮೀಸಲಾತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪೆರಿಯಾರ್ ಕಾರ್ಯಸೂಚಿ ಜಾರಿಗೊಳಿಸಿದರು. ಕನ್ನಡ ಮೂಲದ ವಾಲ್ಮೀಕಿ ಜಾತಿಯ ಪೆರಿಯಾರ್ ಈರೋಡು ವೆಂಕಟರಾಮಸ್ವಾಮಿ ನಾಯ್ಕರರು ಅಣ್ಣಾದೊರೈರವರ ಗುರುಗಳೂ ಮತ್ತು ದ್ರಾವಿಡ ಕಳಗಂನ ಸಂಸ್ಥಾಪಕರೂ ಆಗಿದ್ದರು. ಅಣ್ಣಾದೊರೈ ಅವರು ಗುರುವಿನೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ದ್ರಾವಿಡ ಕಳಗಂನಿಂದ ಹೊರಬಂದು, ಡಿಎಂಕೆ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದವರು. ಆದರೆ, ಪುರೋಹಿತಶಾಹಿಯ ದಬ್ಬಾಳಿಕೆಯನ್ನು ವಿರೋಧಿಸಿ ದ್ರಾವಿಡ ಸ್ವಾಭಿಮಾನಿ ಚಳವಳಿ ಹುಟ್ಟುಹಾಕಿದವರು ಪೆರಿಯಾರ್!

ಹಿರಿಯರು ಸಸಿ ನೆಟ್ಟರೆ ಅವರ ಮಕ್ಕಳೋ, ಮೊಮ್ಮಕ್ಕಳೋ ಫಲವುಣ್ಣುತ್ತಾರೆ. ಕರ್ನಾಟಕದಲ್ಲೂ ದೇವರಾಜ ಅರಸರು ಅಹಿಂದ ಸಸಿ ನೆಟ್ಟಿದ್ದರೆ, ಇಂದು ಸಿದ್ದರಾಮಯ್ಯನವರು  ಅದರ ಫಲ ಉಣ್ಣುತ್ತಿದ್ದಾರೆ. ತಮಿಳುನಾಡಿನಲ್ಲೂ ಆದದ್ದು ಅದೇ. ಶೋಷಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪೆರಿಯಾರ್ ದಶಕಗಳ ಕಾಲ ಹೋರಾಡಿದರು.
ಕಾಂಗ್ರೆಸ್ ಮೂಲಕ ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದ ಅವರು ತಮಿಳುನಾಡು ಪ್ರದೇಶ ಕಾಂಗ್ರೆಸ್‌ನಲ್ಲಿ ಬ್ರಾಹ್ಮಣರ ಯಾಜಮಾನ್ಯ ಮತ್ತು ಸಾಮಾಜಿಕ ನ್ಯಾಯ ತತ್ವವನ್ನು ವಿರೋಧಿಸುತ್ತಿದ್ದ ಅವರ ಧೋರಣೆ ಖಂಡಿಸಿ ಕಾಂಗ್ರೆಸ್ ತೊರೆದು, ‘ಜಸ್ಟಿಸ್ ಪಾರ್ಟಿ’ ಸೇರಿದರು. ಸ್ವಾತಂತ್ರ್ಯಪೂರ್ವದಲ್ಲಿ ಅದು ಶೋಷಿತರ ಪಕ್ಷವಾಗಿತ್ತು.

1939ರಲ್ಲಿ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಪೆರಿಯಾರ್ ದ್ರಾವಿಡರ ಹಕ್ಕುಗಳಿಗಾಗಿ ಹೋರಾಡುತ್ತಲೇ, 1944ರಲ್ಲಿ ಅದೇ ಪಕ್ಷವನ್ನು ದ್ರಾವಿಡ ಕಳಗಂ ಎಂದು ಪರಿವರ್ತಿಸಿದರು. ಅವರು ನೆಟ್ಟ ದ್ರಾವಿಡ ಚಳವಳಿಯ ಸಸಿ ಇಂದು ಮರವಾಗಿ ಡಿಎಂಕೆ, ಎಐಎಡಿಎಂಕೆ ಮುಂತಾದ ಬಿಳಲುಗಳನ್ನು ಬಿಟ್ಟು ಬೃಹದಾಕಾರವಾಗಿ ಬೆಳೆದಿದೆ.

ಕೇರಳದಲ್ಲಿ ನಾರಾಯಣ ಗುರುಗಳು ಶೋಷಿತರ ಸಂಘಟನೆಗಾಗಿ ಆಧ್ಯಾತ್ಮಿಕ ತಳಹದಿಯ ಮೇಲೆ ಶ್ರಮಿಸಿದರು. ಇಂದು ಕೇರಳ, ದೇಶದಲ್ಲಿ ಗರಿಷ್ಠ ಸಾಕ್ಷರತೆ ಮತ್ತು ಲಿಂಗಾನುಪಾತ ಹೊಂದಿದ್ದರೆ ಆ ಯಶಸ್ಸಿನಲ್ಲಿ ಬಹುಪಾಲು ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಅವರು 1854ರಲ್ಲಿ ತಿರುವನಂತಪುರ ಬಳಿ ಚೆಂಬಳಾಂತಿ ಎಂಬಲ್ಲಿ ಈಳವ ಕುಟುಂಬದಲ್ಲಿ ಜನಿಸಿದರು. ಜಾತಿ ಕಾರಣಕ್ಕಾಗಿ ಶಿಕ್ಷಣದಿಂದ ವಂಚಿತರಾದ ಇವರು ಮೂಢನಂಬಿಕೆ, ಪಶುಬಲಿ, ಕುಡಿತ ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳಿಗೆ ಸಿಲುಕಿ ಜರ್ಜರಿತರಾಗಿದ್ದರು.

ಕೇರಳದ ಮೂಲನಿ ವಾಸಿಗಳಾದ ಪರಯ, ಹೊಲೆಯ, ಕುರುಂಬರು ಮತ್ತು ತೀಯರ ಸ್ಥಿತಿಗತಿಗಳು ಇವರಿಗಿಂತ ಭಿನ್ನವಾಗಿರಲಿಲ್ಲ. ಇವರಾರಿಗೂ ಸಾರ್ವಜನಿಕ ಮಂದಿರಗಳು ಮತ್ತು ಶಾಲೆಗಳಲ್ಲಿ ಪ್ರವೇಶವಿರಲಿಲ್ಲ. ಕೇರಳದ ನಂಬೂದಿರಿ ಬ್ರಾಹ್ಮಣರು ಸಾರ್ವಜನಿಕ ರಸ್ತೆಗಳಲ್ಲಿ ಬರುತ್ತಿದ್ದರೆ ಕೆಳಜಾತಿಯವರು ದೂರಹೋಗಿ ಮುಖ ತಿರುಗಿಸಿಕೊಂಡು ನಿಲ್ಲಬೇಕಾಗಿತ್ತು. ನಂಬೂದಿರಿಗಳು ಇವರು ತುಳಿದ ನೆಲ ಪವಿತ್ರಗೊಳಿಸಲು ನೀರು ಚಿಮುಕಿಸುತ್ತ ಸಾಗುತ್ತಿದ್ದರು!

ನಾರಾಯಣ ಗುರುಗಳು ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ’ ಎಂಬ ಸಂಸ್ಥೆಯನ್ನು ಕಟ್ಟಿ ಆ ಮೂಲಕ ಶೋಷಿತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಅದ್ವೈತಿಯಾಗಿದ್ದ ಅವರು ಆತ್ಮನು, ಪರಮಾತ್ಮನ ಸಂಭೂತವೇ ಆಗಿರುವಾಗ ಮನುಷ್ಯ, ಮನುಷ್ಯರ ಮಧ್ಯೆ ಭೇದವೇಕೆ ಎಂದು ಪ್ರಶ್ನಿಸಿದರಲ್ಲದೇ ದೈವ ವಂಚಿತರಿಗಾಗಿ ದೇವಾಲಯಗಳನ್ನು ನಿರ್ಮಿಸುವ ಮೂಲಕ ಧರ್ಮವನ್ನು ಶೋಷಿತರ ಮನೆ ಬಾಗಿಲಿಗೆ ಮುಟ್ಟಿಸಿದರು.

ದೇವಾಲಯಗಳ ಸುತ್ತಲೂ ಶಾಲೆ, ಕಾಲೇಜುಗಳು ಮತ್ತು  ವಿದ್ಯಾರ್ಥಿಗಳಿಗಾಗಿ ವಸತಿ ಗೃಹಗಳನ್ನು ನಿರ್ಮಿಸಿದರು. ತಮ್ಮ ಜೀವಿತಾವಧಿಯುದ್ದಕ್ಕೂ ಕಾಲ್ನಡಿಗೆಯಲ್ಲೇ ಸಂಚರಿಸಿದ ಅವರು ಸಾಮಾಜಿಕ ಅನಿಷ್ಟಗಳನ್ನು ತೊರೆಯುವಂತೆ ಮತ್ತು ನೈರ್ಮಲ್ಯಕ್ಕೆ ಒತ್ತುಕೊಡುವಂತೆ ಜನರಿಗೆ ಬೋಧಿಸಿದರು. ಅವರು-ಒಂದೇ ಜಾತಿ, ಒಂದೇ ಧರ್ಮ, ಒಂದೇ ದೈವ-ಎಂಬ ಸಂದೇಶ ಕೊಡುವ ಮೂಲಕ ಸಾಮಾಜಿಕ ಸಾಮರಸ್ಯಕ್ಕಾಗಿ ಹೆಣಗಿದರು.

ಮಹಾರಾಷ್ಟ್ರದ ಹಿಂದುಳಿದ ಮಾಳಿ ಜಾತಿಯಲ್ಲಿ ಜನಿಸಿದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ 19ನೇ ಶತಮಾನದ ಆದಿಯಲ್ಲಿಯೇ ಅಹಿಂದ ವರ್ಗಗಳ ಕಲ್ಯಾಣಕ್ಕಾಗಿ ಹೋರಾಡಿದರು. ಫುಲೆ ದಂಪತಿ ಅಹಿಂದ ಮತ್ತು ಎಲ್ಲಾ ಜಾತಿಯ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ‘ಸತ್ಯಶೋಧಕ ಸಮಾಜ’ ಸ್ಥಾಪಿಸಿದ ಇವರು, ಜನರಲ್ಲಿ ವೈಜ್ಞಾನಿಕ ಮನೋಭಾವ ಹರಡಲು ಶ್ರಮಿಸಿದರು. ಸರಳ ವಿವಾಹಗಳನ್ನು ಜನಪ್ರಿಯಗೊಳಿಸುವ ಮೂಲಕ ಅಹಿಂದ ವರ್ಗಗಳು ಸಾಂಸ್ಕೃತಿಕ ಮತ್ತು ಆರ್ಥಿಕ ದಾಸ್ಯದಿಂದ ಮುಕ್ತರಾಗಲು ಶ್ರಮಿಸಿದರು.

ಹಿಂದುಳಿದ ಸಮಾಜದಲ್ಲಿಯೇ ಹುಟ್ಟಿ, ಆ ಸಮುದಾಯದವರ ಕಷ್ಟಗಳನ್ನು ಸ್ವತಃ ಕಂಡುಂಡಿದ್ದ ಪೆರಿಯಾರ್ ಮತ್ತು ಫುಲೆ ದಂಪತಿ ಅಹಿಂದ ವರ್ಗಗಳಿಗಾಗಿ ಹೋರಾಡಿದ್ದು ಸಹಜವೇ. ಆದರೆ, ರಾಜರಾಗಿ ಹುಟ್ಟಿ ಅಹಿಂದ ಜನರಿಗಾಗಿ ಮಿಡಿದ ಹೃದಯಗಳೂ ಇವೆ. ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ ಮತ್ತು ಮೈಸೂರಿನ ಕೃಷ್ಣರಾಜ ಒಡೆಯರು ದೇಶದಲ್ಲೇ ಮೊದಲ ಬಾರಿಗೆ ಅಹಿಂದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದರು. ಶಾಹು ಮಹಾರಾಜರು ಕಚೇರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿದ್ದ ದಲಿತರೊಬ್ಬರ ಹೋಟೆಲ್‌ನಲ್ಲಿ ವಡಾ–ಪಾವ್ ತಿನ್ನುತ್ತಿದ್ದರಂತೆ! ರಾಜರೇ ದಲಿತರು ಮಾಡಿದ ತಿಂಡಿ ತಿನ್ನಬೇಕಾದರೇ ಅವರ ಪರಿವಾರದ ಮೇಲ್ಜಾತಿಯ ಮಂತ್ರಿಗಳೂ ಅಲ್ಲಿನ ತಿಂಡಿ ತಿನ್ನಲೇಬೇಕಾಗಿತ್ತು!

ಡಾ.ಅಂಬೇಡ್ಕರ್, ಡಾ.ಲೋಹಿಯಾ, ಕಾನ್ಷಿರಾಂ, ವಿ.ಪಿ. ಸಿಂಗ್ ಮತ್ತು ದೇವರಾಜ ಅರಸರು 20ನೇ ಶತಮಾನದಲ್ಲಿ ಅಹಿಂದ ವರ್ಗಗಳ ಕಲ್ಯಾಣಕ್ಕಾಗಿ ಹೋರಾಡಿದ ಪ್ರಾತಃಸ್ಮರಣೀಯರು. ಸ್ವತಂತ್ರ ಭಾರತದಲ್ಲಿ ಅಹಿಂದ ಜನರು ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಬಾಗಿಲು ತೆರೆದುಕೊಳ್ಳಲು ಅಂಬೇಡ್ಕರರ ಕೊಡುಗೆ ಅನನ್ಯ. ಬನಿಯಾ ಜಾತಿಯಲ್ಲಿ ಹುಟ್ಟಿದ ರಾಮಮನೋಹರ ಲೋಹಿಯಾ ಅವರು ತಮ್ಮ ಜೀವನದುದ್ದಕ್ಕೂ ಹಿಂದುಳಿದ ವರ್ಗಗಳಿಗೆ ರಾಜಕೀಯ, ಶಿಕ್ಷಣ ಮತ್ತು ಆಡಳಿತದಲ್ಲಿ ಪಾಲು ಕೊಡಿಸಲು ಹೋರಾಡಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂಬೇಡ್ಕರ್‌ ವಾದವು ಎಷ್ಟು ಪ್ರಸ್ತುತವೋ, ಲೋಹಿಯಾವಾದವೂ ಅಷ್ಟೇ ಪ್ರಸ್ತುತವಾಗಿದೆ.

ಮುಲಾಯಂ, ಲಾಲೂಪ್ರಸಾದ್, ನಿತೀಶ್ ಕುಮಾರ್ ಮುಂತಾದ ಅಹಿಂದ ವರ್ಗದ ರಾಜಕಾರಣಿಗಳು ಲೋಹಿಯಾವಾದದ ಉತ್ಪನ್ನ. ಅರಸರು ಕರ್ನಾಟಕದಲ್ಲಿ ಜಾರಿಗೆ ತಂದ ಉಳುವವನೇ ಭೂಒಡೆಯ, ಮೀಸಲಾತಿ, ಸಾಲ ಮತ್ತು ಜೀತವಿಮುಕ್ತಿ ಮುಂತಾದ ಕಾನೂನುಗಳಿಂದ ಅಹಿಂದ ವರ್ಗ ಉಪಕೃತವಾಗಿದೆ. ಪ್ರಧಾನಿ ಪಟ್ಟವನ್ನೇ ಪಣಕ್ಕಿಟ್ಟು ವಿ.ಪಿ.ಸಿಂಗ್‌ ಜಾರಿತಂದ ಮೀಸಲಾತಿಯಿಂದಾಗಿ ಇಂದು ಅಹಿಂದ ಯುವಕರು ಅಖಿಲ ಭಾರತ ನಾಗರಿಕ ಸೇವೆಗಳನ್ನು ಸೇರುವಂತಾಗಿದೆ. ಎಚ್.ಡಿ. ದೇವೇಗೌಡರನ್ನು ಎದುರಾಳಿಗಳು ಅಹಿಂದ ನಾಯಕರೆಂದು ಪರಿಗಣಿಸುವುದಿಲ್ಲವಾದರೂ ಕರ್ನಾಟಕದಲ್ಲಿ ರಾಜಕೀಯ ಮೀಸಲಾತಿ ಜಾರಿಗೆ ತಂದ ಹಿರಿಮೆ ಅವರದಾಗಿದೆ.

ಈ ಪ್ರಾತಃಸ್ಮರಣೀಯರು ಎಂದೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಅವರು ತಮ್ಮ ಜೀವನವನ್ನೇ  ಅಹಿಂದ ಜನರ ಕಲ್ಯಾಣಕ್ಕಾಗಿ ಮುಡುಪಿಟ್ಟಿದ್ದರು. ಆದರೆ, ಇಂದು ‘ತಾನು, ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ’ ಎಂಬಂತೆ ಅಹಿಂದ ಹೋರಾಟ ನಡೆಯುತ್ತಿದೆ. ಈಗ ‘ತಿಂದುಣ್ಣುವವರೆಲ್ಲ ಒಂದೇ’ ಎನ್ನುವವರು ಅಹಿಂದ ನಾಯಕರಾಗುತ್ತಿದ್ದಾರೆ!

ಹಿಂದೆ ತರಿಕೆರೆ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ಜಾತಿಯವರೊಬ್ಬರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ, ಮೇಲ್ಜಾತಿಯ ಎದುರಾಳಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಅವರ ಗೆಲುವಿನಗುಟ್ಟು ‘ತಿಂದುಣ್ಣವವರೆಲ್ಲ ಒಂದಾಗಬೇಕು’ ಎಂಬುದಾಗಿತ್ತು. ಅಂದರೆ ಮಾಂಸ ತಿನ್ನುವ ಜಾತಿಗೆ ಸೇರಿದವರೆಲ್ಲ, ಮಾಂಸ ಸೇವಿಸದ ಜಾತಿಯ ಅಭ್ಯರ್ಥಿಗಳ ವಿರುದ್ಧ ಮತ್ತು ಮಾಂಸ ತಿನ್ನುವ ತನಗೇ ಮತ ಹಾಕಬೇಕೆಂಬುದು ಅವರ ತಿಳಿವಳಿಕೆಯಾಗಿತ್ತು.

ಮಂಡಲ ಮೀಸಲಾತಿಯನ್ನು ವಿರೋಧಿಸಿದವರೂ, ಕಂಬಾಲಪಲ್ಲಿ ದಲಿತರ ಸಜೀವ ದಹನ ನಡೆದಾಗ ಮೌನವಿದ್ದವರೂ, ಅಧಿಕಾರ ಸಿಕ್ಕುತ್ತಿದ್ದಂತೆಯೇ ಅಹಿಂದ ಮರೆತವರೂ ಇಂದು ನಾಯಕರಾಗಿದ್ದಾರೆ. ಇವರಾರಿಗೂ ಅತೀ ಹಿಂದುಳಿದ ಕುಂಬಾರ, ಹಡಪದ, ಹೆಳವ, ಉಪ್ಪಾರ, ದರ್ಜಿ, ಕಂಬಾರರಂತಹ ಅಲ್ಪಸಂಖ್ಯಾತರು ಕಣ್ಣಿಗೇ ಕಾಣುತ್ತಿಲ್ಲ. ಕಾರಣ, ಇವರು ಜಾತಿ ಮಾತ್ರಕ್ಕಾಗಿ ಅಹಿಂದ ನಾಯಕರಾಗಲಾರರು, ಇವರು ಏನಿದ್ದರೂ ಅಹಿಂದ ಫಲಾನುಭವಿಗಳು ಮಾತ್ರ.

ಲೇಖಕ ಜೆಡಿಯು ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT