ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಧರೆ ಕಂಡಂತೆ ಮಂಡ್ಯ...

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಸೈನಿಕ’ ಸಿನಿಮಾದ ನಂತರ ಮತ್ತೆ ಹಳ್ಳಿ ಹಿನ್ನೆಲೆಯ ಸಿನಿಮಾ ಮಾಡಿ ಎಂದು ಸಾಕಷ್ಟು ಜನ ಮಾತುಕತೆ ಸಂದರ್ಭದಲ್ಲಿ ಹೇಳುತ್ತಿದ್ದರು. ಹಳ್ಳಿಯಲ್ಲಿನ ಆಪ್ತ ಸಂಬಂಧಗಳು, ಚಿಕ್ಕಚಿಕ್ಕ ಭಾವನೆಗಳು ನನಗೆ ಮುಖ್ಯವಾಗುತ್ತವೆ.

ಆ ಕಾರಣಕ್ಕೇ ‘ಅಂಬರೀಶ’ ನಂತರ ಮತ್ತೆ ಗ್ರಾಮೀಣ ಸೊಗಡಿನ ಸಿನಿಮಾಕ್ಕೆ ಕೈ ಹಾಕಿದೆ. ಈ ಸಿನಿಮಾ ಮಂಡ್ಯದಲ್ಲೇ ಆಗಬೇಕು ಎಂಬ ಮಿತಿಯೇನೂ ಹಾಕಿಕೊಂಡಿರಲಿಲ್ಲ. ಆದರೆ ನನ್ನ ಸಿನಿಮಾದ ಕಥೆಗೆ ಸೂಕ್ತವಾದ ಸ್ಥಳಗಳು ಅಲ್ಲಿ ಸಿಕ್ಕವು. ಮಂಡ್ಯವನ್ನು ಯಾರೂ ತೋರಿಸಿರದ ರೀತಿ ತೋರಿಸಿದ್ದೇವೆ.

ಮಂಡ್ಯದಲ್ಲಿ ಇನ್ನೂ ಹತ್ತು ಸಿನಿಮಾ ಚಿತ್ರೀಕರಣ ಮಾಡಿದರೂ ಆ ಲೊಕೇಶನ್‌ಗಳು ಹೊಸತಾಗಿಯೇ ಕಾಣುತ್ತವೆ. ಬೇರೆ ಬೇರೆ ಸಮಯದಲ್ಲಿ ನೋಡಿದಾಗ ಪ್ರಕೃತಿ ಬೇರೆ ಬೇರೆ ರೀತಿಯಲ್ಲೇ ಕಾಣಿಸುತ್ತದೆ. ಅಷ್ಟು ಸಮೃದ್ಧ ಜಿಲ್ಲೆ ಮಂಡ್ಯ.

ನಮ್ಮ ಚಿತ್ರದಲ್ಲಿ ಮಂಡ್ಯ ಪರಿಸರದ ಮಾತ್ರವಲ್ಲ – ದೊಡ್ಡ ಪಾತ್ರಧಾರಿಯೂ ಹೌದು. ಮಂಡ್ಯದಲ್ಲಿ ಹುಡುಕಾಡಿದರೆ ನೂರಾರು ಜಾನಪದ ಕಲಾ ತಂಡಗಳು ಸಿಗುತ್ತವೆ. ನಮ್ಮ ಚಿತ್ರದ ಕಥೆಯೂ ಈ ಜನಪದ ಪರಿಸರದ ಹಿನ್ನೆಲೆಯದ್ದೇ.

ಅಧ್ಯಯನ – ಸಂಶೋಧನೆಯ ನಂತರ ಮಂಡ್ಯದಲ್ಲಿ ಎಷ್ಟೊಂದು ವೈವಿಧ್ಯ ಜಾನಪದ ಕಲೆಗಳಿವೆ, ಅಲ್ಲಿನ ಒಳನುಡಿಗಳು ಅದೆಷ್ಟು ಸಶಕ್ತವಾಗಿವೆ ಎನ್ನುವುದು ತಿಳಿಯಿತು. ಸಿನಿಮಾ ಶುರುವಾಗಿದ್ದು 2015ರ ಜೂನ್‌ನಲ್ಲಿ. ಚಿತ್ರದ ಸಿದ್ಧತೆಗಾಗಿಯೇ ಇಷ್ಟು ಸಮಯ ಹಿಡಿಯಿತು.

ಅಂದರೆ ಸತತವಾಗಿ ಸಿನಿಮಾ ಸಂಭಾಷಣೆ ಬರೆದು ರೂಢಿ ಇರುವವರಿಗಿಂತ ಮಂಡ್ಯ ಪರಿಸರ ಗೊತ್ತಿರುವವರು ಬೇಕು ಎಂಬ ಕಾರಣಕ್ಕೆ ಯುವ ಕಥೆಗಾರ ನಾಗಮಂಗಲ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಿಕೊಂಡೆವು. ಅವರಿಗಿದು ಮೊದಲ ಸಿನಿಮಾ. ಅಲ್ಲದೆ ನಾಯಕ ಸಚಿನ್ ಕೂಡ ಹೊಸಬರು.

‘ಹ್ಯಾಪಿ ಬರ್ತ್‌ಡೇ’ ಎಂದರೆ ಲವ್ ಸ್ಟೋರಿ ಎಂದುಕೊಳ್ಳುವುದು ಸಹಜ. ಆದರೆ ಈ ಶೀರ್ಷಿಕೆಯ ವ್ಯಾಪ್ತಿ ದೊಡ್ಡದಿದೆ. ಮಂಡ್ಯದಲ್ಲಿ ಹುಡುಗರು ಮಾತೆತ್ತಿದರೆ, ‘ಐತೆ ಮಗ್ನೆ ನಿಂಗೆ ಹ್ಯಾಪಿ ಬರ್ತಡೆ’ ಎನ್ನುತ್ತಾರೆ.

ಯಾರಾದರೂ ತಪ್ಪು ಮಾಡಿದರೂ ಈ ಮಾತನ್ನು ಬಳಸುತ್ತಾರೆ, ಯಾರದೋ ಪ್ರೀತಿ ಯಶಸ್ವಿಯಾದರೂ ಇದೇ ಮಾತನ್ನು ಬಳಸುತ್ತಾರೆ. ಅದನ್ನು ಅವರು ಎಲ್ಲದಕ್ಕೂ ಕನೆಕ್ಟ್ ಮಾಡಿಕೊಳ್ಳುತ್ತಾರೆ.

ಹಾಡುಗಳು ಕಥೆಗಿಂತ ಪ್ರತ್ಯೇಕ ಎನ್ನುವಂತಿಲ್ಲ. ಕಥೆಗೆ ಪೂರಕವಾಗಿಯೇ ಹಾಡುಗಳೂ ಸಾಗುತ್ತವೆ. ಅಂದರೆ ಕಮರ್ಷಿಯಲ್ ಚಿತ್ರಕ್ಕೆ ಇರುವಂಥ ಸಿದ್ಧ ಸೂತ್ರಗಳು ಇಲ್ಲಿಲ್ಲ. ಹಾಡುಗಳ ಸಾಹಿತ್ಯದಲ್ಲಿ ದೇಸೀ ಶಬ್ದಗಳ ಬಳಕೆಯಿದೆ. ಹಾಡುಗಳು ಪೂರಕವಾಗಿಲ್ಲದೇ ಹೋದರೆ ಕಥೆ ಸೋಲುವ ಸಾಧ್ಯತೆ ಇತ್ತು.

ವಿ. ಹರಿಕೃಷ್ಣ ಈವರೆಗೆ ಮಾಡಿರದಂಥ ಸಂಗೀತವನ್ನು ಈ ಚಿತ್ರಕ್ಕೆ ಕೊಡುವ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಗೀತ ಸಂಯೋಜನೆಗೇ ಒಂದು ವರ್ಷ ಹಿಡಿಯಿತು.

‘ಅಂಬರೀಶ’ ನನ್ನ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಲಿಲ್ಲ. ಸ್ಟಾರ್ ನಟರ ಇಮೇಜ್‌ಗೆ ತಕ್ಕಂತೆ ಸಿನಿಮಾ ಮಾಡುವ ಅನಿವಾರ್ಯವಿತ್ತು. ಅದು ನಿರ್ದೇಶಕರ ತಪ್ಪೂ ಅಲ್ಲ, ಕಲಾವಿದರ ತಪ್ಪೂ ಇಲ್ಲ. ಕಥೆಯ ಆಯ್ಕೆಯೇ ಜಾಣತನದಿಂದ ನಡೆಯಬೇಕಷ್ಟೆ.

ಹ್ಯಾಪಿ ಬರ್ತ್‌ಡೇ’ಯಲ್ಲಿ ಹೊಸ ಮುಖಗಳಿವೆ. ಒಳ್ಳೆಯ ಕಥೆ, ಎಲ್ಲರೂ ಕೂತು ನೋಡಬಹುದಾದ ಚಿತ್ರ ಮತ್ತು ತುಂಬ ಸಮಯದ ನಂತರ ಇಂಥದ್ದೊಂದು ಸಿನಿಮಾ ಬರುತ್ತಿದೆ ಎಂದಷ್ಟೇ ನಾನು ಪ್ರೇಕ್ಷಕರಿಗೆ ಭರವಸೆ ನೀಡುತ್ತೇನೆ.

‘ಸಂಭ್ರಮ’ಕ್ಕೂ ಈ ಚಿತ್ರದ ಕಥೆಗೂ ಅಂಥ ವ್ಯತ್ಯಾಸವೇನಿಲ್ಲ. ‘ಸಂಭ್ರಮ’ ಮತ್ತು ‘ಸೈನಿಕ’ದಲ್ಲಿ ಇದ್ದ ತಾಜಾತನ ಇಲ್ಲೂ ಇದೆ. ಆದರೆ ಇವತ್ತಿನ ಪ್ರೇಕ್ಷಕರಿಗೆ ಯಾವ ರೀತಿಯಲ್ಲಿ ಸಿನಿಮಾ ಕೊಡುತ್ತಿದ್ದೇವೆ ಎಂಬುದು ಮುಖ್ಯ. ಅಂದರೆ ಸಾಹಿತ್ಯ, ಸಂಗೀತ ಎಲ್ಲವೂ ಎಲ್ಲಿಯೋ ಕೇಳಿದ್ದೇನೆ ಅನ್ನಿಸಬಾರದು ಎಂಬ ನಿರೀಕ್ಷೆಯಿಂದ ಸಾಕಷ್ಟು ಕೆಲಸ ಮಾಡಿದ್ದೇವೆ.

ಪ್ರೀತಿಗೆ ಇದ್ದಷ್ಟೇ ಪ್ರಾಧಾನ್ಯ ಸಾಹಸ ದೃಶ್ಯಗಳಿಗೂ ಇವೆ. ರವಿವರ್ಮ, ಥ್ರಿಲ್ಲರ್ ಮಂಜು, ರಾಮ್ ಲಕ್ಷ್ಮಣ್, ಜಾಲಿ ಬಾಸ್ಟಿನ್ ಈ ಚಿತ್ರದ ಹೊಡೆದಾಟದ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಪ್ರತಿ ವಿಭಾಗದ ಕೆಲಸವನ್ನೂ ತೀರಾ ಮುತುವರ್ಜಿಯಿಂದ ಮಾಡಿದ್ದೇವೆ. ಕೆಲವು ಸಿನಿಮಾ ಮಾಡುವಾಗ ನಿರ್ದೇಶಕನಿಗೆ, ಇದು ವರ್ಕ್‌ಔಟ್ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಶುರುವಾಗುತ್ತದೆ. ಆದರೆ ಈ ಚಿತ್ರದಲ್ಲಿ ನನಗೆ ಎಲ್ಲೂ ಹಾಗನ್ನಿಸಿಲ್ಲ.

ಸಂಪೂರ್ಣ ತೃಪ್ತಿ ಇದೆ. ಯಾವುದೇ ವೈಭವೀಕರಣ ಇಲ್ಲ. ಎಲ್ಲವೂ ನೈಜ ಎನ್ನುವಂತಿದೆ. ಇದು ಅಪ್ಪಟ ನಿರ್ದೇಶಕನ ಸಿನಿಮಾ. ಇಲ್ಲಿ ಮಹೇಶ್ ಸುಖಧರೆ ಇಮೇಜ್ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT