ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಮ್ಮ ಮಾಮಿ ಚಕ್ಕುಲಿಯ ಘಮ...

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶ್ರೀನಗರದ ಕಾಳಿದಾಸ ಲೇಔಟ್‌ನ ನಾರಿಕೇಳ ಬೀದಿಯಲ್ಲಿ ಸುಮ್ಮನೆ ಸಾಗಿದರೆ ಸಾಕು ಮೂಗಿನ ಹೊಳ್ಳೆಗಳು ತೆರೆದುಕೊಳ್ಳುತ್ತವೆ. ಚಕ್ಕುಲಿ, ಕೋಡುಬಳೆ, ಕಜ್ಜಾಯದ ಘಮ ಹೆಜ್ಜೆ ಕೀಳದಂತೆ ನಮ್ಮನ್ನು ಅಲ್ಲೇ ಕಟ್ಟಿ ಹಾಕುತ್ತದೆ. ಇನ್ನು ಹಬ್ಬದ ದಿನಗಳಲ್ಲಂತೂ ಈ ಸುವಾಸನೆಯ ಘಮವೇ ಬೇರೆ.

ಹೌದು, ಇದು ನಾರಿಕೇಳ ಬೀದಿಯ ರಾಜಲಕ್ಷ್ಮಿ ಅವರ ಮನೆ. ‘ರಾಜಮ್ಮ ಮಾಮಿ ಕಾಂಡಿಮೆಂಟ್ಸ್‌’ ಎಂದೇ ಹೆಸರಾಗಿರುವ  ರಾಜಲಕ್ಷ್ಮಿ ಅವರು ಮನೆಯಲ್ಲೇ  ಶುಚಿ–ರುಚಿಯಾದ ತಿಂಡಿಗಳನ್ನು ತಯಾರಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ಸುಮಾರು 30 ವರ್ಷಗಳಿಂದ ಭಿನ್ನ–ವಿಭಿನ್ನ ತಿನಿಸುಗಳನ್ನು ಮಾಡಿ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ ರಾಜಲಕ್ಷ್ಮಿ. ಮೊದಲು ಹಪ್ಪಳ ಮಾಡಿ ಮಾರಾಟ ಮಾಡುತ್ತಿದ್ದರು. ಅವರ ಹಪ್ಪಳದ ಕೈರುಚಿ ನೋಡಿದವರು ನೀವೇಕೆ ಚಕ್ಕುಲಿ, ಕೋಡುಬಳೆಯಂತಹ ಕರಿದ ಪದಾರ್ಥಗಳ ತಿಂಡಿ ಮಾಡಬಾರದು ಎಂಬ ಸಲಹೆ ನೀಡಿದರು.

ಅವರಿಗೂ ಈ ಸಲಹೆ ಯಾಕೋ ಸರಿಯೆನ್ನಿಸಿತು. ಹೀಗೆ ಚಕ್ಕುಲಿ ತಯಾರಿಸಲು ಆರಂಭಿಸಿದ ಇವರು ಇಂದಿಗೂ ಅದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಲ್ಲದೇ ತಮ್ಮ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿಗೂ ಈ ಚಕ್ಕುಲಿ ಮಾಡುವ ಕಲೆಯನ್ನು ಧಾರೆ ಎರೆದಿದ್ದಾರೆ.

ಆರಂಭದ ಹತ್ತು ವರ್ಷ ಕೇವಲ ಮನೆಯವರೇ ಸೇರಿಕೊಂಡು ಚಕ್ಕುಲಿಗಳನ್ನು ತಯಾರಿಸುತ್ತಿದ್ದರು.  ಬೇಡಿಕೆ ಹೆಚ್ಚಿದಂತೆ ಕೆಲಸಗಾರರ ಸಹಾಯ ಪಡೆದರು. ಪ್ರಸ್ತುತ ಅವರ ಮನೆಯಲ್ಲಿ ಎಂಟು ಮಂದಿ ಕೆಲಸಗಾರರಿದ್ದಾರೆ. ವರ್ಷ ಪೂರ್ತಿ ಇವರು ತಯಾರಿಸಿದ ತಿಂಡಿಗಳಿಗೆ ಬೇಡಿಕೆ ಇರುತ್ತದೆ. ಕೇವಲ ಅಂಗಡಿ, ಬೇಕರಿಗಳಲ್ಲದೇ,  ಮದುವೆ–ಮುಂಜಿಯಂತಹ ಕಾರ್ಯಕ್ರಮಗಳು ನಡೆದಾಗಲೂ ಕೂಡ ಇವರಿಗೆ ಆರ್ಡರ್ ನೀಡಿ ಕೊಂಡುಹೋಗುತ್ತಾರೆ.

ವರ್ಷದ 345 ದಿನವೂ ತಮ್ಮ ತಿಂಡಿಗಳಿಗೆ ಬೇಡಿಕೆ ಇದೆ ಎಂದು ನಗುವ ಇವರು, ಪಿತೃಪಕ್ಷ ಹಾಗೂ ಧರ್ನುಮಾಸದಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ ಎನ್ನುತ್ತಾರೆ.

ಬೇರೆ ದಿನಗಳಲ್ಲಿ ಬರೇ ಚಕ್ಕುಲಿ,  ಕೋಡುಬಳೆಯಾದರೆ ಹಬ್ಬಗಳು ಬಂತೆಂದರೆ ಸಾಕು ವಿವಿಧ ತರಹೇವಾರಿ ತಿಂಡಿಗಳು ಅವರ ಮನೆಯಲ್ಲಿ ರೆಡಿಯಾಗುತ್ತದೆ. ಯಾವ ಯಾವ ಹಬ್ಬಕ್ಕೆ ಏನೇನು ತಿಂಡಿ ವಿಶೇಷ ಎನ್ನುವುದನ್ನು ಅರಿತಿರುವ ರಾಜಲಕ್ಷ್ಮಿ ಪ್ರತಿ ಹಬ್ಬಕ್ಕೂ ವಿಭಿನ್ನ ವಿಶೇಷ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ಸಂಕ್ರಾಂತಿಗೆ ಸಕ್ಕರೆ ಅಚ್ಚು, ಗಣೇಶನ ಹಬ್ಬಕ್ಕೆ ಹೋಳಿಗೆ, ಪುರಿಉಂಡೆ, ಕೃಷ್ಣಾಷ್ಟಮಿಗೆ ಚಕ್ಕುಲಿ ಹೀಗೆ ತಿಂಡಿಗಳನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲದೇ  ಮನೆಯಲ್ಲಿ ನೀವೇ ಚಕ್ಕುಲಿ, ಕೋಡುಬಳೆ ತಯಾರಿಸಿ ಕೊಳ್ಳುವವರಾದರೆ ಹಿಟ್ಟು ಕೂಡ ಅವರ ಬಳಿ ಲಭ್ಯವಿದೆ.

ಆಯಾ ಸೀಸನ್‌ಗೆ ತಕ್ಕ ಹಾಗೇ ಉಪ್ಪಿನಕಾಯಿಯನ್ನು ಕೂಡ ಇವರು ತಯಾರಿಸುತ್ತಾರೆ. ಮಾವಿನಕಾಯಿ, ನಿಂಬೆಕಾಯಿ ಉಪ್ಪಿನಕಾಯಿಗಳು ಇವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ.

ವಿಭಿನ್ನ ಆಕಾರ ಹಾಗೂ ವಿನ್ಯಾಸಗಳ ಚಕ್ಕುಲಿಯನ್ನು ತಯಾರಿಸಲು ಸಿದ್ಧ ಹಸ್ತರಾಗಿರುವ ಇವರು ಹುಟ್ಟುಹಬ್ಬ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಉಡುಗೊರೆ ನೀಡಲು ಆರ್ಡರ್‌ ನೀಡಿದ ವಿನ್ಯಾಸದಲ್ಲಿ ಚಕ್ಕುಲಿ ಮಾಡಿಕೊಡುತ್ತಾರೆ.

ಪ್ರತಿದಿನ 60ರಿಂದ 70 ಕೆ.ಜಿ ಆಗುವಷ್ಟು ಚಕ್ಕುಲಿಗಳನ್ನು ಇವರು ತಯಾರಿಸುತ್ತಾರೆ. ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಇವರು ಚಕ್ಕುಲಿ ಮುಂತಾದ ತಿಂಡಿಗಳನ್ನು ತಯಾರಿಸುತ್ತಾರೆ.

ವಿಳಾಸ: ರಾಜಮ್ಮ ಮಾಮಿ ಕಾಂಡಿಮೆಂಟ್ಸ್‌್‌, ನಂ 3ಸಿ/66, 5ನೇ ಅಡ್ಡರಸ್ತೆ, ಕಾಳಿದಾಸ ಲೇಔಟ್, ಶ್ರೀನಗರ, ಮೊಬೈಲ್‌: 90365 25412, 90087 85084. 

ಗಣೇಶ ಹಬ್ಬದ  ವಿಶೇಷ
ಪ್ರತಿ ಹಬ್ಬಕ್ಕೂ ಒಂದೊಂದು ವಿಶೇಷವಾದರೆ ಈ ಬಾರಿಯ ಗಣೇಶ ಚತುರ್ಥಿಯ ವಿಶೇಷವಾಗಿ ಅವರು ತಯಾರಿಸಿದ್ದು ಹೋಳಿಗೆ, ಚಕ್ಕುಲಿ.

ಗಣೇಶ ಹಬ್ಬದ ಸಲುವಾಗಿ ಚಕ್ಕುಲಿಯಲ್ಲಿ ಗಣೇಶನ ವಿಗ್ರಹವನ್ನು ತಯಾರಿಸಿರುವುದು ಇವರ ವಿಶೇಷ. ಅಲ್ಲದೇ ಪುರಿಉಂಡೆ, ಪೆಪ್ಪರ್‌ ಮೆಂಟ್ ಗೋಪುರ, ಪಿಸ್ತಾ ಬಾದಾಮ್ ಗೋಪುರ , ಗೋಡಂಬಿ ಗೋಪುರ ಇವೆಲ್ಲವೂ ಇವರ ವಿಶೇಷವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT