ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಸೌಧದ ಮುಂದೆ ಛಾಯಾಗ್ರಾಹಕರ ಭಾವ ಲಹರಿ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಯಾರ ಕಲ್ಪನೆಗೂ ನಿಲುಕದೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಬಹುತೇಕರಿಗೆ ನೆಚ್ಚಿನ ತಾಣ. ಇತ್ತೀಚಿನ ದಿನಗಳಲ್ಲಿ ಈ ನಗರದ ಚಹರೆ ಬದಲಾಗುತ್ತಿರುವ ಬಗ್ಗೆ ಹಲವರಲ್ಲಿ ಬೇಸರವೂ ಇದೆ.

ಆದರೂ ವಿಧಾನಸೌಧ, ಹೈಕೋರ್ಟ್‌, ಕಬ್ಬನ್‌ ಉದ್ಯಾನ, ಲಾಲ್‌ಬಾಗ್‌, ಇಸ್ಕಾನ್‌ ಮೊದಲಾದ ಸ್ಥಳಗಳನ್ನು ನೋಡಲು ಮುಗಿಬೀಳುವವರ ಸಂಖ್ಯೆಯೇನೂ ಕಮ್ಮಿ ಇಲ್ಲ.

ಈ ಸ್ಥಳಗಳ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳುವುದೆಂದರೆ ಏನೋ ಪುಳಕ. ಕಿಸೆಯಲ್ಲಿ ಮೊಬೈಲ್‌ ಇದ್ದರೂ ಕ್ಯಾಮೆರಾದಲ್ಲಿ ಫೋಟೊ ತೆಗೆಸಿ, ಪ್ರಿಂಟ್‌ ಹಾಕಿಸಿ, ಅಲ್ಬಂ ಅಥವಾ ಚೌಕಟ್ಟು ಹಾಕಿಸಿ ನೋಡುವಾಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲು ಆಗದು.

ವಿಧಾನಸೌಧದ ಮುಂದೆ 12ಕ್ಕೂ ಹೆಚ್ಚು ಛಾಯಾಗ್ರಾಹಕರು ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಪ್ರವಾಸಿಗರ ಫೋಟೊ ಕ್ಲಿಕ್ಕಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಆಧುನಿಕತೆಯ ಭರಾಟೆಯಿಂದಾಗಿ ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಕ್ಯಾಮೆರಾದಲ್ಲಿ ಒಂದು ಫೋಟೊ ತೆಗೆಸಿಕೊಳ್ಳೋಣ ಎನ್ನುವವರು ಇಂದಿಗೂ ಇದ್ದಾರೆ ಎಂಬುದು ಈ ಕ್ಷಣದ ವಾಸ್ತವವೂ ಹೌದು.

ತಮ್ಮ ವೃತ್ತಿಯ ಸವಾಲುಗಳು, ಬದಲಾಗುತ್ತಿರುವ ಬೆಂಗಳೂರು, ಜನರ ಮನೋಧರ್ಮದ ಬಗ್ಗೆ ವಿಧಾನಸೌಧದ ಎದುರು ಚಿತ್ರ ತೆಗೆಯುವ ಛಾಯಾಗ್ರಾಹಕರು  ಇಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*
ಈಗ ಸ್ವಲ್ಪ ಸುಧಾರಿಸಿದೆ

ನಾನಿಲ್ಲಿ ಕಳೆದ ಹದಿನೈದು ವರ್ಷಗಳಿಂದ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಮೊದಲು  ಬೆಂಗಳೂರಿಗೆ ಬಂದ ಜನರ ಪೈಕಿ ನೂರಕ್ಕೆ ನೂರರಷ್ಟು ಜನರು ಚಿತ್ರ ತೆಗೆಸಿಕೊಳ್ಳುತ್ತಿದ್ದರು. ಈಗ ಅದರ ಅರ್ಧದಷ್ಟು ಮಾತ್ರವೇ ಸಿಗುತ್ತಾರೆ. ಕೆಲವೊಮ್ಮೆ ಒಂದೂ ಫೋಟೊ ತೆಗೆಯದೇ ಖಾಲಿ ಕೈಲಿ ಮನೆಗೆ ಹೋದ ಉದಾಹರಣೆಯೂ ಇದೆ.

ಬಹುತೇಕರು 30ರಿಂದ 40 ಸಾವಿರ ಮೌಲ್ಯದ ಮೊಬೈಲ್‌ ಫೋನ್‌ ಇಟ್ಟುಕೊಂಡಿರುತ್ತಾರೆ. ಅವರಿಗೆ ಬೇಕಾದಂತೆ ಸೆಲ್ಫಿ, ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಮೆಟ್ರೊ ಕೆಲಸ ನಡೆಯುತ್ತಿದ್ದ ಈ ಆರೇಳು ವರ್ಷಗಳಲ್ಲಿ ನಮ್ಮ ಪಾಡು ಹೇಳತೀರದಾಗಿತ್ತು. ಈಗ ಸ್ವಲ್ಪ ಸುಧಾರಿಸಿದೆ.

ಮೊಬೈಲ್‌ ಫೋನ್‌ ಬಂದಿದ್ದರೂ ಕೆಲವರು ಇಷ್ಟಪಟ್ಟು ಕ್ಯಾಮೆರಾದಿಂದ ಚಿತ್ರ ತೆಗೆಸಿಕೊಳ್ಳುತ್ತಾರೆ. ಎಸ್‌.ಎಂ.ಕೃಷ್ಣ, ಧರ್ಮಸಿಂಗ್‌, ಬಿ.ಎಸ್‌.ಯಡಿಯೂರಪ್ಪ, ಕುಮಾರಸ್ವಾಮಿ ಮುಂತಾದವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭಗಳಲ್ಲಿ ಚಿತ್ರಗಳನ್ನು ತೆಗೆದಿದ್ದೇವೆ. ಅವರೂ ಸಂತೋಷಪಟ್ಟು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ.

ಹೈಕೋರ್ಟ್‌, ವಿಧಾನಸೌಧ, ಶಾಸಕರು ಮತ್ತು ಸಚಿವರ ಕಚೇರಿಗಳು, ವಿಶ್ವೇಶ್ವರಯ್ಯ ಟವರ್‌, ಚಂದನ ವಾಹಿನಿ ಇತ್ಯಾದಿ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಅಪರೂಪಕ್ಕೆ ಮದುವೆ ಸಮಾರಂಭಗಳಿಗೂ ಆಹ್ವಾನ ಸಿಗುತ್ತದೆ. ಹೀಗಾಗಿ ಕುಟುಂಬ ನಿರ್ವಹಣೆ ಸಾಧ್ಯವಾಗಿದೆ.
–ದೇವರಾಜ್‌, ಹೆಗಡೆನಗರ

*
ಆಗಿನ ಸೌಂದರ್ಯ ಈಗ ಇಲ್ಲ
ಮಂಡ್ಯ ನನ್ನ ಸ್ವಂತ ಊರು. 30 ವರ್ಷಗಳಿಂದ ಇಲ್ಲಿ ಛಾಯಾಗ್ರಾಹಕನಾಗಿದ್ದೇನೆ. ಅದಕ್ಕೂ ಮೊದಲು ಇಲ್ಲಿಯೇ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದೆ. ಛಾಯಾಗ್ರಾಹಕ ಸ್ನೇಹಿತರ ಪರಿಚಯವಾಗಿ ನಾನೂ ಇದೇ ವೃತ್ತಿ ಆರಂಭಿಸಿದೆ.

ಆಗಿನ ಬೆಂಗಳೂರಿನ ಸೌಂದರ್ಯ ಈಗ ಇಲ್ಲ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಸುಂದರವಾದ ಉದ್ಯಾನವಿತ್ತು. ಇದರಿಂದ ವಿಧಾನಸೌಧಕ್ಕೂ ಕಳೆ ಇತ್ತು. ಇಲ್ಲಿಗೆ ಬರುತ್ತಿದ್ದ ಪ್ರವಾಸಿಗರು ತಿಂದು–ಉಂಡು ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಚಿತ್ರಗಳನ್ನು ತೆಗೆಸಿಕೊಂಡು ಖುಷಿ ಪಡುತ್ತಿದ್ದರು. ಅವರಿಂದಲೇ ನಮ್ಮ ಜೀವನದ ಬಂಡಿ ಸಾಗಿದೆ.

ಮೊದಲು ವಿಧಾನಸೌಧ ಪರಿಸರದಲ್ಲಿ ಸಿನಿಮಾ ಚಿತ್ರೀಕರಣ ಹೆಚ್ಚಾಗಿ ನಡೆಯುತ್ತಿತ್ತು.  ಸಿನಿಮಾತಾರೆಯರನ್ನು ನೋಡಲು ಜನ ಮುತ್ತಿಕೊಳ್ಳುತ್ತಿದ್ದರು. ನೆಚ್ಚಿನ ನಟ–ನಟಿಯರ ಜತೆ ಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದರು. ಉತ್ತಮ ಆದಾಯ ಸಿಗುತ್ತಿತ್ತು. ಈಗ ದಿನಕ್ಕೆ 5 ಚಿತ್ರಗಳನ್ನು ತೆಗೆಯುವುದೂ ಕಷ್ಟವಾಗಿದೆ.

ಮೊಬೈಲ್‌ ಫೋನ್‌ಗಳ ಹಾವಳಿಯಿಂದಾಗಿ ನಮ್ಮ ಅನ್ನಕ್ಕೆ ಕಲ್ಲು ಬೀಳುತ್ತಿದೆ. ಮೊಬೈಲ್‌ಗಳಲ್ಲಿಯೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಿಂದ ನಮಗೆ ವ್ಯಾಪಾರ ಇಲ್ಲದಾಗಿದೆ.
–ತಮ್ಮಯ್ಯ, ಎಗ್ಗನಹಳ್ಳಿ

*
25 ವರ್ಷದ ಅನುಭವ
ನನಗೆ ತಿಳಿವಳಿಕೆ ಬಂದಾಗಿನಿಂದ ಸುಬ್ಬಯ್ಯ ಸರ್ಕಲ್‌ನಲ್ಲಿದ್ದ ಪ್ರಿಯಾ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿದ್ದೆ. ರವಿ ಎಂಬುವವರು ಚೆನ್ನಾಗಿ ಕೆಲಸ ಕಲಿಸಿದ್ದರು. ನಂತರ ಅವರು ಇಲ್ಲಿನ ಪ್ರವಾಸಿ ಸ್ಥಳಗಳಲ್ಲಿ ಛಾಯಾಚಿತ್ರ ತೆಗೆಯಲು ಮುಂದಾದರು. ನಾನೂ ಅವರ ಜತೆಗೇ ಬಂದಿದ್ದೆ.

ಕಳೆದ 25 ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಇಲ್ಲಿಗೆ ಬರುವ ಮೊದಲು ಗಂಗಾಧರ, ನರಸಿಂಹಯ್ಯ, ಮೂರ್ತಿ ಎಂಬುವವರು ಇಲ್ಲಿದ್ದರು.

ವಿಧಾನಸೌಧದ ಜೊತೆಗೆ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌, ಶಿವನ ದೇವಸ್ಥಾನ ಸೇರಿದಂತೆ ಹಲವೆಡೆ ಮುಂತಾದ ಸ್ಥಳಗಳಲ್ಲಿ ನಮ್ಮಂತೆಯೇ ಛಾಯಾಗ್ರಾಹಕರಿದ್ದಾರೆ.

ಹಿಂದೆ ರೀಲ್‌ ಕ್ಯಾಮೆರಾ ಬಳಸುತ್ತಿದ್ದೆವು. ಪ್ರವಾಸಿಗರ ವಿಳಾಸ ಪಡೆದು ಅಂಚೆ ಮೂಲಕ ಕಳುಹಿಸುತ್ತಿದ್ದೆವು. ಇಲ್ಲವೇ ಬೇರೆ ಬೇರೆ ಸ್ಥಳಗಳನ್ನು ನೋಡಿಕೊಂಡು ಬರುವಷ್ಟರಲ್ಲಿ ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿನ ಲ್ಯಾಬ್‌ನಲ್ಲಿ ಪ್ರಿಂಟ್‌ ಹಾಕಿಸಿ ಫೋಟೊ ತಂದುಕೊಡುತ್ತಿದ್ದೆವು. ಈಗ ಕಾಲಕ್ಕೆ ತಕ್ಕಂತೆ ಎಲ್ಲರ ಬಳಿ ಡಿಜಿಟಲ್‌ ಕ್ಯಾಮೆರಾಗಳಿವೆ. ಸಣ್ಣ ಪ್ರಿಂಟರ್‌ ಇಟ್ಟುಕೊಂಡಿದ್ದೇವೆ. ಫೋಟೊ ತೆಗೆದ ತಕ್ಷಣವೇ ಚಿತ್ರ ಪ್ರಿಂಟ್‌ ಮಾಡಿ ಕೊಡುತ್ತೇವೆ.
–ಆನಂದ್‌, ಭುವನೇಶ್ವರಿ ನಗರ

*
ವಿಧಾನಸೌಧದ ಕಳಸ– ಜನರ ಕಾಲು

ನಾನು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ ಛಾಯಾಗ್ರಾಹಕ ಗಣೇಶ್‌ ಎಂಬುವವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದೆ. ಊಟ ಕೊಟ್ಟು ದಿನಕ್ಕೆ ಮೂವತ್ತು ರೂಪಾಯಿ ಕೂಲಿ ಕೊಡುತ್ತಿದ್ದರು. ಆಗ ಮಿನಲ್ಟೊ, ವುಡ್‌ಲೆನ್ಸ್‌ ಕ್ಯಾಮೆರಾಗಳಿದ್ದವು.

ನನ್ನ ಕೈಲಿ ಕ್ಯಾಮೆರಾ ಕೊಟ್ಟು ವಿಧಾನಸೌಧದ ಮೇಲಿನ ಕಳಸ– ಕೆಳಗೆ ನಿಂತಿರುವ ಜನರ ಕಾಲು ಕಾಣುವಂತೆ ಫೋಟೊ ತೆಗಿ ಎಂದಷ್ಟೇ ಹೇಳಿದ್ದರು. ನಾಲ್ಕು ವರ್ಷ ಅವರ ಬಳಿಯೇ ಕೆಲಸ ಮಾಡಿದೆ. ನಂತರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾರಂಭಿಸಿದೆ.

ಮೆಟ್ರೊ ಕಾಮಗಾರಿ ನಡೆಯುತ್ತಿದ್ದಾಗ ನಮ್ಮ ಆದಾಯಕ್ಕೆ ಹೊಡೆತ ಬಿತ್ತು. ಬೆಂಗಳೂರಿಗೆ ಬರುತ್ತಿದ್ದ ಅನೇಕರು ‘ವಿಧಾನಸೌಧ ಕಾಣಲ್ಲ– ಫೋಟೊ ತೆಗೆಸಿಕೊಂಡರೂ ಪ್ರಯೋಜನವಿಲ್ಲ’ ಎಂದು ಬಿಡುತ್ತಿದ್ದರು. ಆಗ ನಮಗೆಲ್ಲ ತುಂಬಾ ನಷ್ಟವಾಗುತ್ತಿತ್ತು. ಕುಟುಂಬ ಸಾಗಿಸುವುದೂ ಕಷ್ಟವಾಗಿತ್ತು.

ಈಗ ಈ ಮೊಬೈಲ್‌ಗಳ ಹಾವಳಿ. ನಮ್ಮ ಬಳಿಯೇ ಅತ್ಯಾಧುನಿಕ ಮೊಬೈಲ್‌ ಸೆಟ್‌ಗಳಿರುವಾಗ ನಿಮಗೇಕೆ 30 ರೂಪಾಯಿ ಕೊಡಬೇಕು ಎನ್ನುತ್ತಾರೆ ಜನ. ಆದರೆ ಉತ್ತರಕರ್ನಾಟಕದ ಮಂದಿ ಹಂಗಲ್ಲ. ಅವರಿಗೆ ನಮ್ಮ ಬಳಿ ಫೋಟೊ ತೆಗೆಸಿಕೊಂಡರೇ ತೃಪ್ತಿ. ಅಂಥವರಿಂದಲೇ ನಮ್ಮ ಹೊಟ್ಟೆಪಾಡು ನಡೆಯುತ್ತಿದೆ. ಮೆಟ್ರೊ ಸಂಚಾರ ಆರಂಭವಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.

ಏನೇ ಕಷ್ಟಗಳು ಬಂದರೂ ನಾವು ಕೆಲವರು ಈ ವೃತ್ತಿಗೆ ವಿಮುಖರಾಗಲಿಲ್ಲ. ಅಖಿಲ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವನ್ನು ನೋಂದಣಿ ಮಾಡಿಸಿ ಈಗ ಅಧಿಕೃತವಾಗಿ ಗುರುತಿನ ಚೀಟಿಗಳನ್ನು ಪಡೆದಿದ್ದೇವೆ.
–ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT