ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಸರ್ಕಾರದ ಶಂಕಾಸ್ಪದ ನಡೆ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನೇಮಕಾತಿಯ ಸಂದರ್ಶನಕ್ಕೆ ಅಭ್ಯರ್ಥಿಗಳ ಆಯ್ಕೆ ಅನುಪಾತವನ್ನು 1:3ರಿಂದ 1:5ಕ್ಕೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆಯೋಗದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ‘ರಾಯರ ಕುದುರೆ ಬರಬರುತ್ತಾ ಕತ್ತೆಯಾಗುತ್ತಿದೆ’ ಎಂಬ ಮಾತು ನೆನಪಿಗೆ ಬರುತ್ತದೆ.  2011ರ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿತ್ತು.

ಆಯೋಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೇಮಕಾತಿ ಪಟ್ಟಿಯನ್ನೇ ರದ್ದು ಮಾಡಿತ್ತು. ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ.ಹೋಟಾ ಅವರ ನೇತೃತ್ವದ ಸಮಿತಿ ರಚಿಸಿ ಕೆಪಿಎಸ್‌ಸಿ ಸುಧಾರಣೆಗೆ ಮುಂದಾಗಿತ್ತು. ಆದರೆ ಈಗ ಹೋಟಾ ಸಮಿತಿಯ ಶಿಫಾರಸುಗಳನ್ನೇ ಸರ್ಕಾರ ಮೂಲೆಗುಂಪು ಮಾಡುತ್ತಿದೆ. ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಾಗ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಬೇಕು ಎಂದು ಹೋಟಾ ಸಮಿತಿ ಶಿಫಾರಸು ಮಾಡಿದೆ. ಇದನ್ನು ರಾಜ್ಯ ಸರ್ಕಾರವೂ ಒಪ್ಪಿಕೊಂಡಿತ್ತು. ಅಲ್ಲದೆ 2014ರ ಸಾಲಿನ 464 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ 2015ರಲ್ಲಿ ಅಧಿಸೂಚನೆ ಹೊರಡಿಸುವಾಗ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸುವುದಾಗಿ ಕೆಪಿಎಸ್‌ಸಿ ಹೇಳಿತ್ತು.

ಅದರಂತೆ ಸಂದರ್ಶನಕ್ಕೆ ಅರ್ಹರಾದವರ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಈಗ ರಾಜ್ಯ ಸರ್ಕಾರ ಅನುಪಾತದ ಪ್ರಮಾಣವನ್ನು ಏಕಾಏಕಿ ಹೆಚ್ಚಿಸಿರುವುದು ಹಾಗೂ ಸಂದರ್ಶನಕ್ಕೆ ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಸದಸ್ಯರ ನೇತೃತ್ವದಲ್ಲಿ ನಾಲ್ವರು ವಿಷಯ ತಜ್ಞರ ಸಮಿತಿ ರಚಿಸಬೇಕು ಎಂಬ ನಿಯಮವನ್ನೂ ಬದಲಾಯಿಸಲು ಮುಂದಾಗಿರುವುದು ‘ನಾಯಿ ಬಾಲ ಡೊಂಕು’ ಎಂಬ ಮಾತನ್ನು ನೆನಪಿಸುವಂತಿದೆ. ಹೋಟಾ ಸಮಿತಿಯ ಶಿಫಾರಸಿನಂತೆಯೇ ನಡೆದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿದ ನಂತರವೂ ರಾಜ್ಯ ಸರ್ಕಾರ ಹೀಗೆ ನಡೆದುಕೊಂಡಿರುವುದನ್ನು ಉದ್ಧಟತನದ ಪರಮಾವಧಿ ಎಂದೇ ಹೇಳಬೇಕು. ಕೆಪಿಎಸ್‌ಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಾಗಲೂ ಹೋಟಾ ಸಮಿತಿ ಶಿಫಾರಸನ್ನು ಕಡೆಗಣಿಸಲಾಗಿತ್ತು.

ಹಲವಾರು ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನೇ ನೇಮಕ ಮಾಡಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೆ ಸಮಿತಿ ರಚಿಸಬೇಕು ಎಂಬ ಸಲಹೆಯನ್ನೂ ರಾಜ್ಯ ಸರ್ಕಾರ ಕಡೆಗಣಿಸಿತ್ತು. ತನಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಈಗ ಅನುಪಾತ ಹೆಚ್ಚಿಸಿರುವುದು ಸರ್ಕಾರದ ಪ್ರಾಮಾಣಿಕತೆಯನ್ನು ಶಂಕಿಸುವಂತೆ ಮಾಡಿದೆ. ಅನುಪಾತ ಹೆಚ್ಚಿಸುವ ನಿರ್ಧಾರವನ್ನು ಇನ್ನಷ್ಟು ಪಾರದರ್ಶಕವಾಗಿ ತೆಗೆದುಕೊಳ್ಳಲು ಸಾಧ್ಯವಿತ್ತು. ಅದರಲ್ಲಿಯೂ ಸರ್ಕಾರ ಎಡವಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಅನುಪಾತದ ಪ್ರಮಾಣ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅನುಪಾತ ಹೆಚ್ಚಳದಿಂದ ಸಂದರ್ಶನಕ್ಕೆ ಹೆಚ್ಚು ಜನ ಬರಬಹುದೇ ವಿನಾ ಸೂಕ್ತ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದರೆ ಗ್ರಾಮೀಣ ಅಭ್ಯರ್ಥಿಗಳಿಗೆ ಲಾಭವಾಗುವುದಿಲ್ಲ ಎನ್ನುವುದು ಸ್ಪಷ್ಟ.

ಸಂದರ್ಶನದಲ್ಲಿ 200 ಅಂಕ ಇರುವುದರಿಂದ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ನೀಡಿ ಅವರನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿಯೇ ಅನುಪಾತ ಹೆಚ್ಚಳ ಮಾಡಲಾಗಿದೆ ಎಂಬ ಶಂಕೆ ಕಾಡುತ್ತಿದೆ. ಸಂದರ್ಶನ ಸಮಿತಿಯ ಸದಸ್ಯರಿಗೆ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕದ ಮಾಹಿತಿ ನೀಡಬಾರದು ಎಂದು ನಿಯಮವಿದೆ. ಆದರೆ ಈಗ ಅನುಪಾತ ಹೆಚ್ಚಳವಾಗಿರುವುದರಿಂದ ಈ ನಿಯಮ ಕೂಡ ಪಾಲನೆಯಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚಿನ ವರ್ಷಗಳಲ್ಲಿ ಕರ್ಮಕಾಂಡದ ಕೂಪವೇ ಆಗಿದೆ. ಭ್ರಷ್ಟಾಚಾರವಿಲ್ಲದೆ ಯಾವುದೇ ನೇಮಕಾತಿ ನಡೆಯುವುದೇ ಇಲ್ಲ ಎಂಬ ಭಾವನೆ ಇದೆ. ರಾಜ್ಯ ಸರ್ಕಾರ ಅದನ್ನು ಶುದ್ಧ ಮಾಡಲು, ಸುಧಾರಿಸಲು ಯತ್ನಿಸಬೇಕೇ ವಿನಾ ಯಾವುದೇ ಕಾರಣಕ್ಕೂ ಇನ್ನಷ್ಟು ಹದಗೆಡಲು ಅವಕಾಶ ನೀಡಬಾರದು. ಇದು ಕೇವಲ ಒಂದು ನೇಮಕಾತಿಯ ಪ್ರಶ್ನೆಯಲ್ಲ. ಕೆಪಿಎಸ್‌ಸಿ ಮೂಲಕ ನೇಮಕವಾಗುವವರು ಮುಂದಿನ 30–35 ವರ್ಷ ರಾಜ್ಯದ ಆಡಳಿತದ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿರುತ್ತಾರೆ. ಇಡೀ ರಾಜ್ಯದ ಆಗುಹೋಗು ಅವರ ಕೈಯಲ್ಲಿಯೇ ಇರುತ್ತದೆ. ಹೀಗಿರುವಾಗ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ಸಲ್ಲ. ಈಗಲೂ ಕಾಲ ಮಿಂಚಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT