ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ– ಏಕತೆ ಜಾಗೃತಿಗೆ ತಿರಂಗಾ ಯಾತ್ರೆ

Last Updated 27 ಆಗಸ್ಟ್ 2016, 8:25 IST
ಅಕ್ಷರ ಗಾತ್ರ

ಅರಕಲಗೂಡು: ಹಲವಾರು ದೇಶಭಕ್ತರ ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯ ಹಾಗೂ ದೇಶದ ಏಕತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಸ್ವಾತಂತ್ರೋತ್ಸವದ ನೆನಪಿಗಾಗಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ, ಬೈಕ್‌ ರ್‌್ಯಾಲಿಯ ನಂತರ ಪಟ್ಟಣದ ದೊಡ್ಡಮ್ಮ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ 20 ಸಾವಿರ ಸ್ಥಳಗಳಲ್ಲಿ ಈ ಯಾತ್ರೆ ನಡೆದಿದ್ದು, ದೇಶದ ಇತಿಹಾಸದಲ್ಲಿ ಇದೊಂದು ದಾಖಲೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಯೋಗಾ ರಮೇಶ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ಅಲ್ಲದೆ ದೇಶವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡಿ ಆಭದ್ರತೆ ಸೃಷ್ಟಿಸುವ ಯತ್ನಗಳು ನಡೆಯುತ್ತಿದ್ದು, ಇದು ಖಂಡನೀಯ. ಎಲ್ಲರೂ ಒಗ್ಗಟ್ಟಿನಿಂದ ದೇಶದ ಪ್ರಗತಿಗೆ ಶ್ರಮಿಸುವುದು ಅಗತ್ಯ ಎಂದರು.

ಹೊಳೆನರಸೀಪುರ ಸಂಘ ಪರಿವಾರದ ಮುಖಂಡ ಹೊ.ಸು. ರಮೇಶ್, ನಿವೃತ್ತ ಯೋಧ ಪುಟ್ಟಸ್ವಾಮಿ ಮಾತನಾಡಿದರು. 16 ಮಂದಿ ನಿವೃತ್ತ ಯೋಧರನ್ನು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಅಗ್ರಹಾರ ಗ್ರಾಮದ ಯೋಧ ವೆಂಕಟ ಅವರ ತಂದೆ, ತಾಯಿಗಳನ್ನು ಗೌರವಿಸಲಾಯಿತು.

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ.ವಿಶ್ವನಾಥ್‌, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಶಿವಲಿಂಗ ಶಾಸ್ತ್ರಿ, ಪ.ಪಂ.ಸದಸ್ಯರಾದ ರಮೇಶ್‌ ವಾಟಾಳ್‌, ಶಶಿಕುಮಾರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಬೊಮ್ಮೇಗೌಡ ಪಾಲ್ಗೊಂಡಿದ್ದರು.

ಬೆಳಿಗ್ಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿದ ತಿರಂಗಾ ಯಾತ್ರೆಯು ಮಧ್ಯಾಹ್ನ 12 ಗಂಟೆಗೆ ಪಟ್ಟಣಕ್ಕೆ ಬಂದಿತು. ನಂಜೇಗೌಡ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಯಾತ್ರೆಯಲ್ಲಿ ಸುಮಾರು 500ಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ತ್ರಿವರ್ಣಧ್ವಜ ಹಿಡಿದು ಹಿಂಬಾಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT