ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದವಿಲ್ಲದೆ ಅಭಿವೃದ್ಧಿ ಅಸಾಧ್ಯ: ಡಾ.ಮಂಜೂರ ಅಲಿ

Last Updated 27 ಆಗಸ್ಟ್ 2016, 14:05 IST
ಅಕ್ಷರ ಗಾತ್ರ

ಕಲಬುರ್ಗಿ: ವೈವಿಧ್ಯತೆ ಇರುವ ಪ್ರಜಾಪ್ರಭುತ್ವ ದೇಶದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗದ ಹೊರತು ಅಭಿವೃದ್ಧಿ ಸಾಧನೆಯಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕು ಎಂದು ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಪ್ರಧಾನ ಕಾರ್ಯದರ್ಶಿ ಡಾ.ಮಂಜೂರ ಅಲಿ ಹೇಳಿದರು.

ನಗರದ ಗ್ರ್ಯಾಂಡ್‌ ಹೊಟೇಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ (ಎಐಎಂಸಿ) ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯ ನಂತರ ಸಭೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದೆಲ್ಲೆಡೆ ವ್ಯಾಪಿಸಿದ ಹಿಂಸೆ ಹಾಗೂ ಅಸಹಿಷ್ಣುತೆಯನ್ನು ಸಭೆಯಲ್ಲಿ ಖಂಡಿಸಲಾಗಿದೆ. ದಲಿತರು, ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆಗಳನ್ನು ಸರ್ಕಾರ ತಡೆಯಬೇಕು. ಹಿಂಸೆಗೊಳಗಾದವರಿಗೆ ಪರಿಹಾರ ಮತ್ತು ಪುನರ್‌ವಸತಿ ಕಲ್ಪಿಸಬೇಕು. ಕಾಶ್ಮೀರ ಸೇರಿದಂತೆ ದೇಶದೊಳಗೆ ಶಾಂತಿ–ಸೌಹಾರ್ದ ವಾತಾವರಣ ಪುನರ್‌ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಕಾಶ್ಮೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ತಳಹದಿಯಲ್ಲಿ ಪ್ರಯತ್ನಿಸುತ್ತಿಲ್ಲ. ಒಂದು ಪ್ರದೇಶದಲ್ಲಿ 50 ದಿನ ನಿಷೇಧಾಜ್ಞೆ ಜಾರಿ ಮಾಡಿರುವುದು ಇದೇ ಮೊದಲ ಬಾರಿ. ಘಟನೆಯಲ್ಲಿ ಸೈನಿಕರಾಗಲಿ, ನಾಗರಿಕರಾಗಲಿ ಸಾವಿಗೀಡಾಗುವುದನ್ನು ತಡೆಯಬೇಕು.

ಯಾವುದೇ ಕಾರಣಕ್ಕೂ ನಾಗರಿಕರ ಮೇಲೆ ಪೆಲ್ಲೆಟ್‌ ಗನ್‌ ಬಳಕೆ ಮಾಡಬಾರದು. ಕಾಶ್ಮೀರದೊಳಗಿನ ಸಂಘ–ಸಂಸ್ಥೆ ಹಾಗೂ ಪ್ರತಿಯೊಬ್ಬ ನಾಯಕರ ಅಭಿಪ್ರಾಯಗಳನ್ನು ಆಲಿಸುವ ವ್ಯವಧಾನ ತೋರಿಸಬೇಕು. ಕಾಶ್ಮೀರಿಗಳನ್ನು ಕಡೆಗಣಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆ ಇಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಇದನ್ನೆ ಹೇಳಿದ್ದರು ಎಂದು ಉಲ್ಲೇಖಿಸಿದರು.

ದೇಶದಲ್ಲಿ ಕೆಲವು ಸಂಘಟನೆಗಳು ಹಾಗೂ ಕೆಲವು ಪ್ರಭಾವಿಗಳು ಕಾನೂನು ಪರಿಪಾಲಿಸುತ್ತಿಲ್ಲ. ಇದೇ ಕಾರಣದಿಂದ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಿರಂತರ ನಡೆಯುತ್ತಿವೆ. ‘ದಲಿತರ ಮೇಲೆ ಕೊಲ್ಲುವ ಮೊದಲು ನನ್ನನ್ನು ಕೊಲ್ಲಿ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳುವ ಬದಲಾಗಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದು ಕ್ರಮ ಜರುಗಿಸುವ ಕೆಲಸ ಮಾಡಬೇಕಿತ್ತು.

ಸಂವಿಧಾನ ಬದ್ಧವಾಗಿ ಹೇಳಿರುವುದು ನಿಜವಾದ ದೇಶಭಕ್ತಿ. ಇದನ್ನು ಎಲ್ಲರೂ ಪರಿಪಾಲನೆ ಮಾಡಬೇಕು. ಆದರೆ, ದೇಶಭಕ್ತಿ ಬಗ್ಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಗೊಂದಲ ಸೃಷ್ಟಿಸಿವೆ ಎಂದು ಹೇಳಿದರು.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಂಖ್ಯಾತರ ಸ್ಥಾನಮಾನವನ್ನು ತತಕ್ಷಣ ಮುಂದುರಿಸಬೇಕು. ಈ ಎಲ್ಲ ಸಂಗತಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೌನ್ಸಿಲ್‌ ಅಧ್ಯಕ್ಷ ಮಿರತ್‌ನ ಹಕೀಂ ಅಬ್ದುಲ್‌ ಮುಗೈಸಿ, ಉಪಾಧ್ಯಕ್ಷ ಮೊಹ್ಮದ್‌ ಅಸ್ರಾರುಲ್‌ ಹಕ್‌, ಶಾಸಕ ಖಮರುಲ್‌ ಇಸ್ಲಾಂ ಇದ್ದರು. ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

*
ಖಮರುಲ್‌ ಅನುಭವಿ
ಶಾಸಕ ಖಮರುಲ್‌ ಇಸ್ಲಾಂ ಅವರು ಸುದೀರ್ಘ ಅನುಭವಿ. ಸರ್ಕಾರವು ಇವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುರ್ಖತನ ಪ್ರದರ್ಶಿಸುವುದಿಲ್ಲ ಅಂದುಕೊಂಡಿದ್ದೇವೆ ಎಂದು ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಪ್ರಧಾನ ಕಾರ್ಯದರ್ಶಿ ಡಾ.ಮಂಜೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT