ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ಸವಾಲು: ಜಾವಡೇಕರ್‌

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮಶತಮಾನೋತ್ಸವ ಸಮಾರೋಪ
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸುತ್ತೂರು (ಮೈಸೂರು):  ಹಳ್ಳಿಹಳ್ಳಿಗೂ ಶಿಕ್ಷಣ ತಲುಪಿಸಿದ್ದು ಸ್ವಾತಂತ್ರ್ಯಾನಂತರದ ಮಹತ್ವದ ಸಾಧನೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಮುಂದಿರುವ ಸವಾಲು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ಸುತ್ತೂರು ಕ್ಷೇತ್ರದಲ್ಲಿ ಶನಿವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಸರ್ವಶಿಕ್ಷಣ ಅಭಿಯಾನದ ಫಲವಾಗಿ ಪ್ರತಿ ಗ್ರಾಮಕ್ಕೂ ಶಿಕ್ಷಣವನ್ನು ತಲುಪಿಸಲು ಸಾಧ್ಯವಾಯಿತು. ದೇಶದಲ್ಲಿ ಪ್ರಸ್ತುತ 1ರಿಂದ 12ನೇ ತರಗತಿವರೆಗೆ 25 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ವಿಸ್ತರಣೆಗಿಂತ ಹೆಚ್ಚಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಿರುವುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ವಿದ್ಯಾರ್ಥಿಗಳಲ್ಲಿ ಕುತೂಹಲ ಬೆಳೆಸುವ, ಕಲಿಕಾಸಕ್ತಿ ಮೈಗೂಡಿಸುವ ಆದರ್ಶ ಶಿಕ್ಷಕರು ಮತ್ತು ಉತ್ತಮ ವಿದ್ಯಾಸಂಸ್ಥೆಗಳ ಅಗತ್ಯ ಇದೆ. ಸಾಧನೆ ನಿಟ್ಟಿನಲ್ಲಿ ಶಿಕ್ಷಕರು ಕನಸು ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿಯೂ ಕನಸು ಬಿತ್ತಬೇಕು. ಸಿಂಗಪುರದ ಉಪಪ್ರಧಾನಿ ಥರ್ಮನ್‌ ಷಣ್ಮುಗರತ್ನಂ ಅವರು ಭಾರತದಲ್ಲಿ ಪ್ರತಿಭಾ ಅಂತರ ಇದೆ ಎಂದು
ಹೇಳಿದ್ದಾರೆ. ಪದವೀಧರರ ಪ್ರಮಾಣ ವೃದ್ಧಿಯಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಬದಲಾಗಿ ಸಬಲೀಕರಣಕ್ಕೆ ಪೂರಕವಾದ ಶಿಕ್ಷಣ ನೀಡಬೇಕಿದೆ ಎಂದರು.

ಕೌಶಲ ಪ್ರದರ್ಶನಕ್ಕೆ  ಪೂರಕ ವಾತಾವರಣ ಕಲ್ಪಿಸಬೇಕು. ಶೈಕ್ಷಣಿಕ ಪದವಿ ಪಡೆದ ಮಾತ್ರಕ್ಕೆ ಕಲಿಕೆ ಕೊನೆಯಾಗುವುದಿಲ್ಲ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ.  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ‘ಮುಕ್ತ ಕಲಿಕೆ’ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಈ ವ್ಯವಸ್ಥೆಯಡಿ ನೂರಾರು ಅಲ್ಪಾವಧಿ ಕೋರ್ಸ್‌ಗಳನ್ನು
ಪರಿಚಯಿಸಲಾಗುವುದು. ಈ ಕೋರ್ಸ್‌ಗಳಿಗೆ ಕ್ರೆಡಿಟ್‌ ನಿಗದಿಪಡಿಸಲಾಗುವುದು. ಈ ವ್ಯವಸ್ಥೆಯಡಿ ಎಲ್ಲರಿಗೂ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಉನ್ನತ ಶಿಕ್ಷಣ, ಸಂಶೋಧನೆ, ಉದ್ಯೋಗದ ಹೆಸರಿನಲ್ಲಿ ಪ್ರತಿಭಾಪಲಾಯನ ಹೆಚ್ಚಾಗಿದೆ. ವಿದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ದೇಶದಲ್ಲಿಯೇ ಸಂಶೋಧನೆ, ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ಆದ್ಯತೆ ನೀಡಿದೆ ಎಂದರು.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಮನೋಜ್‌ ಸಿನ್ಹ  ಅವರು ‘ರಾಜೇಂದ್ರ ಸಂಸ್ಮರಣ’ ಅಂಚೆಚೀಟಿ ಬಿಡುಗಡೆಗೊಳಿಸಿದರು. ಸಂಸದ ಎಚ್‌.ಡಿ.ದೇವೇಗೌಡ ಅವರು ‘ಘನಮನ’ ಗ್ರಂಥ ಲೋಕಾರ್ಪಣೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT