ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಗಳ ದಾರಿಯಲ್ಲಿ ಎಂಬಿಎ ಹೆಬ್ಬಾಗಿಲು

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ ಕುಳಿತಾಗ ಎಂ.ಬಿ.ಎ. ಕೋರ್ಸ್ ಆಕಾಂಕ್ಷಿಯ ಪಾಲಕರೊಬ್ಬರು ಬಂದು ‘ಸರ್ ನಮ್ಮ ಮಗಳದ್ದು ಬಿ.ಕಾಂ. ಆಗಿದೆ ಎಂ.ಬಿ.ಎಗೆ ಸೇರಿಸಬೇಕು ಅಂತಿದೀವಿ ಆದರೆ ಈಗ ಎಂ.ಬಿ.ಎ.ಗೆ ಅಷ್ಟೊಂದು ಸ್ಕೋಪ್ ಇಲ್ಲವಂತಲ್ಲಾ!  ಹೀಗೆ  ಒಂದೇ ಉಸಿರಿನಲ್ಲಿ ಮಾತನಾಡುತ್ತಿದ್ದರು. ಅವರನ್ನು ನಾನು ಶಾಂತಾವಾಗಿಯೇ ಪ್ರಶ್ನಿಸಿದೆ, ‘ನಿಮ್ಮ ಪ್ರಕಾರ ಒಂದು ಒಳ್ಳೆಯ ಕೆಲ್ಸಾ ಅಂದರೇನು?’

ಕೋರ್ಸ್‌ನ ಅಂಕಪಟ್ಟಿಯ ಜೊತೆ ಎಂ.ಬಿ.ಎ. ಪದವೀಧರ ಕೆಲವು ಕೌಶಲಗಳನ್ನು ಕರಗತ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾದಲ್ಲಿ ಮಾತ್ರ ಒಂದು ಉತ್ತಮ ಹುದ್ದೆ ಪಡೆಯಲು ಸಾಧ್ಯ.

ಇತರ ಪದವಿಗಳಾದ ವೈದ್ಯಕೀಯ, ಎಂಜಿನಿಯರಿಂಗ್‌ಗಳಂತೆ ನಿಸ್ಸಂಶಯವಾಗಿ ಎಂ.ಬಿ.ಎ. (Master of Business Administration) ಒಂದು ವೃತ್ತಿಪರಕೋರ್ಸ್.  ಕೌಶಲಗಳಿಲ್ಲದೆ ಕೇವಲ ಅಂಕಪಟ್ಟಿಯೊಂದಿಗೆ ಒಳ್ಳೆಯ ಕೆಲಸ ನಿರೀಕ್ಷಿಸುವುದು ಸಾಧುವೂ ಅಲ್ಲ ಹಾಗೂ ಅದು ಸಿಗುವುದೂ ಇಲ್ಲ.

ಎರಡು ವರ್ಷದ ಈ ವೃತ್ತಿಪರಕೋರ್ಸ್‌ನಲ್ಲಿ ಹಲವಾರು ವಿಷಯಗಳನ್ನು ಕಲಿಸುವುದರ ಜೊತೆಗೆ ಮಾರುಕಟ್ಟೆಯನ್ನು ನಿರ್ವಹಿಸಲು, ಗ್ರಾಹಕರು, ಮಾರಾಟಗಾರರು ಹಾಗೂ ಪೂರೈಕೆದಾರರ ಜೊತೆ ಉತ್ತಮ ಬಾಂಧವ್ಯ ಕಲ್ಪಿಸಿಕೊಳ್ಳಲು, ತಮ್ಮ ಸಹೋದ್ಯೋಗಿ ಹಾಗೂ ಉದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಅವರನ್ನು ಸಂತುಷ್ಟವಾಗಿರಲು ಅಗತ್ಯವಾಗಿರುವ ಕೌಶಲಗಳನ್ನು ಕಲಿಸುವುದು ಒಂದು ಒಳ್ಳೆಯ ಎಂ.ಬಿ.ಎ. ಸಂಸ್ಥೆಯ ಕರ್ತವ್ಯ.

ಎಂ.ಬಿ.ಎ. ಸಂಸ್ಥೆಯಲ್ಲಿ ಕೌಶಲಗಳನ್ನು ಹೇಗೆ ವಿದ್ಯಾರ್ಥಿಗಳಿಗೆ ಕಲಿಸಬೇಕು?
ವಿಶ್ಲೇಶಣಾತ್ಮಕ ಕೌಶಲಗಳು: (Analytical Skills): ಎಂ.ಬಿ.ಎ. ಪದವೀಧರರಿಗೆ ವ್ಯಾಪಾರ ವಹಿವಾಟುಗಳ ಮೂಲತತ್ವಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಬೇಕು.  ಆ ಮಾಹಿತಿಯನ್ನು ನೈಜಮಾರುಕಟ್ಟೆಯಲ್ಲಿ ಉಪಯೋಗಿಸುವ ಕಲೆಯನ್ನು ಹೇಳಿಕೊಡಬೇಕು. ಈ ಕಾರಣಕ್ಕಾಗಿ ಪ್ರಾಧ್ಯಾಪಕರು ದಿನ ನಿತ್ಯವೂ Case Study Method (ಏಕವಿಷಯ ಪದ್ಧತಿ) ಉಪಯೋಗಿಸುವ ಅನಿವಾರ್ಯತೆಯಿದೆ.
ವಿದ್ಯಾರ್ಥಿಗಳಿಂದ ಪ್ರತಿ ವರ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್‌ ಅಧ್ಯಯನ ಮಾಡಿಸಬೇಕಾಗುತ್ತದೆ. ಪ್ರತಿನಿತ್ಯದ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಚಲಿತ ವ್ಯಾಪಾರದ ವಿದ್ಯಮಾನಗಳ ಕುರಿತು ಅವರದೇ ಆದ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು.

ಪ್ರಾಧ್ಯಾಪಕರು ತಾವು ನಡೆಸುವ ಕಿರುಪರೀಕ್ಷೆ, ಆಂತರಿಕ ಮೌಲ್ಯಮಾಪನಗಳಲ್ಲಿ ಈ ಕೌಶಲಗಳನ್ನು  ಉಪಯೋಗಿಸಿ ಉತ್ತರಿಸುವ ಹಾಗೆ ಪ್ರಶ್ನಪತ್ರಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ದಿನನಿತ್ಯದ ವ್ಯಾಪಾರಕ್ಕೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಲು, ಯಾವುದೇ ಒಂದು ಅತ್ಯುತ್ತಮ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ವಿದ್ಯಾರ್ಥಿಗಳನ್ನು ಚಂದಾದಾರನ್ನಾಗಿಸುವ ಹೊಣೆಗಾರಿಕೆ ಸಂಸ್ಥೆಯದ್ದಾಗಿರುತ್ತದೆ. ಎಂ.ಬಿ.ಎ.ಯ ಎಲ್ಲ ವಿಷಯಗಳಲ್ಲಿಯೂ ವಿದ್ಯಾರ್ಥಿಗಳು ವಿಶ್ಲೇಷಣಾ ಸಾಮರ್ಥ್ಯ ಹೊಂದುವಂತೆ ಮಾಡಬೇಕು.

ಸಮಸ್ಯೆ ಪರಿಹರಿಸುವ ಕೌಶಲಗಳು (Problem  Solving Skills):  ಎಂ.ಬಿ.ಎ. ಪದವೀಧರ ಮುಂದೆ ತನ್ನ ಹುದ್ದೆ ಹಾಗೂ ಕಂಪೆನಿಗಳಲ್ಲಿ ಬರಬಹುದಾದ ದಿನನಿತ್ಯದ ಸಮಸ್ಯೆಗಳನ್ನು ತನ್ನ ಸೃಜಲಶೀಲತೆಯಿಂದ ಬಗೆಹರಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು Statistics for Management, Quantitative Techniques, Production and Operation Management, Financial Management, Business Research Methods ವಿಷಯಗಳನ್ನು ಅಭ್ಯಸಿಸುವ ಅವಕಾಶವಿರುತ್ತದೆ. ಈ ವಿಷಯಗಳು ವಿದ್ಯಾರ್ಥಿಯ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಕೌಶಲವನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಈ ಕೌಶಲದ ಅಭಿವೃದ್ಧಿಗೆ ಮೀಸಲಿರಿಸಬೇಕು.

ಸಮಾಲೋಚನಾ ಕೌಶಲಗಳು (Negotiation Skills): ಗ್ರಾಹಕರು, ಮಾರಾಟಗಾರರು, ಪೂರೈಕೆದಾರರ ಜೊತೆ ಪರಿಣಾಮಕಾರಿಯಾಗಿ ವ್ಯವಹಾರ ಕುದುರಿಸಲು ಹಾಗೂ ಕಂಪೆನಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಕೌಶಲದ ಅವಶ್ಯಕತೆಯಿದೆ. ಈ ಹಂತದಲ್ಲಿಒಬ್ಬ ಮ್ಯಾನೇಜರ್ ಗೆಲುವು–ಗೆಲುವು ಸ್ಥಿತಿಯನ್ನು ತಲುಪಬೇಕಾಗುತ್ತದೆ (Win-Win Solution). ಈ ಕೌಶಲವನ್ನು ಅಭಿವೃದ್ಧಿ ಪಡಿಸುವಲ್ಲಿ ಅಥವಾ ಪಡಿಸಬೇಕಾದಲ್ಲಿ ಪ್ರತಿವಾರದ ವೇಳಾ ಪಟ್ಟಿಯಲ್ಲಿ ಕೆಲವು ಗಂಟೆಗಳನ್ನು ಮೀಸಲಿಡುವುದು ಅವಶ್ಯ. ಕೆಲವು ಮ್ಯಾನೇಜ್‌ಮೆಂಟ್‌ ಗೇಮ್ಸ್, ಅಣಕು ನೈಜ ಮಾರುಕಟ್ಟೆ ಪರಿಸ್ಥಿತಿ  ಗುಂಪುಚರ್ಚೆ, ಅಣಕು ಮೀಟಿಂಗ್ ಹಾಗೂ ಕೆಲವು ವಿದ್ಯಾರ್ಥಿ ವೇದಿಕೆಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳು ಈ ಕೌಶಲಗಳನ್ನು ಕರಗತ ಮಾಡಿಕೊಳ್ಳುವಂತೆ ಪ್ರೇರೇಪಿಸಬಹುದು.

ಯುಕ್ತ ನಿರ್ಣಯ ಕೌಶಲಗಳು (Decision Making Skills):  ಕಂಪೆನಿಯ ಪ್ರಮುಖ ಸ್ಥಾನಗಳಿಗೆ  ಆಯ್ಕೆಯಾದ ವ್ಯಕ್ತಿ ಕಂಪೆನಿಯ ವ್ಯವಹಾರಗಳ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಹಾಗೂ ಜವಾಬ್ದಾರಿ ಎಂ.ಬಿ.ಎ. ಪದವೀಧರರದ್ದಾಗಿರುತ್ತದೆ. ಇಂತಹ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಎಂ.ಬಿ.ಎ. ಮಟ್ಟದಲ್ಲೇ ಕರಗತ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳ ತಾರ್ಕಿಕ ಆಲೋಚನೆ ಗೆ ಹೆಚ್ಚು ಒತ್ತು ನೀಡಬೇಕು. 

ಸಂವಹನ ಕೌಶಲಗಳು (Communication Skills): ಕ್ಯಾಂಪಸ್ ನೇಮಕಾತಿಗಾಗಿ ಭೇಟಿ ನೀಡುವ ಕಂಪೆನಿಗಳು ತಾನು ಆಯ್ಕೆ ಮಾಡಿಕೊಳ್ಳುವ ಎಂ.ಬಿ.ಎ. ಪದವೀಧರ ಅತ್ಯುತ್ತಮ ಸಂವಹನ ಕೌಶಲಗಳನ್ನು ಹೊಂದಿರಬೇಕಾದ್ದೇ ಅವರ ಪ್ರಥಮ ಆದ್ಯತೆ ಎಂದು ಗಂಟಾ ಘೋಷವಾಗಿ ಹೇಳುತ್ತಾರೆ.  ಈ ಕೌಶಲಗಳನ್ನು ಕೇವಲ ಎರಡೇ  ವರ್ಷಗಳಲ್ಲಿ ಕಲಿಸುವುದು ಹಾಗೂ ಕಲಿಯುವುದು ನಿಜಕ್ಕೂ ಸವಾಲಿನ  ಸಂಗತಿ. ಇದಕ್ಕಾಗಿ ಎಂ.ಬಿ.ಎ. ಸಂಸ್ಥೆಗೆ ಒಂದು ಪ್ರತ್ಯೇಕ ಭಾಷಾ ಪ್ರಯೋಗಾಲಯ(Language Lab) ಹಾಗೂ ಒಬ್ಬ ಆಂಗ್ಲಾಭಾಷಾ ತರಬೇತುದಾರನ (English Language Trainer) ಅವಶ್ಯಕತೆ ಇರುತ್ತದೆ. ಶ್ರವಣ-ದೃಶ್ಯಮಾಧ್ಯಮದ ಉಪಕರಣಗಳೊಂದಿಗೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯನ್ನು ಮಾತನಾಡಲು ಪ್ರೇರೇಪಿಸುತ್ತ, ಹಲವಾರು Presentation - ನಿರೂಪಣೆ ಮೂಲಕ ಈ ಕೌಶಲವನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ.

ಕಂಪ್ಯೂಟರ್ ಕೌಶಲಗಳು (Computer Skills):  ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್ ಹಾಗೂ ಪವರ್ ಪಾಯಿಂಟ್ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವ ಕಲೆ ಗೊತ್ತಿರಬೇಕಾಗುತ್ತದೆ. ಅಂತರ್ಜಾಲ ಮತ್ತು ಇ-ಮೇಲ್‌ಗಳ ಬಗ್ಗೆ ಮಾಹಿತಿ ಹಾಗೂ ಉಪಯೋಗವನ್ನು ಎಂ.ಬಿ.ಎ. ವಿದ್ಯಾರ್ಥಿಗಳು ಹೊಂದಿರಲೇಬೇಕಾಗುತ್ತದೆ. ಕಾರ್ಪೊರೇಟ್‌ ಜಗತ್ತಿಗೆ ಇಂಥ ಕಂಪ್ಯೂಟರ್‌–ಅಂತರ್ಜಾಲ ಆಧಾರಿತ ಕೌಶಲಗಳು ಅತ್ಯಾವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾಯಕತ್ವ ತರಬೇತಿ (Leadership Training): ತಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವ ಪ್ರಮುಖ ಬಿಸಿನೆಸ್ ನಾಯಕರುಗಳ ಸಂದರ್ಶನಗಳ ವಿಡಿಯೋಗಳನ್ನು ತೋರಿಸುವುದರ ಮೂಲಕ, ಯಶಸ್ವಿ ನಾಯಕರು ಸಂಸ್ಥೆಗಳಿಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದರ ಮೂಲಕ ಪ್ರತಿ ವರ್ಷ ಮ್ಯಾನೇಜ್‌ಮೆಂಟ್ ಫೆಸ್ಟ್ (ಮ್ಯಾನೇಜ್‌ಮೆಂಟ್‌–ಉತ್ಸವ) ಅನ್ನು ಆಯೋಜಿಸಿ, ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ರಚಿಸಿ ಜವಾಬ್ದಾರಿ ನೀಡುವುದರ ಮೂಲಕ ಅವರೊಳಗಿನ ನಾಯಕನನ್ನು ಪ್ರಕಟಪಡಿಸಲೂ ಗುರುತಿಸಲೂ ಸಹಾಯವಾಗುತ್ತದೆ.  

ಈ ಮೇಲ್ಕಂಡ ಎಲ್ಲ ಕೌಶಲಗಳನ್ನು ಎಂ.ಬಿ.ಎ. ಪದವೀಧರ ಎರಡು ವರ್ಷದ ಅವಧಿಯೊಳಗೆ ಅಭಿವೃದ್ಧಿ ಮಾಡಿಕೊಂಡಾಗ ಪಾಲಕರು / ಪೋಷಕರು ಬಯಸುವ ಒಂದು ಒಳ್ಳೆಯ ಕೆಲಸ ಅವರ ಮಕ್ಕಳಿಗೆ ದೊರೆಯುವುದು ಕನಸಿನ ಮಾತೇನಲ್ಲ.

–ಗಿರೀಶ ಯರಲಕಟ್ಟಿಮಠ, ಸುನಿಲ್‌ಕುಮಾರ ಹಿರೇಮಠ
(ಲೇಖಕರು ಸಹ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT