ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಪೈಪ್‌ ಸೋರಿಕೆ; ರಸ್ತೆ ಕುಸಿತ

ಜಲಮಂಡಳಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
Last Updated 28 ಆಗಸ್ಟ್ 2016, 20:14 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರ ಸಮೀಪದ ಶಾಂಗ್ರಿಲಾ ಹೋಟೆಲ್‌ ಎದುರು ಕುಡಿಯುವ ನೀರಿನ ಪೈಪ್‌ ಸೋರಿಕೆಯಿಂದಾಗಿ  ಶನಿವಾರ ರಾತ್ರಿ 4 ಅಡಿಗಳಷ್ಟು ರಸ್ತೆ ಕುಸಿದಿದೆ.

ರಸ್ತೆಯ ಮಧ್ಯಭಾಗದಲ್ಲೇ ಮಣ್ಣು ಕುಸಿದು ದೊಡ್ಡ ತಗ್ಗು ಬಿದ್ದಿದ್ದು, ಅದರಿಂದಾಗಿ ಈ ಭಾಗದ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಜತೆಗೆ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ.

‘ಸುಮಾರು ವರ್ಷಗಳ ಹಿಂದೆ ರಸ್ತೆಯ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ ಅಳವಡಿಸಲಾಗಿತ್ತು. ಅದು ತುಕ್ಕು ಹಿಡಿದು, ಹಲವು ದಿನಗಳಿಂದ ನೀರು ಜಿನುಗುತ್ತಿತ್ತು. ಅದು ಹೆಚ್ಚಾಗಿ ಮಣ್ಣು ಸಡಿಲಗೊಂಡು ಈ ಅವಘಡ ಸಂಭವಿಸಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಹೋದ ಸಂಚಾರ ಪೊಲೀಸರು, ಕುಸಿತವಾದ ಜಾಗದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಇಟ್ಟು, ಸಂಚಾರವನ್ನು ನಿರ್ಬಂಧಿಸಿದರು.

‘ಕುಸಿತದಿಂದಾಗಿ ಮಣ್ಣು ಹಾಗೂ ಮೇಲ್ಭಾಗದ ಡಾಂಬರು ಕಿತ್ತು ಹೋಗಿದೆ.  ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ,  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಜತೆಗೆ ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು’ ಎಂದು ಹೈಗ್ರೌಂಡ್ಸ್‌ ಠಾಣೆ ಅಧಿಕಾರಿಯೊಬ್ಬರು ತಿಳಿಸಿದರು.

ದುರಸ್ತಿ ಕಾರ್ಯ ಆರಂಭ: ರಸ್ತೆ ಕುಸಿತದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಬಂದ ಜಲಮಂಡಳಿ ಸಿಬ್ಬಂದಿ, ರಾತ್ರಿಯಿಂದಲೇ ದುರಸ್ತಿ ಕಾರ್ಯ ಆರಂಭಿಸಿದರು.
‘ವಸಂತನಗರ, ಅವಿನಾಶ್‌ ಜಂಕ್ಷನ್‌ ಹಾಗೂ ಹಲವು ಪ್ರದೇಶಗಳಲ್ಲಿ ಇಂದಿಗೂ ಹಳೆಯ ಪೈಪ್‌ಗಳಿವೆ. ಅವುಗಳು ಒಂದೊಂದಾಗಿ ಒಡೆಯುತ್ತಿದ್ದು, ಅದರಿಂದ ನೀರು ಪೋಲಾಗುತ್ತಿದೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ಈಗಾಗಲೇ ಸಿಬ್ಬಂದಿ ಹೊಸ ಪೈಪ್‌ ಜೋಡಣೆ ಮಾಡುತ್ತಿದ್ದಾರೆ. ಭಾನುವಾರ ರಾತ್ರಿಯವರೆಗೆ ಕೆಲಸ ನಡೆಯಲಿದೆ.  ಅದಾದ ಬಳಿಕ ಕುಸಿತ ಸ್ಥಳವನ್ನು ಸಮತಟ್ಟು ಮಾಡಿ ಡಾಂಬರು ಹಾಕಲಾಗುತ್ತದೆ. ನಗರದ ವಿವಿಧ ಕಡೆಗಳಲ್ಲಿ ಹಳೇ ಪೈಪ್‌ಗಳನ್ನು ಬದಲಾಯಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ’ ಎಂದು ಮಾಹಿತಿ ನೀಡಿದರು.

ಜಲಮಂಡಳಿ ವಿರುದ್ಧ ಆಕ್ರೋಶ: ಪೈಪ್‌ ಒಡೆದು ಹಲವು ದಿನಗಳಿಂದ ಈ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ಈ ಬಗ್ಗೆ ದೂರು ನೀಡಿದರೂ ಜಲಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

‘ಹಳೇ ಪೈಪ್‌ ಬದಲಾಯಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅದೇ ಕಾರಣಕ್ಕೆ ಇಂದು ರಸ್ತೆ ಕುಸಿದಿದೆ. ಇನ್ನೂ ಹಲವೆಡೆ ಇಂತಹ  ಘಟನೆ ಮರುಕಳಿಸಬಹುದು’ ಎಂದು ಸ್ಥಳೀಯರೊಬ್ಬರು ಆತಂಕ  ವ್ಯಕ್ತಪಡಿಸಿದರು.

*
ನೀರು ಪೂರೈಕೆ ವ್ಯತ್ಯಯ

ಪೈಪ್ ದುರಸ್ತಿ ಕಾರ್ಯಕ್ಕಾಗಿ  ಸಂಜಯ್ ನಗರ, ಆರ್ ಟಿ ನಗರ,  ರೆಹಮತ್ ನಗರ, ಜಯಮಹಲ್, ಎಲ್.ಆರ್.ಬಂಡೆ, ಸುಲ್ತಾನ್ ಪಾಳ್ಯ, ಭೂಪಸಂದ್ರ, ಡಾಲರ್ಸ್‌ ಕಾಲೊನಿ ಮೊದಲನೇ ಬ್ಲಾಕ್, ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ನೀರು ಪೂರೈಕೆ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT