ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಆಫ್ರಿಕಾ ವಿದ್ಯಾರ್ಥಿಗಳ ದಾಂದಲೆ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತರಾಗಿ ಬೈಕ್ ಓಡಿಸಿ ಅಪಘಾತ ಮಾಡಿದ ವಿಚಾರಕ್ಕೆ ಆಫ್ರಿಕಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ವಾಹನ ಸವಾರರ ನಡುವೆ ಶನಿವಾರ ರಾತ್ರಿ ಟಿನ್‌ ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ಗಲಾಟೆ ನಡೆದಿದೆ.

ಅಪಘಾತ ಸಂಬಂಧ ಆಫ್ರಿಕಾದ ಚಾಡ್ ದೇಶದ  ಅಹತ್ ಮಹಮತ್ (24) ಎಂಬುವರನ್ನು  ಬಂಧಿಸಿದ ಕೆ.ಆರ್.ಪುರ ಸಂಚಾರ ಪೊಲೀಸರು, ನಂತರ ಠಾಣಾ ಜಾಮೀನಿನ ಮೇಲೆ ಬಿಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಅಹತ್, ಸ್ನೇಹಿತರ ಜತೆ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಹೆಣ್ಣೂರು ಮುಖ್ಯರಸ್ತೆಯ ಟೀಚರ್ಸ್ ಅಕಾಡೆಮಿಯಲ್ಲಿ ಅವರು ದ್ವಿತೀಯ ವರ್ಷದ ಬಿಸಿಎ ಓದುತ್ತಿದ್ದಾರೆ.

ಅಹತ್ ತಮ್ಮ ದೇಶದವರೇ ಆದ ಐವರು ಸ್ನೇಹಿತರ ಜತೆ ರಾತ್ರಿ 12 ಗಂಟೆವರೆಗೂ ರಾಮಮೂರ್ತಿನಗರದಲ್ಲಿ ಪಾರ್ಟಿ ಮಾಡಿದ್ದರು. ನಂತರ ಗೆಳೆಯನನ್ನು ಭೇಟಿ ಮಾಡಲು ಎಲ್ಲರೂ ಮೂರು ಬೈಕ್‌ಗಳಲ್ಲಿ ಕೆ.ಆರ್.ಪುರ ಕಡೆಗೆ ಹೋಗುತ್ತಿದ್ದರು.

ವೇಗವಾಗಿ ಬೈಕ್ ಓಡಿಸಿಕೊಂಡು  ಎಲ್ಲರಿಗಿಂತ ಮುಂದೆ ಬಂದ ಅಹತ್, ಟಿನ್‌ಫ್ಯಾಕ್ಟರಿ ಸಮೀಪದ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ನಿಂತಿದ್ದ ವೇಣುಗೋಪಾಲ್ (27) ಎಂಬುವರಿಗೆ ಡಿಕ್ಕಿ ಮಾಡಿದ್ದಾರೆ. ನಂತರ ಬೈಕ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಅವರನ್ನು ಸ್ಥಳೀಯರು ಇತರೆ ವಾಹನಗಳಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ.

ಈ ವೇಳೆಗೆ ಅವರ ಸ್ನೇಹಿತರು ಸಹ ಸ್ಥಳಕ್ಕೆ ಬಂದಿದ್ದಾರೆ. ಕುಡಿದ ಮತ್ತಿನಲ್ಲಿ ಸ್ಥಳೀಯರ ಜತೆ ವಾಗ್ವಾದಕ್ಕಿಳಿದಿದ್ದಾರೆ. ತಪ್ಪು ಮಾಡಿಯೂ ಗಲಾಟೆ ಮಾಡಿದ್ದಕ್ಕೆ ಸ್ಥಳೀಯರು ಸಹ ವಿದ್ಯಾರ್ಥಿಗಳ ಮೇಲೆ ತಿರುಗಿ ಬಿದ್ದಿದ್ದಾರೆ. ಇದರಿಂದ ಪರಿಸ್ಥಿತಿ ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಅಹತ್‌ ಸ್ನೇಹಿತರು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಮೂರೂ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಅಹತ್‌ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ತಪಾಸಣೆಗೆ ನಿರಾಕರಿಸಿದರು: ‘ಅಹತ್ ಪಾನಮತ್ತರಾಗಿದ್ದರು. ಆಲ್ಕೊಮೀಟರ್ ಮೂಲಕ ತಪಾಸಣೆ ಮಾಡಲು ಮುಂದಾದ ಸಿಬ್ಬಂದಿ ಮೇಲೆ ಕೂಗಾಡಿದರು. ಯಾವುದೇ ಕಾರಣಕ್ಕೂ ಈ ಉಪಕರಣದ ಮೂಲಕ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಮೂತ್ರ ಹಾಗೂ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ’ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ತಿಳಿಸಿದರು.

ಅಪಘಾತದಲ್ಲಿ ಗಾಯಗೊಂಡ ವೇಣುಗೋಪಾಲ್, ಕೋಲಾರದವರು. ಲಾರಿ ಚಾಲಕರಾಗಿರುವ ಅವರು, ರಾತ್ರಿ 12.30ರ ಸುಮಾರಿಗೆ ಊರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದರು. ಘಟನೆಯಲ್ಲಿ ತಲೆ ಹಾಗೂ ಕೈಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಠಾಣಾ ಜಾಮೀನು
‘ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಪಡಿಸಿದ (ಐಪಿಸಿ 279, 337) ಆರೋಪದ ಮೇಲೆ ಅಹತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮನೆ ಮಾಲೀಕರ ಶ್ಯೂರಿಟಿ ಪಡೆದು, ಠಾಣಾ ಜಾಮೀನಿನ ಮೇಲೆ ಅವರನ್ನು ಬಿಟ್ಟು ಕಳುಹಿಸಲಾಗಿದೆ. ಟಿನ್‌ ಫ್ಯಾಕ್ಟರಿ ಬಳಿ ನಡೆದ ದಾಂದಲೆ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT