ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ

ನಾಗಮಂಗಲ ಮಳೆಯಾಶ್ರಿತ ರೈತರಿಗೆ ವರದಾನ; ಸರ್ಕಾರದಿಂದ ಸಹಾಯಧನ
Last Updated 29 ಆಗಸ್ಟ್ 2016, 11:11 IST
ಅಕ್ಷರ ಗಾತ್ರ

ನಾಗಮಂಗಲ: ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕೃಷಿ ಹೊಂಡ’ ನಿರ್ಮಾಣಕ್ಕೆ ಮಳೆಯಾಶ್ರಿತ ಪ್ರದೇಶ ಮತ್ತು ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದ ನಾಗಮಂಗಲ ತಾಲ್ಲೂಕಿನ ರೈತರು ಮುಂದಾಗುತ್ತಿದ್ದಾರೆ.

ಮಳೆ ಕೊರತೆ ಅಥವಾ ಸೂಕ್ತ ಸಮಯದಲ್ಲಿ ಮಳೆ ಬಾರದೆ ಇದ್ದಾಗ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಬಿತ್ತನೆ ಸಮಯ ಅಥವಾ ಆನಂತರದ ದಿನಗಳಲ್ಲಿ ಮಳೆ ಬೀಳದೇ ಇದ್ದರೆ ರೈತನ ಶ್ರಮ ಹಾಗೂ ಹಣ ಎರಡೂ ವ್ಯರ್ಥವಾಗುತ್ತದೆ.

ಮಳೆಯಾದ ಸಮಯದಲ್ಲಿ ಮಳೆ ನೀರನ್ನು ಸಂಗ್ರಹಿಸಿ, ಬೆಳೆಗೆ ನೀರಿನ ಕೊರತೆ ಉಂಟಾದ ಬಳಸುವ ಮೂಲಕ ರೈತರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು ಎನ್ನುತ್ತಾರೆ ಕೃಷಿ ಹೊಂಡ ಹೊಂದಿರುವ ರೈತರು.

ಜಮೀನಿಗೆ ತಕ್ಕಂತೆ ನಿರ್ಮಾಣ:  ಅಗತ್ಯಕೆ ತಕ್ಕಂತೆ ವಿವಿಧ ವಿಸ್ತೀರ್ಣದಲ್ಲಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು.  ಕೊಳವೆ ಬಾವಿಯ ನೀರನ್ನು ಸಹ ಕೃಷಿ  ಹೊಂಡಕ್ಕೆ ತುಂಬಿಸುವ ಮೂಲಕ ಬೆಳೆಗೆ ತಕ್ಕಂತೆ ನೀರು ಬಳಸಬಹುದು ಎನ್ನುತ್ತಾರೆ ರೈತರು.

ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆ ಹಣ ನೀಡಲಿದೆ. ಸಾಮಾನ್ಯ ವರ್ಗಕ್ಕೆ ಶೇ 80ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 90 ರಷ್ಟು ಹಣವನ್ನು ಇಲಾಖೆ ಭರಿಸುತ್ತದೆ. ಜತೆಗೆ ರಿಯಾಯಿತಿ ದರದಲ್ಲಿ ಇಲಾಖೆಯೇ ಡೀಸೆಲ್ ಪಂಪ್ ನೀಡುವುದರಿಂದ  ವಿದ್ಯುತ್ ಸಮಸ್ಯೆ ಸಹ ಇರುವುದಿಲ್ಲ.

ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆಗೆ ರೈತರು ತಮ್ಮ ಜಮೀನಿನ ಆರ್ ಟಿಸಿ, ಗುರುತಿನ ಚೀಟಿ, ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು. ಕೃಷಿ ಹೊಂಡದ ವಿವರಗಳ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ  ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

ಈಗಾಗಲೇ ತಾಲ್ಲೂಕಿನಲ್ಲಿ 19 ಕೃಷಿ ಹೊಂಡ ನಿರ್ಮಾಣವಾಗಿದ್ದು. 42 ಹೊಂಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.‌ ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ನಾಗಮಂಗಲ ಪ್ರಥಮ ಸ್ಥಾನದಲ್ಲಿದೆ. ಸುಮಾರು 200ಕ್ಕೂ ಹೆಚ್ಚು ಅರ್ಜಿಗಳು ಸಹ ಬಂದಿವೆ ಎನ್ನುತ್ತಾರೆ ತಾಲ್ಲೂಕು ಕೃಷಿ ಅಧಿಕಾರಿ ಮಂಜುನಾಥ್.
–ಎನ್‌.ಎಸ್‌. ಹರೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT