ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಆಗ್ರಹ

ಮಡಿಕೇರಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ
Last Updated 29 ಆಗಸ್ಟ್ 2016, 11:26 IST
ಅಕ್ಷರ ಗಾತ್ರ

ಮಡಿಕೇರಿ: ಎಸ್‌ಡಿಪಿಐ, ಪಿಎಫ್‌ಐ ಹಾಗೂ ಕೆಡಿಎಫ್‌ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಹಾಗೂ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶ್ರೀಪೇಟೆ ರಾಮ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಚೌಕಿ, ಖಾಸಗಿ ಬಸ್‌ನಿಲ್ದಾಣ, ತಿಮ್ಮಯ್ಯ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಡಿಸಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಶಾಲನಗರದ ಗುಡ್ಡೆಹೊಸೂರು ಆಟೊ ಚಾಲಕ ಪ್ರವೀಣ್‌ ಪೂಜಾರಿ ಕೊಲೆ ಪ್ರಕರಣದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಇಬ್ಬರು ಕಾರ್ಯಕರ್ತರು ಭಾಗಿಯಾಗಿದ್ದು, ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾತನಾಡಿ, ‘ಮೈಸೂರಿನಲ್ಲಿ ರಾಜು ಹತ್ಯೆ ನಡೆಯಿತು. ಕುಶಾಲನಗರದಲ್ಲಿ ಪ್ರವೀಣ್‌ ಪೂಜಾರಿಯ ಕೊಲೆ ಮಾಡಲಾಗಿದೆ. ಟಿಪ್ಪು ಜಯಂತಿ ವೇಳೆ ಕುಟ್ಟಪ್ಪ ಅವರನ್ನು ಕೊಲೆ ಮಾಡಲಾಗಿತ್ತು. ಆದರೂ, ನಾವು ಎಚ್ಚೆತ್ತುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಕಾವೇರಿ ಹುಟ್ಟವ ಪವಿತ್ರ ಭೂಮಿಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಇದುವರೆಗೂ ಮೌನವಾಗಿದ್ದೆವು. ತಕ್ಕ ಉತ್ತರ ನೀಡುತ್ತೇವೆ’ ಎಂದು ಎಚ್ಚರಿಸಿದರು.

ಅನ್ಯ ಕೋಮಿನವರು ಪೊಲೀಸರ ಅನುಮತಿ ಪಡೆಯದೇ ಮೆರವಣಿಗೆ ಕೊಡಗಿನಲ್ಲಿ ನಡೆಸಬಹುದು. ಅದೇ ಹಿಂದೂಗಳು ಗಣಪತಿ ವಿಗ್ರಹ ಪ್ರತಿಷ್ಠಾಪನೆಗೂ ಪೊಲೀಸರ ಅನುಮತಿ ಪಡೆಯುವ ಸ್ಥಿತಿಯಿದೆ. ಇದು ಬದಲಾಗಬೇಕು ಎಂದು ಒತ್ತಾಯಿಸಿದರು.

‘ಕೊಡಗು ಜಿಲ್ಲೆಗೆ ವ್ಯಾಪಾರಕ್ಕೆ ಬಂದವರು ಇಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಹಿಂದೆ ಇದೇ ರೀತಿ ದುಷ್ಕೃತ್ಯ ನಡೆಸಿದವರ ಕತೆ ಏನಾಗಿದೆ ಎಂಬುದು ಎಲ್ಲರಿಗೂ ಅರಿವಿದೆ. ಕೆಲವರಿಂದ ಕೊಡಗಿನ ನೆಮ್ಮದಿ ಹಾಳಾಗುತ್ತಿದೆ. ಗುಪ್ತಚರ ಇಲಾಖೆಗೆ ಮಾಹಿತಿಯಿದ್ದರೂ ಮುಂಜಾಗೃತಾ ಕ್ರಮ ತೆಗೆದುಕೊಂಡಿಲ್ಲ. ಪ್ರವೀಣ್‌ ಪೂಜಾರಿ ಕುಟುಂಬಕ್ಕೆ ಶೀಘವೇ ಪರಿಹಾರ ನೀಡಬೇಕು’ ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಒತ್ತಾಯಿಸಿದರು.

ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮುಖಂಡ ಪ್ರಸನ್ನ ಭಟ್‌, ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ₹ 20 ಮೌಲ್ಯದ ಸ್ಟ್ಯಾಂಪ್‌ ಪೇಪರ್‌ ಮೇಲೆ ಬರೆದುಕೊಡಿ ಎಂದು ಪೊಲೀಸರು ಹೇಳುತ್ತಿದ್ದಾರೆ. ಬಾಂಡ್‌ ಪೇಪರ್‌ ಮೇಲೆ ಯಾರೂ ಸಹ ಬರೆದುಕೊಡಬೇಡಿ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ‘ಈ ಬಾರಿ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಯಾರ ಅಟ್ಟಹಾಸವೂ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರಕರಣ ದಾಖಲಿಗೆ ಆಗ್ರಹ:  ನಗರಸಭೆಯ ಸದಸ್ಯರೊಬ್ಬರು ನಗರದಲ್ಲಿ ಗೋಮಾಂಸದ ಅಂಗಡಿ ಆರಂಭಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಯಾವ ಕಾರಣಕ್ಕೂ ಅಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ. ಪ್ರಚೋದನಕಾರಿ ಹೇಳಿಕೆ ನೀಡಿರುವ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಅಜಿತ್‌ಕುಮಾರ್‌ ಆಗ್ರಹಿಸಿದರು.

ಜಿಲ್ಲಾ ಆಟೊ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ, ಕೊಡಗಿನಲ್ಲಿ ಪಾಕಿಸ್ತಾನದ ಏಜೆಂಟ್‌ಗಳು ನೆಲೆಸಿದ್ದಾರೆ. ಹೀಗಾಗಿ, ಭಯದ ವಾತಾವರಣವಿದೆ. ಆಟೊ ಚಾಲಕರು ರಾತ್ರಿ ವೇಳೆ ಸಂಚರಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಮುಖಂಡರಾದ ರವಿ ಕುಶಾಲಪ್ಪ, ಮಹೇಶ್‌ ಜೈನಿ, ಕಾಂತಿ ಸತೀಶ್‌, ಅರುಣ್‌ ಕುಮಾರ್‌, ಮಣಿ ಉತ್ತಪ್ಪ, ನಗರಸಭೆ ಸದಸ್ಯ ಪಿ.ಡಿ. ಪೊನ್ನಪ್ಪ, ಬಾಲಚಂದ್ರ ಕಳಗಿ, ರವಿ ಕಾಳಪ್ಪ ಸೇರಿದಂತೆ ಹಲವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT