ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಮರದ ವೀರಪ್ಪನ ನೆನೆಯುತ್ತಾ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸಾಲುಮರದ ತಿಮ್ಮಕ್ಕ ಯಾರಿಗೆ ತಾನೆ ಗೊತ್ತಿಲ್ಲ. ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇವರೊಂದಿಗೆ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಗಡಿ ಪ್ರದೇಶದ ಕೆಲ ಪ್ರಮುಖ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಅಚ್ಚುಕಟ್ಟಾಗಿ ಬೆಳೆಸುವ ಮೂಲಕ ಈ ಭಾಗದಲ್ಲಿ ಚಿರಪರಿಚಿತರಾಗಿರುವ ಪರಿಸರ ಪ್ರೇಮಿ, ‘ಸಾವಿರ ಮರ’ದ ವೀರಪ್ಪ ಚನ್ನಪ್ಪ  ಅವರನ್ನು ಯಾವತ್ತೂ ಮರೆಯುವಂತಿಲ್ಲ.

ಅವರು ತೀರಿ ಹೋಗಿದ್ದರೂ ಅವರು ನೆಟ್ಟಿದ್ದ ಸಸಿಗಳು ಬೆಳೆದು ಹೆಮ್ಮರವಾಗಿ ಎಷ್ಟೋ ಜನರಿಗೆ ನೆರಳು, ಗಾಳಿ ನೀಡುತ್ತಿರುವುದಲ್ಲದೇ ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿರುವುದು ನಮ್ಮ ಕಣ್ಮುಂದಿದೆ.

ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಸಂಕನೂರು ಕ್ರಾಸ್‌ ಹತ್ತಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸರಿಗಿಡಗಳನ್ನು ಬೆಳೆಸಿ ಈ ಭಾಗದ ಜನರಿಗೆ ನೆರಳು ನೀಡಿದ ವೀರಪ್ಪನವರು ಆಡದೇ ಮಾಡಿ ರೂಢಿಯೊಳಗೆ ಉತ್ತಮರಾಗಿದ್ದವರು. ಮೂಲತಃ ಗದಗಿನವರಾದ ಇವರು ಖಾಸಗಿ ಸಾರಿಗೆ ವಾಹನಗಳ ಮಾಲೀಕರು. ಸಾರಿಗೆ ಸೇವೆಯನ್ನು ಪ್ರಾಮಾಣಿಕವಾಗಿ ಜನತೆಗೆ ಒದಗಿಸುವ ಈ ಪ್ರದೇಶದ ಒಬ್ಬ ಅಪರೂಪದ ವ್ಯಕ್ತಿ ವೀರಪ್ಪನವರಲ್ಲಿದ್ದ ಪರಿಸರ ಪ್ರಜ್ಞೆಯ ಅನಾವರಣವೇ ರಸ್ತೆ ಬದಿಯಲ್ಲಿ ಸಾವಿರಾರು ಮರಗಳು ನೆಲೆಗೊಳ್ಳಲು ಕಾರಣವಾಗಿದೆ. 

ಮೊದಲಿನಿಂದಲೂ ಆರ್ಥಿಕವಾಗಿ ಸಬಲರಾಗಿದ್ದ ವೀರಪ್ಪನವರು ಸಾಹುಕಾರರಾಗಿಯೇ ಬದುಕು ರೂಪಿಸಿಕೊಂಡಿದ್ದವರು. ತಮ್ಮ ವ್ಯಾಪಾರ ವ್ಯವಹಾರದಲ್ಲಿ ಯಾವತ್ತಿಗೂ ಸಾಹುಕಾರಗಿರಿಯನ್ನು ತೋರಿಸಿಕೊಡದ ಇವರು ಸಾಮಾಜಿಕ ಕಳಕಳಿಯ ವ್ಯಕ್ತಿತ್ವದೊಂದಿಗೆ ಜನರ ಒಡನಾಡಿಯಾಗಿಯೇ ಬೆಳೆದುಬಂದವರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ‘ಬಸರಿಗಿಡದ ಮೋಟರ್‌ ಸರ್ವಿಸ್‌’ ಎಂಬ ಹೆಸರಿನಲ್ಲಿ ಸಾರಿಗೆ ಸೇವೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದ ಇವರು, ಗರ್ಭಿಣಿಯರಿಗೆ, ವಯೋವೃದ್ಧರಿಗೆ, ಯೋಧರಿಗೆ, ಬರಗಾಲದ ಸಂದರ್ಭದಲ್ಲಿ ಉಚಿತ ಸಾರಿಗೆ ಸೇವೆ ನೀಡುವ ಅಪರೂಪದ ವ್ಯಾಪಾರಸ್ಥರಾಗಿಯೇ ಗುರುತಿಸಿಕೊಂಡಿದ್ದರು. ಹಣದಲ್ಲಿ ಮಾತ್ರವಲ್ಲ ಹೃದಯ ಶ್ರೀಮಂತಿಕೆಯಲ್ಲಿಯೂ ಅಗ್ರಮಾನ್ಯರಾಗಿದ್ದವರು.

ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವೀರಪ್ಪನವರು ತಮ್ಮ ವಾಹನಗಳು ಸಂಚರಿಸುತ್ತಿದ್ದ ರಸ್ತೆ ಗುಂಟಾ ಹುಣಸೆ ಹಾಗೂ ಬಸರಿಗಿಡದ ಸಸಿಗಳನ್ನು ನೆಟ್ಟು ಬೆಳೆಸಿ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಈ ಭಾಗದ ಬಹುತೇಕ ರಸ್ತೆಗಳ ಅಕ್ಕಪಕ್ಕದಲ್ಲಿ ಇಂದಿಗೂ ಹುಣಸೆ ಮತ್ತು ಬಸರಿ ಗಿಡಗಳನ್ನು ಕಾಣಬಹುದು. ವೀರಪ್ಪನವರು ನೆಟ್ಟಿರುವ ಮರಗಳು ಸಂಕನೂರು ಕ್ರಾಸ್‌ ಬಳಿ ಯಲಬುರ್ಗಾ ಪಟ್ಟಣಕ್ಕೆ ಸಂಪರ್ಕ ರಸ್ತೆಯಲ್ಲಿ ಹೆಮ್ಮರವಾಗಿ ನಿಂತಿವೆ.

ನೆಟ್ಟ ಸಸಿಗಳಿಗೆ ನೀರು ಪೂರೈಕೆಗಾಗಿ ಕ್ರಾಸ್‌ ಹತ್ತಿರ ಸಿಹಿನೀರಿನ ದೊಡ್ಡ ಬಾವಿ ತೋಡಿಸಿ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದು ಇಂದಿಗೂ ಸಾಕ್ಷಿಯಾಗಿ ನಿಂತಿದೆ. 1943ರಲ್ಲಿ ಇವರು ಈ ಬಾವಿ ನಿರ್ಮಿಸಿದ್ದರ ಬಗ್ಗೆ ಬಾವಿಯ ಮೇಲಿನ ಕೆತ್ತನೆ ಸ್ಪಷ್ಟಪಡಿಸುತ್ತಿವೆ. ಆದರೆ ಅಂತರ್ಜಲ ಕುಸಿತದಿಂದ ನೀರಿಲ್ಲದೇ ಈಗ ಬಾವಿ ಬತ್ತಿಹೋಗಿದೆ. ಹೀಗೆ ಈ ಭಾಗದ ಬಹುತೇಕ ಬಸ್‌ ನಿಲ್ದಾಣ, ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿದ ಕೀರ್ತಿ ವೀರಪ್ಪನವರಿಗೆ ಸಲ್ಲುತ್ತದೆ.

ಆದರೆ ದುರದೃಷ್ಟ ಎಂದರೆ, ಬಹುತೇಕ ಮರಗಳು ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ಗದಗ ರಸ್ತೆಯಲ್ಲಿರುವ ಹುಣಸೆ ಮರಗಳು, ಯಲಬುರ್ಗಾ ರಸ್ತೆಯಲ್ಲಿನ ಬಸರಿಗಿಡಗಳು, ಯಲಬುರ್ಗಾದ ಹಳೆ ಬಸ್‌ ನಿಲ್ದಾಣದ ರಸ್ತೆಬದಿಯಲ್ಲಿ ಬೆಳೆದು ನಿಂತಿದ್ದ ಮರಗಳು ಈಗ ಹೇಳಲು ಹೆಸರಿಲ್ಲದಂತೆ ಮಾಯವಾಗಿವೆ. ರಸ್ತೆ ವಿಸ್ತರಣೆಯ ನೆಪದಲ್ಲಿ ಸಾಕಷ್ಟು  ಮರಗಳು ಬಲಿಯಾಗಿವೆ.

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ರಜಾಕಾರರ ಹಾವಳಿ ವಿಪರೀತವಾಗಿದ್ದ ಸಂದರ್ಭದಲ್ಲಿ ಹೋರಾಟಗಾರರಿಗೆ ಸಾರಿಗೆ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದರು. ಅಲ್ಲದೇ ಬರಗಾಲದಲ್ಲಿಯೂ ಆಹಾರ ಧಾನ್ಯಗಳನ್ನು ಉಚಿತವಾಗಿ ಸಾಗಾಣಿಕೆ ಮಾಡುತ್ತಿದ್ದರು ಎಂದು ಇವರ ವ್ಯಕ್ತಿತ್ವದ ಬಗ್ಗೆ ಸ್ಥಳೀಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿಯವರು  ಕೊಂಡಾಡುತ್ತಾರೆ.

ಕರ್ನಾಟಕ ಏಕೀರಣದ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಯಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ್ದ ವೀರಪ್ಪನವರ  ಸೇವೆಯನ್ನು ಈ ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಯಲ್ಲಿ ವಿಶೇಷ ಕೊಡುಗೆ ನೀಡಿದ ವೀರಪ್ಪನವರ ಸಮಾಧಿ ಪುಣ್ಯಾಶ್ರಮದಲ್ಲಿದೆ.

ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೇ ಸುಮಾರು ವರ್ಷಗಳ ಹಿಂದೆ ನೆಟ್ಟಿದ್ದ ಸಾವಿರಾರು ಮರಗಳು ಇಂದು ಬೆರಳೆಣಿಕೆಯಷ್ಟು ಉಳಿದಿವೆ. ಸಸಿ ನೆಟ್ಟು ಬೆಳೆಸಿ ಪೋಷಣೆ ಮಾಡುವುದಿರಲಿ, ಅವುಗಳನ್ನು ನಾಶ ಮಾಡದೇ ರಕ್ಷಿಸಿಕೊಳ್ಳುವ ಮನಸ್ಸು ಇಂದಿನವರಲ್ಲಿ ಇಲ್ಲದಿರುವುದೇ ವಿಪರ್ಯಾಸದ ಸಂಗತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT