ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಮತ್ತು ಪರಂಪರೆಯ ಜ್ಞಾನ

ವಿಜ್ಞಾನದ ಪ್ರಗತಿಯನ್ನು ಪಾರಂಪರಿಕ ಜ್ಞಾನದೊಂದಿಗೆ ಸಮನ್ವಯಿಸಿ ಮನುಷ್ಯನ ಒಳಿತಿಗೆ ಆವಕ ಮಾಡಿಕೊಳ್ಳುವುದು ಕಠಿಣತಮ ಹೊಣೆಗಾರಿಕೆ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ವಿಜ್ಞಾನ ಮತ್ತು ಪರಂಪರೆಯ ಜ್ಞಾನ’ ಬರಹದಲ್ಲಿ (ಸಂಗತ, ಆ. 19) ಡಾ. ರಾಜೇಗೌಡ ಹೊಸಹಳ್ಳಿ ಅವರು ಪ್ರಸ್ತಾಪಿಸಿರುವ ವಿಪರ್ಯಾಸಗಳನ್ನು ಗಮನಿಸುತ್ತಲೇ ವಿಶ್ವಮಾನ್ಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ರ ನುಡಿ ‘ಧರ್ಮರಹಿತ ವಿಜ್ಞಾನ ಕುಂಟು. ವಿಜ್ಞಾನರಹಿತ ಧರ್ಮ ಕುರುಡು’ ಅದೆಷ್ಟು ದಿಟ ಅನ್ನಿಸಿತು. ಇಲ್ಲಿ ‘ಧರ್ಮ’ ಎಂದರೆ ಮಾನವ ಧರ್ಮ ಎಂದು ಭಾವಿಸುವುದೇ ಯುಕ್ತ.

ಮಾನವನ ಇತಿಹಾಸದುದ್ದಕ್ಕೂ ಜಗತ್ತಿನೆಲ್ಲೆಡೆ ಸಂಸ್ಕೃತಿಗಳು ನಿಸರ್ಗದ ಬಗೆಗೆ ವಿವಿಧ ಗ್ರಹಿಕೆಗಳನ್ನು ತಳೆಯುತ್ತ ಬಂದಿವೆ. ಅವುಗಳಲ್ಲಿ ಹಲವು ನಂಬಿಕೆ, ಆಚರಣೆಗಳಲ್ಲಿ ಬೇರುಬಿಟ್ಟಿವೆ. ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸಿವೆ.

ವಿಜ್ಞಾನದ ಪ್ರಗತಿಯನ್ನು ಪಾರಂಪರಿಕ ಜ್ಞಾನದೊಂದಿಗೆ ಸಮನ್ವಯಿಸಿ ಮನುಷ್ಯನ ಒಳಿತಿಗೆ ಆವಕ ಮಾಡಿಕೊಳ್ಳುವುದು ಹೊಸ ಆವಿಷ್ಕಾರಗಳಿಗಿಂತಲೂ ಹೆಚ್ಚು ಕಠಿಣತಮ ಹೊಣೆಗಾರಿಕೆ. ಈ ಸವಾಲು ಎದುರಿಸಲು ನಿಸರ್ಗ ಮತ್ತು ಸಮಾಜ ಕುರಿತ ಗಾಢ ಅರಿವು, ತನ್ಮೂಲಕ ಪ್ರಸ್ತುತ ಹಾಗೂ ಭಾವಿ ಪೀಳಿಗೆಗಳ ಬದುಕಿಗೆ ಅನುವು ಮಾಡಿಕೊಡುವ ಬದ್ಧತೆ ಮೆರೆಯಬೇಕಾಗುತ್ತದೆ.

ಪರಂಪರೆಯ ಜ್ಞಾನವನ್ನು ವಿಜ್ಞಾನದೊಳಗಿಟ್ಟು ತಕ್ಕಡಿಯಲ್ಲಿ ತೂಗಿ ನೋಡಬೇಕೆನ್ನುವಾಗ ಒಂದು ನಿದರ್ಶನ ನೆನಪಾಗುತ್ತದೆ. ನೀರನ್ನು ಮಡಕೆಯಲ್ಲಿರಿಸಿದರೆ ತಂಪಾಗಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿ ಬಂದ ಸಮಷ್ಟಿ ವಿವೇಕಕ್ಕೆ ಒಂದು ಉದಾಹರಣೆಯಿದು. ಹೌದು, ಏಕೆ ಮಡಕೆಯೊಳಗೆ ನೀರು ತಂಪು ಎನ್ನುವುದನ್ನು ವಿವರಿಸಿ ಹೇಳಿದ್ದರೆ ಎಷ್ಟು ಸೊಗಸಿತ್ತು ಎನ್ನಿಸುವುದು ಸಹಜ.

ಫ್ರಿಜ್‌ನ ಕೊರತೆ ತುಂಬಲು ಇದು ಸರಳ ಉಪಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಡಕೆಯೊಳಗಿನ ಶಾಖವನ್ನು ಬಳಸಿಕೊಂಡು ನೀರು ಆವಿಯಾಗಿ ಸಣ್ಣ ಸಣ್ಣ ರಂಧ್ರಗಳ ಮೂಲಕ ಹೊರಹೋಗಲು ಹವಣಿಸುತ್ತದೆ. ಇದುವೆ ನೀರು ತಣ್ಣಗಿರುವ ರಹಸ್ಯ ಎಂದು ಕಾರ್ಯಕಾರಣ ನಂಟನ್ನು ಬಿಡಿಸಿಟ್ಟಾಗಲೇ ಜ್ಞಾನಕ್ಕೆ ಗರಿ ಮೂಡುತ್ತದೆ. ವಿಶಿಷ್ಟವಾಗಿ ಅದು ವಿಜ್ಞಾನವಾಗುತ್ತದೆ.

ಏಕೆ, ಏನು, ಹೇಗೆ ಎಂದು ವಿವರಿಸದೆ ಕೇವಲ ಅದು ಹಾಗೆ, ನಂಬು, ತಿಳಿ ಎಂದರೆ ಅಷ್ಟರಮಟ್ಟಿಗೆ ಅರಿವು ಅಪೂರ್ಣವೆನ್ನಿಸುತ್ತದೆ. ಪೂರ್ಣತೆಯಿಲ್ಲದ ತಿಳಿವು ಉಪಯಕ್ತವಾಗದು. ಕೆಲವೊಮ್ಮೆ ಅಪಾಯ ಕೂಡ. ಕಟ್ಟಿಗೆಯಲ್ಲಿ ಬೆಂಕಿ ಇದೆ ಎನ್ನುವುದು ಜ್ಞಾನ. ಅದನ್ನು ಉರಿಸಿ ಅಡುಗೆ ತಯಾರಿಸಿಕೊಂಡು ಊಟ ಮಾಡುವುದು ವಿಜ್ಞಾನ.

‘ಜ್ಞಾನವು ವಿಜ್ಞಾನ ಸಮೇತ’ ಎಂಬ ಮಾತಿದೆ. ಹಿರಿಯರ ಮಾರ್ಗದರ್ಶನಗಳು ಅನುಭವಜನ್ಯ. ಅವುಗಳಲ್ಲಿ ವ್ಯಾಪ್ತಿ, ವೈಭವವಿದೆ. ಆದರೆ ತಕ್ಕ ಸಮಜಾಯಿಷಿ ಬಯಸುತ್ತವೆ. ಸಾಂಬಾರು ತಯಾರಿಸುವಾಗ ತರಕಾರಿ, ಬೇಳೆಕಾಳುಗಳು ಬೆಂದ ನಂತರವೇ ಉಪ್ಪು, ಹುಳಿ, ಖಾರ ಬೆರೆಸಬೇಕೆನ್ನುವುದು ಸಾಂಪ್ರದಾಯಿಕ ವಿಧಾನ. ಕಾರಣವಿಷ್ಟೆ. ಅವನ್ನು ಮೊದಲೇ ಬೆರೆಸಿದರೆ ನೀರಿನ ಶಾಖದ ಸಾಮರ್ಥ್ಯ ಕಡಿಮೆಯಾಗುತ್ತದೆ. ತರಕಾರಿ, ಬೇಳೆ ಕಾಳು ಬೇಯುವುದು ನಿಧಾನವಾದೀತು.

ಅಲ್ಯೂಮಿನಿಯಂ ಪಾತ್ರೆಯಲ್ಲಿ ಉಪ್ಪೂ ಸೇರಿದಂತೆ ಯಾವುದೇ ಆಹಾರ ವಸ್ತುವನ್ನೂ  ಇಡಬಾರದೆನ್ನುವ ಕಿವಿಮಾತಿನಲ್ಲಿ ವಿಜ್ಞಾನವಿಲ್ಲದಿಲ್ಲ. ದವಸ, ಧಾನ್ಯ, ಹಣ್ಣು, ತರಕಾರಿ, ಸೊಪ್ಪು ವಗೈರೆಗಳಲ್ಲಿನ ಪೌಷ್ಟಿಕಾಂಶಗಳು ಮತ್ತು ಖನಿಜಾಂಶಗಳನ್ನು ಪರಿಣಾಮಹೀನಗೊಳಿಸುವ ಗುಣ ಅಲ್ಯೂಮಿನಿಯಂಗಿದೆ.  ಎಷ್ಟಾದರೂ ಮನೆಯಲ್ಲಿ ಅಡುಗೆಮನೆ ಎನ್ನುವುದೊಂದು ಅನುಪಮ ಪ್ರಯೋಗಾಲಯ.

ಅಂತೆಯೆ ಮುಸ್ಸಂಜೆಯಲ್ಲಿ ಕಸ ಗುಡಿಸಬಾರದೆಂಬ ಪಾರಂಪರಿಕ ಹಿತವಚನದಲ್ಲಿ ಆಕಸ್ಮಿಕವಾಗಿ ಬೆಲೆ ಬಾಳುವ ಸಣ್ಣ ಪುಟ್ಟ ನಾಣ್ಯ, ಒಡವೆಗಳು ತ್ಯಾಜ್ಯದೊಂದಿಗೆ ಬೆರೆತು ವಿಲೇವಾರಿಯಾಗದಿರಲೆಂಬ ಸದಾಶಯವಿದೆ.

ಪರಂಪರೆ ಮರೆತರೆ ಹೊಸತನ ಕಂಡುಕೊಳ್ಳಲಾಗದು. ‘ಹಳೆ ಬೇರು, ಹೊಸ ಚಿಗುರು’ ಸಾರ್ವಕಾಲಿಕವಾಗಿ ಸಲ್ಲುವ ಇರಾದೆ.  ಬಹುಮುಖ್ಯವೆಂದರೆ ವೃಥಾ ಎಲ್ಲಕ್ಕೂ ಬಾಲಿಶವಾಗಿ ಸಮಜಾಯಿಷಿಗಳನ್ನು ಪೋಣಿಸಬಾರದಷ್ಟೆ! ವೈಚಾರಿಕತೆ ಹೈರಾಣಾಗಬಾರದು. ವಿಜ್ಞಾನಕ್ಕೆ ಹುಸಿ ವೈಭವೀಕರಣದ ಅಗತ್ಯವಿಲ್ಲ.

ಮೈಸೂರಿನಲ್ಲಿ ನಾವು ಶಾಲಾ ಹುಡುಗರಿದ್ದಾಗ ನಮ್ಮ ಬೈಸಿಕಲ್ ದುರಸ್ತಿ ಮಾಡಿಕೊಡುತ್ತಿದ್ದವ ತನ್ನ ಇತಿಮಿತಿಯಲ್ಲಿ ಮನಮುಟ್ಟುವಂತೆ ನಮಗೆ ಬೈಸಿಕಲ್ಲಿನ ಪ್ರತಿ ಬಿಡಿ ಭಾಗ, ಅದರ ಕಾರ್ಯಕ್ಷಮತೆ ವಿವರಿಸುತ್ತಿದ್ದ ಪರಿ ನೆನಪಾಗುತ್ತದೆ. ‘ನೋಡಿ ಇದೇ ಫ್ರೀವೀಲ್.

ಇದು ನಾವು ಪೆಡಲ್ ಮಾಡಿದ ಶಕ್ತಿಯನ್ನು ತನ್ನಲ್ಲಿ ಶೇಖರಿಸಿಕೊಂಡು ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಬೈಸಿಕಲ್ಲಿನ ಹೃದಯವೆ ಇದು. ಮುಂದಿನ ಗಾಲಿಯ ಬ್ರೇಕ್ ಒಂದನ್ನೇ ಹಾಕೀರಿ ಜೋಕೆ’ ಎನ್ನುವ ವೈಜ್ಞಾನಿಕ ಎಚ್ಚರಿಕೆ ಬೇರೆ ಅವನಿಂದ.

ಅಬ್ಬ! ಎಂಥ ಬಹೂಪಯೋಗಿ ವಾಹನ. ಆದರೂ ಅತಿ ಸರಳ. ‘ಬೈಸಿಕಲ್ಲಿನ ಪಿತಾಮಹ ಸ್ಕಾಟ್ಲೆಂಡಿನ ಮ್ಯಾಕ್ಮಿಲನ್ ಎಂಬ ಮಹಾನುಭಾವನಿಗೆ ಎಷ್ಟು ಋಣಿಯಾಗಿದ್ದರೂ ಸಾಲದು ತಾನೆ’ ಅಂತ ಆತ ನಮಗೆ ತರಗತಿಯನ್ನೇ ತೆಗೆದುಕೊಂಡುಬಿಡುತ್ತಿದ್ದ. ಆಗಿಂದಾಗ್ಗೆ ವಾಹನದ ಅದ್ಭುತ ಮೆಚ್ಚಲು ಉತ್ತೇಜಿಸುತ್ತಿದ್ದ. ಹಾಗಾಗಿ ಪ್ರತಿ ಬಾರಿ ರಿಪೇರಿ ಸಲುವಾಗಿ ಅವನ ಬೈಸಿಕಲ್ ಶಾಪಿಗೆ ಹೋಗುವುದೇ ಶಿಕ್ಷಣವೆನ್ನಿಸುತ್ತಿತ್ತು.

ಟಿ.ವಿ. ರಿಪೇರಿಯಿರಲಿ, ರೈಲು ಚಾಲನೆಯಿರಲಿ ಅಥವಾ ವಿಮಾನ ಹಾರಿಸುವುದಿರಲಿ ಅದನ್ನು ಕೈಗೊಳ್ಳುವವರು ಈ ಮಾಹಿತಿ ದಿನಮಾನಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಕನಿಷ್ಠ ತಿಳಿವನ್ನು ರೂಢಿಸಿಕೊಳ್ಳುವುದು ಅಪೇಕ್ಷಣೀಯ.

ಹಡಗಿನ ಕ್ಯಾಪ್ಟನ್ ಈ ದೊಡ್ಡ ವಾಹನ ನೀರಿನಲ್ಲಿ ಮುಳುಗದೆ ಹೇಗೆ ತೇಲುತ್ತದೆ ಎನ್ನುವುದು ಕಟ್ಟಿಕೊಂಡು ನನಗೇನಾಗಬೇಕಿದೆ ಎಂದೋ ಕಟ್ಟಡದ ಗುತ್ತಿಗೆದಾರ ಸಿಮೆಂಟ್ ನೀರು ಹೀರಿದಷ್ಟೂ ಗಟ್ಟಿ ಹೇಗೆನ್ನುವುದು ತನಗೆ ಸಂಬಂಧಿಸಿದ್ದಲ್ಲ ಎಂದೋ ಮೂಗೆಳೆದರೆ ಏನು ಚಂದ? ಅರಿವೆನ್ನುವುದು ಸಾಟಿಯಿಲ್ಲದ ಬೆಳಕು.

ಪರಂಪರೆಯ ಜ್ಞಾನವನ್ನು ಸಂಗ್ರಹಿಸುವ, ವಿಂಗಡಿಸುವ ಮತ್ತು ಸಮರ್ಪಕವಾಗಿ ವ್ಯಾಖ್ಯಾನಿಸುವ ವ್ಯವಸ್ಥೆಯಿರಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಅದರಲ್ಲೂ ವಿಶೇಷವಾಗಿ ಸಂಪನ್ಮೂಲಗಳ ನಿಧಿಗಳೇ ಆದ ಆದಿವಾಸಿಗಳನ್ನು ತೊಡಗಿಸಿಕೊಳ್ಳುವುದು ಅತ್ಯವಶ್ಯ. ಸಾಂಪ್ರದಾಯಿಕ ಗ್ರಹಿಕೆಗಳು ಸ್ಥಳಜನ್ಯವಾಗಿರುತ್ತವೆ. ಅವು ನಿರ್ದೇಶಿಸುವ ದಿಕ್ಕು, ಧ್ವನಿ ಮಹತ್ವದ್ದು.

ವಿಜ್ಞಾನ ಒಂದು ವ್ಯವಸ್ಥಿತ ಅರಿವು. ವಿಶ್ವದ ಬಗೆಗೆ ಪ್ರಮಾಣಾರ್ಹ ಸ್ಪಷ್ಟೀಕರಣಗಳು ಹಾಗೂ ಮುಂಗಾಣ್ಕೆಗಳ ರೂಪಗಳಲ್ಲಿ ಅದು ತಿಳಿವನ್ನು ಕಟ್ಟಿಕೊಡುತ್ತದೆ. ಪರೀಕ್ಷೆಗಳಂತೂ ಆ ನೆಲೆಯಲ್ಲಿ ಅವ್ಯಾಹತ. ಆವರ್ತಗಳೋಪಾದಿಯಲ್ಲಿ ತರ್ಕಬದ್ಧ ಪರಿಷ್ಕರಣೆಗಳು, ನಿರ್ವಚನಗಳು.

ಗ್ರೀಕ್ ದಾರ್ಶನಿಕ ಸಾಕ್ರೆಟಿಸ್ ಕೇವಲ ವಸ್ತುಗಳ ಸ್ವಭಾವ, ಚಲನೆಯ ಗತಿ, ಲೆಕ್ಕಾಚಾರಗಳಿಗಷ್ಟೆ ತಿಳಿವಳಿಕೆ ಸೀಮಿತವಾಗಬಾರದು, ನೈಜ ಬದುಕಿನ ಸವಾಲುಗಳನ್ನೆದುರಿಸುವಲ್ಲಿ ಅದು ಪೂರಕವಾಗಿರಬೇಕೆಂದ.

ಅವನ ಟೀಕೆ  ಅಂದಿನ ಸಮಾಜಕ್ಕೆ ಸರಿಕಾಣಲಿಲ್ಲ. ಸಾಕ್ರೆಟಿಸ್‌ಗೆ ಮರಣದಂಡನೆಯೆ ಆಯಿತು. ರಾಜೇಗೌಡ ಅವರು ಉದಾಹರಿಸಿರುವ ಎಡವಟ್ಟುಗಳಿಗೆ ಪರಿಹಾರವೆಂದರೆ,  ಧರ್ಮ ಸಹಿತ ವಿಜ್ಞಾನ ಮತ್ತು ವಿಜ್ಞಾನಸಹಿತ ಧರ್ಮ ಎರಡೂ ಒಂದನ್ನೊಂದು ಕೈ ಹಿಡಿದೇ ಮುಂದೆ ಸಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT