ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹483 ಕೋಟಿ ಬೆಳೆವಿಮೆ ವಿತರಣೆಗೆ ತಡೆ

2015–16ನೇ ಸಾಲಿನ ಮುಂಗಾರು ಹಂಗಾಮಿನ ಪರಿಹಾರ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಗದಗ: 2015–16ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ ರೈತರಿಗೆ ಬಿಡುಗಡೆಯಾಗಿರುವ ಅಂದಾಜು ₹ 483 ಕೋಟಿ ಬೆಳೆ ವಿಮೆ ಪರಿಹಾರವನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ಕೃಷಿ ವಿಮಾ ಕಂಪೆನಿ (ಎಐಸಿ) ತಾತ್ಕಾಲಿಕವಾಗಿ ತಡೆಹಿಡಿದಿದೆ.

ಗದಗ, ಕಲಬುರ್ಗಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೆಲವು ರೈತರು ಬೆಳೆವಿಮೆ ಪರಿಹಾರ ಕೋರಿ, ಒಂದೇ ಸರ್ವೆ ನಂಬರ್‌ ಅಡಿ ಒಂದಕ್ಕಿಂತ ಹೆಚ್ಚು ಬೆಳೆಗಳಿಗೆ ಅರ್ಜಿ ಸಲ್ಲಿಸಿರುವುದು, ನೈಜ ಬೆಳೆಹಾನಿಗಿಂತ ದುಪ್ಪಟ್ಟು ಪರಿಹಾರ ಕೇಳಿರುವುದು ವಿಮಾ ಕಂಪೆನಿಯ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಕೆಲವೆಡೆ ರೈತರ ಹೆಸರು, ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಸಮರ್ಪಕವಾಗಿ ಜೋಡಣೆ ಆಗಿಲ್ಲ. ಈ ತಾಂತ್ರಿಕ ಕಾರಣಗಳಿಂದ ವಿಮಾ ಮೊತ್ತ ವಿತರಣೆಯನ್ನು ತಡೆಹಿಡಿಯಲಾಗಿದೆ.

ಬೆಳೆ ವಿಮೆ ಫಲಾನುಭವಿಗಳ ದತ್ತಾಂಶ ಸರಿಪಡಿಸಿ, ಪರಿಷ್ಕೃತ ಪಟ್ಟಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.  ಇದರ ಅನ್ವಯ, ದತ್ತಾಂಶ ಪರಿಷ್ಕರಣೆ ಕಾರ್ಯ ನಾಲ್ಕೂ ಜಿಲ್ಲೆಗಳಲ್ಲಿ ನಡೆಯುತ್ತಿದೆ.

ಗದಗ ಜಿಲ್ಲೆಯಲ್ಲಿ ಆಗ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದ 34,800 ರೈತರಿಗೆ ಇನ್ನೂ ₹ 34.22 ಕೋಟಿ ಬಿಡುಗಡೆಯಾಗಬೇಕಿದೆ. ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌, ಕೆಸಿಸಿ ಸೇರಿದಂತೆ ವಿಮೆ ಪಾಲುದಾರಿಕೆ ಹೊಂದಿರುವ ಪ್ರಮುಖ ಬ್ಯಾಂಕುಗಳಿಗೆ ಫಲಾನುಭವಿಗಳ ದತ್ತಾಂಶ ಸರಿಪಡಿಸುವಂತೆ ಜಿಲ್ಲಾಧಿಕಾರಿ ಎನ್‌.ಎಸ್‌ ಪ್ರಸನ್ನಕುಮಾರ ಸೂಚನೆ ನೀಡಿದ್ದಾರೆ.

‘ಸಂರಕ್ಷಣೆ’ ತಂತ್ರಾಂಶ:  ಬೆಳೆವಿಮೆ ಪರಿಹಾರದಲ್ಲಿ ನಕಲಿ ಫಲಾನುಭವಿಗಳು ಸೇರಿಕೊಳ್ಳದಂತೆ ತಡೆಯಲು ‘ಸಂರಕ್ಷಣೆ’  ತಂತ್ರಾಂಶ ಅಭಿವೃದ್ಧಿಪಡಿಸಿ ಬ್ಯಾಂಕುಗಳಿಗೆ ನೀಡಲಾಗಿದೆ.

ಭೂ ದಾಖಲೆಗಳ ಮಾಹಿತಿ ಹೊಂದಿರುವ ‘ಭೂಮಿ’ ತಂತ್ರಾಂಶದ ಜತೆಗೆ ಇದನ್ನು ಜೋಡಿಸಲಾಗಿದೆ. ಬ್ಯಾಂಕ್‌ ಸಿಬ್ಬಂದಿ ‘ಸಂರಕ್ಷಣೆ’ ತಂತ್ರಾಂಶದಲ್ಲಿ ರೈತರ ಜಮೀನಿನ ಸರ್ವೆ ನಂಬರ್‌ ನಮೂದಿಸುತ್ತಿದ್ದಂತೆ, ಆತ ಹೊಂದಿರುವ ಜಮೀನು ಮತ್ತು ಬೆಳೆಯ ಸಮಗ್ರ ವಿವರ ಲಭ್ಯವಾಗಲಿದೆ.

ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ತಡೆಹಿಡಿಯಲಾಗಿದ್ದ ರೈತರಲ್ಲಿ ಈಗಾಗಲೇ 26 ಸಾವಿರ ರೈತರ ದತ್ತಾಂಶ ಸರಿಪಡಿಸಿ, ‘ಸಂರಕ್ಷಣೆ’ ತಂತ್ರಾಂಶಕ್ಕೆ
ಅಡಕಗೊಳಿಸಲಾಗಿದೆ. ಈ ವರ್ಷ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ 63,398 ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ.

*
ಸುಲಭವಾಗಿ ಸಿಗದು ಪರಿಹಾರ!
ವಿಮೆ ಮಾಡಿಸಿದ್ದರೂ, ಬೆಳೆಹಾನಿಯಾದ ಕೂಡಲೇ ಪರಿಹಾರ ಬರಬೇಕೆಂದೇನಿಲ್ಲ. ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ ಪರಿಹಾರ ಮೊತ್ತ ನಿಗದಿಪಡಿಸಲಾಗಿರುತ್ತದೆ. ಗ್ರಾಮ ಪಂಚಾಯ್ತಿ ಮತ್ತು ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಿಗೆ ಮಾತ್ರ ಬೆಳೆವಿಮೆ ಅನ್ವಯಿಸುತ್ತದೆ.

ಈ ಅಧಿಸೂಚಿತ ಬೆಳೆಗಳ ಐದು ವರ್ಷಗಳ ಸರಾಸರಿ ಇಳುವರಿ ಆಧಾರದ ಮೇಲೆ ಪರಿಹಾರ ನೀಡಲಾಗುತ್ತದೆ. ನಿಗದಿತ ಗ್ರಾಮ ಪಂಚಾಯಿತಿ, ಹೋಬಳಿಯಲ್ಲಿ ಸರಾಸರಿ ಪ್ರಮಾಣಕ್ಕಿಂತ ಒಬ್ಬ ರೈತನಿಗಾದರೂ ಹೆಚ್ಚಿನ ಇಳುವರಿ ಬಂದಿದ್ದರೆ ಆ ನಿರ್ದಿಷ್ಟ ಬೆಳೆಗೆ, ಆ ಪ್ರದೇಶದಲ್ಲಿನ ಯಾರಿಗೂ ಬೆಳೆವಿಮೆ ಪರಿಹಾರ ಲಭಿಸುವುದಿಲ್ಲ.

***
ರೈತರ ದತ್ತಾಂಶ ಸರಿಪಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. 2–3 ದಿನದಲ್ಲಿ ಪರಿಶೀಲನೆ ಮುಗಿದು ಬೆಳೆಹಾನಿ ಪರಿಹಾರ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ.
-ಪ್ರಸನ್ನಕುಮಾರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT