ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಶಾಂತಿ ಸ್ಥಾಪನೆಗೆ ಪೂರ್ಣ ಬೆಂಬಲ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ದಶಕಗಳ ಸೇನಾ ಆಡಳಿತದ ನಂತರ ಪ್ರಜಾಪ್ರಭುತ್ವದ ಹೊಸ ಹಾದಿಯಲ್ಲಿ ಪ್ರಯಾಣ ಆರಂಭಿಸಿರುವ ಮ್ಯಾನ್ಮಾರ್‌ಗೆ  ಪ್ರತಿ ಹೆಜ್ಜೆಯಲ್ಲಿಯೂ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತ ಭರವಸೆ ನೀಡಿದೆ.

ಭಾರತಕ್ಕೆ ಭೇಟಿ ನೀಡಿರುವ ಮ್ಯಾನ್ಮಾರ್‌ ಅಧ್ಯಕ್ಷ ಯು. ತಿನ್‌ ಕ್ಯಾವ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಸ್ತೃತವಾದ ಮಾತುಕತೆ ನಡೆಸಿದ್ದಾರೆ. ಆಂಗ್‌ ಸಾನ್‌ ಸೂಕಿ ಅವರ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷದ ಹೊಸ ಸರ್ಕಾರ ಸ್ಥಾಪನೆಯಾದ ನಂತರ ಭಾರತದ ಜತೆ ಇದು ಮೊದಲನೆಯ ಉನ್ನತ ಮಟ್ಟದ ಮಾತುಕತೆಯಾಗಿದೆ. ಆಂತರಿಕ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭಾರತ ಈ ಸಂದರ್ಭದಲ್ಲಿ ತಿಳಿಸಿದೆ.

ಭಯೋತ್ಪಾದನೆ ತಡೆ ಮತ್ತು ಬಂಡುಕೋರರ ಚಟುವಟಿಕೆ ತಡೆಗೆ ಪರಸ್ಪರ ಸಕ್ರಿಯ ಸಹಕಾರ ನೀಡುವುದಕ್ಕೂ ಮಾತುಕತೆ ಸಂದರ್ಭದಲ್ಲಿ ಸಮ್ಮತಿ ಸೂಚಿಸಲಾಗಿದೆ.

ಸಂವಹನ, ವೈದ್ಯಕೀಯ, ನವೀಕರಿಸಬಹುದಾದ ಇಂಧನ, ಕೃಷಿ, ಬ್ಯಾಂಕಿಂಗ್‌ ಮತ್ತು ವಿದ್ಯುತ್‌ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ.

‘ನಮ್ಮ ಹಿತಾಸಕ್ತಿಗಳು ಪರಸ್ಪರ ಪೂರಕವಾಗಿವೆ. ಪರಸ್ಪರರ ಭದ್ರತಾ ಹಿತಾಸಕ್ತಿ ಮತ್ತು ಕಾಳಜಿಗಳಿಗೆ ಸಂವೇದನಾಶೀಲವಾಗಿರಲು ನಾವು ಒಪ್ಪಿಕೊಂಡಿದ್ದೇವೆ.

‘ಹೀಗಾಗಿ, ಅಧ್ಯಕ್ಷ ತಿನ್‌ ಕ್ಯಾವ್‌  ಮತ್ತು ನಾನು ನಮ್ಮ ಜನರ ಭದ್ರತೆ ಮತ್ತು ಸುರಕ್ಷತೆಗೆ ಒಟ್ಟಿಗೆ ಕೆಲಸ ಮಾಡಲು ಸಮ್ಮತಿ ಸೂಚಿಸಿದ್ದೇವೆ. ಭಯೋತ್ಪಾದನೆ ಮತ್ತು ಬಂಡುಕೋರರ ಚಟುವಟಿಕೆಗಳನ್ನು ತಡೆಯಲು ಸಕ್ರಿಯ ಸಹಕಾರಕ್ಕೂ ಒಪ್ಪಿದ್ದೇವೆ’ ಎಂದು ಮಾತುಕತೆಯ ನಂತರ ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಿತಿನ್‌ ಅವರೂ ಜತೆ ಇದ್ದರು.

ಭಾರತದ ಜತೆ ಸಂಬಂಧವನ್ನು ಬಲಪಡಿಸಿಕೊಳ್ಳಲು ಮ್ಯಾನ್ಮಾರ್‌ ಬಯಸಿದೆ ಎಂದು ತಿನ್‌ ಕ್ಯಾವ್‌  ತಿಳಿಸಿದ್ದಾರೆ.

ಭದ್ರತೆ ಬಹಳ ಮುಖ್ಯ
ಭಾರತ ಮತ್ತು ಮ್ಯಾನ್ಮಾರ್‌ ನಡುವೆ 1,640 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿ ಇದೆ. ಹಾಗಾಗಿ ಭದ್ರತೆಯ ದೃಷ್ಟಿಯಿಂದ ಮ್ಯಾನ್ಮಾರ್‌ ಜತೆಗಿನ ಸಂಬಂಧಕ್ಕೆ ಹೆಚ್ಚಿನ ಮಹತ್ವ ಇದೆ.

ಮ್ಯಾನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ ನಾಗಾಲ್ಯಾಂಡ್‌ ಮತ್ತು ಮಣಿಪುರ ರಾಜ್ಯಗಳಲ್ಲಿ ಬಂಡುಕೋರರ ಹಾವಳಿ ತೀವ್ರವಾಗಿದೆ. ಈ ಬಂಡುಕೋರರಿಗೆ ಮ್ಯಾನ್ಮಾರ್‌ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಭಾರತ ಹಿಂದಿನಿಂದಲೂ ಹೇಳುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್‌ನಲ್ಲಿ ಚೀನಾ ಬಲವಾದ ಹೆಜ್ಜೆಗಳನ್ನು ಊರುತ್ತಿದೆ. ಅಲ್ಲಿನ ಹಲವು ಭಾರಿ ಯೋಜನೆಗಳಲ್ಲಿ ಅಪಾರ ಪ್ರಮಾಣದ ಹೂಡಿಕೆಯನ್ನೂ ಮಾಡಿದೆ.

ಮ್ಯಾನ್ಮಾರ್‌ ಜತೆಗಿನ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸಲು ಭಾರತ ಬಯಸುತ್ತಿದೆ. ಮ್ಯಾನ್ಮಾರ್‌ನ ಭವಿಷ್ಯ ಉಜ್ವಲಗೊಳ್ಳಬೇಕು ಎಂಬುದು ನಮ್ಮ ಆಕಾಂಕ್ಷೆಯೂ ಹೌದು.
ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT